“ಪ್ರವಾದಿ ಮೊಹಮ್ಮದ್ ಪೈಗಂಬರರ ಸಂದೇಶ ಸ್ಮರಿಸುವ ಹಬ್ಬವೇ ಈದ್ ಮಿಲಾದ್”…..

“ನಾಳೆ ಪ್ರವಾಹ ಎಂದು ತಿಳಿದಿದ್ದರೂ ಮುಂದಿನ ಪೀಳಿಗೆಗಾಗಿ ಇಂದು ಗಿಡ ನೆಡು” ಎಂದು ಹೇಳುವ ಮೂಲಕ, ಮಾನವ ಸಮಾಜಕ್ಕಾಗಿ ಹೇಗೆ ನಿಸ್ವಾರ್ಥಿಯಾಗಿ ಬದುಕಬೇಕು ಎಂಬುದನ್ನ ತಮ್ಮ ಜೀವನದ ಮೂಲಕ ತಿಳಿಸಿದ,’ಇಸ್ಲಾಂ’ ಧರ್ಮದ ಕೊನೆಯ ಪ್ರವಾದಿ ಮೊಹಮ್ಮದ್ ಪೈಗಂಬರ ಅವರ ಜನ್ಮ ದಿನಾಚರಣೆಯನ್ನು ಈದ್ ಮಿಲಾದ್ ಎಂಬ ಹೆಸರಿನಲ್ಲಿ ಜಗತ್ತಿನಾದ್ಯಂತ ಮುಸಲ್ಮಾನರು ಆಚರಿಸುತ್ತಾರೆ. ಇಸ್ಲಾಂ ಧರ್ಮದಲ್ಲಿ ಈದ್ ಮಿಲಾದ್ ಆಚರಣೆಗೆ ಅತ್ಯಂತ ಪ್ರಾಮುಖ್ಯತೆಯಿದೆ. ಈದ್ ಮಿಲಾದ್ ಆಚರಣೆಯನ್ನು ಜಗತ್ತಿನ ವಿವಿಧ ಕಡೆಗಳಲ್ಲಿ ವಿವಿಧ ರೀತಿಯಾಗಿ ಆಚರಿಸುತ್ತಾರೆ. ಪ್ರವಾದಿಯವರು ಹುಟ್ಟಿದ ರಬೀವು ಅವ್ವಲ್ ತಿಂಗಳ ಆರಂಭದಿಂದ ತಿಂಗಳ ಕೊನೆಯವರೆಗೂ ಒಂದು ತಿಂಗಳ ಕಾಲ ವಿಶ್ವದಾದ್ಯಂತ ಈದ್ ಮೀಲಾದ್ ಆಚರಣೆಗಳು ನಡೆಯುತ್ತವೆ.




ಮೊಹಮ್ಮದ್ ಪೈಗಂಬರರು ಕ್ರಿಸ್ತಶಕ ೫೭೫, ಇಸ್ಲಾಮಿಕ್ ಹಿಜರಿ ಕ್ಯಾಲೆಂಡರಿನ ರಬೀವುಲ್ ಅವ್ವಲ್ ತಿಂಗಳ ಹನ್ನೆರಡನೇ ತಾರೀಕಿನಂದು ಸೌದಿ ಅರೇಬಿಯಾದ ಮಕ್ಕಾ ನಗರದಲ್ಲಿ ಜನಿಸಿದರು. ತನ್ನ ತಾಯಿಯ ಗರ್ಭದಲ್ಲಿದ್ದಾಗಲೇ ಪ್ರವಾದಿಯವರ ತಂದೆ ಸಾವನ್ನಪ್ಪಿದ್ದರು. ತನ್ನ ಚಿಕ್ಕಪ್ಪ ಅಬೂ ತಾಲಿಬ್ ಅವರ ಪಾಲನೆಯಲ್ಲಿ ಬೆಳೆದರು. ತಮ್ಮ ಸನ್ನಡತೆಯ ಮೂಲಕ ಜಗತ್ತಿಗೆ ಶಾಂತಿಸಂದೇಶ ಸಾರಿದ ಪ್ರವಾದಿ ಪೈಗಂಬರರು ತಮ್ಮ ಜೀವನದಲ್ಲಿ ಹುಟ್ಟುಹಬ್ಬವನ್ನು ಎಂದೂ ಆಚರಿಸಿಕೊಂಡಿರಲಿಲ್ಲ. ಹಾಗಾಗಿ ಅವರ ಜನ್ಮದಿನವನ್ನು ಆಚರಿಸುವುದು ತಪ್ಪು ಎಂದು ಕೆಲ ಹಿರಿಯ ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಅಷ್ಟೇಯಲ್ಲದೇ, ಆ ದಿನದಂದೇ ಅವರ ಪುಣ್ಯಸರಣೆಯೂ ಇರುವುದರಿಂದ ಅದನ್ನು ಸಂಭ್ರಮಿಸುವುದು ಬೇಡ ಎಂಬುದಾಗಿಯೂ ಹೇಳುತ್ತಾರೆ. ಈ ಎಲ್ಲಾ ಭಿನ್ನಾಭಿಪ್ರಾಯಗಳ ನಡುವೆಯೂ ಈದ್ ಮಿಲಾದ್ ಎಲ್ಲಾ ಕಡೆ ಸೌಹಾರ್ದಯುತವಾಗಿ ನಡೆಯುತ್ತಿರುವುದು ಅತ್ಯಂತ ಸಂತಸದ ಸಂಗತಿಯಾಗಿದೆ.
