ರಸ್ತೆ ಗುಂಡಿ ವಿಚಾರ, ಬಿಜೆಪಿ ನಾಯಕರು ಆತ್ಮಾವಲೋಕನ ಮಾಡಿ ಕೊಳ್ಳಲಿ – ಹರಿಪ್ರಸಾದ್ ಶೆಟ್ಟಿ.
ಉಡುಪಿ ಸ.17

ರಸ್ತೆ ಗುಂಡಿಗಳ ಮುಂದೆ ನಿಂತು ಫೋಟೊ ತೆಗೆದು, ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಲೇವಡಿ ಮಾಡುತ್ತಿರುವ ಬಿಜೆಪಿ ಮುಖಂಡರು, ರಸ್ತೆಗಳು ಏಕೆ ಹದಗೆಟ್ಟಿವೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಕುಂದಾಪುರ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ ಹೇಳಿದ್ದಾರೆ.
ರಸ್ತೆಗಳು ಗುಂಡಿ ಬೀಳಲು ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಕಳಪೆ ಕಾಮಗಾರಿಗಳೇ ಕಾರಣ. ಆಗಿನ 40% ಕಮಿಷನ್ ದಂಧೆಯಿಂದಾಗಿ ಗುತ್ತಿಗೆದಾರರು ಸರಿಯಾದ ಗುಣಮಟ್ಟ ಕಾಯ್ದುಕೊಂಡಿಲ್ಲ. ನಿಯಮಗಳ ಪ್ರಕಾರ, ಟೆಂಡರ್ ಪಡೆದ ರಸ್ತೆಗಳಿಗೆ ಮೂರು ವರ್ಷಗಳ ನಿರ್ವಹಣಾ ಅವಧಿ ಇರುತ್ತದೆ. ಆದರೂ, ಬಿಜೆಪಿ ನಾಯಕರು ಇದೇ ಗುಂಡಿಗಳ ಬಗ್ಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರವನ್ನು ಟೀಕಿಸುತ್ತಿರುವುದು ಹಾಸ್ಯಾಸ್ಪದ. ರಸ್ತೆಗಳ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೆ, ಬೈಂದೂರು-ಕೊಲ್ಲೂರು ಮತ್ತು ಮಲ್ಪೆ-ಆಗುಂಬೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸಿ ಫೋಟೊ ತೆಗೆಸಿ ಕೊಳ್ಳಲಿ ಎಂದು ಹರಿಪ್ರಸಾದ್ ಶೆಟ್ಟಿ ಸವಾಲು ಹಾಕಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯ ಹಳೆಯ ಬಿಲ್‌ಗಳ ಹೊರೆ:2021 ರಿಂದ 2023ರ ಅವಧಿಯಲ್ಲಿ, ಬಿಜೆಪಿ ಸರ್ಕಾರವು ಆರ್ಥಿಕ ಇಲಾಖೆಯ ಅನುಮೋದನೆ ಇಲ್ಲದೆ, 40% ಕಮಿಷನ್ ಪಡೆದು ಸಾವಿರಾರು ಕೋಟಿ ರೂಪಾಯಿಗಳ ಕಾಮಗಾರಿಗಳನ್ನು ಇಲಾಖಾ ಮಟ್ಟದಲ್ಲಿ ಮಂಜೂರು ಮಾಡಿದೆ. ಈಗ ಆ ಎಲ್ಲಾ ಕಾಮಗಾರಿಗಳ ಸಾವಿರಾರು ಕೋಟಿ ರೂಪಾಯಿಗಳ ಬಿಲ್‌ಗಳನ್ನು ಪಾವತಿಸುವ ಹೊಣೆ ಕಾಂಗ್ರೆಸ್ ಸರ್ಕಾರದ ಮೇಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರ ವಹಿಸಿಕೊಂಡ ನಂತರ ಆರ್ಥಿಕ ಶಿಸ್ತಿಗೆ ಆದ್ಯತೆ ನೀಡಿ, ಹಳೆಯ ಬಿಲ್‌ಗಳನ್ನು ಪಾವತಿಸುತ್ತಾ, ಹೊಸ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮುಂದುವರಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.
ಪಂಚ ಗ್ಯಾರಂಟಿ ಯೋಜನೆ ಬಿಜೆಪಿಗೆ ಬಿಸಿ ತುಪ್ಪ:
ಕಾಂಗ್ರೆಸ್ ಸರ್ಕಾರವು ಬಡವರು ಮತ್ತು ಮಧ್ಯಮ ವರ್ಗದವರಿಗೆ ನೀಡುತ್ತಿರುವ ಪಂಚ ಗ್ಯಾರಂಟಿ ಯೋಜನೆಗಳು ಬಿಜೆಪಿಗೆ ಬಿಸಿ ತುಪ್ಪವಾಗಿವೆ. ಸರ್ಕಾರಿ ಹಣ ಮಧ್ಯವರ್ತಿಗಳಿಲ್ಲದೆ ನೇರವಾಗಿ ಜನರ ಖಾತೆಗೆ ತಲುಪುತ್ತಿರುವುದರಿಂದ ಬಿಜೆಪಿ ನಾಯಕರು ತಲೆಕೆಡಿಸಿ ಕೊಂಡಿದ್ದಾರೆ. ಬಡವರು ಬಡವರಾಗಿಯೇ ಉಳಿಯಬೇಕೆ? ಮಹಿಳೆಯರು ಸ್ವಾವಲಂಬಿಗಳಾಗಬಾರದೆ? ಎಂದು ಅವರು ಪ್ರಶ್ನಿಸಿದರು. ಐಷಾರಾಮಿ ಜೀವನ ನಡೆಸುವವರಿಗೆ ಬಡತನದ ಕಷ್ಟ ಅರ್ಥವಾಗುವುದಿಲ್ಲ, ಹಾಗಾಗಿಯೇ ಇಂತಹ ಅಪಪ್ರಚಾರಗಳನ್ನು ನಡೆಸುತ್ತಿದ್ದಾರೆ ಎಂದು ಟೀಕಿಸಿದರು.
ರಾಜ್ಯದ ಬಡವರು ಪಂಚ ಗ್ಯಾರಂಟಿ ಸೌಲಭ್ಯಗಳನ್ನು ಪಡೆಯಲು ಅರ್ಹರು. ಬಿಜೆಪಿ ನಾಯಕರು ವಿನಾ ಕಾರಣ ಬಡವರ ಯೋಜನೆಗಳ ಬಗ್ಗೆ ತಪ್ಪು ಮಾಹಿತಿ ನೀಡಿ ಜನರ ದಿಕ್ಕು ತಪ್ಪಿಸುವುದನ್ನು ನಿಲ್ಲಿಸಬೇಕು ಎಂದು ಹರಿಪ್ರಸಾದ್ ಶೆಟ್ಟಿ ಒತ್ತಾಯಿಸಿದರು.
ವರದಿ:ಆರತಿ.ಗಿಳಿಯಾರು.ಉಡುಪಿ