“ಸಹಜತೆ & ಮುಗ್ಧತೆ ಡಿ ಶಬ್ರಿನಾ ಅವರ ‘ಹೂ ಮಾಲೆಗೆ ನೂಲು’ ಕೃತಿಯ ಜೀವಾಳವಾಗಿದೆ – ಕೇಶವ ಮಳಗಿ”…..

ಪ್ರಜ್ಞಾವಂತ ನಾಗರಿಕತೆಯೊಂದು ತನ್ನ ಪ್ರಾಚೀನ ಗತವನ್ನು ಮಾರ್ಗ ಮತ್ತು ದೇಸಿ ವಿಧಾನಗಳ ಮೂಲಕ ಮುಖಾ ಮುಖಿಯಾಗಲು ಸದಾ ಹಾತೊರೆಯುತ್ತಿರುತ್ತದೆ. ಮಹಾಕಾವ್ಯ, ಪುರಾಣ, ಐತಿಹ್ಯ, ಹಾಡುಗಬ್ಬ, ಉಕ್ತಿ, ಒಡಪುಗಳನ್ನು ತನ್ನ ಕಾಲಮಾನಕ್ಕೆ ಹೊಂದುವಂತೆ ಪುನಾವ್ಯಾಖ್ಯಾನ ಮಾಡುವಲ್ಲಿ, ಪಠ್ಯದೊಳಗಿನ ಸತ್ವವನ್ನು ಹೊಸ ವಾಸ್ತವದಲ್ಲಿ ತಾನು ಕಾಣುತ್ತಿರುವ ಬೆಳಕಿನ ಮೂಲಕ ಒರೆಗಲ್ಲಿಗೆ ಹಚ್ಚಿ ಅರ್ಥ ಕಂಡು ಕೊಳ್ಳುವುದರಲ್ಲಿ ಅದಕ್ಕೆ ಯಾವಾಗಲೂ ಕಾತರವೇ.




ಬಿ.ತಿಪ್ಪಣ್ಣ ಮರಿಕುಂಟೆಯವರ ‘ಸ್ವರ್ಗಸುಖ’ ಅಂಥದ್ದೊಂದು ಕೃತಿ. ಈ ಸಂಗ್ರಹದಲ್ಲಿ ನಮ್ಮ ವೈದಿಕ ಪರಂಪರೆಯ ಪಠ್ಯಗಳಾದ ವೇದ,ಪುರಾಣ ಮತ್ತು ರಾಮಾಯಾಣಗಳನ್ನು ಆಶ್ರಯಿಸಿ ಮರಿಕುಂಟೆಯವರು ಮಕ್ಕಳಿಗಾಗಿ,ಹೊಸ ಸಾಕ್ಷರರಿಗಾಗಿ ಮರುನಿರೂಪಿಸಿದ್ದಾರೆ. ಆ ಅರ್ಥದಲ್ಲಿ ಇದೊಂದು ಒಳ್ಳೆಯ ಓದಿನ ಅನುಭವ ನೀಡಬಲ್ಲ ಕೃತಿ. ಪುಸ್ತಕವೊಂದು ಓದುಗರನ್ನು ತಲುಪಿದ್ದೇ ಅದು ಅಗೋಚರವಾಗಿ ಉಂಟು ಮಾಡುವ ಕಂಪನಗಳು ಅಸಂಖ್ಯ. ಮೊದಲಿಗೆ ಓದುಗರ ಮನಸ್ಸನ್ನು ಭಾವನೆಗಳಿಂದ ತುಂಬುತ್ತದೆ. ಅವರಲ್ಲಿ ವೈಚಾರಿಕ ತಲ್ಲಣಗಳನ್ನು ಸೃಷ್ಟಿಸುತ್ತದೆ. ಓದು ಮತ್ತು ಬದುಕಿನ ಹಿನ್ನೆಲೆಯಲ್ಲಿ ತಮಗಾದ ರಸಾನುಭೂತಿ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಲು ಹಾತೊರೆಯುತ್ತದೆ.