ಈದ್ ಮಿಲಾದ್ ಎಂದರೆ ಪ್ರವಾದಿಯವರ ಜನ್ಮದಿನ ಎಂಬುದು ಕೇವಲ ಸಾಂಕೇತಿಕ ರೂಪವೇ ಹೊರತು ನಿಜವಾಗಿ ಅವರ ಸಂದೇಶಗಳ ಪುನರ್ಸ್ಮರಣೆ ಮತ್ತು ಆಚರಣೆಯ ಧ್ಯೋತಕವೇ ಆಗಿದೆ. ತಮ್ಮ ವಿಚಾರಗಳಿಂದ ಜಗತ್ತಿನ ಕೋಟ್ಯಾಂತರ ಜನರ ಹೃದಯದಲ್ಲಿರುವ ಪ್ರವಾದಿ ಮೊಹಮ್ಮದರ ವಿಚಾರಗಳನ್ನು ತಿರುವಿ ಹಾಕಲು ಈದ್ ಮಿಲಾದ್ ಒಂದು ಸುದಿನವಾಗಿ ಬಳಕೆಯಾಗುತ್ತದೆ ಎಂದರೆ ತಪ್ಪಾಗಲಾರದು.
ಭಾರತದಲ್ಲಿ ಈದ್ ಮೀಲಾದ್ ಆಚರಣೆಯನ್ನು ಎಲ್ಲಾ ಪಂಗಡದ ಮುಸಲ್ಮಾನರು ಆಚರಿಸುತ್ತಾರೆ. ಈದ್ ಮಿಲಾದ್ ದಿನದಂದು ವಿವಿಧ ಸಾಂಸ್ಕೃತಿಕ, ಪ್ರತಿಭಾ ಕಾರ್ಯಕ್ರಮಗಳನ್ನು ನಡೆಸುವುದು. ಮೌಲೀದ್ ಪಾರಾಯಣ ಮಾಡುವುದು, ಅನ್ನಸಂತರ್ಪಣೆ ಮಾಡುವುದು, ಮೆರವಣಿಗೆ ಮಾಡುವುದು ಈದ್ ಮಿಲಾದ್ ಆಚರಣೆಯ ಒಂದು ಭಾಗವಾಗಿದೆ. ಈದ್ ಮೀಲಾದ್ ಆಚರಣೆಯ ರಬೀವುಲ್ ಅವ್ವಲ್ ತಿಂಗಳಲ್ಲಿ ಮುಸಲ್ಮಾನರ ಎಲ್ಲಾ ಧಾರ್ಮಿಕ ಕೇಂದ್ರಗಳು ಮತ್ತು ವಿದ್ಯಾ ಸಂಸ್ಥೆಗಳನ್ನು ಬಣ್ಣದ ದೀಪಗಳು, ಮತ್ತು ಕಾಗದಗಳಿಂದ ಅಲಂಕರಿಸಲಾಗುತ್ತದೆ.
ಮೌಲೀದ್ ಪಾರಾಯಾಣ.
ಮೌಲೀದ್ ಪಾರಾಯಾಣ ಇಸ್ಲಾಮಿನ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಮೌಲೀದ್ ಅಂದರೆ ಪ್ರವಾದಿ ಮುಹಮ್ಮದ್ ಪೈಗಂಬರರ ಪ್ರಕೀರ್ತನೆಯಾಗಿದೆ. ಮೌಲೀದನ್ನು ಸಂಪೂರ್ಣವಾಗಿ ಪಠಿಸಲು ಸುಮಾರು ಒಂದು ಗಂಟೆಗಳಷ್ಟು ಸಮಯ ಬೇಕಾಗುತ್ತದೆ. ಮೌಲೀದ್ ಸಂಪೂರ್ಣವಾಗಿ ಅರೆಬಿಕ್ ಭಾಷೆಯಲ್ಲಿದೆ. ಮೌಲೀದ್ ಪಾರಾಯಣ ಕೇವಲ ಪಠಣವಲ್ಲ. ಮೌಲೀದನ್ನು ಪಾರಾಯಣ ಮಾಡಿದರೆ ಪುಣ್ಯ ಸಿಗುತ್ತದೆ ಎಂಬ ನಂಬಿಕೆ ಇಸ್ಲಾಮಿನಲ್ಲಿದೆ.
ಪ್ರವಾದಿ ಪೈಗಂಬರರು ಜನಿಸಿದ ರಬೀವುಲ್ ಅವ್ವಲ್ ತಿಂಗಳ ಆರಂಭದಿಂದ ಕೊನೆವರೆಗೆ ಮೌಲೀದ್ ಪಾರಾಯಣವನ್ನು ಹೆಚ್ಚಾಗಿ ಮಾಡಲಾಗುತ್ತದೆ. ಈ ತಿಂಗಳಷ್ಟೇಯಲ್ಲದೇ, ಇತರ ಸಮಯದಲ್ಲೂ ಮೌಲೀದನ್ನು ಪಾರಾಯಣ ಮಾಡಬಹುದು. ಪ್ರವಾದಿ ಜನ್ಮ ತಿಂಗಳಾದ್ದರಿಂದ ಮುಸಲ್ಮಾನರ ಧಾರ್ಮಿಕ ಕೇಂದ್ರಗಳಾದ ಮಸೀದಿ, ಮದ್ರಸಗಳಲ್ಲಿ ಮತ್ತು ಹೆಚ್ಚಿನ ಮನೆಗಳಲ್ಲಿ ಮೌಲೀದ್ ಪಾರಾಯಣ ಮಾಡಲಾಗುತ್ತದೆ. ಇದನ್ನು ಅತ್ಯಂತ ವಿಜೃಂಭಣೆಯಿಂದ ಮತ್ತು ಅತ್ಯಂತ ಸರಳವಾಗಿಯೂ ಮಾಡಬಹುದು. ಹೆಚ್ಚಿನ ಕಡೆಗಳಲ್ಲಿ ಮೌಲೀದ್ ಪಾರಾಯಣವನ್ನು ಅತ್ಯಂತ ವಿಜೃಂಭಣೆಯಿಂದ ಊರಿನ ಜನರೆಲ್ಲರೂ ಒಟ್ಟಾಗಿ ಮಾಡುತ್ತಾರೆ.
ಅನ್ನಸಂತರ್ಪಣೆ
“ನೆರೆಮನೆಯಲ್ಲಿ ಹಸಿದವರಿದ್ದರೆ ಹೊಟ್ಟೆ ತುಂಬಾ ತಿಂದು ಉಣ್ಣುವವನು ನನ್ಮವನಲ್ಲ, ತನ್ನ ಪಾಲಿನ ಅನ್ನವನ್ನು ಹಸಿದವರಿಗೆ ಹಂಚಿ ತಿನ್ನುವವನೆ ನನ್ನವನು” ಎಂದು ಹೇಳು ಮೂಲಕ ಪರಸ್ಪರ ಸಹಬಾಳ್ವೆಗೆ ನಾಂದಿ ಹಾಡಿದ ಪ್ರವಾದಿಯವರ ಜನ್ನದಿನದಂದು, ಅವರ ಅನುಯಾಯಿಗಳು ಜನರಿಗೆ ಅನ್ನ ಸಂತರ್ಪಣೆ ಮಾಡುತ್ತಾರೆ. ಇದು ಈದ್ ಮೀಲಾದ್ ಆಚರಣೆಯ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದು. ಆದ್ದರಿಂದ ಈದ್ ಮೀಲಾದ್ ದಿನದ ಅಂಗವಾಗಿ ಧಾರ್ಮಿಕ ಕೇಂದ್ರಗಳು ಮತ್ತು ಮನೆಗಳಲ್ಲಿ ಅನ್ನಸಂತರ್ಪಣೆ ಮಾಡುತ್ತಾರೆ.

