ಕಲ್ಕಠದಲ್ಲಿ 50 ನೇ. ವರ್ಷದ ಸುವರ್ಣ ದಸರಾ – ಮಹೋತ್ಸವ ಜಂಬದ ಸಿದ್ಧತೆ.
ಮಾನ್ವಿ ಸ.08

ಕಲ್ಮಠದ ಲಿಂ. ಡಾ, ಶಿವಮೂರ್ತಿ ಶಿವಾಚಾರ್ಯರ ಆಶೀರ್ವಾದದಿಂದ ಆರಂಭವಾದ ಮಾನ್ವಿಯ ಕಲ್ಕಠದ ದಸರಾ ಹಬ್ಬವು ಸಾಂಸ್ಕೃತಿಕ ಹಾಗೂ ಭಾವೈಕ್ಯತೆಯ ದಸರಾ ಎಂದೇ ಪ್ರಸಿದ್ಧಿ ಪಡೆದಿದ್ದು, ಈ ಬಾರಿ 50 ನೇ. ವರ್ಷದ ಸುವರ್ಣ ದಸರಾ ಮಹೋತ್ಸವವನ್ನು ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 6 ರವರೆಗೆ ವೈಭವದಿಂದ ಆಚರಿಸಲಾಗುತ್ತಿದೆ.

ರವಿವಾರ ಕಲ್ಮಠ ಸಭಾಂಗಣದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಹಬ್ಬದ ಭಿತ್ತಿ ಪತ್ರಗಳನ್ನು ಅನಾವರಣ ಗೊಳಿಸಿದ ಸ್ವಾಗತ ಸಮಿತಿಯ ಗೌರವಾಧ್ಯಕ್ಷರು ಹಾಗೂ ರಾಜ್ಯ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್. ಎಸ್ ಬೋಸರಾಜು ಮಾತನಾಡಿ ಈ ಬಾರಿ ಮಹೋತ್ಸವವನ್ನು ಇತಿಹಾಸ ನಿರ್ಮಿಸುವಂತೆ ಆಚರಿಸಲು ನಾನಾ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದರು.

ಮಹೋತ್ಸವದ ಅಂಗವಾಗಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ಪ್ರತಿದಿನ ನಡೆಯಲಿದ್ದು. ವಿಶೇಷವಾಗಿ ಜಿಲ್ಲೆಯ ಒಂಬತ್ತು ಮಹಿಳಾ ಸಾಧಕಿಯರಿಗೆ ಒಂಬತ್ತು ದಿನಗಳ ಕಾಲ ಪ್ರತಿದಿನ ಒಬ್ಬರಂತೆ ಸನ್ಮಾನಿಸಲಾಗುವುದು.
ಕಲ್ಮಠ ಶ್ರೀ ವಿರೂಪಾಕ್ಷ ಪಂಡಿತ ಶಿವಾಚಾರ್ಯ ಮಹಾ ಸ್ವಾಮಿಗಳು ಮಾತನಾಡಿ, ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 1 ರವರೆಗೆ ಪ್ರತಿದಿನ ಸಂಜೆ ಶ್ರೀದೇವಿ ಪುರಾಣ ಪಾರಾಯಣ, ಸೆಪ್ಟೆಂಬರ್ 22 ರಿಂದ 30 ರ ವರೆಗೆ ಮಹಾ ಚಂಡಿಕೆಯಾಗ, ಸೆಪ್ಟೆಂಬರ್ 30 ರಂದು ಸರ್ವ ಧರ್ಮ ಸಮ್ಮೇಳನ, ಅಕ್ಟೋಬರ್ 1 ರಂದು 1008 ಮುತೈದೆಯರ ಉಡಿ ತುಂಬುವ ಕಾರ್ಯಕ್ರಮ, ಅಕ್ಟೋಬರ್ 2 ರಂದು ಬನ್ನಿ ಮುಡಿಯುವ ಹಬ್ಬ ಹಾಗೂ ಸಾಧಕಿಯರ ಸನ್ಮಾನ, ಅಕ್ಟೋಬರ್ 4 ರಂದು ಆರ್ಯು ಸಮಾವೇಶ, ಅಕ್ಟೋಬರ್ 6 ರಂದು ನೂತನವಾಗಿ ನಿರ್ಮಿಸಲಾದ ಐವತ್ತು ಕೆ.ಜಿ ಬೆಳ್ಳಿ ಅಂಬಾರಿಯಲ್ಲಿ ದೇವಿ ಮೂರ್ತಿಯ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.
ಇದೇ ವೇಳೆ ಕಲ್ಮಠ ಧ್ಯಾನ ಮಂದಿರದಲ್ಲಿ 9 ದಿನಗಳ ಕಾಲ ಉಪನ್ಯಾಸ ಮಾಲಿಕೆ ಹಮ್ಮಿಕೊಳ್ಳಲಾಗಿದ್ದು, ಹರಿದಾಸ ಸಾಹಿತ್ಯ, ತತ್ವ ಸಾಹಿತ್ಯ, ಸಾವಯವ ಕೃಷಿ, ಆರೋಗ್ಯ ಹಾಗೂ ಧಾರ್ಮಿಕ ಜೀವನ ಮೌಲ್ಯಗಳ ಕುರಿತಂತೆ ಪ್ರಮುಖ ವಿದ್ವಾಂಸರು ಪ್ರವಚನ ನೀಡಲಿದ್ದಾರೆ.
ಈ ಭವ್ಯ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ, ಶರಣಪ್ರಕಾಶ ಪಾಟೀಲ್, ಅರಣ್ಯ ಸಚಿವ ಈಶ್ವರ ಖಂಡ್ರೆ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಸೇರಿದಂತೆ ನಾಡಿನ ಗಣ್ಯರು ಆಗಮಿಸಲಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಶಾಸಕರಾದ ಹಂಪಯ್ಯ ನಾಯಕ, ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಮಠಾಧೀಶರು ಹಾಗೂ ವೀರಶೈವ ಲಿಂಗಾಯತ ಸಮಾಜದ ಗಣ್ಯರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