ಪ್ರಸ್ತುತ ಕೃತಿ ‘ಹೂ ಮಾಲೆಗೆ ನೂಲು’ ಅಂತಹ ಒಳತುಡಿತದಿಂದ ಹುಟ್ಟಿರುವ ಪ್ರತಿಕ್ರಿಯೆಯಾಗಿದೆ. ಈ ಕೃತಿಯ ಲೇಖಕಿ ಡಿ.ಶಬ್ರಿನಾ ಮಹಮದ್ ಅಲಿಯವರು ವೃತ್ತಿಯಿಂದ ಶಿಕ್ಷಕಿಯಾಗಿದ್ದಾರೆ. ಹೀಗಾಗಿ ವ್ಯಾಸಂಗ, ಬೋಧನೆ, ಪರಿವರ್ತನೆ ಇಂತಹ ವಿಷಯಗಳು ಅವರ ಮನಸ್ಸನ್ನು ಸದಾ ಆವರಿಸಿರುವುದು, ಹೊಸ ವಿಚಾರವನ್ನು ಭವಿಷ್ಯದ ತಲೆಮಾರಿಗೆ ತಲುಪಿಸುವ ಉಮೇದು ಹೊಂದಿರುವುದು ಸಹಜವೇ. ಶಬ್ರಿನಾ ಒಬ್ಬ ಮುಕ್ತ ಮನಸ್ಸಿನ,ಸಮರ್ಪಕವಾಗಿಲ್ಲದಿರುವುದನ್ನು ಪ್ರಶ್ನಿಸುವ ಬೋಧಕಿ. ಹಾಗೆಂದೇ, ಈ ಕೃತಿ ವಿಶ್ಲೇಷಣೆ, ಬೋಧನೆ ಮತ್ತು ಸಂದೇಹದ ಅಂಶಗಳನ್ನು ಒಳಗೊಂಡ ಕೃತಿಯಾಗಿದೆ.
ಇದ್ದರೂ ಅವರೊಬ್ಬ ಅಕೆಡೆಮಿಕ್ ವಲಯದ ಬಿಗಿಹುಬ್ಬಿನ ಓದುಗರಲ್ಲ. ಬೌದ್ಧಿಕತೆಗಿಂತ ಭಾವುಕತೆಗೆ ಹೆಚ್ಚು ಬಾಗುವ ಹೆಂಗರುಳಿನ ಓದುಗರು ಮತ್ತು ವಿಶ್ಲೇಷಕರು. ಸರಳತೆ,ಸಹಜತೆ ಮತ್ತು ಮುಗ್ಧತೆಗಳು ಇಲ್ಲಿನ ಬರಹಗಳ ಜೀವಾಳವಾಗಿದೆ. ಈ ಹಿನ್ನೆಲೆಯಲ್ಲಿಯೇ ಈ ಕೃತಿಯ ರೂಪರೇಶೆ ಸರಳತೆ,ಮುಗ್ಧತೆ, ಸಹಜತೆಯನ್ನು ಆಧರಿಸಿದೆ. ತಿಪ್ಪಣ್ಣ ಮರಿಕುಂಟೆಯವರ ಪುಸ್ತಕದಲ್ಲಿರುವ ಒಟ್ಟು ಹನ್ನೆರಡು ಕಥೆಗಳನ್ನು ಪ್ರತ್ಯೇಕವಾಗಿ ವಿಶ್ಲೇಷಿಸುವ ಉದ್ದೇಶವನ್ನು ಹೊಂದಿರುವಂಥದ್ದು. ಹಾಗೆ ಮಾಡುವಾಗ ಶಬ್ರಿನಾ ಅವರು ಆರಂಭದಲ್ಲಿ ಕಥೆಯನ್ನು ಸಾರಸಂಗ್ರಹದ ರೂಪದಲ್ಲಿ ಪ್ರಸ್ತುತಪಡಿಸುತ್ತಾರೆ. ಬಳಿಕ ಅದನ್ನು ಸಮಕಾಲಿನ ಸಮಾಜದ ಕಥೆ ಕಾದಂಬರಿಯೊಂದಿಗೋ ವಿಮರ್ಶಾಸೂತ್ರದೊಂದಿಗೆ ಸಮೀಕರಿಸಿ ಇಲ್ಲವೇ ತುಲನೆಗೆ ಒಳಪಡಿಸಿ ತಮ್ಮ ಸಹೃದಯ ಅಭಿಪ್ರಾಯ ವಿಶ್ಲೇಷಣೆ ಮತ್ತು ಸಂದೇಶಗಳನ್ನು ತೆರೆದಿಡುತ್ತಾರೆ. ಇದರಿಂದ ಕಥೆಯನ್ನು ಮೊದಲೇ ಓದಿರದ ವಾಚಕವರ್ಗಕ್ಕೆ ಕಥೆ ಅರಿವಾಗುತ್ತದೆ. ಮಾತ್ರವಲ್ಲ ಕಥೆಯನ್ನು ನೋಡುವ ಇನ್ನೊಂದು ಮಗ್ಗಲು ಕಾಣಿಸುತ್ತದೆ.