ಬುರ್ದಾ ಪಠನೆ
‘ಬುರ್ದಾ’ ಎಂದರೆ ಪ್ರವಾದಿ ಪ್ರೇಮ ಕಾವ್ಯ. ಇಸ್ಲಾಮಿನ ಪಂಡಿತ ಮತ್ತು ಪ್ರವಾದಿ ಪ್ರೇಮಿ ಇಮಾಂ ಬೂಸೂರಿ ಬುರ್ದಾವನ್ನು ರಚಿಸಿದರು. ಬುರ್ದಾ ಮಜ್ಲಿಸ್ ಸುಮಾರು ಎರಡು ಮೂರು ಗಂಟೆಗಳ ಕಾಲ ಸತತವಾಗಿ ಪ್ರವಾದಿ ಪ್ರಕೀರ್ತನೆ ಹಾಡುವ ಕಾರ್ಯಕ್ರಮವಾಗಿದೆ. ಈದ್ ಮಿಲಾದ್ ಆಚರಣೆಯ ರಬೀವುಲ್ ಅವ್ವಲ್ ತಿಂಗಳಲ್ಲಿ ಬುರ್ದಾ ಮಜ್ಲಿಸ್‍ಗಳನ್ನು ಆಯೋಜನೆ ಮಾಡಲಾಗುತ್ತೆ. ಬುರ್ದಾ ಹಾಡಲೆಂದೇ ಪ್ರತ್ಯೇಕ ಹಾಡುಗಾರ ತಂಡಗಳು ಕಾರ್ಯನಿರತವಾಗಿರುತ್ತದೆ.ಮೌಲೀದ್ ಪಾರಾಯಣದಂತೆ ಬುರ್ದಾ ಕಾರ್ಯಕ್ರಮವನ್ನು ಸರಳವಾಗಿಯೂ ಮತ್ತು ವಿಜೃಂಭಣೆಯಾಗಿಯೂ ಆಚರಣೆ ಮಾಡಬಹುದು.ದೇಶದ ವಿವಿಧ ಕಡೆಗಳಲ್ಲಿ ಬೃಹತ್ ಬುರ್ದಾ ಮಜ್ಲಿಸ್ ಕಾರ್ಯಕ್ರಮಗಳು ನಡೆಯುತ್ತವೆ. ಬುರ್ದಾ ಹಾಡಿದರೆ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆ ಇಸ್ಲಾಮಿನಲ್ಲಿದೆ.
ಪ್ರತಿಭಾ ಕಾರ್ಯಕ್ರಮಗಳ ಆಯೋಜನೆ
ಇದು ಕೂಡ ಈದ್ ಮೀಲಾದ್ ಆಚರಣೆಯ ಪ್ರಮುಖ ಭಾಗವಾಗಿದೆ. ಆಯ ಊರಿನ ಮದ್ರಸಾದ ಮಕ್ಕಳಿಗೆ ಪ್ರಮುಖವಾಗಿ ಪ್ರತಿಭಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಹಾಡು, ಭಾಷಣ, ಕ್ವಿಝ್, ಸಂಭಾಷಣೆ, ಕಥೆ ಹೇಳುವುದು ಹೀಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಗುತ್ತದೆ. ಪ್ರತಿಭಾ ಕಾರ್ಯಕ್ರಮಗಳ ಆಯೋಜನೆಗಾಗಿ ಒಂದು ತಿಂಗಳ ಮುಂಚೆಯೇ ತಯಾರಿಗಳನ್ನು ಮಾಡಿಕೊಳ್ಳಲಾಗುತ್ತದೆ. ಮದ್ರಸಾಗಳಲ್ಲದೆ ಇತರ ಕಡೆಗಳಲ್ಲೂ ಸಂಘ ಸಂಸ್ಥೆಗಳು ಪ್ರತಿಭಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತವೆ.
ಮೆರವಣಿಗೆ:
ಮೆರವಣಿಗೆ ಈದ್ ಮಿಲಾದ್ ಹಬ್ಬದ ಒಂದು ಪ್ರಮುಖ ಭಾಗವಾಗಿದೆ. ಪೈಗಂಬರರ ಘೋಷಣೆಗಳನ್ನ,ಸಂದೇಶಗಳನ್ನು ರಸ್ತೆಯುದ್ದಕ್ಕೂ ಹೇಳುವ ಮೂಲಕ ಅವರ ಸಂದೇಶಗಳ ಪುನರ್ ಸ್ಮರಣೆ ಮಾಡುತ್ತಾರೆ. ಯುವಕರಲ್ಲಿ ಇದೊಂದು ರೀತಿಯ ಆಧ್ಯಾತ್ಮಿಕ ಉತ್ಸಾಹ ತಂದಂತೆ ಭಾಸವಾಗುತ್ತದೆ. ಇದನು ಸಹ ಕೆಲವು ಕಡೆ ಸರಳವಾಗಿ,ಕೆಲವು ಕಡೆ ವಿಜೃಂಭಣೆಯಿಂದ ಮಾಡುತ್ತಾರೆ.
