ಒಳ ಮೀಸಲಾತಿ ಸಹೋದರ ಸಮುದಾಯಗಳ ನಡುವೆ ಗೊಂದಲ ಸೃಷ್ಟಿಸಿದ ಸರ್ಕಾರ – ಸುರೇಶ.ಚಲವಾದಿ ಆರೋಪ.
ಗದಗ ಆ.15

ಒಳ ಮೀಸಲಾತಿ ಜಾರಿ ವಿಚಾರದಲ್ಲಿ ಸಹೋದರ ಸಮುದಾಯಗಳ ನಡುವೆ ರಾಜ್ಯ ಸರ್ಕಾರ ಗೊಂದಲ ಸೃಷ್ಟಿಸಿ ಕಾಲಹರಣ ಮಾಡುತ್ತಿದೆ ಎಂದು ಬಿಜೆಪಿ ಎಸ್ಸಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ.ವಾಯ್ ಚಲವಾದಿ ಆರೋಪಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ರಾಜ್ಯದಲ್ಲಿ ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಸುಧೀರ್ಘ 35 ವರ್ಷಗಳ ಕಾಲ ಅಸ್ಪೃಶ್ಯತೆ ಸಮುದಾಯಗಳು ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದು ಹೋರಾಡುತ್ತಾ ಬಂದಿರುತ್ತದೆ. ಅಷ್ಟೇ ಅಲ್ಲದೇ ಹೋರಾಟದಲ್ಲಿ ಭಾಗಿಯಾದ ಅನೇಕ ಜನ ಸಮುದಾಯಕ್ಕಾಗಿ ಪ್ರಾಣ ಕಳೆದು ಕೊಂಡಿದ್ದಾರೆ. ಹೋರಾಟಗಾರರ ಪ್ರಾಣಕ್ಕೂ ಬೆಲೆ ಕೊಡದ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿ ಮಾಡದೇ ಒಂದಿಲ್ಲೊಂದು ಕಾರಣಗಳನ್ನ ಹುಡುಕುತ್ತಾ ಬಂದು ಶೋಷಿತ ಸಮುದಾಯಗಳಿಗೆ ವಂಚಿಸಿದೆ. ಕಳೆದ ಅವಧಿಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಬಸವರಾಜ ಬೊಮ್ಮಾಯಿ ನೇತ್ರತ್ವದ ಬಿಜೆಪಿ ಸರ್ಕಾರ ನಿವೃತ್ತ ನ್ಯಾಯ ಮೂರ್ತಿ ಎ.ಜೆ ಸದಾಶಿವ ಆಯೋಗದ ವರದಿಯನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಸಿಫಾರಸ್ಸು ಮಾಡಿತ್ತು. ಸದಾಶಿವ ಆಯೋಗದ ವರದಿ ಎಲ್ಲಾ ಸಮುದಾಯದ ಜಾತಿ ಜನ ಸಂಖ್ಯಾವಾರು ಮೀಸಲಾತಿ ಕಲ್ಪಿಸಿ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಪೂರಕವಾಗಿತ್ತು. ಇಂತಹ ವರಧಿಯನ್ನ ತಿರಸ್ಕರಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರ ಸುಪ್ರೀಂ ಕೋರ್ಟ್ನ ಮೆಟ್ಟಿಲೇರಿತ್ತು. ಆದರೆ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಾಧೀಶರಾದ ಚಂದ್ರಚೂಡ್ ಅವರ 7 ಸದಸ್ಯರನ್ನೊಳ ಗೊಂಡ ಏಕ ಸದಸ್ಯ ಪೀಠ ಒಳ ಮೀಸಲಾತಿ ಆಯಾ ರಾಜ್ಯ ಸರ್ಕಾರ ಹಂಚಿಕೆ ಮಾಡಬೇಕೆಂದು ಮಹತ್ವದ ತೀರ್ಪು ನೀಡಿತು. ಇದರಿಂದಾಗಿ ಒಳ ಮೀಸಲಾತಿ ಹೋರಾಟಗಾರ ಸಹೋದರ ಸಮುದಾಯ ಬೀದಿಗಿಳಿದು ಹೋರಾಟ ಮಾಡಿದ ನಂತರ ಎಚ್ಚೆತ್ತು ಕೊಂಡ ಸರ್ಕಾರ ಜಸ್ಟಿಸ್ ನಾಗಮೋಹನ್ ದಾಸ್ ಆಯೋಗಕ್ಕೆ ವರಧಿ ನೀಡುವಂತೆ ಸೂಚಿಸಿತು. ಆದರೆ ಕಳೆದ ಮೂರ್ನಾಲ್ಕು ತಿಂಗಳಿಂದ ರಾಜ್ಯದಾದ್ಯಂತ ಜಾತಿ ಜನ ಗಣತಿ ಸರ್ವೇಯಲ್ಲಿ ABCDE ಎಂಬ ವಿಭಾಗಗಳನ್ನ ಮಾಡಿ ಜಾತಿ ಜಾತಿಗಳ ನಡುವೆ ದ್ವೇಷ ಭಾವನೆ ಮೂಡಿಸಿ ಪರ ವಿರೋಧದ ನಡುವೆ ಪಲಾಯನ ಮಾಡಲು ಅನುಕೂಲಕರವಾದ ವಾತಾವರಣ ಸೃಷ್ಟಿಸಿಕೊಂಡ ರಾಜ್ಯ ಸರ್ಕಾರ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಕಾಲ ದಿಂದಲೂ ಹಿಡಿದು ಪ್ರಸ್ತುತ ದಿನಮಾನದ ವರೆಗೆ ದಲಿತರಿಗೆ ವಂಚಿಸುತ್ತಾ ಬಂದಿದೆ ಎಂದು ಕಿಡಿಕಾರಿದರು.ಎಡ ಬಲ ಸಮಬಲ ಎಂಬ ಸಹೋದರತ್ವ ಭಾವನೆಯಿಂದಿದ್ದ ಚಲವಾದಿ ಮತ್ತು ಮಾದಿಗ ಸಮುದಾಯಗಳ ಆಂತರಿಕ ಮುನಿಸುಗಳಿಗೆ ತೆರೆ ಎಳೆದು ಗೌರವಾನ್ವಿತ ಜಸ್ಟಿಸ್ ನಾಗಮೋಹನ್ ದಾಸ್ ಅವರು ಸಲ್ಲಿಸಿರುವ ವರದಿಯಲ್ಲಿ ಇದೇ ಅಂತಿಮವಲ್ಲಾ ಕಾಲಕ್ಕೆ ತಕ್ಕ ಹಾಗೆ ಜಾತಿ ಜನ ಸಂಖ್ಯಾವಾರು ತಿದ್ದುಪಡಿ ಮಾಡಲು ಅವಕಾಶವಿದೆ ಎಂದು ಸ್ಪಷ್ಟ ಪಡಿಸಿರುವದನ್ನ ಸ್ವಾಗತಿಸಿ ವೈಜ್ಞಾನಿಕ ವರದಿಗೆ ಬೆಂಬಲಿಸುವದರ ಜೊತೆಗೆ ಸಹೋದರ ಸಮುದಾಯಗಳ ಮಧ್ಯೆ ಸಂಘರ್ಷ ಸೃಷ್ಟಿಸಿ ಒಳ ಮೀಸಲಾತಿ ಜಾರಿಯಲ್ಲಿ ಪಲಾಯನ ಮಾಡುತ್ತಿರುವ ರಾಜ್ಯ ಸರ್ಕಾರದ ಮೃಧು ಧೋರಣೆಗೆ ಅವಕಾಶ ಕೊಡದೇ ಒಕ್ಕೂರಿಲಿಂದ ಒಳ ಮೀಸಲಾತಿ ಜಾರಿಗಾಗಿ ಆಗ್ರಹಿಸ ಬೇಕಾಗಿದೆ. ಒಳ ಮೀಸಲಾತಿ ನಮ್ಮ ಸಂವಿಧಾನ ಬದ್ದ ಹಕ್ಕು ಆ ಹಕ್ಕುಗಳನ್ನ ಪಡೆಯುವುದು ಗೊಕ್ಕೋಸ್ಕರ ಸಹೋದರ ಸಮುದಾಯ ದೊಂದಿಗೆ ಕೈ ಜೋಡಿಸುವ ಅವಶ್ಯಕತೆ ಇದೆ ಅಷ್ಟೇ ಅಲ್ಲದೇ ಒಳ ಮೀಸಲಾತಿ ಈ ಕೂಡಲೇ ಜಾರಿಯಾಗ ಬೇಕೆಂಬುದು ಕೂಡಾ ನನ್ನ ಸ್ಪಷ್ಟವಾದ ನಿಲುವು. ಏಕೆಂದರೆ ಒಳ ಮೀಸಲಾತಿ ಜಾರಿಯಾಗುವ ವರೆಗೂ ಯಾವುದೇ ಬ್ಯಾಕ್ ಲಾಗ್ ಹುದ್ದೆಗಳನ್ನ ತುಂಬಿ ಕೊಳ್ಳಬಾರದೆಂಬ ಷರತ್ತಿರುವದರಿಂದ ದಲಿತ ಹಾಗೂ ಅನ್ಯ ಜಾತಿಯ ಸಹೋದರರು ತಮ್ಮ ವಿದ್ಯಾಭ್ಯಾಸ ಮುಗಿಸಿ ಉದ್ಯೋಗಕ್ಕಾಗಿ ಕಾಯುತ್ತಿದ್ದಾರೆ. ಕಾಲ ಗತಿಸಿ ಹೋದಂತೆಲ್ಲಾ ಯುವ ಸಮುದಾಯದ ವಯಸ್ಸು ಮೀರಿ ಉದ್ಯೋಗದಿಂದ ವಂಚಿರಾಗುವ ಸಂಭವವಿರುತ್ತದೆ. ಕೆಲವು ಉಳಿದ ಜಾತಿಗಳಲ್ಲಿಯೂ ಬಡವರಿರುತ್ತಾರೆ ಕಷ್ಟ ಪಟ್ಟು ವಿದ್ಯೆ ಕಲಿತು ಅವಕಾಶ ವಂಚಿತರಾದರೆ ಮಾನಸಿಕವಾಗಿ ಖಿನ್ನತೆ ಗೊಳಗಾಗುವ ಸಾಧ್ಯತೆಗಳಿರುತ್ತದೆ. ಅಷ್ಟೇ ಅಲ್ಲದೇ ಅವರನ್ನೇ ಅವಲಂಬಿಸಿರುವ ಕುಟುಂಬಗಳು ಬೀದೀ ಪಾಲಾಗುತ್ತವೆ. ಎಲ್ಲಾ ಜಾತಿಯ ಯುವ ಸಮುದಾಯದ ಮುಂದಿನ ಭವಿಷ್ಯಕ್ಕಾಗಿ ಒಳ ಮೀಸಲಾತಿ ಕೂಡಲೇ ಜಾರಿಯಾಗ ಬೇಕಾಗಿದೆ. ಆದಕಾರಣ ನನ್ನ ಸಮುದಾಯದ ಪ್ರಜ್ಞಾವಂತ ನಾಗರೀಕ ಬಂಧುಗಳಲ್ಲಿ ನನ್ನ ನಿವೇದನೆ ಏನೆಂದರೆ ಎಲ್ಲಾ ಜಾತಿಯ ಯುವ ಸಮುದಾಯದ ಭವಿಷ್ಯಕ್ಕೋಸ್ಕರ ಒಳ ಮೀಸಲಾತಿ ಜಾರಿಗಾಗಿ ಬೆಂಬಲಿಸೋಣ. ಜಾತಿ ಜನ ಸಂಖ್ಯೆಗನುಗುಣವಾಗಿ ನಮ್ಮ ಸಹೋದರ ಸಮುದಾಯಕ್ಕೆ ಸ್ವಲ್ಪ ಮುನ್ನಡೆಯಾದರೂ ಮುಕ್ತ ಮನಸ್ಸಿನಿಂದ ಸ್ವಾಗತಿಸಿ ಒಳ ಮೀಸಲಾತಿ ಜಾರಿಗಾಗಿ ಒಕ್ಕೂರಿಲಿನಿಂದ ಒತ್ತಾಯಿಸೋಣ ವೆಂದು. ಬಿಜೆಪಿ ಎಸ್ಸಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ.ವಾಯ್ ಚಲವಾದಿ ಒಳ ಮೀಸಲಾತಿ ಜಾರಿಗಾಗಿ ಬೆಂಬಲ ಸೂಚಿಸಿದರು ಎಂದು ವರದಿಯಾಗಿದೆ.