ಸೀರೆ ‘ಸ್ಟ್ರೇಚರ್’ ದುರಂತ, ಉಡುಪಿಯ ೮೦ ವರ್ಷಗಳ ರಸ್ತೆ ರಹಿತ ಬಡಾ ಹೋಳಿ ಜನರ ಆಕ್ರೋಶ, ಶಾಸಕ ಕಿರಣ್ ಕೊಡ್ಗಿ ೫೦ ಕೋಟಿ ನಿಧಿ ಎಲ್ಲಿ ಹೋಯಿತು? – ಜಿಲ್ಲಾಡಳಿತದ ಮೌನಕ್ಕೆ ನ್ಯಾಯ ಸಿಗುವುದೇ…?
ಸಾಲಿಗ್ರಾಮ ಸ.28





ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಬಡ ಹೋಳಿ ಚಿಂತಿ ಬಿಟ್ಟು ಎಂಬ ಪ್ರದೇಶದಲ್ಲಿ ವಾಸವಾಗಿರುವ ಪರಿಶಿಷ್ಟ ಜಾತಿ ಕುಟುಂಬಗಳು, ಮತ್ತು ಇತರ ವರ್ಗದ ಕುಟುಂಬಗಳು ಸ್ವಾತಂತ್ರ್ಯ ಬಂದು ಎಂಟು ದಶಕಗಳಾದರೂ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವುದು ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಸರಿಸುಮಾರು ೮೦ ವರ್ಷಗಳಿಂದ ಇಲ್ಲಿನ ಜನರು ರಸ್ತೆ ಇಲ್ಲದೆ ಯಥಾಸ್ಥಿತಿಯಲ್ಲೇ ಜೀವನ ಸಾಗಿಸುತ್ತಿದ್ದು, ೨೦೨೫ರಂತಹ ಟೆಕ್ನಾಲಜಿ ಯುಗದಲ್ಲೂ ಈ ದುಸ್ಥಿತಿ ಮುಂದುವರಿದಿರುವುದು ತೀವ್ರ ಬೇಸರ ತಂದಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾನವೀಯತೆ ಮರೆತ ವ್ಯವಸ್ಥೆ:
ಸೀರೆಯ ‘ಸ್ಟ್ರೇಚರ್’ ಕಥೆ ಈ ಪ್ರದೇಶದ ಮೂಲಭೂತ ಸಮಸ್ಯೆಯಾದ ರಸ್ತೆ ಕೊರತೆ, ಸ್ಥಳೀಯರ ಜೀವನವನ್ನು ಅಕ್ಷರಶಃ ನರಕ ಮಾಡಿದೆ. ಅತ್ಯಂತ ಕರುಣಾಜನಕ ವಿಚಾರವೆಂದರೆ, ಇಲ್ಲಿನ ಯಾರಾದರೂ ಸಾರ್ವಜನಿಕರಿಗೆ ಆರೋಗ್ಯ ಸಮಸ್ಯೆ ಉಂಟಾದರೆ, ಅವರನ್ನು ಆಸ್ಪತ್ರೆಗೆ ಸಾಗಿಸಲು ಯಾವುದೇ ವಾಹನ ಸೌಕರ್ಯವಿಲ್ಲ. ಬದಲಿಗೆ, ಅಲ್ಲಿನ ಜನರು ರೋಗಿಯನ್ನು ಸೀರೆಯನ್ನು ಎರಡು ಕೋಲುಗಳಿಗೆ ಕಟ್ಟಿ, ಅದರಲ್ಲಿ ಮಲಗಿಸಿ ಎತ್ತಿಕೊಂಡು ಹೋಗುವ ಪರಿಸ್ಥಿತಿ ಇದೆ.”ಇದು ಉಡುಪಿ ಜಿಲ್ಲೆಯ ಆಡಳಿತ ಮತ್ತು ರಾಜಕೀಯ ವ್ಯವಸ್ಥೆಯು ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ” ಎಂದು ಸ್ಥಳೀಯರು ಕಣ್ಣೀರಾಗಿದ್ದಾರೆ.

