ಕೈಗಾರಿಕಾ ಸಹಕಾರಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಹೆಜ್ಜೆ, ಸೊಸೈಟಿಗೆ ಪ್ರತಿಷ್ಠಿತ – ‘ಸಾಧನಾ ಪ್ರಶಸ್ತಿ’ ಯ ಗರಿ.
ಉಡುಪಿ ಆ. 30





ಸಹಕಾರಿ ಕ್ಷೇತ್ರದ ಆರ್ಥಿಕ ಚಟುವಟಿಕೆಗಳಿಗೆ ಹೊಸ ದಿಕ್ಕು ತೋರಿಸಿರುವ ಉಡುಪಿ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್, 2024-25 ನೇ. ಸಾಲಿನ ಅತ್ಯುನ್ನತ “ಸಾಧನಾ ಪ್ರಶಸ್ತಿ” ಗೆ ಭಾಜನವಾಗುವ ಮೂಲಕ ತನ್ನ ಯಶಸ್ಸಿನ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿದೆ. ತನ್ನ ದೂರ ದೃಷ್ಟಿಯ ನಾಯಕತ್ವ ಮತ್ತು ಅಚಲ ಬದ್ಧತೆಯಿಂದ ಈ ಸಂಸ್ಥೆಯು ಇಡೀ ಸಹಕಾರಿ ರಂಗಕ್ಕೆ ಮಾದರಿಯಾಗಿ ನಿಂತಿದೆ ಎಂದು ತಜ್ಞರು ಬಣ್ಣಿಸಿದ್ದಾರೆ.
ಈ ಪ್ರಶಸ್ತಿಯು ಕೇವಲ ಒಂದು ಗೌರವವಲ್ಲ, ಬದಲಾಗಿ ಸೊಸೈಟಿಯು ಕಳೆದ ಹಲವಾರು ವರ್ಷಗಳಿಂದ ಸದಸ್ಯರಿಗೆ ಒದಗಿಸಿರುವ ಅನನ್ಯ ಸೇವೆ, ಆರ್ಥಿಕ ಶಿಸ್ತು ಮತ್ತು ಸಹಕಾರಿ ತತ್ವಗಳ ಅಚಲ ಪಾಲನೆಗೆ ಸಂದ ಭವ್ಯ ಪುರಸ್ಕಾರವಾಗಿದೆ. ಪ್ರತಿ ಹಂತದಲ್ಲೂ ಸದಸ್ಯರ ಕಲ್ಯಾಣವನ್ನು ತನ್ನ ಮೂಲ ಉದ್ದೇಶವನ್ನಾಗಿಸಿ ಕೊಂಡು, ನವೀನ ಕಾರ್ಯಕ್ರಮಗಳ ಮೂಲಕ ಸಮಗ್ರ ಪ್ರಗತಿಯನ್ನು ಸಾಧಿಸಿದ ಹಿನ್ನೆಲೆಯಲ್ಲಿ ಈ ಮಹೋನ್ನತ ಗೌರವಕ್ಕೆ ಸಂಸ್ಥೆಯನ್ನು ಆಯ್ಕೆ ಮಾಡಲಾಗಿದೆ.
ಮಂಗಳೂರಿನಲ್ಲಿ ನಡೆದ ಅತ್ಯಂತ ಭವ್ಯ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಸಂಸ್ಥೆಯ ಪರವಾಗಿ ಹಿರಿಯ ನಿರ್ದೇಶಕರಾದ ಶ್ರೀ ನಾರಾಯಣ ಬಲ್ಲಾಳ್ ಮತ್ತು ಪ್ರಧಾನ ವ್ಯವಸ್ಥಾಪಕರಾದ ಶ್ರೀ ರಾಜೇಶ್ ಹೆಗ್ಡೆ ಅವರು ಈ ಪುರಸ್ಕಾರವನ್ನು ಸ್ವೀಕರಿಸಿ, ಸಹಕಾರಿ ಕ್ಷೇತ್ರದಲ್ಲಿ ಸೊಸೈಟಿಯ ಬದ್ಧತೆಯನ್ನು ಪುನರುಚ್ಚರಿಸಿದರು. ಈ ಶುಭ ಸಂದರ್ಭದಲ್ಲಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಾದ ಡಾ, ಎಂ.ಎನ್ ರಾಜೇಂದ್ರ ಕುಮಾರ್ ಅವರು ಸಂಘದ ಸಾಧನೆಗಳನ್ನು ಮುಕ್ತ ಕಂಠದಿಂದ ಶ್ಲಾಘಿಸಿ, ಎಲ್ಲರಿಗೂ ಸ್ಫೂರ್ತಿ ಯಾಗುವಂತೆ ಪ್ರಶಂಸೆಯ ಮಹಾ ಪೂರವನ್ನೇ ಹರಿಸಿದರು. ಸಂಘದ ನಿರ್ದೇಶಕರಾದ ಶ್ರೀ ಅಬ್ದುಲ್ಲಾ ಎಚ್.ಸಾಹೇಬ್, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷರಾದ ಶ್ರೀ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಉಡುಪಿ ಹಾಗೂ ಮಂಗಳೂರು ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರು ಸೇರಿದಂತೆ ಹಲವು ಗಣ್ಯರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.
ವರದಿ:ಆರತಿ ಗಿಳಿಯಾರು ಉಡುಪಿ