ಪ್ರವಾದಿ ಮೊಹಮ್ಮದ್ ಸ – ಸಿರತ್ ಅಭಿಯಾನ 2025.
ತರೀಕೆರೆ ಸ.2

ಶಾಂತಿ ನೆಮ್ಮದಿ ಸಾರುತ್ತ 6 ನೇ. ಶತಮಾನದಲ್ಲಿ ಸಂಪೂರ್ಣ ಮಾನವ ಕುಲಕ್ಕೆ ಕರುಣಾಮಯಿಯಾಗಿ ಆಗಮಿಸಿದ್ದ ಪ್ರವಾದಿ ಮಹಮ್ಮದ್ ಸ ರವರು ನ್ಯಾಯ, ಸಮಾನತೆ, ಬಡವರ, ದುರ್ಬಲರ, ಶೋಷಿತರ, ದಮನಿತರ, ಅನಾಥರ, ವಿಧವೆಯರ ಅಸಹಾಯಕರ ಪರವಾಗಿ ಧ್ವನಿ ಎತ್ತಿದರು ಎಂದು ಸಿರತ್ ಅಭಿಯಾನದ ಸಂಚಾಲಕರಾದ ಶೇಕ್ ಜಾವಿದ್ ರವರು ಹೇಳಿದರು. ಅವರು ಇಂದು ಪಟ್ಟಣದ ಹೋಟೆಲ್ ಅರಮನೆ ಆವರಣದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಪ್ರತಿಯೊಬ್ಬ ಮನುಷ್ಯನಿಗೂ ನ್ಯಾಯ ಸಿಗಬೇಕು ಆರೋಗ್ಯ ಪೂರ್ಣ ಸಮಾಜವಾಗಬೇಕು, ಸಮಾಜದಲ್ಲಿ ಶಾಂತಿ ಸಮಾಧಾನ, ನೆಮ್ಮದಿ ನೆಲೆಯಾಗಲು ನ್ಯಾಯ ಪಾಲನೆ ಅಗತ್ಯ ಎಂದು ಪ್ರವಾದಿ ಮೊಹಮ್ಮದ್ ಸ ರವರು ಹೇಳಿದ್ದಾರೆ, ಶ್ರೀಮಂತರಿಗೆ ಒಂದು ನ್ಯಾಯ ಬಡವರಿಗೆ ಒಂದು ನ್ಯಾಯ ದುರ್ಬಲರಿಗೆ ಶೋಷಿತರಿಗೆ ಒಂದು ನ್ಯಾಯ ವಾಗಬಾರದು. ಪ್ರತಿಯೊಬ್ಬರಿಗೂ ಒಂದೇ ನ್ಯಾಯವಾಗಿರಬೇಕು ಎಂದು ಪ್ರವಾದಿ ಮುಹಮದ್ ಸ ಅವರು ಹೇಳಿದ್ದಾರೆ. ಅನಾಥ ರಕ್ಷಕ ಸ್ತ್ರೀ ವಿಮೋಚಕ ನ್ಯಾಯದ ಹರಿಕಾರ ಪ್ರವಾದಿ ಮಹಮ್ಮದ್ ಸ ಅವರ ವಿಚಾರಗಳನ್ನು ಆದರ್ಶಗಳನ್ನು ಅವರ ಸಂದೇಶಗಳನ್ನು ಜಗತ್ತಿನಲ್ಲಿ ವ್ಯಾಪಕ ಗೊಳಿಸುವುದು ಅತ್ಯವಶ್ಯಕವಾಗಿದೆ ಹಾಗೂ ಅನಿವಾರ್ಯವಾಗಿದೆ. ಆದ್ದರಿಂದ ರಾಜ್ಯಾದ್ಯಂತ ಸೆಪ್ಟೆಂಬರ್ ಮೂರರಿಂದ 14 ರ ವರೆಗೆ ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯದಾದ್ಯಂತ ಸೀರತ್ ಅಭಿಯಾನವನ್ನು ಹಮ್ಮಿಕೊಂಡಿದೆ ಸಮಾಜ ಸೇವಾ ಕಾರ್ಯಗಳಾದ ವೃದ್ಧಾಶ್ರಮ ಅನಾಥಾಶ್ರಮ ಆಸ್ಪತ್ರೆಗಳಿಗೆ ಭೇಟಿ ನೀಡಿರುವುದು ರಕ್ತದಾನ ಮಾಡುವುದು ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ಜಮಾಅತೆ ಇಸ್ಲಾಮಿ ಹಿಂದ್, ತರೀಕೆರೆ ಘಟಕದ ಮುಖಂಡರಾದ ಆದಿಲ್ ಪಾಷಾ ಅವರು ಮಾತನಾಡಿ ದಿನಾಂಕ 11.09.2025ರ ಗುರುವಾರ ಸಂಜೆ 7 ಗಂಟೆಗೆ ತರೀಕೆರೆಯ ಹೋಟೆಲ್ ಅರಮನೆಯಲ್ಲಿ ಸೀರತ್ ಪ್ರವಚನ ಕಾರ್ಯಕ್ರಮ ಏರ್ಪಡಿಸಿದ್ದು ಪ್ರವಚನಕಾರರಾಗಿ ಜನಾಬ್ ಅಕ್ಬರ್ ಅಲಿ ಉಡುಪಿ ಮತ್ತು ಮುಖ್ಯ ಅತಿಥಿಗಳಾಗಿ ಶ್ರೀ ಗುರುಬಸವ ಮಹಾಸ್ವಾಮಿಗಳು ವಿರಕ್ತ ಮಠ ಪಾಂಡುಮಟ್ಟಿ ಚೆನ್ನಗಿರಿ ತಾಲೂಕು ರವರು ಆಗಮಿಸುತ್ತಿದ್ದಾರೆ ಮತ್ತು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ ಇದೇ ಸಂದರ್ಭದಲ್ಲಿ ಈ ಅಭಿಯಾನದ ಪ್ರಯುಕ್ತ ಶಾಂತಿ ಪ್ರಕಾಶನ ಪ್ರಕಟಿಸಿರುವ ಪ್ರವಾದಿ ಅವರ ಬದುಕು ಮತ್ತು ಸಂದೇಶಗಳ ಬಗ್ಗೆ ಬೆಳಕು ಚೆಲ್ಲುವ ಎರಡು ಹೊಸ ಪುಸ್ತಕಗಳನ್ನು ಬಿಡುಗಡೆ ಗೊಳಿಸಲಾಗುವುದು ಎಂದು ಹೇಳಿದರು. ಮಿರಾಜ್ ಮಸೀದಿ ಅಧ್ಯಕ್ಷರಾದ ಶರ್ಮದ್ ಉಲ್ಲಾ ಖಾನ್ ಮಾತನಾಡಿ ಯುವ ಜನತೆಗಾಗಿ ರೀಲ್ಸ್ ಮೇಕಿಂಗ್ ಕಾಂಪಿಟೇಶನ್ ಆಯೋಜಿಸಲಾಗಿದೆ ಮತ್ತು ವೈಯುಕ್ತಿಕ ಭೇಟಿ, ಸಾಮೂಹಿಕ ಭೇಟಿ, ಕಾರ್ನರ್ ಮೀಟಿಂಗ್ ಗಳ ಮೂಲಕ ಪ್ರವಾದಿ ಸಂದೇಶಗಳನ್ನು ವ್ಯಾಪಕ ಗೊಳಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು. ಪತ್ರಿಕಾ ಗೋಷ್ಠಿಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ತರೀಕೆರೆ ಘಟಕದ ಅಧ್ಯಕ್ಷರಾದ ಸೈಯದ್ ಇಸ್ಮಾಯಿಲ್, ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸನ್ ನ ತರೀಕೆರೆ ಘಟಕದ ಅಧ್ಯಕ್ಷರಾದ ಅಬ್ದುಲ್ ರಹಮಾನ್, ಹಾಗೂ ಜಮಾತೆ ಇಸ್ಲಾಮಿ ಹಿಂದ್ ತರೀಕೆರೆ ಘಟಕದ ಕಾರ್ಯಕರ್ತರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು