“ನಾವು ಶಿಕ್ಷಕರು, ನಮ್ಮ ಶಿಕ್ಷಣ ಹೀಗಿರಲಿ”…..(ಸಮಸ್ತ ಗುರು ಬಳಗಕ್ಕೆ ಶಿಕ್ಷಕರ ದಿನಾಚರಣೆಯ ಗೌರವದ ಶುಭಾಶಯಗಳು)

ನಾವು ಈ ಲೇಖನ ಬರೆಯುವುದಕ್ಕೆ ಕಾರಣ ನಮ್ಮ ಜೀವ, ಅದು ನಮ್ಮ ತಾಯಿಯ ಭಿಕ್ಷೆ. ನಾವು ಇಲ್ಲಿಯವರೆಗೆ ಬದುಕಿದ್ದೇವೆ ಎಂದರೆ ಅದಕ್ಕೆ ಕಾರಣ ನಮ್ಮ ಜೀವನ, ಅದು ನಮ್ಮ ತಂದೆಯ ಭಿಕ್ಷೆ. ಈ ಜನ್ಮ ಜೀವನದಲ್ಲಿ ನಾವೆಲ್ಲ ಅಕ್ಷರಸ್ಥರು ಆಗಿದ್ದೇವೆ ಎಂದರೆ ಅದಕ್ಕೆ ಕಾರಣ ಶಿಕ್ಷಣ, ಅದು ನಮ್ಮ ಗುರುಗಳ ಭಿಕ್ಷೆ. ಪ್ರತಿ ವ್ಯಕ್ತಿಯ ಹೃದಯದಲ್ಲಿ ಅಕ್ಷರದ ಬೀಜ ಬಿತ್ತಿ, ಆ ವ್ಯಕ್ತಿಯ ಬದುಕಿಗೆ ದಾರಿದೀಪವಾಗಿರುವ ಸಮಸ್ತ ಗುರು ಬಳಗಕ್ಕೆ ಈ ಲೇಖನವನ್ನ ಸಮರ್ಪಿಸುತ್ತಿದ್ದೇವೆ.

ತುಮಕೂರಿನ ಸಿದ್ದಗಂಗಾ ಶ್ರೀಗಳು ಕಾಯಕಯೋಗಿಗಳಾದಂತೆ, ಗದುಗಿನ ಶ್ರೀ ಪುಟ್ಟರಾಜ ಗವಾಯಿಗಳು ಗಾನಯೋಗಿಗಳಾದಂತೆ, ವಿಜಯಪುರದ ಶ್ರೀ ಸಿದ್ದೇಶ್ವರ ಮಹಾ ಸ್ವಾಮೀಜಿಗಳು ಜ್ಞಾನಯೋಗಿಗಳಾದಂತೆ, ಪ್ರತಿ ಶಾಲೆಯ ಸರ್ವ ಮಕ್ಕಳ ಮೆದುಳಿಗೆ ಅಕ್ಷರಗಳ ಜ್ಞಾನ ನೀಡುವ ಗುರುಗಳು ಅಕ್ಷರ ಯೋಗಿಗಳು ಎಂದರೆ ತಪ್ಪಾಗಲಾರದು. ರಾಜನು ಗೆಲ್ಲಲಾರದ ಕಳ್ಳನು ಕದಿಯಲಾಗದ ಅಣ್ಣ ತಮ್ಮಂದಿರಲ್ಲಿ ಭಾಗವಾಗದ ಎಷ್ಟು ಗಳಿಸಿದರು ಗಳಿಸಬೇಕೆನ್ನುವ ಎಷ್ಟು ಹಂಚಿದರು ಹಂಚ ಬೇಕೆನ್ನುವ ಬಚ್ಚಿಟ್ಟರೆ ಕೊಳೆಯುವ ಬಿಚ್ಚಿಟ್ಟರೆ ಬೆಳೆಯುವ ಸಂಪತ್ತು ಅದುವೇ ವಿದ್ಯಾ ಸಂಪತ್ತು. ಅಂತಹ ಸಂಪತ್ತನ್ನು ನಿಷ್ಕಲ್ಮಶವಾದ ಹೃದಯದಿಂದ ನಿಸ್ವಾರ್ಥದ ಮನೋಭಾವನೆಯಿಂದ ತಮ್ಮ ತಮ್ಮ ಶಾಲೆಯ ಪ್ರತಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಎಲ್ಲಾ ಗುರು ಗುರು ಮಾತೆಯರಿಗೆ ನಮ್ಮ ಪ್ರೀತಿ ತುಂಬಿದ ಹೃದಯದಿಂದ ಗೌರವದ ನಮನಗಳು.

ಇತಿಹಾಸವನ್ನು ಒಮ್ಮೆ ಭಕ್ತಿಯಿಂದ ಕಂಡಾಗ ಶ್ರೀರಾಮಚಂದ್ರನು ಮರ್ಯಾದಾ ಪುರುಷೋತ್ತಮನಾಗಿದ್ದು ಅವರ ಗುರುಗಳಾದ ವಶಿಷ್ಟ ಮುನಿಯಿಂದ. ಅರ್ಜುನ ಮತ್ತು ಏಕಲವ್ಯ ಉತ್ತಮ ಬಿಲ್ವಿದ್ಯಾ ಪ್ರವೀಣರಾಗಿದ್ದು ದ್ರೋಣಾಚಾರ್ಯರಂತಹ ಗುರುಗಳಿಂದ. ಹಕ್ಕ ಬುಕ್ಕರು ಶತ್ರುಗಳ ದಾಳಿಯಿಂದ ಕೈ ತಪ್ಪಿದ ವಿಜಯನಗರ ಸಾಮ್ರಾಜ್ಯವನ್ನು ಹಿಂಪಡೆದದ್ದು ವಿದ್ಯಾರಣ್ಯರಂತಹ ಗುರುಗಳಿಂದ. ಶಿವಾಜಿ ಮಹಾರಾಜರು ಸೋತು ಬಸವಳಿದು ಕಂಗೆಟ್ಟು ಕುಳಿತು ಮತ್ತೆ ತಮ್ಮ ಸಾಮ್ರಾಜ್ಯವನ್ನು ಪಡೆಯಲು ಮಾರ್ಗದರ್ಶನ ಮಾಡಿದ್ದು ಗುರುಗಳಾದ ಶ್ರೀರಾಮದರ್ಶರು.ಶ್ರೀ ಭೀಮರಾವ್ ಬರೆದ ಸಂವಿಧಾನ ಇಂದು ದೇಶದ ಹಣೆಬರಹವನ್ನು ನಿರ್ಧರಿಸುವ ಒಂದು ಸಂಹಿತೆಯಾಗಿದೆ ಅಂದರೆ ಅದು ಅವರ ಗುರುಗಳಾದ ಅಂಬೇಡ್ಕರ್ ಅವರಿಂದ. ಅಲೆಗ್ಸಾಂಡರ್ ಪ್ರಪಂಚವನ್ನೇ ಗೆಲ್ಲಲು ಹೊರಟಿದ್ದು ಹಿಂದೆ ಅರಿಸ್ಟಾಟಲ್ ಗುರು ಇದ್ದರು ಎಂಬ ಧೈರ್ಯದಿಂದ. ಅರಿಸ್ಟಾಟಲ್ ರವರ ಗುರು ಪ್ಲೇಟೋ, ಪ್ಲೇಟೋರವರ ಗುರು ಸಾಕ್ರೆಟಸ್. ಹೀಗೆ ಅನೇಕರ ಭವ್ಯ ಭವಿಷ್ಯತ್ತಿಗೆ ಮೇಣದ ಹಾಗೆ ತಮ್ಮನ್ನೇ ತಾವು ಸುಟ್ಟು ಪ್ರತಿ ವಿದ್ಯಾರ್ಥಿಯ ಬದುಕಿನಲ್ಲಿ ಜ್ಞಾನದ ಬೆಳಕನ್ನು ನೀಡುವ ಗುರು ಪರಂಪರೆಯನ್ನು ನೆನಪಿಸಿಕೊಂಡರೆ ಗುರು ಎಂದರೆ ಒಂದು ವ್ಯಕ್ತಿಯಲ್ಲ ಒಂದು ಶಕ್ತಿ ಎಂಬ ಮಾತು ಸತ್ಯವಾದದ್ದು.

