ಪಿ.ಡಬ್ಲ್ಯೂ.ಡಿ ಕಚೇರಿಯಲ್ಲೇ ವಿಶ್ವಕರ್ಮ ಪೂಜೆ ಮತ್ತು ಸರ್.ಎಂ. ವಿಶ್ವೇಶ್ವರಯ್ಯ ನವರ ಜಯಂತಿ ಮರೀಚಿಕೆ, ಸರ್ಕಾರದ ಆದೇಶ ಉಲ್ಲಂಘಿಸಿ ಘಮಂಡಿ ಮೆರೆದ ಅಧಿಕಾರಿ ವಿರುದ್ಧ – ಜಿಲ್ಲಾಡಳಿತಕ್ಕೆ ಸಾರ್ವಜನಿಕರ ಖಡಕ್ ಎಚ್ಚರಿಕೆ.

ಹುನಗುಂದ ಸ.26

ಬಾಗಲಕೋಟೆ/ಬೆಂಗಳೂರು:ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಲೋಕೋಪಯೋಗಿ ಇಲಾಖೆ (P.W.D) ಕಚೇರಿಯಲ್ಲಿ ಇಲಾಖಾ ಮುಖ್ಯಸ್ಥರಾದ ಸರ್ ಎಂ. ವಿಶ್ವೇಶ್ವರಯ್ಯನವರ ಜಯಂತಿ ಹಾಗೂ ವಿಶ್ವಕರ್ಮ ಪೂಜಾ ಮಹೋತ್ಸವದಂದು ಪೂಜಾ ಕೈಂಕರ್ಯಗಳು ನಡೆಯದಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಸರ್ಕಾರದ ಸುತ್ತೋಲೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಿ, ತಮ್ಮ ‘ಘಮಂಡಿ’ (ದುರಹಂಕಾರ) ಯನ್ನು ಮೆರೆದಿರುವ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ (AEE) ಈರಯ್ಯ.ಮಾಡಬಾಳಮಠ ಅವರ ವಿರುದ್ಧ ತಕ್ಷಣವೇ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಮತ್ತು ವಿಶ್ವಕರ್ಮ ಸಮುದಾಯದವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಷಯ ಇಡೀ ಜಿಲ್ಲಾ ಆಡಳಿತವೇ ಬೆಚ್ಚಿ ಬೀಳುವಂತೆ ಮಾಡಿದೆ.

ಸುತ್ತೋಲೆ ಉಲ್ಲಂಘನೆ ಮತ್ತು ದುರಹಂಕಾರ:

ವಿಶ್ವಕರ್ಮ ಪೂಜಾ ಮಹೋತ್ಸವವನ್ನು ಮತ್ತು ಸರ್ಕಾರಿ ಇಲಾಖೆಗಳಲ್ಲಿ ಸರ್.ಎಂ. ವಿಶ್ವೇಶ್ವರಯ್ಯನವರ ಜಯಂತಿಯನ್ನು ರಾಜ್ಯ ವ್ಯಾಪಿಯಾಗಿ ಆಚರಿಸಬೇಕೆಂಬ ಸರ್ಕಾರದ ಸುತ್ತೋಲೆ ಇದೆ. ಆದರೆ, ವರದಿಗಾರರು ಹುನಗುಂದದ ತಹಶೀಲ್ದಾರ್ ಕಚೇರಿ, ತಾಲೂಕು ಪಂಚಾಯತ್ ಮತ್ತು ಪಿ.ಡಬ್ಲ್ಯೂ.ಡಿ ಕಚೇರಿಗಳಿಗೆ ಭೇಟಿ ನೀಡಿದಾಗ, ಪಿ.ಡಬ್ಲ್ಯೂ.ಡಿ ಕಚೇರಿಯಲ್ಲಿ ಯಾವುದೇ ಪೂಜೆ, ಪುನಸ್ಕಾರಗಳು ನಡೆದಿಲ್ಲದಿರುವುದು ಸ್ಪಷ್ಟವಾಗಿ ಗೋಚರಿಸಿದೆ.

