ಮೊಬೈಲ್, ಟಿ.ವಿ ಬಿಟ್ಟು ಓದಿನತ್ತ ಗಮನ ಹರಿಸಿರಿ – ಮಕ್ಕಳಿಗೆ ಮಾತಾಜೀ ತ್ಯಾಗಮಯೀ ಕಿವಿಮಾತು.
ಚಳ್ಳಕೆರೆ ಆ.21

ವಿದ್ಯಾರ್ಥಿಗಳು ಮೊಬೈಲ್, ಟಿ.ವಿ ನೋಡುವುದನ್ನು ಬಿಟ್ಟು ಓದಿನತ್ತ ಗಮನ ಹರಿಸಬೇಕು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರು ಮಕ್ಕಳಿಗೆ ಕಿವಿಮಾತು ಹೇಳಿದರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಎಸ್.ಆರ್.ಎಸ್ ಪ್ರೌಢ ಶಾಲೆಯ 9 ಮತ್ತು 10 ನೇ. ತರಗತಿಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ “ವ್ಯಕ್ತಿತ್ವ ನಿರ್ಮಾಣಕಾರಿ ತರಗತಿ” ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ಜೀವನದ ಅಮೂಲ್ಯ ಸಮಯವನ್ನು ಮೊಬೈಲ್, ಟಿ.ವಿ ಸೇರಿದಂತೆ ಇನ್ನಿತರ ಚಟುವಟಿಕೆಗಳಲ್ಲಿ ಸಮಯ ಪೋಲು ಮಾಡದೆ ಓದಿನತ್ತ ಗಮನ ಹರಿಸಿ ಉನ್ನತ ಶಿಕ್ಷಣ ಪಡೆದು ಉತ್ತಮ ಸಾಧನೆ ಮಾಡಬೇಕು ಎಂದು ತಿಳಿಸಿದರು. ಶಿಕ್ಷಕಿ ಮತ್ತು ಸದ್ಭಕ್ತರಾದ ವೆಂಕಟಲಕ್ಷ್ಮಮ್ಮ ಅವರು ಸ್ವಾಮಿ ಪುರುಷೋತ್ತಮಾನಂದಜೀ ಮಹಾರಾಜ್ ಅವರು ಬರೆದಿರುವ “ಶಕ್ತಿಶಾಲೀ ವ್ಯಕ್ತಿತ್ವ ನಿರ್ಮಾಣ” ಎಂಬ ಪುಸ್ತಕದಲ್ಲಿ ಬರುವ “ಬೌದ್ಧಿಕ ಶಕ್ತಿ” ಯ ಬಗ್ಗೆ ಮಾತನಾಡುತ್ತ ವಿದ್ಯಾರ್ಥಿಗಳು ಅವಧಾನ, ಅಧ್ಯಯನ, ಉತ್ತಮ ಆಲೋಚನೆ ಮತ್ತು ಪ್ರಾರ್ಥನೆ ಮಾಡುವ ಅಭ್ಯಾಸವನ್ನು ರೂಢಿಸಿ ಕೊಳ್ಳಬೇಕು ಎಂದು ಹಿತ ನುಡಿ ಹೇಳಿದರು.

ಕಾರ್ಯಕ್ರಮದ ಆರಂಭದಲ್ಲಿ ಭಜನೆಯನ್ನು ಯತೀಶ್ ಎಂ ಸಿದ್ದಾಪುರ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಎಸ್,ಆರ್,ಎಸ್ ಪ್ರೌಢ ಶಾಲೆಯ ಶಿಕ್ಷಕರಾದ ಗುರುಪ್ರಸಾದ್, ಲತಾ, ಶ್ವೇತ, ಸ್ವಯಂ ಸೇವಕ ಸಂತೋಷಕುಮಾರ ಅಗಸ್ತ್ಯ, ಜಯಾದಿತ್ಯ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

