ಜಾತಿ ಜನಗಣತಿಯಲ್ಲಿ ‘ಬೌದ್ಧ’ ಮತ್ತು ‘ಶೈವ’ ಧರ್ಮಗಳ ನಮೂದಿಗೆ ಆಗ್ರಹ – ಕಾನೂನಾತ್ಮಕ ನೆಲೆಯಲ್ಲಿ ಚರ್ಚೆ.

ಉಡುಪಿ/ಬೆಂಗಳೂರು ಸ.29

ಕರ್ನಾಟಕ ಸರ್ಕಾರವು ನಡೆಸುತ್ತಿರುವ ಹಿಂದುಳಿದ ವರ್ಗಗಳ ಆಯೋಗದ **ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ (ಜಾತಿ ಜನಗಣತಿ)**ಯ ಸಂದರ್ಭದಲ್ಲಿ, ಧರ್ಮದ ಕಾಲಂನಲ್ಲಿ ಬೌದ್ಧ ಧರ್ಮ ಮತ್ತು ಶೈವ ಧರ್ಮಗಳನ್ನು ಪ್ರತ್ಯೇಕವಾಗಿ ನಮೂದಿಸಬೇಕೆಂಬ ಅಭಿಪ್ರಾಯವು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸಾರ್ವಜನಿಕ ವಲಯಗಳಲ್ಲಿ ಭಾರೀ ಚರ್ಚೆಗೆ ಒಳಗಾಗಿದೆ. ಇದು ಕೇವಲ ಧಾರ್ಮಿಕ ಚರ್ಚೆಯಾಗದೆ, ಸಂವಿಧಾನ ಮತ್ತು ಕಾನೂನಾತ್ಮಕ ಹಕ್ಕುಗಳ ನೆಲೆಯಲ್ಲಿ ಮಹತ್ವ ಪಡೆದಿದೆ.

ಸಮಾನತೆ ಮತ್ತು ಮೂಲ ಧರ್ಮಗಳ ವಾದ:

ದೇಶದ ಮೂಲ ನಿವಾಸಿಗಳ ಧರ್ಮ ಹಾಗೂ ಯಾವುದೇ ಧರ್ಮಗಳು ಹುಟ್ಟುವ ಮೊದಲು ಇದ್ದ ಮೂಲ ಧರ್ಮವಾದ ಶೈವ ಧರ್ಮದ ಕವಲುಗಳಾದ ಅಹಿಂಸೆ ಮತ್ತು ಸಮಾನತೆಯ ಬೌದ್ಧ ಧರ್ಮ ಭಾರತೀಯ ಸನಾತನ ಧರ್ಮಗಳ ಉಳಿವಿಗೆ ಕಾರಣ ಎಂಬ ವಾದ ಚಾಲ್ತಿಯಲ್ಲಿದೆ.ಅಂಬೇಡ್ಕರ್ ಆಶಯ: ಡಾ. ಬಿ.ಆರ್. ಅಂಬೇಡ್ಕರ್ ಅವರು ಈ ದೇಶದ ಮೂಲ ಧರ್ಮವಾದ ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಅವರ ಆಶಯದಂತೆ, ಜಾತಿ ಜನಗಣತಿಯಲ್ಲಿ ಬೌದ್ಧ ಮತ್ತು ಶೈವ ಧರ್ಮಗಳು ಎಂದು ಸ್ಪಷ್ಟವಾಗಿ ನಮೂದಿಸಬೇಕು ಎಂದು ಹಲವರು ಆಗ್ರಹಿಸುತ್ತಿದ್ದಾರೆ. ಸಂವಿಧಾನದಡಿ ಪ್ರತಿಯೊಬ್ಬರಿಗೂ ತಮ್ಮ ಧರ್ಮವನ್ನು ನಮೂದಿಸುವ ಸ್ವಾತಂತ್ರ್ಯ ಇರುವುದರಿಂದ, ಸಮೀಕ್ಷೆಯಲ್ಲಿ ಈ ಧರ್ಮಗಳಿಗೆ ಪ್ರತ್ಯೇಕ ಮಾನ್ಯತೆ ಸಿಗಬೇಕು ಎಂಬುದು ಅವರ ವಾದವಾಗಿದೆ.

