ಲೋಕೋಪಯೋಗಿ ಸಚಿವರ ತರಾಟೆ ಫಲಶ್ರುತಿ, ಇಂದ್ರಾಳಿ ಮೇಲ್ಸೇತುವೆ ಕಾಮಗಾರಿ ಪೂರ್ಣ – ಸೆ. 22 ಕ್ಕೆ ಸಂಚಾರಕ್ಕೆ ಸಾರ್ವಜನಿಕರಿಗೆ ಮುಕ್ತ ಅವಕಾಶ.
ಉಡುಪಿ ಸ.12

ಇಡೀ ಉಡುಪಿ ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದ್ದ ಇಂದ್ರಾಳಿ ರೈಲ್ವೆ ಮೇಲ್ಸೇತುವೆಯ ವಿಳಂಬಿತ ಕಾಮಗಾರಿಯು ಈಗ ಪೂರ್ಣ ಗೊಂಡಿದೆ. ಈ ಹಿಂದೆ ಉಡುಪಿಗೆ ಭೇಟಿ ನೀಡಿದ್ದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ, ಕಾಮಗಾರಿಯ ವಿಳಂಬದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರನ್ನು ತೀವ್ರವಾಗಿ ತರಾಟೆಗೆ ತೆಗೆದು ಕೊಂಡಿದ್ದರು.
ಸಚಿವರ ಆ ಕಟ್ಟುನಿಟ್ಟಿನ ಸೂಚನೆಯ ಫಲವಾಗಿಯೇ ಕಾಮಗಾರಿಯು ವೇಗ ಪಡೆದು ಕೊಂಡಿದ್ದು, ಇದೀಗ ಸಂಪೂರ್ಣ ಗೊಂಡಿದೆ.ಈ ಹಿನ್ನೆಲೆಯಲ್ಲಿ, ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಸೇತುವೆಯು ಸೆಪ್ಟೆಂಬರ್ 22, 2025 ರಿಂದ ಸಾರ್ವಜನಿಕರ ಸಂಚಾರಕ್ಕೆ ಅಧಿಕೃತವಾಗಿ ಮುಕ್ತವಾಗಲಿದೆ ಎಂದು ಪ್ರಕಟಿಸಿದ್ದಾರೆ. ಸಚಿವರ ಭೇಟಿ ಮತ್ತು ಅವರ ಕಟ್ಟು ನಿಟ್ಟಿನ ನಿರ್ದೇಶನವು ಈ ಪ್ರಮುಖ ಯೋಜನೆಯನ್ನು ತ್ವರಿತವಾಗಿ ಪೂರ್ಣ ಗೊಳಿಸಲು ಕಾರಣವಾಯಿತು ಎಂದು ಹೇಳಲಾಗುತ್ತಿದೆ.
ಕಾನೂನಾತ್ಮಕ ಜವಾಬ್ದಾರಿಯ ಮೇಲೆ ಬೆಳಕು:
ಲೋಕೋಪಯೋಗಿ ಸಚಿವರ ಈ ಕ್ರಮವು ಸರ್ಕಾರದಲ್ಲಿ ಕಾನೂನಾತ್ಮಕ ಹೊಣೆಗಾರಿಕೆ ಮತ್ತು ಉತ್ತರದಾಯಿತ್ವದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ಸಚಿವರು ಇಲಾಖೆಯ ಮುಖ್ಯಸ್ಥರಾಗಿ, ಯೋಜನೆಗಳ ವಿಳಂಬಕ್ಕೆ ಕಾರಣರಾದವರನ್ನು ಪ್ರಶ್ನಿಸುವ ಮತ್ತು ಸೂಕ್ತ ಕ್ರಮ ತೆಗೆದು ಕೊಳ್ಳುವ ಅಧಿಕಾರವನ್ನು ಹೊಂದಿರುತ್ತಾರೆ. ಈ ಪ್ರಕರಣದಲ್ಲಿ, ಸಚಿವರು ತಮ್ಮ ಅಧಿಕಾರವನ್ನು ಸರಿಯಾಗಿ ಬಳಸಿ ಕೊಂಡು ಸಾರ್ವಜನಿಕರ ಹಿತಾಸಕ್ತಿಗೆ ಆದ್ಯತೆ ನೀಡಿದ್ದಾರೆ.ಈ ಬೆಳವಣಿಗೆಯ ಜೊತೆಗೆ, ಮಳೆಯಿಂದ ಹಾಳಾದ ಕೆಳ ಪರ್ಕಳ ರಸ್ತೆಯ ದುರಸ್ತಿ ಕಾರ್ಯವನ್ನು ಕೂಡಲೇ ಆರಂಭಿಸಿ, ಒಂದು ವಾರದೊಳಗೆ ಪೂರ್ಣಗೊಳಿಸುವಂತೆ ಸಂಸದರು ಸೂಚನೆ ನೀಡಿದ್ದಾರೆ.
ಈ ಎರಡೂ ಕಾಮಗಾರಿಗಳು ಪೂರ್ಣ ಗೊಳ್ಳುವುದರಿಂದ ಉಡುಪಿ ನಗರದ ಪ್ರಮುಖ ಸಂಚಾರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದಂತಾಗಿದೆ ಎಂದು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಅಭಿಪ್ರಾಯ ಪಟ್ಟಿದೆ.
ವರದಿ:ಆರತಿ.ಗಿಳಿಯಾರು.ಉಡುಪಿ