ನೆನಪಿರಲಿ ಶಿಕ್ಷಕ ರಾಷ್ಟ್ರದ ನಿರ್ಮಾತೃ, ದೇಶದ ಬೆನ್ನೆಲುಬು ರೈತನಾದರೆ ವಿದ್ಯಾರ್ಥಿಯ ಬೆನ್ನೆಲುಬು ಶಿಕ್ಷಕ. ತಾಯಿಯೇ ಮೊದಲ ಗುರು ಗುರುವೇ ಎರಡನೆಯ ತಾಯಿ. ನಮ್ಮ ನಮ್ಮ ಶಾಲೆಯ ಮಕ್ಕಳಿಗೆ ತಾಯಿ ಪ್ರೀತಿ ನಿಡೋಣ. ಶ್ರೀ ಸಿದ್ದೇಶ್ವರ ಮಹಾ ಸ್ವಾಮೀಜಿಗಳು ಹೇಳಿದಂತೆ ಶಿಕ್ಷಕ ತಾಯಿಯಂತಿರಬೇಕೇ ವಿನಹ ನಾಯಿಯಂತಿರಬಾರದು ಎಂಬ ಮಾತು ಪ್ರತಿಕ್ಷಣ ಮನದಲ್ಲಿರಲಿ. ನಾಳೆ ನಮ್ಮ ಸ್ವಂತ ಮಕ್ಕಳು ನಮಗೆ ಅನ್ನ ಹಾಕುತ್ತಾರೋ ಇಲ್ಲವೋ ಗೊತ್ತಿಲ್ಲ ಆದರೆ ನಮ್ಮ ಶಾಲಾ ಮಕ್ಕಳು ನಮಗೆ ಈವಾಗ್ಲೇ ಅನ್ನ ಕೊಡುತ್ತಿದ್ದಾರೆ. ನಮ್ಮಿಂದ ಅವರಲ್ಲ ಅವರಿಂದ ನಾವು. ಮಕ್ಕಳಿದ್ದರೆ ಶಾಲೆ ಶಾಲೆ ಇದ್ದರೆ ನಮಗೆ ಸಂಬಳ. ಬಿಲ್ ಮತ್ತು ಬೆಲ್ ಶಿಕ್ಷಕರಾಗದೆ ಪ್ರತಿ ವಿದ್ಯಾರ್ಥಿಯ ದಿಲ್ ಗೆಲ್ಲುವ ಶಿಕ್ಷಕರು ನಾವಾಗೋಣ.

ನಾಳೆ ನಮಗೆ ವಯಸ್ಸಾಗಿ ನಿವೃತ್ತಿಯಾದ ಮೇಲೆ ಯಾವುದೋ ಒಂದು ಕೆಲಸಕ್ಕಾಗಿ ಪೊಲೀಸ್ ಸ್ಟೇಷನ್ ಗೆ ಹೋದಾಗ ಅಲ್ಲಿ ಪಿಎಸ್ಐ ನಮ್ಮ ವಿದ್ಯಾರ್ಥಿಯೇ ಆಗಿರಬೇಕು. ಜಿಲ್ಲಾ ಆಡಳಿತ ಕಚೇರಿಗೆ ಹೋದಾಗ ಅಲ್ಲಿಯ ಜಿಲ್ಲಾಧಿಕಾರಿ ನಮ್ಮ ವಿದ್ಯಾರ್ಥಿಯೇ ಆಗಿರಬೇಕು. ಯಾವತ್ತೋ ಒಂದು ದಿನ ವಿಧಾನ ಸೌಧಕ್ಕೆ ಕಾಲಿಟ್ಟಾಗ ಅಲ್ಲಿ ಎಂಎಲ್ಎ ಹಾಗೂ ಮುಖ್ಯಮಂತ್ರಿ ಕೂಡಾ ನಮ್ಮ ವಿದ್ಯಾರ್ಥಿಯೇ ಆಗಿದ್ದರೆ ಎಷ್ಟು ಗೌರವ ಇದು ವಿಚಾರಿಸ ಬೇಕಾದ ವಿಷಯ. ಯಾವತ್ತಾದರೂ ಒಂದು ದಿನ ನಾವು ಶಾಲೆಗೆ ರಜೆ ಹಾಕಿ ಮಾರನೇ ದಿನ ಶಾಲೆಗೆ ಹೋದಾಗ ಎಲ್ಲಾ ವಿದ್ಯಾರ್ಥಿಗಳು ನಮ್ಮನ್ನು ಟೀಚರ್, ನಿನ್ನ ಯಾಕೆ ಸಾಲಿ ಬಿಟ್ಟಿದ್ರಿ ಅಂತ ಕೇಳ್ತಾರಲ್ಲ ಅದು ನಮಗೆ ಒಂದು ದೊಡ್ಡ ರಾಷ್ಟ್ರ ಗೌರವ ಕೊಟ್ಟ ಹಾಗೆ. ಪ್ರಾರ್ಥನೆಯಾದ ನಂತರ ಯಾವುದೋ ಒಂದು ತರಗತಿಗೆ ಹೋದ ನಂತರ ಗುಡ್ ಮಾರ್ನಿಂಗ್ ಟೀಚರ್ ಎಂದು ನಗುಮುಖದಿಂದ ಎದ್ದು ನಮ್ಮನ್ನು ಸ್ವಾಗತಿಸುತ್ತಾರಲ್ಲವ ಅದು ನಮಗೆ ಕರ್ನಾಟಕ ರತ್ನ ಕೊಟ್ಟ ಹಾಗೆ. ಕೆಲವು ವರ್ಷಗಳ ನಂತರ ನಮ್ಮ ಹಳೆಯ ವಿದ್ಯಾರ್ಥಿಯು ಎಲ್ಲೋ ಒಂದು ಕಡೆ ಸಿಕ್ಕಾಗ ನಾವು ಅವರನ್ನು ಗುರುತಿಸದಿದ್ದರೂ ಅವರು ನಮ್ಮನ್ನು ಗುರುತು ಹಿಡಿದು ಬಂದು ಸರ್ ಆರಾಮ್ ಇದ್ದೀರಾ ಅಂತ ಕೇಳ್ತಾರಲ್ಲ ಅದು ನಮಗೆ ಭಾರತರತ್ನ ಕೊಟ್ಟ ಹಾಗೆ.

ಗುರುವಿನ ಮಹತ್ವವನ್ನು ಸಂತ ಕಬೀರದಾಸರು ತುಂಬಾ ಸೊಗಸಾಗಿ ಹೇಳಿದ್ದಾರೆ. ಅದೇನೆಂದರೆ ಈ ಭೂಮಿಯ ಮೇಲಿನ ಎಲ್ಲಾ ಮರಗಳನ್ನು ಕಡಿದು ಲೇಖನಿಗಳನ್ನಾಗಿ ಮಾಡಿ, ಎಲ್ಲಾ ಸಮುದ್ರಗಳ ನೀರನ್ನು ಮಸಿಯನ್ನಾಗಿ ಪರಿವರ್ತಿಸಿ, ಆಕಾಶವನ್ನೇ ಕಾಗದವನ್ನಾಗಿ ಮಾಡಿ ಎಲ್ಲಾ ಭಾಷೆಗಳನ್ನು ಉಪಯೋಗಿಸಿ ಬರೆದರು ಕೂಡ ಗುರುವಿನ ಗುಣಗಾನ ಇನ್ನು ಉಳಿಯುತ್ತದೆ ಎಂಬ ಮಾತು ಬಹಳ ಸತ್ಯವಾದದ್ದು. ವಿದ್ಯಾರ್ಥಿಗಳ ಮೊದಲ ಪುಟ ಜನನ ತಾಯಿ ಬರೆದರೆ, ಕೊನೆಯ ಪುಟ ಮರಣ ದೇವರು ಬರೆದರೆ ಮಧ್ಯದ ಜೀವನ ಅನ್ನೋ ಹಲವಾರು ಪುಟಗಳನ್ನ ತಿದ್ದಿ ತೀಡಿ ಬರೆಯ ಬೇಕಾದದ್ದು ಗುರುಗಳು. ಇದು ಪ್ರತಿ ಗುರುವಿನ ಮಹತ್ತರವಾದ ಕಾರ್ಯವಾಗಿದೆ. ನಿಮಗೆ ತಿಳಿದಿರಲಿ ಸ್ವಾತಿ ಮಳೆಯ ನಕ್ಷತ್ರದಲ್ಲಿ ಮಾತ್ರ ಕಪ್ಪೆ ಚಿಪ್ಪು ಸಮುದ್ರದ ಮೇಲೆ ಬಂದು ಬಾಯಿ ತೆರೆದು ಆ ಕ್ಷಣದಲ್ಲಿ ಬೀಳುವ ಮಳೆ ಹನಿಯನ್ನು ಬಾಯಿ ತೆಗೆದು ಆ ಮಳೆ ಹನಿಯನ್ನು ಬಾಯಲ್ಲಿ ತಗೊಂಡು ಸಮುದ್ರದ ಆಳಕ್ಕೆ ಬಹುದೂರ ತೆಗೆದು