ನೆರೆ ಆತಂಕ ಮತ್ತು ಮಕ್ಕಳ ಶಿಕ್ಷಣಕ್ಕೆ ಕುತ್ತು:
ಮಳೆಗಾಲದಲ್ಲಿ ಈ ಹೋಳಿಯ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ. ಮಳೆಯ ಅಬ್ಬರ ಹೆಚ್ಚಾದರೆ ನೆರೆ ನೀರಿನಿಂದ ಮನೆಗಳು ಮುಳುಗಡೆಯಾಗುತ್ತವೆ. ಅಡುಗೆ ಮನೆಗೆ ನೀರು ನುಗ್ಗಿ ಜೀವನ ದುಸ್ತರವಾಗುತ್ತದೆ. ಸ್ಥಳೀಯರು “ನಾವು ಕೋಳಿ ಕುರಿಯಂತಹ ಪ್ರಾಣಿಗಳನ್ನು ಸಾಕಾಣಿಕೆ ಮಾಡುತ್ತಿಲ್ಲ” ಎಂದು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ರಸ್ತೆ ಮತ್ತು ಸುರಕ್ಷತೆಯ ಕೊರತೆಯಿಂದಾಗಿ, ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸದೆ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದು, ಇಡೀ ಪೀಳಿಗೆಯ ಭವಿಷ್ಯವೇ ಕತ್ತಲೆಯಾಗುವ ಭೀತಿ ಎದುರಾಗಿದೆ.ರಾಜಕೀಯ ನಾಯಕತ್ವದ ಮೇಲೆ ನೇರ ಪ್ರಶ್ನೆಗಳುಈ ದುರಂತಕ್ಕೆ ಕಾರಣ ಯಾರು ಎಂಬ ಪ್ರಶ್ನೆ ಇದೀಗ ರಾಜಕೀಯ ವಲಯದತ್ತ ತಿರುಗಿದೆ.
ಉಸ್ತುವಾರಿಯ ವಿರುದ್ಧ ನೇರ ಪ್ರಶ್ನೆಗಳು:
“ನಮ್ಮ ಜಿಲ್ಲೆಯಲ್ಲಿ ಇಂತಹ ಉಸ್ತುವಾರಿ ಸಚಿವರು ಬೇಕೆ? ಉಡುಪಿ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರಾಗಿ ಅವರು ಇದ್ದು ಏನು ಪ್ರಯೋಜನ? ನಮ್ಮ ಜಿಲ್ಲೆಗೆ ಇಂಥ ಉಸ್ತುವಾರಿಗಳ ಅಗತ್ಯವು ಇದೆಯೇ?” ಎಂದು ಸಾರ್ವಜನಿಕರು ನೇರವಾಗಿ ಪ್ರಶ್ನೆ ಮಾಡಿದ್ದಾರೆ. ಸಚಿವರು ಜಿಲ್ಲೆಗೆ ಭೇಟಿ ಕೊಟ್ಟರೂ, ಇಂತಹ ಸಂಕಷ್ಟದ ಬಗ್ಗೆ ಪ್ರಶ್ನೆ ಮಾಡದೆ, ತನ್ನ ಪಾಡಿಗೆ ತಾನು ಹೋಗುತ್ತಾ ಇರುವುದು ನೋಡಿದರೆ ಯಾವುದೇ ರೀತಿಯ ಅಭಿವೃದ್ಧಿಗಳು ಆಗದೆ ಹಾಗೆ ಉಳಿದಿರುವ ಅದೆಷ್ಟೋ ನಿದರ್ಶನಗಳಿವೆ.

ಶಾಸಕರ ನಿಧಿ ಎಲ್ಲಿ?: ಜಿಲ್ಲೆಯಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವುದು ಕೂಡ ಒಂದು ದೊಡ್ಡ ಸಮಸ್ಯೆ ಆಗಿದ್ದು, ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕಾದಂತಹ ಅಧಿಕಾರಿಗಳು ನೆರೆ ಹಾವಳಿಯಿಂದಾಗಿ ಪರಿಸ್ಥಿತಿ ಬಿಗಡಾಯಿಸಿದರೂ, ಎಚ್ಚೆತ್ತುಕೊಂಡು ರಸ್ತೆಗಳನ್ನು ನಿರ್ಮಾಣ ಮಾಡಿಕೊಡಬೇಕು ಎಂಬ ಪರಿಜ್ಞಾನ ಇಲ್ಲ ಎಂದರೆ, ಜಿಲ್ಲಾ ವ್ಯವಸ್ಥೆಯನ್ನು ಶಾಸಕರಾದ ಕಿರಣ್ ಕೊಡ್ಗಿ ಎತ್ತಕಡೆ ಸಾಗಿಸುತ್ತಿದ್ದಾರೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ. “ಈ ವಿಚಾರ ಉಸ್ತುವಾರಿ ಗಮನಕ್ಕೆ ತಂದಿದ್ದರೆಯೇ? ಶಾಸಕರ ೫೦ ಕೋಟಿ ಶಾಸಕ ನಿಧಿ ಎಲ್ಲಿ ಹೋಯಿತು? ಅದರಲ್ಲಿ ಈ ಕಾಮಗಾರಿ ಮಾಡದೆ ಜನನ್ನು ಮೂರ್ಖರನ್ನಾಗಿ ಮಾಡಿದ್ದಾರೆಯೇ? ಅನ್ನೋದೇ ಬೇಸರದ ವಿಚಾರವಾಗಿದೆ. ರಾಜಕೀಯ ವ್ಯವಸ್ಥೆ ಯಾವ ಕಡೆ ನಿಮ್ಮ ನಡೆ?” ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.
