ಜನ ಪ್ರತಿನಿಧಿ ಕಾಯ್ದೆ ಉಲ್ಲಂಘಿಸಿದ ಸಚಿವರನ್ನು ವಜಾ ಮಾಡಬೇಕು – ಕರ್ನಾಟಕ ರೈತ ಸಂಘದ ಆಗ್ರಹ.
ಮಾನ್ವಿ ಆ.30
ಸಣ್ಣ ನೀರಾವರಿ ಸಚಿವರು ಹಾಗೂ ಕೊಡಗು ಉಸ್ತುವಾರಿ ಮಂತ್ರಿಯಾದ ಎಂ.ಎಸ್ ಬೋಸರಾಜ ಇವರು ಸಿರವಾರ ಪಟ್ಟಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಜನರ ಮನವಿಯನ್ನು ಆಲಿಸುವಾಗ ಅನುಚಿತವಾಗಿ ವರ್ತಿಸಿ ಜನ ಪ್ರತಿನಿಧಿ ಕಾಯ್ದೆಯನ್ನು ಉಲ್ಲಂಘಿಸಿರುವುದು ಖಂಡನೀಯ ಎಂದು ಕರ್ನಾಟಕ ರೈತ ಸಂಘದ ಜಿಲ್ಲಾ ಅಧ್ಯಕ್ಷ ಅಶೋಕ ನೀಲಗಲ್ ಆರೋಪಿಸಿದ್ದಾರೆ.
ರಾಜ್ಯ ಹೆದ್ದಾರಿ 61 ಕ್ಕೆ ಸಂಪರ್ಕಿಸುವ ಶಿರವಾರ ಪಟ್ಟಣದ ಮುಖ್ಯ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಸರ್ಕಾರವು ₹2 ಕೋಟಿ 85 ಲಕ್ಷ ಮಂಜೂರು ಮಾಡಿದ್ದು, ಬಸವೇಶ್ವರ ವೃತ್ತದಿಂದ ನಾಗಡದಿನ್ನಿ ಕ್ರಾಸ್ ವರೆಗೂ ಎರಡೂ ಬದಿಯಲ್ಲಿ 50 ಅಡಿ ಅಗಲೀಕರಣ ಮಾಡುವಂತೆ ಯೋಜನೆ ರೂಪಿಸಲಾಗಿತ್ತು. ಈ ಕುರಿತು ಕಲಬುರ್ಗಿಯ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ಅಧಿಕಾರಿಗಳು 06-06-2025 ರಂದು ಪಟ್ಟಣ ಪಂಚಾಯಿತಿಗೆ ಅಧಿಕೃತ ಪತ್ರ ಬರೆದಿದ್ದರು. ಸರ್ಕಾರದ ಆದೇಶದಂತೆ ಅನೇಕ ಅಂಗಡಿಕಾರರು ಹಾಗೂ ಕಟ್ಟಡ ಮಾಲೀಕರು ತಮ್ಮ ಕಟ್ಟಡಗಳನ್ನು ತೆರವು ಗೊಳಿಸಿದ್ದರು.
ಆದರೆ ಗುತ್ತಿಗೆ ಪಡೆದ ಗೋವಿಂದರಾಜು (ಬಾಲಾಜಿ ಕನ್ನಕ್ಷನ್ ಮೇ.ಮಾನವಿ) ಅವರು ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ ಕೇವಲ 35 ಅಡಿ ಅಗಲದ ಕಾಮಗಾರಿಗೆ ಮುಂದಾಗಿದ್ದು, ಉದ್ಘಾಟನೆಯಾಗಿ ಎರಡು ತಿಂಗಳು ಕಳೆದರೂ ಅಭಿವೃದ್ಧಿ ಕಾಮಗಾರಿ ಪ್ರಾರಂಭವಾಗದಿರುವುದು ಪಟ್ಟಣದ ಜನರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಈ ವಿಷಯವಾಗಿ 25-08-2025 ರಂದು ಪಟ್ಟಣಕ್ಕೆ ಆಗಮಿಸಿದ್ದ ಸಚಿವ ಬೋಸರಾಜ ಅವರಿಗೆ ಮನವಿ ಸಲ್ಲಿಸಲು ರೈತ ಸಂಘದ ತಾಲ್ಲೂಕು ಕಾರ್ಯದರ್ಶಿ ಹುಲಿಗಪ್ಪ, ಜಿಲ್ಲಾ ಸಮಿತಿಯ ಸದಸ್ಯ ಹನುಮಂತಪ್ಪ ಕುಂಬಾರ ಹಾಗೂ ಇತರರು ಮುಂದಾದರು. ಆದರೆ ಸಚಿವರು ತಾಳ್ಮೆಯಿಂದ ಉತ್ತರಿಸ ಬೇಕಾದ ಸಂದರ್ಭದಲ್ಲಿ ಜನರ ಮನವಿಯನ್ನು ನಿರಾಕರಿಸಿ ಅನುಚಿತವಾಗಿ ವರ್ತಿಸಿದ್ದು, ಜನ ಪ್ರತಿನಿಧಿ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ ಎಂದು ರೈತ ಸಂಘ ಆರೋಪಿಸಿದೆ.

ಇದರ ಹಿಂದೆ 23-07-2025 ರಂದು ರೈತ ಸಂಘವು ರಾಯಚೂರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತ್ತು. ಜಿಲ್ಲಾಧಿಕಾರಿಗಳು 08-08-2025 ರಂದು ಕಲಬುರ್ಗಿ ಕೆ.ಆರ್.ಡಿ.ಬಿ.ನಿ.ನಿ ಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ತಿಳಿಸಿದ್ದರು. ಆದಾಗ್ಯೂ ಸಮಸ್ಯೆ ಬಗೆಹರಿಯದೇ ಉಳಿದಿದೆ.
ಕರ್ನಾಟಕ ರೈತ ಸಂಘ ಹೇಳಿಕೆ ಪ್ರಕಾರ, “ಪಟ್ಟಣಕ್ಕೆ ಬಂದ ಸಚಿವರು ಜನರ ಸಮಸ್ಯೆಯನ್ನು ಆಲಿಸಿ ಸಮಾಧಾನ ಪಡಿಸುವ ಬದಲು ಸರ್ವಾಧಿಕಾರಿಯಂತೆ ವರ್ತಿಸಿರುವುದು ಖಂಡನೀಯ. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಮಾಡಿದ ಶಪಥವನ್ನೇ ಉಲ್ಲಂಘಿಸಿರುವುದು ಜನ ವಿರೋಧಿ ನಿಲುವಾಗಿದೆ. ಮುಖ್ಯಮಂತ್ರಿಗಳು ತಕ್ಷಣ ಬೋಸರಾಜರಿಂದ ರಾಜೀನಾಮೆ ಪಡೆಯಬೇಕು, ಇಲ್ಲವಾದರೆ ರೈತ ಸಂಘ ತೀವ್ರ ಹೋರಾಟ ರೂಪಿಸುತ್ತದೆ” ಎಂದು ತಿಳಿಸಿದ್ದಾರೆ.
ಸಂಘವು ಮತ್ತಷ್ಟು ಸ್ಪಷ್ಟಪಡಿಸಿದ್ದು, “ಸಂವಿಧಾನವು ಪ್ರತಿಯೊಬ್ಬ ಪ್ರಜೆಗೆ ಪ್ರಶ್ನೆ ಮಾಡುವ ಹಕ್ಕು ನೀಡಿದೆ. ಆ ಹಕ್ಕನ್ನು ಹತ್ತಿಕ್ಕುವ ಪ್ರಯತ್ನವು ಪ್ರಜಾಪ್ರಭುತ್ವಕ್ಕೆ ದುರಂತ” ಎಂದು ಖಂಡನೆ ವ್ಯಕ್ತಪಡಿಸಿದೆ.ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಚಿಟ್ಟಿ ಬಾಬು, ಸಿಂಧನೂರು ತಾಲೂಕ ಅಧ್ಯಕ್ಷ ರಮೇಶ ಪಾಟೀಲ್, ಬಿ.ಆರ್.ಯರಿದಾಳ್, ಹುಲಿಗೆಪ್ಪ, ನಾಗರಾಜ, ಹನುಮಂತ, ಶಿವರಾಜ್ ದೊಡ್ಡಿ, ಮಲ್ಲೇಶ್ ಮದ್ಲಾಪೂರ, ತಿಕ್ಕಯ್ಯ ಕುರ್ಡಿ ಸೇರಿದಂತೆ ಇನ್ನಿತರರು ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