ಅಧಿಕಾರಿ ಈರಯ್ಯ.ಮಾಡಬಾಳಮಠ ಅವರು ಇಲಾಖೆಯ ಡ್ರಾಯಿಂಗ್ ಆಫೀಸರ್ ಆಗಿ ಇಂತಹ ಜವಾಬ್ದಾರಿಯನ್ನು ನಿರ್ಲಕ್ಷಿಸಿದ್ದಾರೆ. “ಈ ಇಲಾಖೆಯ ಡ್ರಾಯಿಂಗ್ ಆಫೀಸರ್ ಇವರೇ, ಇವರಿಗೆ ಬಿಟ್ಟರೆ ಇನ್ನ ಯಾರಿಗೂ ಬರುವುದಿಲ್ಲ” ಎಂಬಂತಹ ‘ಘಮಂಡಿ ಗಿರಾಕಿ’ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದ್ದು, ಸರ್ಕಾರದ ಆದೇಶವನ್ನೇ ಸ್ಪಷ್ಟವಾಗಿ ಉಲ್ಲಂಘಿಸುವಷ್ಟು ದುರಹಂಕಾರಿ, ಅವಿವೇಕಿ ಈ ಅಧಿಕಾರಿ ತಾಲೂಕಿಗೆ ವಕ್ಕರಿಸಿಕೊಂಡಿರುವುದು ತಾಲೂಕಿನ ಜನತೆಯ ದುರ್ದೈವ ಎಂದು ಜನತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೇಲಾಧಿಕಾರಿಗಳಿಂದ ಸಬೂಬು! ಈ ಗಂಭೀರ ವಿಚಾರವನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದಾಗ, “ಅವರು ಅಂತವನಲ್ಲ” ಎಂದು ಸಬೂಬು ಹೇಳಿ ಆ ಅಧಿಕಾರಿಯನ್ನು ಸಮರ್ಥಿಸುವ ಪ್ರಯತ್ನ ಮಾಡಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಹೆಚ್ಚಿಸಿದೆ. ಈ ಮಧ್ಯೆ, ಪಿ.ಡಬ್ಲ್ಯೂ.ಡಿ ಕಚೇರಿಯಲ್ಲಿ ಪೂಜೆ ನಡೆಯದಿದ್ದರೂ, ಹುನಗುಂದದ ವಿಶ್ವಕರ್ಮ ಕಟ್ಟಡ ಕಾರ್ಮಿಕರ ಮತ್ತು ಕಾರ್ಪೆಂಟರ್ ಸಂಘದ ವತಿಯಿಂದ ಅತ್ಯಂತ ಯಶಸ್ವಿಯಾಗಿ ಪೂಜಾ ಮಹೋತ್ಸವ ಆಚರಿಸಲಾಗಿದೆ. ಸರ್ಕಾರಿ ನೌಕರರಾಗಿ ಕನಿಷ್ಠ ಕೆಳಹಂತದ ನೌಕರರಿಗೆ ಹೇಳಿಯಾದರೂ ಪೂಜೆ ಮಾಡಿಸದ ಅಧಿಕಾರಿಯ ನಡೆ ವಿಶ್ವಕರ್ಮ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದೆ.

ಜಿಲ್ಲಾಧಿಕಾರಿಗಳಿಗೆ ತಕ್ಷಣದ ಕ್ರಮಕ್ಕೆ ಆಗ್ರಹ:

ಈ ಗಂಭೀರ ನಿರ್ಲಕ್ಷ್ಯ, ಕರ್ತವ್ಯ ಲೋಪ ಮತ್ತು ಸರ್ಕಾರದ ಸುತ್ತೋಲೆಯ ಉಲ್ಲಂಘನೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳು ಈ ಕೆಳಗಿನ ಆಗ್ರಹಗಳನ್ನು ಮುಂದಿಟ್ಟಿವೆ.

ಕೂಡಲೇ ಅಮಾನತು ಮತ್ತು ಶಿಸ್ತು ಕ್ರಮ:

ಜಿಲ್ಲಾಧಿಕಾರಿಯವರು ಕೂಡಲೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಈರಯ್ಯ.ಮಾಡಬಾಳಮಠ ಅವರ ವಿರುದ್ಧ ತಕ್ಷಣವೇ ಅಮಾನತು ಸೇರಿದಂತೆ ಶಿಸ್ತು ಕ್ರಮ ಜರುಗಿಸಬೇಕು. ಇಂತಹ ಅಧಿಕಾರಿಯ ದರ್ಪಕ್ಕೆ ರಾಜ್ಯ ಸರ್ಕಾರ ಕೂಡಲೇ ಉತ್ತರ ನೀಡಬೇಕು.

ಲೋಕಾಯುಕ್ತ ತನಿಖೆ:

ಅಧಿಕಾರಿಗಳ ಈ ನಿರ್ಲಕ್ಷ್ಯ ಮತ್ತು ಸಾರ್ವಜನಿಕರ ‘ಮಂಗಳಾರತಿಗೆ ಆಹಾರವಾದ’ ವರ್ತನೆಯ ಬಗ್ಗೆ ಸಮಗ್ರ ತನಿಖೆ ನಡೆಸಲು ಲೋಕಾಯುಕ್ತ ಅಧಿಕಾರಿಗಳು ಪ್ರಕರಣವನ್ನು ಕೈಗೆತ್ತಿಕೊಳ್ಳಬೇಕು.

ಉಸ್ತುವಾರಿ ಸಚಿವರ ಜವಾಬ್ದಾರಿ:

ಇಂತಹ ಘಟನೆಗಳು ಜಿಲ್ಲೆಯಲ್ಲಿ ನಡೆಯುತ್ತಿದ್ದರೂ, ಜಿಲ್ಲಾಧಿಕಾರಿಗಳು ಮತ್ತು ಉಸ್ತುವಾರಿ ಸಚಿವರು ಬೇಜವಾಬ್ದಾರಿ ತೋರುವುದು ಸರಿಯಲ್ಲ. ಇಡೀ ಜಿಲ್ಲಾ ಆಡಳಿತ ವ್ಯವಸ್ಥೆಯ ಮೇಲಿನ ನಂಬಿಕೆ ಕಡಿಮೆಯಾಗುತ್ತಿದ್ದು, ತಕ್ಷಣವೇ ಪಿ.ಡಬ್ಲ್ಯೂ.ಡಿ ಸಚಿವರಾದ ಸತೀಶ್ ಜಾರಕಿಹೊಳಿ ಸಾಹೇಬ್ರು ಈ ಕುರಿತು ಗಮನಹರಿಸಬೇಕು.

ಕಾನೂನು ಕ್ರಮದ ಎಚ್ಚರಿಕೆ:

ಸರ್ಕಾರಿ ಸುತ್ತೋಲೆ ಉಲ್ಲಂಘನೆ ಮತ್ತು ಕರ್ತವ್ಯ ನಿರ್ಲಕ್ಷ್ಯಕ್ಕೆ ಸಂಬಂಧಿಸಿದಂತೆ ಅಖಿಲ ಭಾರತ ಸೇವಾ ನಿಯಮಗಳು (All India Services Rules) ಮತ್ತು ಕರ್ನಾಟಕ ನಾಗರಿಕ ಸೇವಾ ನಿಯಮಗಳ (KCS Rules) ಅಡಿಯಲ್ಲಿ ಸೂಕ್ತ ಮತ್ತು ಕಠಿಣ ಕಾನೂನು ಕ್ರಮ ಜರುಗಿಸಬೇಕು.ದಲಿತರ ಧ್ವನಿ ಮತ್ತು ನೇರ ನಿಷ್ಠುರವಾದಿ ಎಂದು ಖ್ಯಾತಿ ಪಡೆದ ಪಿ.ಡಬ್ಲ್ಯೂ.ಡಿ ಸಚಿವರಾದ ಸತೀಶ್ ಜಾರಕಿಹೊಳಿ ಸಾಹೇಬ್ರು ಈ ವರದಿಯನ್ನು ಗಮನಿಸಿ ಸೂಕ್ತ ಕ್ರಮ ಜರುಗಿಸುವ ಮೂಲಕ ರಾಜ್ಯ ಸರ್ಕಾರದ ಗಮನ ಸೆಳೆಯಬೇಕು ಎಂದು ಸಾರ್ವಜನಿಕರ ಮೂಲಕ ಆಕ್ರೋಶದ ಆಗ್ರಹವಾಗಿದೆ.

ತಾಲೂಕಿನ ಶಾಸಕರು ‘ನಮಗ್ಯಾಕ ಉಸಾಬರಿ’ ಎಂದು ಕೈತೊಳೆದು ಟವಲ್‌ನಲ್ಲಿ ಆಟ ಆಡಿಸದೆ, ಸ್ಪಷ್ಟ ನಿಲುವು ತೆಗೆದು ಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಸಂಪಾದಕರು

ಮಾರುತಿ.ಬಿ ಹೊಸಮನಿ

ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ

ಎಸ್.ಕೆ ನ್ಯೂಸ್ ಕನ್ನಡ ಚಾನಲ್

ಬಾಗಲಕೋಟೆ/ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button