ಸಮೀಕ್ಷೆಯಲ್ಲಿ ಬೌದ್ಧ ಧರ್ಮ ನಮೂದಿಸಲು ಕರೆ:

ಇದೇ ತಿಂಗಳು (22 ರಿಂದ) ಆರಂಭವಾಗಿರುವ ಕರ್ನಾಟಕ ಸರ್ಕಾರದ ಸಮೀಕ್ಷೆಯ ಸಂದರ್ಭದಲ್ಲಿ, ಸಮೀಕ್ಷೆಗೆ ಒಳಪಡುವವರು ಬಾಬಾಸಾಹೇಬರ ಐತಿಹಾಸಿಕ ನಿರ್ಧಾರವನ್ನು ಗೌರವಿಸಿ ಬೌದ್ಧ ಧರ್ಮವನ್ನು ನಮೂದಿಸುವಂತೆ ಕಟ್ಟುನಿಟ್ಟಿನ ಕರೆ ನೀಡಲಾಗಿದೆ. ಧರ್ಮದ ಕಾಲಂ (ನಂ. 08): ಸ್ಪಷ್ಟವಾಗಿ “ಬೌದ್ಧ” ಎಂದು ನಮೂದಿಸಲು ಸೂಚಿಸಲಾಗಿದೆ. ಉಪಜಾತಿ ಕಾಲಂ (ನಂ. 09): “ಪರಿಶಿಷ್ಟ ಜಾತಿ” ಎಂದು ಬರೆಸಬೇಕು. ಉಪಜಾತಿ ಕಾಲಂ (ನಂ. B. 044.1): ತಮ್ಮ ತಮ್ಮ ಉಪಜಾತಿಯನ್ನು ನಮೂದಿಸಲು ಕೋರಲಾಗಿದೆ.ಕಾನೂನಾತ್ಮಕ ಮತ್ತು ಐತಿಹಾಸಿಕ ಹಿನ್ನೆಲೆಈ ಕರೆಯ ಹಿಂದೆ ಡಾ. ಅಂಬೇಡ್ಕರ್ ಅವರ 1956ರ ಅಕ್ಟೋಬರ್ 14ರ ಐತಿಹಾಸಿಕ ನಿರ್ಧಾರದ ಪ್ರಬಲ ಹಿನ್ನೆಲೆಯಿದೆ. “ಅಸಮಾನತೆಯಿಂದ ಕೂಡಿದ, ಮನುಷ್ಯರನ್ನು ಮನುಷ್ಯರಂತೆ ಕಾಣದ ‘ಹಿಂದೂವಾಗಿ ಸಾಯಲಾರೆ'” ಎಂದು ಘೋಷಿಸಿ ಅವರು ಬೌದ್ಧ ಧರ್ಮವನ್ನು ಸ್ವೀಕರಿಸಿದರು.

ಕಾನೂನಾತ್ಮಕ ಮಹತ್ವ:

ಜಾತಿ ಜನಗಣತಿಯು ಕೇವಲ ಅಂಕಿ-ಅಂಶಗಳನ್ನು ಸಂಗ್ರಹಿಸುವುದಲ್ಲದೆ, ಸರ್ಕಾರದ ಕಲ್ಯಾಣ ಯೋಜನೆಗಳು ಮತ್ತು ಮೀಸಲಾತಿ ಸೌಲಭ್ಯಗಳನ್ನು ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬೌದ್ಧ ಧರ್ಮವು ಸಂವಿಧಾನಬದ್ಧವಾಗಿ ಪ್ರತ್ಯೇಕ ಧರ್ಮವಾಗಿದ್ದು, ಸಮೀಕ್ಷೆಯಲ್ಲಿ ಅದನ್ನು ಸ್ಪಷ್ಟವಾಗಿ ನಮೂದಿಸುವುದರಿಂದ ಆ ಸಮುದಾಯದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಯ ನಿಖರ ಚಿತ್ರಣ ದೊರೆಯುತ್ತದೆ. ಇದು ಆ ಸಮುದಾಯಕ್ಕೆ ಸಂಬಂಧಿಸಿದ ಕಾನೂನಾತ್ಮಕ ಹಕ್ಕುಗಳು ಮತ್ತು ಯೋಜನೆಗಳನ್ನು ರೂಪಿಸಲು ಅಗತ್ಯವಾಗಿದೆ ಎಂದು ಹಲವಾರು ತಿಳಿಸಿದ್ದಾರೆ.