ಜವಾಬ್ದಾರಿಗಳ ಸಮರ ಮತ್ತು ಪ್ರತಿಭಟನೆಯ ಎಚ್ಚರಿಕೆಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ದಲಿತ ದಮನಿತರ ಸಾವು ನೋವುಗಳು ಈ ರಸ್ತೆಗಳು ಇಲ್ಲದೆ ಅನುಭವಿಸುತ್ತಿದ್ದೇವೆ ಎಂದರೆ ನಮ್ಮ ನೋವನ್ನು ಯಾರ ಹತ್ತಿರ ಹೇಳಿಕೊಳ್ಳಲಿ ಅನ್ನೋದೇ ಯಕ್ಷಪ್ರಶ್ನೆಯಾಗಿ ಉಳಿದಿದೆ.

ಸಮಾಜ ಕಲ್ಯಾಣ ಇಲಾಖೆಯ ನಿರ್ಲಕ್ಷ್ಯ: ಈ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಬೇಕಾದ ಜಿಲ್ಲಾಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆಗಳು ಸಂಪೂರ್ಣ ನಿರ್ಲಕ್ಷ್ಯ ತಾಳಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಪರಿಶಿಷ್ಟ ಜಾತಿಯ ಕುಟುಂಬಗಳ ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವ ಸಮಾಜ ಕಲ್ಯಾಣ ಇಲಾಖೆಯೂ ಕೂಡ ತನ್ನ ನಿರ್ಲಕ್ಷ್ಯವನ್ನು ಎತ್ತಿ ತೋರಿಸಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ಯಾರ ತಪ್ಪು?: ಇಲ್ಲಿನ ಸಾರ್ವಜನಿಕರ ನೋವಿಗೆ “ತಪ್ಪು ಯಾರದ್ದು? ಶಾಸಕರದ್ದೋ? ಅಥವಾ ಉಸ್ತುವಾರಿ ಸಚಿವರದ್ದೋ? ಅಥವಾ ಅಧಿಕಾರಿಗಳದ್ದೋ?” ಅನ್ನುವ ಚರ್ಚೆಯಾಗಿದ್ದು, ಅಲ್ಲಿನ ಸಾರ್ವಜನಿಕರಿಗೆ ನ್ಯಾಯ ಸಿಗಲಿ ಎಂದಿದ್ದಾರೆ.
ಈ ಕಣ್ಣೀರಿನ ಕಥೆ ಕೇವಲ ವೈಯಕ್ತಿಕ ವ್ಯಥೆಯಾಗಿ ಉಳಿದಿದೆ. ಮಾಧ್ಯಮಕ್ಕೆ ಹೇಳಿಕೆಯನ್ನು ನೀಡಿರುವ ಸ್ಥಳೀಯರು, “ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಇದೇ ವಿಚಾರವಾಗಿ ರಾಜಕೀಯ ವ್ಯವಸ್ಥೆ ಹಾಗು ಜಿಲ್ಲಾಡಳಿತದ ವ್ಯವಸ್ಥೆ ವಿರುದ್ಧ ಬೃಹತ್ ಪ್ರತಿಭಟನೆ ಮಾಡಲಾಗುವುದು” ಎಂದು ಈ ಮೂಲಕ ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾಡಳಿತವು ತಕ್ಷಣವೇ ಈ ಸಮಸ್ಯೆಗೆ ಸ್ಪಂದಿಸಿ, ಬಡ ಹೋಳಿ ಇಂತಿ ಬಿಟ್ಟು ಪ್ರದೇಶದ ಜನರಿಗೆ ರಸ್ತೆಯಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸಿ, ಮಾನವೀಯ ನೆಲೆಗಟ್ಟಿನಲ್ಲಿ ನ್ಯಾಯ ಒದಗಿಸಬೇಕಿದೆ.
ವರದಿ:ಆರತಿ.ಗಿಳಿಯಾರು.ಉಡುಪಿ