ಹೀಗೆ ನಾಡಿನಾದ್ಯಂತ, ದೇಶದಾದ್ಯಂತ, ಜಗತ್ತಿನಾದ್ಯಂತ ತಮ್ಮದೇಯಾದ ರೀತಿಯಲ್ಲಿ ಈದ್ ಮಿಲಾದ್ ಹಬ್ಬ ಆಚರಿಸಲಾಗತ್ತದೆ. ಆಚರಿಸುವ ಪ್ರತಿಯೊಬ್ಬರು ಗಮನದಲ್ಲಿಟ್ಟುಕೊಂಡಿರಬೇಕಾದ ಅಂಶವೆನೆಂದರೆ ಶಾಂತಿ & ಸೌಹಾರ್ಧತೆ. ಹಬ್ಬ ಆಚರಿಸುವ ಪ್ರತಿ ಹಂತದಲ್ಲೂ,ಮೌಲೀದ್ ಪಾರಾಯಣದಲ್ಲಾಗಲಿ,ಅನ್ನ ಸಂತರ್ಪಣೆ ಮಾಡುವಲ್ಲಿಯಾಗಲಿ,ಬುರ್ದಾ ಪಠನೆ ಮಾಡುವಾಗಲಿ,ಪ್ರತಿಭಾ ಕಾರ್ಯಕ್ರಮ ಮಾಡುವಾಗಲಿ,ಮೆರವಣಿಗೆ ಮಾಡುವಾಗಲಿ ಶಾಂತಿಯಿಂದ ವರ್ತಿಸಬೇಕು. ಪ್ರವಾದಿಯವರು ಹೇಳಿದಂತೆ ರಸ್ತೆ ತಡೆಗಟ್ಟಿ ಜನರಿಗೆ ತೊಂದರೆ ನೀಡದಂತೆ ಆದಷ್ಟು ಬೇಗ ಮುಗಿಸಿಕೊಂಡು ಜನರ ಓಡಾಟಕ್ಕೆ ಅನುವು ಮಾಡಿಕೊಡಬೇಕು. ತತ್ವವನ್ನ ಪಾಲಿಸುವಲ್ಲಿ ನಿಷ್ಠೆ ಇರಬೇಕೆ ವಿನಾ ಪ್ರತಿಷ್ಠೆ ಇರಬಾರದು ಎಂಬುದು ನನ್ನ ಅಭಿಪ್ರಾಯವಾಗಿದೆ.
ಈ ಸುದಿನದಂದು ಪ್ರವಾದಿಯವರ ಪ್ರಮುಖ ಸಂದೇಶಗಳ ಕಡೆ ಮುಖ ಮಾಡಿ ನೋಡಿದರೆ ಈ ಕೆಳಗಿನ ಪ್ರಮುಖ ಸಂದೇಶಗಳು ಕಾಣಸಿಗುತ್ತವೆ.
ಏಕದೇವೋಪಾಸನೆ:
ಪ್ರವಾದಿಯವರಿಗೆ ಏಕದೇವೋಪಾಸನೆ ಅದೆಷ್ಟು ಬಲವಾಗಿ ನಂಬಿದ್ದರೂ ಎಂದರೆ, ಒಮ್ಮೆ ಅವರ ಚಿಕ್ಕಪ್ಪನವರಾದ ಅಬೂತಾಲಿಬ್ ಅವರು ಹೀಗೆ ಹೇಳಿದರು, ನೀವು ನಿರಾಕಾರ & ಏಕದೇವೋಪಾಸನೆ ತತ್ವ ಬಿಟ್ಟರೆ ನಿಮಗೆ ಮಕ್ಕಾದ ಜನರು ನಿಮಗೆ ಅನೇಕ ಬಹುಮಾನಗಳನ್ನು ನೀಡುವರು ಎಂದು. ಆಗ ಪೈಗಂಬರರು ಹೇಳಿದರು, ” ಓ ನನ್ನ ಚಿಕ್ಕಪ್ಪನವರೇ, ಈ ಜನರು ಸೂರ್ಯನನ್ನು ನನ್ನ ಬಲಭಾಗದಲ್ಲಿ ಚಂದ್ರನನ್ನು ನನ್ನ ಎಡಭಾಗದಲ್ಲಿ ತಂದು ನಿಲ್ಲಿಸಿದರೂ ನಾನು ನಿರಾಕಾರ & ಏಕದೇವನ ಏಕತ್ವವನ್ನು ಪ್ರಚಾರಗೊಳಿಸುವ ಕೆಲಸವನ್ನು ಕೈಬಿಡಲಾರೆನು”. ಆದ್ದರಿಂದಲೇ ಅವರ ಅನುಯಾಯಿಯಗಳು ಈ ತತ್ವವನ್ನು ಇಂದಿಗೂ ತುಂಬಾ ಹೆಮ್ಮೆಯಿಂದ,ಗೌರವದಿದ ಪಾಲಿಸುತ್ತಾರೆ.
