ವಿಶ್ವಕರ್ಮರ ಜ್ಞಾನ ಮುಂದಿನ ಪೀಳಿಗೆಗೆ ಸಾಗಲಿ – ಮಹೇಶ ನಿಡಶೇಶಿ.
ನರೇಗಲ್ಲ ಸ.19





ಬ್ರಹ್ಮ ಇಡಿ ಬ್ರಹ್ಮಾಂಡವನ್ನೇ ಸೃಷ್ಟಿಸಿದನು ಎಂಬುದನ್ನು ಹಿಂದೂ ಧರ್ಮದ ಗ್ರಂಥಗಳು ಹೇಳುತ್ತವೆ. ಅದೇ ರೀತಿ ಈ ಬ್ರಹ್ಮಾಂಡವನ್ನ ರೂಪಕ್ಕೆ ಇಳಿಸಿದ್ದು ವಿಶ್ವಕರ್ಮ ಎಂದು ನಂಬಲಾಗಿದೆ. ಹೀಗಾಗಿ ವಿಶ್ವಕರ್ಮ ಜಯಂತಿಯೂ ಹುಟ್ಟಿ ಕೊಂಡಿತು. ಸ್ವರ್ಗ ಲೋಕದಲ್ಲಿ ದೇವತೆಗಳಿಗೆ ಅರಮನೆ ನಿರ್ಮಿಸಿದವನು ಈ ವಿಶ್ವಕರ್ಮ, ದೇವರ ಆಯುಧಗಳು ಅವರ ವಾಹನಗಳ ನಿರ್ಮಾತೃ ಕೂಡ ಇದೇ ವಿಶ್ವಕರ್ಮ.
ಈ ವಿಶ್ವಕರ್ಮನ ಜಯಂತಿಯನ್ನು ಪ್ರತಿ ವರ್ಷ ಕನ್ಯಾ ಸಂಕ್ರಾಂತಿಯಂದು ಆಚರಿಸಲಾಗುವುದು. ಇಡೀ ಭೂ ಮಂಡಲವನ್ನು ನಿರ್ಮಿಸಿದ ಈತನನ್ನು ವಾಸ್ತು ಶಾಸ್ತ್ರದ ಪಿತಾಮಹ ಎಂದು ಪರಿಗಣಿಸಲಾಗಿದೆ. ಹೀಗಾಗಿ ಪ್ರತಿ ವರ್ಷ ಒಂದು ದಿನ ಆತನಿಗೆ ಪೂಜೆ ಸಲ್ಲಿಸಲಾಗುತ್ತದೆ. ಇದೇ ಸೆಪ್ಟೆಂಬರ್ 17 ರಂದು ವಿಶ್ವಕರ್ಮ ಜಯಂತಿ ಆಚರಿಸಲಾಗುತ್ತದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಹೇಶ ನಿಡಶೇಶಿ ಹೇಳಿದರು.
ಪಟ್ಟಣದ ಪಟ್ಟಣ ಪಂಚಾಯಿತಿಯ ಸಭಾಂಗಣದಲ್ಲಿ ಬುಧವಾರ ಭಗವಾನ್ ವಿಶ್ವಕರ್ಮರ ಜಯಂತಿ ಪ್ರಯುಕ್ತ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಇಂದಿನ ತಾಂತ್ರಿಕ ಯುಗದಲ್ಲಿ ಯಂತ್ರಗಳು, ಕೃತಕ ಬುದ್ದಿ ಮತ್ತೆ, ಡಿಜಿಟಲ್ ಸಾಧನಗಳು ಎಲ್ಲವನ್ನೂ ಹಿಡಿದು ಕೊಂಡಿದ್ದರೂ, ಅವನ್ನು ಕಾರ್ಯಗತ ಗೊಳಿಸುವ ಮಾನವನ ಕೈಯೇ ನಿಜವಾದ ಶಕ್ತಿ. ಆ ಕೈಗೆ ಗೌರವ ನೀಡುವುದು, ಕಾರ್ಮಿಕನ ಹಕ್ಕನ್ನು ಕಾಪಾಡುವುದು, ಅವನ ಜೀವನ ಮಟ್ಟವನ್ನು ಏರಿಸುವುದು ? ಇದೇ ವಿಶ್ವಕರ್ಮ ಜಯಂತಿಯ ನಿಜವಾದ ಸಂದೇಶ ಎಂದು ವಿಶ್ವಕರ್ಮ ಸಮಾಜದ ಮುಖಂಡ ಮೌನೇಶ ಹೊಸಮನಿ ಮಾತನಾಡಿದರು. ಪ.ಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಸದಸ್ಯರಾದ ಶ್ರೀಶೈಲಪ್ಪ ಬಂಡಿಹಾಳ, ಈರಪ್ಪ ಜೋಗಿ, ನಾಮ ನಿರ್ದೇಶಕ ಸದಸ್ಯ ಶೇಖಪ್ಪ ಕೆಂಗಾರ, ವಿಶ್ವಕರ್ಮ ಸಮಾಜದ ಹಿರಿಯರು ಮತ್ತು ಯುವಕರು ಹಾಗೂ ಪ.ಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು. ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ ರೋಣ ಗದಗ