ಕೊಂಡು ಹೋಗಿ ಕೆಲವು ದಿನಗಳ ನಂತರ ಅದನ್ನು ಅತ್ಯಂತ ಬೆಲೆ ಬಾಳುವ ಮುತ್ತು ಆಗಿ ಪರಿವರ್ತಿಸುವುದು. ಹಾಗೆಯೇ ನಮ್ಮ ನಮ್ಮ ಶಾಲೆಗಳಲ್ಲಿ ಪ್ರತಿನಿತ್ಯ ಸ್ವಾತಿ ನಕ್ಷತ್ರದ ಜ್ಞಾನದ ಮಳೆ ಹನಿಗಳನ್ನು ವಿದ್ಯಾರ್ಥಿಗಳ ಮೆದುಳಿಗೆ ನೀಡಿ ಅವರನ್ನು ಕೂಡ ಸಮಾಜದಲ್ಲಿ ಒಬ್ಬ ಉತ್ತಮ ನಾಗರಿಕನಾಗಿ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ಮುತ್ತಿನಂತ ಮನುಷ್ಯನನ್ನಾಗಿ ಪರಿವರ್ತಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಆಗ ನಾವು ನಿಜವಾದ ಬಂಗಾರದ ಮನುಷ್ಯರಾಗುತ್ತೇವೆ.

ಯಾವುದೋ ಒಂದು ಕಾರ್ಯಕ್ರಮಕ್ಕೆ ಪ್ರಧಾನಿಗಳೋ ಅಥವಾ ಮುಖ್ಯಮಂತ್ರಿಗಳೋ ಬಂದು ಸಾವಿರಾರು ಜನರ ಗುಂಪಲ್ಲಿ ಇದ್ದ ನಮ್ಮನ್ನು ಗುರುತಿಸಿ ನಮ್ಮ ಹೆಸರು ಕೂಗಿ ಕರೆದಾಗ ನಮಗೆ ಎಷ್ಟು ಖುಷಿ ಆಗುತ್ತೆ ಅಲ್ವಾ. ಹಾಗೆಯೇ ನಮ್ಮ ಶಾಲೆಯ ಪ್ರತಿ ವಿದ್ಯಾರ್ಥಿಯನ್ನು ಹೆಸರಿಟ್ಟೇ ಕರೆಯುವ ರೂಡಿ ನಮ್ಮದಾಗಲಿ. ಕೇವಲ ಸಂಬಳದ ಶಿಕ್ಷಕರಾಗದೆ ನಮ್ಮ ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧ ಗಟ್ಟಿ ಗೊಳಿಸುವ ಹಾಗೂ ಅವರನ್ನು ಸಾಧಕರನ್ನಾಗಿ ಮಾಡುವ ಶಿಕ್ಷಕರು ನಾವಾಗೋಣ. ತಂದೆ ತಾಯಿಗಳು ನಮ್ಮ ಕೈಯಲ್ಲಿ ವಿದ್ಯಾರ್ಥಿ ಎಂಬ ಒಂದು ಸುಂದರವಾದ ಹೂವನ್ನು ಕೊಟ್ಟಿದ್ದಾರೆ. ಅದನ್ನು ಕಸದ ಬುಟ್ಟಿಗೆ ಎಸೆಯುತ್ತೀರೋ ಅಥವಾ ದೇವರ ಮುಡಿಗೆ ಅರ್ಪಿಸುತ್ತಿರೋ ಯೋಚಿಸ ಬೇಕಾದ ವಿಷಯ. ಪ್ರತಿ ಮಗು ನಮ್ಮ ಸ್ವಂತ ಮಗು ಎಂಬ ಯೋಚನೆ ಸದಾ ಇರಲಿ. ಎಲ್ಲಾ ವಿದ್ಯಾರ್ಥಿಗಳನ್ನು ಬರಿ ಕಲ್ಲುಗಳು ಅಂತ ದಯವಿಟ್ಟು