ಇಲ್ಲಿನ ಪ್ರಾಚೀನ ಪಠ್ಯಗಳಾದರೂ ತಮ್ಮ ಕಾಲದ ಸಾಮಾಜಿಕ, ಕೌಟುಂಬಿಕ, ನೈತಿಕ ಬಿಕ್ಕಟ್ಟುಗಳನ್ನು, ಬದುಕಿನ ಸಂದಿಗ್ದ ಸನ್ನಿವೇಶವೊಂದರಲ್ಲಿ ಆಗ ಬದುಕಿದವರು ಹೇಗೆ ಪರಿಹಾರ ಕಂಡುಕೊಂಡರು ಎಂಬುದನ್ನು ಅರಹುತ್ತವೆ. ಜತೆಗೆ ಸ್ಥಿತ್ಯಂತರ ಕಾಲಘಟ್ಟದಲ್ಲಿ ಬೇರೆ ಬೇರೆ ನಂಬಿಕೆಯ ಜನಾಂಗಗಳು ಹೊಂದಾಣಿಕೆ ಮಾಡಿಕೊಳ್ಳುವಾಗ ಅನುಭವಿಸಿದ ಸಂಕಟಗಳನ್ನು ಹೇಳುತ್ತವೆ. ಈ ಸಂಕಟಗಳು ಹುಟ್ಟು ಹಾಕಿದ ವಿವಿಧ ಬಗೆಯ ಹಿಂಸೆ ಸಂಘರ್ಷ ಮತ್ತು ಇವುಗಳಿಂದ ಉಂಟಾದ ಮೂಲಭೂತ ಬದಲಾವಣೆಗಳನ್ನು ಕಥಿಸುತ್ತವೆ. ಈ ಎಲ್ಲಾ ಕಥೆಗಳಿಗೆ ಒಂದು ಅಂಗೀಕೃತ ಪಠ್ಯ ಇರಬಹುದಾದರು ಮೌಖಿಕ ಪರಂಪರೆಯಿಂದ ಪಠ್ಯಕ್ಕೆ ಪಠ್ಯದಿಂದ ಮತ್ತೆ ಮೌಖಿಕತೆಗೆ ಬಂದಾಗ ಉಂಟಾಗುವ ಚಮತ್ಕಾರಿಕ ರೂಪಾಂತರಗಳನ್ನು ಕೂಡ ನಾವಿಲ್ಲಿ ಕಾಣಬಹುದು. ನುಡಿ ಮತ್ತು ಬರಹಗಳು (ಆಡು ಭಾಷೆ ಮತ್ತು ಲಿಪಿ) ಏಕಕಾಲಕ್ಕೆ ವಿಕಾಸಗೊಂಡವು ಎಂದು ಜಾಕ್ ಡೆರಿಡ ಅವರಂಥ ಭಾಷಾ ವಿಜ್ಞಾನಿ, ನಿರಚನಾವಾದಿ ವಾದ ಹೂಡಿದರೂ ಮೌಖಿಕ ಪರಂಪರೆಯಲ್ಲಿ ನೂರಾರು ವರ್ಷ ಉಳಿದು ಆಮೇಲೆ ಪಠ್ಯಗಳು ರೂಪಗೊಂಡವು ಎಂಬುದು ಉಳಿದ ಪ್ರಾಜ್ಞರ ನಂಬಿಕೆ ಮತ್ತು ಅಂಬೋಣ. ಮೌಖಿಕ ಪರಂಪರೆಯ ಕಥನವೊಂದು ಪಠ್ಯವಾಗಿ ಪರಿವರ್ತಿತವಾದದ್ದೇ ಅಲ್ಲಿ ಹುಟ್ಟುವ ಅಧಿಕಾರ ನಿಯಂತ್ರಣ ವ್ಯಾಖ್ಯಾನ ಮತ್ತು ಜ್ಞಾನ ಕಾವಲುಪಡೆಗಳು ನಿರ್ಮಿಸುವ ಯಜಮಾನಿಕೆಯ ಸಂಕಥನಗಳನ್ನು ನಾವೆಲ್ಲ ಬಲ್ಲೆವು.