ಸಮಾನತೆ ಮತ್ತು ಅಹಿಂಸೆಯ ತತ್ವವನ್ನು ಪ್ರತಿಪಾದಿಸುವ ಬೌದ್ಧ ಧರ್ಮವನ್ನು ಜಾತಿ ಜನಗಣತಿಯಲ್ಲಿ ಅಧಿಕೃತವಾಗಿ ಮತ್ತು ಸ್ಪಷ್ಟವಾಗಿ ನಮೂದಿಸುವಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಒತ್ತಡ ಹೆಚ್ಚಿದ.ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ: ವಿಭಿನ್ನ ನಿಲುವುಗಳುಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ ಮಾಡುತ್ತಿರುವವರಲ್ಲಿ ಒಮ್ಮತವಿದೆ. ಆದರೆ “ವೀರಶೈವ-ಲಿಂಗಾಯತ ಬೇರೆಬೇರೆಯಲ್ಲ” ಎಂದು ಪ್ರತಿಪಾದಿಸುವವರು ‘ಧರ್ಮ’ದ ಕಾಲಂ ಬಗ್ಗೆ ತರಹೇವಾರಿ ಹೇಳಿಕೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ನಡೆಸುತ್ತಿರುವ ಸಮಗ್ರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಲಿಂಗಾಯತ ಧರ್ಮದ ವಿಚಾರವನ್ನು ಮತ್ತೆ ಮುನ್ನೆಲೆಗೆ ತಂದಿದೆ. ಸಮೀಕ್ಷೆಗೆ ಬಂದಾಗ ಧರ್ಮದ ಕಾಲಂನಲ್ಲಿ ಯಾವುದನ್ನು ಬರೆಸಬೇಕು? ಲಿಂಗಾಯತ, ವೀರಶೈವ ಲಿಂಗಾಯತ, ಹಿಂದೂ- ಈ ಮೂರರಲ್ಲಿ ಯಾವುದಿರಬೇಕೆಂಬುದು ಚರ್ಚೆ ಹುಟ್ಟುಹಾಕಿದೆ.ಧರ್ಮದ ಕಾಲಂನಲ್ಲಿ ಅಧಿಕೃತವಾಗಿ ‘ಲಿಂಗಾಯತ’ ಮತ್ತು ‘ವೀರಶೈವ ಲಿಂಗಾಯತ’ ಹೆಸರುಗಳಿಲ್ಲ. ಆದರೆ ‘ಇತರೆ’ ಎಂಬ ಆಯ್ಕೆಯನ್ನು ಕೊಡಲಾಗಿದೆ. ಹೀಗಾಗಿ ಲಿಂಗಾಯತ ಧರ್ಮ ಅನುಯಾಯಿಗಳು ‘ಲಿಂಗಾಯತ’ ಎಂದು ಬರೆಸುವಂತೆ ಪ್ರಚಾರ ಮಾಡುತ್ತಿದ್ದಾರೆ.

ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ ಮಾಡುತ್ತಿರುವವರಲ್ಲಿ ಒಮ್ಮತವಿದೆ. ಆದರೆ “ವೀರಶೈವ-ಲಿಂಗಾಯತ ಬೇರೆಬೇರೆಯಲ್ಲ” ಎಂದು ಪ್ರತಿಪಾದಿಸುವವರು ‘ಧರ್ಮ’ದ ಕಾಲಂ ಬಗ್ಗೆ ತರಹೇವಾರಿ ಹೇಳಿಕೆ ನೀಡಿದ್ದಾರೆ.“ಧರ್ಮದ ಕಾಲಂನಲ್ಲಿ ವೀರಶೈವ ಲಿಂಗಾಯತರು ಹಿಂದೂ ಎಂದು ಬರೆಸಬಾರದು. ವೀರಶೈವ ಲಿಂಗಾಯತರೆಂದೇ ದಾಖಲಿಸಬೇಕು” ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕರೆ ನೀಡಿದೆ.