ತಿಳಿಯ ಬೇಡಿರಿ, ಅವರನ್ನು ನಾವು ಕೆತ್ತಿ ಕೆತ್ತಿ ಶಿಲೆ ಮಾಡುತ್ತಿದ್ದೇವೆ ಅನ್ನೋ ಭ್ರಮೆಯಿಂದ ಆಚೆ ಬರೋಣ. ನೆನಪಿರಲಿ ಕೆಲವು ವಿದ್ಯಾರ್ಥಿಗಳು ಶಿಲೆಗಳಾಗಿಯೇ ನಮ್ಮ ಶಾಲೆಗೆ ಬಂದಿರುತ್ತವೆ ಅವರಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಿ ಜ್ಞಾನ ಭಂಡಾರದ ದೇವರನ್ನಾಗಿಸ ಬೇಕು ಅಷ್ಟೇ.

ಗುರು ಎಂಬುದು ಬೌತಿಕ ವಸ್ತುವಲ್ಲ. ಜ್ಞಾನ ಎಂಬುದನ್ನು ಶಿಷ್ಯನಲ್ಲಿಗೆ ಪ್ರವಹಿಸುವಂತೆ ಮಾಡುವ ಶಕ್ತಿ. ಶಿಷ್ಯನನ್ನು ಒಂದು ಹಿಮಗಲ್ಲು ಎಂದು ಭಾವಿಸಿದರೆ ಜ್ಞಾನ ಎಂಬುದು ಕುದಿಯುವ ನೀರಿನಂತೆ. ಗುರು ಈ ಕುದಿಯುವ ನೀರನ್ನು ಶಿಷ್ಯ ಎಂಬ ಹಿಮಗಲ್ಲಿನ ಮೇಲೆ ನಿಧಾನವಾಗಿ ಹನಿ ಸುರಿಯುತ್ತಾ ಬರುತ್ತಾನೆ. ಇಲ್ಲದಿದ್ದರೆ ಹಿಮಗಲ್ಲು ಬಿರುಕು ಬಿಡುತ್ತದೆ. ಗುರು ಶಿಷ್ಯನ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತು ಕೊಳ್ಳುತ್ತಾನೆ. ವಿಕಸನದ ಪ್ರಯಾಣದಲ್ಲಿ ಗುರು ಅಕ್ಷರಶಃ ಶಿಷ್ಯನನ್ನು ಹೊತ್ತೊಯ್ಯುತ್ತಾನೆ. “ವಿದ್ಯಾರ್ಥಿಗಳ ಬಾಳ ಹೊಂಬೆಳಕು ಶಿಕ್ಷಕರು” ಎಂದರೆ ತಪ್ಪಾಗಲಾರದು. ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆ ಹಿಂದೆ ಶಿಕ್ಷಕರ ಪಾತ್ರ ತುಂಬಾ ಮಹತ್ವದಾಗಿದೆ. “ತಾಯಿ ಜೀವ ನೀಡಿದರೆ ಶಿಕ್ಷಕರು ಜೀವನವನ್ನೇ ನೀಡುತ್ತಾರೆ” ಎಂಬ ಮಾತು ಅಕ್ಷರಶಃ ಸತ್ಯ. ಶಿಕ್ಷಕರು ವಿದ್ಯಾರ್ಥಿಗಳನ್ನು ನದಿ ದಾಟಿಸುವ ನಾಯಕರು ಹೌದು. ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯದ ಬಗ್ಗೆ ಗುರಿ ಕಟ್ಟಿ ಕೊಡುವವರು ಗುರುಗಳು. ನಾವು ಅಕ್ಷರ ವಾದರೆ ನಮ್ಮ ವಿದ್ಯಾರ್ಥಿಗಳು ಪದವಾಗಬೇಕು. ನಾವು ಪದವಾದರೆ ಅವರು ವಾಕ್ಯ ವಾಗಬೇಕು. ನಾವು ವಾಕ್ಯವಾದರೆ ಅವರು ಪ್ಯಾರಾ ಆಗಬೇಕು. ನಾವು ಪ್ಯಾರಾ ಆದರೆ ಅವರು ಪುಟ ವಾಗಬೇಕು ಹಾಗೆಯೇ ಮುಂದುವರೆಯುತ್ತಾ. ನಾವು ಪುಟವಾದರೆ ಅವರು ಪುಸ್ತಕ. ನಾವು ಪುಸ್ತಕವಾದರೆ ಅವರು ಗ್ರಂಥ. ನಾವು ಗ್ರಂಥವಾದರೆ ಅವರು ಗ್ರಂಥಾಲಯ ಆಗಬೇಕು ಅಂದಾಗ ಮಾತ್ರ ಶಿಕ್ಷಕ ವೃತ್ತಿಗೆ ಒಂದು ಅತ್ಯುತ್ತಮವಾದ ಬೆಲೆ ಬರುವುದು. ನಾವು ಪ್ರತಿನಿತ್ಯ ಅವರ ಮೆದುಳಿಗೆ ಪಾಠ ಮಾಡುತ್ತೇವೆ. ಅವಾಗವಾಗ ಅವರ ಹೃದಯಕ್ಕೂ ಕೂಡ ಪಾಠ ಮಾಡಿರಿ, ಆಗ ಅವರ ಹೃದಯದಲ್ಲಿ ನೀವು ಸದಾ ಹೃದಯವಂತರು. ನಾವು ಶಿಕ್ಷಕ ವೃತ್ತಿಗೆ ಒಪ್ಪಿ ಬಂದಿಯೋ ಅಥವಾ ತಪ್ಪಿ ಬಂದಿವೋ ಗೊತ್ತಿಲ್ಲ ಆದರೆ ಈ ವೃತ್ತಿಯನ್ನು ಈಗ ಅಪ್ಪಿ ಕೊಳ್ಳಲೇ ಬೇಕು. ಅಂದಾಗ ಇಡೀ ಸಮಾಜವೇ ನಮ್ಮನ್ನು ತಬ್ಬಿ ಕೊಳ್ಳುತ್ತೆ. ಒಂದು ಶಾಲೆಗೆ ನಾವು ಶಿಕ್ಷಕರಾಗಿ ಆಯ್ಕೆಯಾಗಿ ಹೋಗುವಾಗ ನಮಗೆ ಯಾವುದೇ ಕಪ್ಪು ಚುಕ್ಕೆ ಇರುವುದಿಲ್ಲ. ಹಾಗೆಯೇ ಅಲ್ಲಿಂದ ಹೊರ ಬರುವಾಗಲೂ ಕೂಡ ಯಾವುದೇ ಕಪ್ಪು ಚುಕ್ಕೆ ಇರಬಾರದು. ನಿವೃತ್ತಿ ಆಗುವವರೆಗೂ ಒಂದು ಚಿಕ್ಕ ಕಪ್ಪು ಚುಕ್ಕೆ ಇಲ್ಲದಂತ ಪ್ರಾಮಾಣಿಕ ಸೇವೆ ನಮ್ಮದಾಗಲಿ. ನಮ್ಮ ಬೀಳ್ಕೊಡುವ ಸಮಾರಂಭ ನಮ್ಮ ಶಾಲೆ ಇರುವ ಊರಿನಲ್ಲಿ ಒಂದು ಜಾತ್ರೆಯಂತೆ ಇಡೀ ಊರಿನ ಜನ ಹಳೆಯ ವಿದ್ಯಾರ್ಥಿಗಳು ಎಲ್ಲರೂ ಸೇರಿ ಆಚರಿಸುವಂತಾಗ ಬೇಕು. ಕಲಿಕೆಯಲ್ಲಿ ಹಿಂದುಳಿದವರನ್ನು ಮೆಟ್ಟಿಲು ಎಂದು ಜಾಣರನ್ನು ಮೂರ್ತಿ ಎಂದು ದಯವಿಟ್ಟು ಬೇದ ಭಾವ ಮಾಡ ಬೇಡಿ. ನಿಮಗೊಂದು ಸತ್ಯ ನೆನಪಿರಲಿ ಪ್ರತಿ ದೇವಸ್ಥಾನಕ್ಕೆ ಹೋದಾಗ ನಾವು ಯಾರು ಗರ್ಭ ಗುಡಿಯಲ್ಲಿರುವ ದೇವರ ಮೂರ್ತಿಗೆ ನಮಸ್ಕರಿಸುವುದಿಲ್ಲ. ಮೊದಲಿಗೆ ಮೆಟ್ಟಿಲು ಮುಟ್ಟಿ ನಮಸ್ಕರಿಸುತ್ತೇವೆ. ಹಾಗಾಗಿ ಯಾರೂ ಮೇಲಲ್ಲ ಯಾರೂ ಕೀಳಲ್ಲ ನೋಡುವ ದೃಷ್ಟಿ ಬದಲಾಗಬೇಕು ಅಷ್ಟೇ. ನಮ್ಮ ಕೈಯಲ್ಲಿ ಕಲಿತ ವಿದ್ಯಾರ್ಥಿಗಳು ಯಾರೋ ಒಬ್ಬರ ಕೆಳಗೆ ನೌಕರಿ ಮಾಡುವವರು ಆಗಬಾರದು. ಸಾವಿರಾರು ಜನರಿಗೆ ನೌಕರಿ ಕೊಡುವವರು ಆಗಬೇಕು. ನಮ್ಮ ಶಾಲೆ ಇರುವ ಊರಿನ ಹಿರಿಯರಿಗೆ ಕಿರಿಯವನಾಗಿ, ಕಿರಿಯರಿಗೆ ಹಿರಿಯವನಾಗಿ ಸಮಾಜಕ್ಕೆ ಆದರ್ಶ ವ್ಯಕ್ತಿಯಾಗಿ ಬದುಕಿದಾಗ ಮಾತ್ರ ನಮ್ಮ ಸೇವೆ ಪರಶಿವನಿಗೂ ಇಷ್ಟವಾಗುತ್ತದೆ. ಒಬ್ಬ ಹಾಡುಗಾರನಿಗೆ ಒನ್ಸ ಮೋರ್ ಎಂದರೆ ಮತ್ತೊಮ್ಮೆ ಹಾಡುವನು. ಒಬ್ಬ ನೃತ್ಯಗಾರನಿಗೆ ಒನ್ಸ್ ಮೋರ್ ಎಂದರೆ ಮತ್ತೊಮ್ಮೆ ನೃತ್ಯ ಮಾಡುವನು. ಆದರೆ ಒಬ್ಬ ವಿದ್ಯಾರ್ಥಿಯ ಗೋಲ್ಡನ್ ಲೈಫ್ ಗೆ ಒನ್ಸ ಮೋರ್ ಎಂದರೆ ಮತ್ತೆ ಅವನಿಗೆ ಆ ಕಲಿಕಾ ಅವಧಿಯನ್ನು ನಮ್ಮಿಂದ ಕೊಡಲು ಸಾಧ್ಯವಿಲ್ಲ. ಕಲಿಸುವಾಗ ಸರಿಯಾಗಿಯೇ ಕಲಿಸೋಣ. ಅವನ ಸಾಧನೆಯ ದೀಪವನ್ನು ಅವನ ಬದುಕಲ್ಲಿ ಬೆಳಗೋಣ. ಪ್ರತಿ ವಿದ್ಯಾರ್ಥಿಯ ಭವಿಷ್ಯದ ಬದುಕಿನ ಬುತ್ತಿಯಲ್ಲಿ ಸದಾ ಕಾಲ ಎಂದೆಂದಿಗೂ ಮರೆಯದ ಒಂದು ಸಿಹಿ ತುತ್ತು ನಾವು ಆಗೋಣ.

ಶ್ರೀ ಮುತ್ತು ಯ.ವಡ್ಡರ ಶಿಕ್ಷಕರು

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ,

ಹಿರೇಮಳಗಾವಿ ಬಾಗಲಕೋಟ ಜಿಲ್ಲೆ

ಮೊಬೈಲ್ ನಂಬರ್/9845568484

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button