ಇರಲಿ ಪಠ್ಯ ಹಳೆಯದ್ದೋ, ಹೊಸತೋ, ಪ್ರಾಚೀನವೋ ಇತ್ತೀಚಿನವೋ ಅವು ಹುಟ್ಟು ಹಾಕುವ ವೈಚಾರಿಕ ಸಂಘರ್ಷ ಮತ್ತು ಸಂದೇಹಗಳ ಸ್ವರೂಪ ಒಂದೇ ಬಗೆಯದ್ದಾಗಿರುತ್ತವೆ. ಆದರೆ, ಕಾಲಕಾಲಕ್ಕೆ ಅನುಸರಿಸುವ ವಿಧಾನ ಮಾತ್ರ ಬೇರೆಯಾಗಿರುತ್ತವೆ. ಮರಿಕುಂಟೆಯವರ ಕೃತಿಯ ಪ್ರತಿ ಕಥೆಯ ಕುರಿತು ಶಬ್ರಿನ ಅವರ ವ್ಯಾಖ್ಯಾನಗಳೂ ಮೊದಲಿಗೆ ಒಬ್ಬ ಓದುಗಳಾಗಿ, ಸ್ತ್ರೀಯಾಗಿ, ಬೋಧಕಿಯಾಗಿ ಕಟ್ಟಿಕೊಂಡಿರುವಂಥವು. ಹಾಗೂ ಬುದ್ಧಿಗಿಂತ ಭಾವುಕತೆಗೆ ಹೆಚ್ಚು ಒತ್ತು ಕೊಟ್ಟಿರುವಂಥವು. ಅವರ ತೌಲನಿಕ ವಿಧಾನ ಹಲವೊಮ್ಮೆ ಸಮಕಾಲಿನ ಪಠ್ಯ ಉಲ್ಲೇಖಗಳ ಮೂಲಕ ವ್ಯಕ್ತವಾಗುತ್ತವೆ. ಇದ್ದರೂ ಪಠ್ಯವನ್ನು ಅರ್ಥ ಮಾಡಿಕೊಳ್ಳುವಲ್ಲಿ ಅವುಗಳ ಸಮಕಾಲೀನ ಮೌಲ್ಯಗಳ ಹುಡುಕಾಟ ಹಾಗೂ ನಿಷ್ಕರ್ಷೆಯಲ್ಲಿ ಇನ್ನೂ ಪಕ್ವತೆ ಮತ್ತು ಸಾತತ್ಯವನ್ನು ಬಯಸುವಂಥವು. ಉತ್ಸಾಹ ಮತ್ತು ಸಕಾರಾತ್ಮಕ ಬೋಧನಾ ನಿಲುವನ್ನು ಹೊಂದಿರುವ ಶಬ್ರಿನಾ ಅವರು ಮುಂದೊಮ್ಮೆ ಅದನ್ನು ಸಾಧಿಸುತ್ತಾರೆ ಎಂದು ಆಶಿಸೋಣ.

ಕೇಶವ ಮಳಗಿ
ಕತೆಗಾರರು ಬೆಂಗಳೂರು