ಮಹಿಳೆಯರೊಂದಿಗೆ ಉತ್ತಮ ನಡವಳಿಕೆ;
ಯಾರು ಮಹಿಳೆಯರೊಂದಿಗೆ ಉತ್ತಮವಾಗಿ ವರ್ತಿಸುವುದಿಲ್ಲವೋ ಅಥವಾ ಅವರಿಗೆ ಹಿಂಸೆ ನೀಡುತ್ತಾರೊ ಅವರ ಬಗ್ಗೆ ನಾನು ಹೇಳಲು ಬಯಸುತ್ತೇನೆ,”ಅವರು ಅಲ್ಲಾಹನ ದೃಷ್ಟಿಯಲ್ಲಿ ಒಳ್ಳೆಯವರೆಂದು ಪರಿಣಿಸಲಾರರು”. ಎಂದು ಹೇಳಿದ ಪ್ರವಾದಿಯವರು ಮಹಿಳೆಯರ ಹಕ್ಕುಬಾಧ್ಯೆತೆಗಳನ್ನು ನಿಗದಿಮಾಡಿದರು. ಪೈಗಂಬರರ ಈ ನಡೆಯ ಮೂಲಕ ಪ್ರಥಮ ಬಾರಿ ಸ್ವತಂತ್ರರಾಗಿ ಉಸಿರಾಡಲು ತೊಡಗಿದ ಮಹಿಳೆಯರು ಎಲ್ಲರಿಗಿಂತ ಮೊದಲು ವಾರೀಸು ಹಕ್ಕುಗಳನ್ನು ಪಡೆದರು. ಈ ಮುಂಚೆ ಯಾರ ಕಾಲದಲ್ಲೂ ಮಹಿಳೆಯರಿಗೆ ವಾರೀಸು ಹಕ್ಕು ಇರಲಿಲ್ಲ. ಅದರೊಟ್ಟಿಗೆ ಶಿಕ್ಷಣದ ಹಕ್ಕು ಕೂಡ ನೀಡಿದರು. ಧೂಮಪಾನ & ಮಧ್ಯಪಾನ ನಿಷೇಧಿಸಿ ಮಹಿಳೆಯರ ಬದುಕಿಗೆ ಭದ್ರತೆ ನೀಡಿದರು. ‘ತಾಯಿ ಪಾದದಡಿಯಲಿ ಸ್ವರ್ಗವಿದೆ’ ಎಂದು ಹೇಳಿ ಹೆಣ್ಣಿನ ಘನತೆಯನ್ನು ಹೆಚ್ಚಿಸಿದರು. ಎಲ್ಲದಕ್ಕಿಂತ ಮುಖ್ಯವಾಗಿ ವಿಧವಾ ವಿವಾಹಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿ ಹೆಣ್ಣಿನ ಬದುಕಿನ ತಿರುವಿಗೆ ಆಸರೆ ನೀಡಿದರು. ಮದುವೆಗೆ ಹೆಣ್ಣಿನ ಒಪ್ಪಿಗೆಯೂ ಮುಖ್ಯ ಎಂದು ಹೇಳುವ ಮೂಲಕ ಲಿಂಗಸಮಾನತೆ ಸಾರಿದರು, ವರದಕ್ಷಿಣೆ ಕಿರುಕುಳ ತಪ್ಪಿಸಲು ಮಹರ್ (ವಧುದಕ್ಷಿಣೆ) ತಂದು, ‘ನಿಮ್ಮ ಪೈಕಿ ಅತೀ ಕಡಿಮೆ ಶ್ರಮ ಇರುವ ವಿವಾಹವೇ ಅತೀ ಶ್ರೇಷ್ಠ ವಿವಾಹ’ ಎಂದು ಹೇಳಿ ಹೆಣ್ಣಿನ ತಂದೆಗೆ ಹೊರೆಯಾಗುವುದನ್ನ ತಪ್ಪಿಸಿ ಹೆಣ್ಣಿನ ಗೌರವ & ಘನತೆಯನ್ನು ಮತ್ತಷ್ಟೂ ಹೆಚ್ಚಿಸಿದರು.

