ಕೋಟ ಪೊಲೀಸರ ಸೇವೆಗೆ ಗೌರವ – ಎಎಸ್‌ಐ ಜಯಪ್ರಕಾಶ್‌ಗೆ ನಿವೃತ್ತಿ ಸನ್ಮಾನ.
ಕೋಟ ಸ.14

ದಕ್ಷತೆ ಮತ್ತು ಜನಸ್ನೇಹಿ ಸೇವೆಯ ಮೂಲಕ ಸಾರ್ವಜನಿಕರಲ್ಲಿ ವಿಶ್ವಾಸ ಗಳಿಸಿರುವ ಕೋಟ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳಿಗೆ ಸಾರ್ವಜನಿಕರು ಮತ್ತು ಯುವ ಕಾಂಗ್ರೆಸ್ ವತಿಯಿಂದ ಗೌರವ ಸಲ್ಲಿಸಲಾಯಿತು.
ಕೋಟ ಠಾಣೆಯಲ್ಲಿ ಕಳೆದ 38 ವರ್ಷಗಳಿಂದ ದಕ್ಷತೆಯಿಂದ ಸೇವೆ ಸಲ್ಲಿಸಿ ನಿವೃತ್ತರಾದ ಎಎಸ್‌ಐ ಜೆ.ಪಿ. ಜಯಪ್ರಕಾಶ್ ಅವರಿಗೆ ಭಾವಪೂರ್ಣವಾಗಿ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿ ಅವರು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಅಜಿತ್ ಕುಮಾರ್ ಶೆಟ್ಟಿ, “ಪೊಲೀಸ್ ಇಲಾಖೆಯು ಕೇವಲ ಕಾನೂನು ಸುವ್ಯವಸ್ಥೆ ಕಾಪಾಡುವುದಲ್ಲದೆ, ನೂರಾರು ಯುವಕರಿಗೆ ಸೇವೆ ಮಾಡಲು ಪ್ರೇರಣೆಯಾಗಿದೆ. ಜಯಪ್ರಕಾಶ್ ಅವರಂತಹ ಅಧಿಕಾರಿಗಳ ಪ್ರಾಮಾಣಿಕ ಸೇವೆ ನಮಗೆಲ್ಲರಿಗೂ ಹೆಮ್ಮೆಯ ವಿಷಯ” ಎಂದು ಹೇಳಿದರು.
ಇದೇ ವೇಳೆ, ಗಂಗೊಳ್ಳಿ ಠಾಣೆಗೆ ಹೆಡ್ ಕಾನ್ಸ್ಟೇಬಲ್ ಆಗಿ ಪದೋನ್ನತಿ ಪಡೆದ ರಾಘವೇಂದ್ರ ಮತ್ತು ಕೋಟ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸಿ, ಇದೀಗ ಮಂಗಳೂರು ಸಿಐಡಿ ಇನ್ಸ್‌ಪೆಕ್ಟರ್ ಆಗಿ ಬಡ್ತಿ ಪಡೆದ ಮತ್ತೊಬ್ಬ ರಾಘವೇಂದ್ರ ಅವರಿಗೂ ಅಭಿನಂದನೆ ಸಲ್ಲಿಸಲಾಯಿತು.
ಈ ಅಧಿಕಾರಿಗಳ ಸೇವೆಗೆ ಕೃತಜ್ಞತೆ ಸಲ್ಲಿಸಿದ ಅಜಿತ್ ಕುಮಾರ್ ಶೆಟ್ಟಿ, ಇಂತಹ ಪ್ರಾಮಾಣಿಕ ಅಧಿಕಾರಿಗಳು ಪೊಲೀಸ್ ಇಲಾಖೆಯ ಹೆಮ್ಮೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ವರದಿ:ಆರತಿ.ಗಿಳಿಯಾರು.ಉಡುಪಿ