ಧಾರ್ಮಿಕ ಸೌಹಾರ್ದತೆ:
ಪೈಗಂಬರರು ಧಾರ್ಮಿಕ ಸೌಹಾರ್ದದ ಬಗ್ಗೆ ಅತ್ಯಂತ ಹೆಚ್ಚು ಒತ್ತಿ ಹೇಳುತಿದ್ದರು. ಇದಕ್ಕೆ ಸಂಬಂಧಿಸಿದಂತೆ ಅವರು ಸ್ವತಃ ಉನ್ನತ ಆದರ್ಶ ಸ್ವಭಾವ ಗುಣವನ್ನು ಪ್ರಕಟಿಸುತಿದ್ದರು. ಒಮ್ಮೆ ಯೆಮನ್ ದೇಶದ ಕ್ರೈಸ್ತರ ಒಂದು ಗುಂಪು ಪೈಗಂಬರರೊಂದಿಗೆ ಧಾರ್ಮಿಕ ವಿಚಾರ ವಿನಿಮಯಕ್ಕೆ ಬಂದಿದ್ದರು. ಅವರ ಜೊತೆ ಹಿರಿಯ ಪಾದ್ರಿಗಳು ಸಹ ಇದ್ದರು. ಮಸೀದಿಯಲ್ಲಿ ಕೂತು ಚರ್ಚೆ ಪ್ರಾರಂಭಿಸಿದರು. ಚರ್ಚೆ ದೀರ್ಘವಾಗಿ ನಡೆದು ಪಾದ್ರಿ ಯವರ ಪ್ರಾರ್ಥನಾ ಸಮಯ ಸಮೀಪಿಸಿತು. ಆಗ ಪಾದ್ರಿಯವರು, “ನಾವು ಪ್ರಾರ್ಥನೆ ಮಾಡುವ ಹೊತ್ತಾಗಿದೆ,ನಾವು ಹೊರಗೆ ಹೋಗಿ ಪ್ರಾರ್ಥನೆ ಮಾಡಿ ಬರುತ್ತೇವೆ” ಎಂದು ಹೇಳಿದರು, ಆಗ ಪೈಗಂಬರರು ನೀವು ಹೊರಗೆ ಹೋಗುವ ಅಗತ್ಯವೇನಿದೆ? ‘ನಮ್ಮ ಮಸೀದಿ ಏಕದೇವನನ್ನು ಸ್ಮರಿಸಿಲಿಕ್ಕಾಗಿಯೇ ನಿರ್ಮಿಸಲ್ಪಟ್ಟಿದೆ’ ಎಂದು ಹೇಳಿ ಅವರ ಪ್ರಾರ್ಥನೆಗೆ ಅನುವು ಮಾಡಿಕೊಡುತ್ತಾರೆ. ಪ್ರವಾದಿಯವರಿಗೆ ಧಾರ್ಮಿಕ ಸೌಹಾರ್ದ ಗುಣ ಇತ್ತು ಎಂಬುದಕೆ ಈ ಸನ್ನಿವೇಶ ಸಾಕ್ಷಿಯಾಗಿ ನಿಲ್ಲುತ್ತದೆ.
ಕಾರ್ಮಿಕರಿಗೆ ಬೆಲೆ & ಗೌರವ:
“ಈ ಲೋಕವನ್ನು ಬಂಗಾರದಿಂದ ತುಂಬಿದರೆ ಆ ಬಂಗಾರ ಎಷ್ಟು ಬೆಲೆ ಬಾಳುವುದೋ ಅದಕ್ಕಿಂತಲೂ ಈ ಬಡ ಮನುಷ್ಯನ ಬೆಲೆ ಹೆಚ್ಚಾಗಿರುವುದು” ಎಂದು ಹೇಳಿದ ಪೈಗಂಬರರು ಬಡವ ಬಲ್ಲಿದ,ಮೇಲು ಕೀಳೆಂಬ ಬೇಧವಿಲ್ಲದೇ ಎಲ್ಲರೂ ಸಮಾನರು ಎಂಬ ತತ್ವವವನ್ನ ಎತ್ತಿಹಿಡಿದಿದ್ದಾರೆ. “ಕಾರ್ಮಿಕನ ಬೆವರು ಭೂಮಿಗೆ ಬೀಳದ ಮುನ್ನ ಅವನ ಕೂಲಿಯನ್ನು ಕೊಡಿರಿ” ಎಂದು ಹೇಳಿ ಶ್ರಮಕ್ಕೆ ತಕ್ಕ ಪ್ರತಿಫಲ ಆ ತಕ್ಷಣವೇ ನೀಡಬೇಕು ಎಂದು ಸಾರಿದ್ದಾರೆ.
ನಾವು ಅನುಸರಿಸಲೇಬೇಕಾದ ಪ್ರವಾದಿಯವರ ಇನ್ನಿತರ ಚಿಂತನೆಗಳು:
“ತಿನ್ನುವುದು, ನಿದ್ರಿಸುವುದು, ಸಂತಾನೋತ್ಪತ್ತಿ & ಲೌಕಿಕ ಜೀವನದ ಏರಿಕೆಯಷ್ಟೇ ಬದುಕಿನ ಗುರಿಯಲ್ಲ; ಕೆಡುಕನ್ನು ತಡೆಯುವ,ಅನ್ಯಾಯದ ವಿರುದ್ಧ ಹೋರಾಡುವ ಮಾನವೀಯತೆಯೊಂದಿಗೆ ಜನಸೇವೆ ಮಾಡುವುದು ಬದುಕಿನ ಮುಖ್ಯ ಉದ್ದೇಶವಾಗಿರಬೇಕು” ಎಂದಿದ್ದಾರೆ,ವ್ಯಾಪಾರದಲ್ಲಿ ಸುಳ್ಳು ಹೇಳಬಾರದು. ಹಾಳಾದ ವಸ್ತುಗಳನ್ನು ಗ್ರಾಹಕರಿಗೆ ಮರೆಮಾಚಿಸದೆ ಅವರಿಗೆ ತಿಳಿಸಿ ಮಾರಾಟ ಮಾಡಬೇಕು, ಸರಳವಾಗಿ ಬದುಕಬೇಕು, ವಿಷಯವು ನಿಮ್ಮ ಆಪ್ತಬಂಧುಗಳಿಗೆ ಸಂಬಂಧಿಸಿದ್ದೆ ಆಗಿದ್ದರೂ ಮಾತನಾಡುವಾಗ ನ್ಯಾಯಪರವಾಗಿಯೇ ಮಾತಾನಾಡಬೇಕು,ಮಾರ್ಗಗಳನ್ನು ತಡೆಗಟ್ಟಬಾರದು,ಮಾರ್ಗದಲ್ಲಿ ಕುಳಿತುಕೊಳ್ಳುವುದು, ಪ್ರಯಾಣಿಕರಿಗೆ ಕಷ್ಟವಾಗುವಂತೆ ವಸ್ತುಗಳನ್ನು ರಸ್ತೆಗೆ ಹಾಕುವುದು,ರಸ್ತೆಯಲ್ಲಿ ಮಲ ಮೂತ್ರ ವಿಸರ್ಜನೆ ಮಾಡುವುದು ನಿಷಿದ್ಧ ಎಂದಿದ್ದಾರೆ. ಮಾನವಕುಲಕ್ಕೆ ಒಳಿತನ್ನು ಒದಗಿಸುವವರೇ ಜನರಲ್ಲಿ ಉತ್ತಮನು’ ಆ ಉತ್ತಮನಾಗುವತ್ತ ನಾವು ಸಾಗಬೇಕು ಎಂದು ತಮ್ಮ ಜೀವನದ ಮೂಲಕ ಸಾರಿದ್ದಾರೆ.
ಇವಷ್ಟೇಯಲ್ಲದೇ,ಸಾಲು ಸಾಲು ಸನ್ನಡತೆಗಳನ್ನ ಪ್ರವಾದಿಯವರಲ್ಲಿ ಕಾಣಬಹುದಾಗಿದೆ. ಅವರ ಸತ್ಯಸಂಧತೆ,ಸಹನೆ,ಪರಸ್ಪರ ಸಹಾಯ ಗುಣ,ಪರರ ತಪ್ಪನ್ನ ಹುಡುಕದಿರುವಿಕೆ,ಜನರ ವಿಶ್ವಾಸ ಗಳಿಕೆ,ಅವರ ಸತ್ಸಂಗ,ಶೌರ್ಯ,ಒಪ್ಪಂದದ ಪಾಲನೆ ನಿಜಕೂ ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕಾದ ಮೇರು ವ್ಯಕ್ತಿತ್ವದವರಾಗಿ ಮೊಹಮದ್ ಪೈಗಂಬರರು ನಮ್ಮೆದಿರು ನಿಲ್ಲುತ್ತಾರೆ. ಅವರ ಜನುಮದಿನದ ಪ್ರಯುಕ್ತ ಆಚರಿಸುವ ಇಂದಿನ ಈದ್ ಮಿಲಾದ್, ಅವರ ಈ ಎಲ್ಲಾ ಸಂದೇಶಗಳನ್ನು ಸ್ಮರಣೆ ಮಾಡಿ ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿ ಕೊಳ್ಳುವುಂತಾಗಲಿ ಎಂಬುದೇ ನನ್ನ ಆಶಯವಾಗಿದೆ.
ಡಿ.ಶಬ್ರಿನಾ ಮಹಮದ್ ಅಲಿ
ಲೇಖಕಿ, ಚಳ್ಳಕೆರೆ/9731879840