ಮಹಾಸಭಾದ ಕಾರ್ಯದರ್ಶಿ ಎಚ್.ಎಂ.ರೇಣುಕ ಪ್ರಸನ್ನ, “ಗಣತಿ ವೇಳೆ ಧರ್ಮದ ಕಾಲಂನಲ್ಲಿ ವೀರಶೈವ ಲಿಂಗಾಯತ ಧರ್ಮವೆಂದು ಬರೆಸಲು ಕರೆ ನೀಡಲಾಗಿದೆ. ಜಾತಿ ಕಾಲಂನಲ್ಲಿ ವೀರಶೈವ ಅಥವಾ ಲಿಂಗಾಯತ ಎಂದೂ, ಉಪ ಜಾತಿ ಕಾಲಂಗಳಲ್ಲಿ ಸಮುದಾಯದವರು ಯಾವ ಒಳ ಪಂಗಡಕ್ಕೆ ಸೇರಿದ್ದಾರೋ ಆ ಉಪ ಜಾತಿ ಬರೆಸುವಂತೆ ಅಖಿಲ ಭಾರತ ವೀರಶೈವ ಮಹಾಸಭಾದ ವತಿಯಿಂದ ಸಮುದಾಯದವರಿಗೆ ಸೂಚನೆ ನೀಡಲಾಗಿದೆ” ಎಂದು ಹೇಳಿಕೆ ನೀಡಿದ್ದಾರೆ.

“ಸಂವಿಧಾನದ ಕಲಂ 25ರ ಅಡಿ ಪ್ರತಿಯೊಬ್ಬರಿಗೂ ತಮ್ಮದೇ ಧರ್ಮವನ್ನು ಹೊಂದುವ ಹಕ್ಕಿದೆ. ಅದರಂತೆ ವೀರಶೈವ ಲಿಂಗಾಯತ ಸಮುದಾಯವೂ ಜೈನ, ಬೌದ್ಧ, ಸಿಖ್ ಸಮುದಾಯಗಳಂತೆ ಪ್ರತ್ಯೇಕ ಧರ್ಮ ಹೊಂದುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದೆ. ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ನೀಡುವ ಕುರಿತು ಕೇಂದ್ರ ಸರ್ಕಾರಕ್ಕೆ ಅಗತ್ಯ ಮಾಹಿತಿ ನೀಡಲಾಗಿದೆ. ಅಖಿಲ ಭಾರತ ವೀರಶೈವ ಮಹಾಸಭಾದ ನಿರ್ಣಯಗಳನ್ನು, ಸಮುದಾಯದ ಜನಪ್ರತಿನಿಧಿಗಳ ಸಮ್ಮತಿಯನ್ನೂ ಕಳುಹಿಸಲಾಗಿದೆ” ಎಂದು ತಿಳಿಸಿದ್ದಾರೆ.

ಆದರೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ್ ಬಿದರಿ, ಕಾನೂನಾತ್ಮಕ ಮಾನ್ಯತೆಯ ಕುರಿತು ಮಾತನಾಡಿದ್ದಾರೆ. “ವೀರಶೈವ ಮತ್ತು ಲಿಂಗಾಯತ ಸಮಾನಾರ್ಥಕ ಪದಗಳಾಗಿದ್ದು, ಕೇಂದ್ರ ಸರ್ಕಾರದ ಪ್ರತ್ಯೇಕ ಮಾನ್ಯತೆ ದೊರೆಯದ ಕಾರಣಕ್ಕೆ ವೀರಶೈವ ಲಿಂಗಾಯತ ಜನಾಂಗವು ಕಾನೂನು ದೃಷ್ಟಿಯಿಂದ ಈಗಲೂ ಹಿಂದೂ ಧರ್ಮದ ಭಾಗವಾಗಿದೆ. ಆದರೆ ವೀರಶೈವ ಲಿಂಗಾಯತವು ನಿಶ್ಚಿತವಾಗಿ ಒಂದು ಜಾತಿಯಲ್ಲ. ಬದಲಾಗಿ ಹಿಂದೂ ಧರ್ಮದ ಒಂದು ಪತ್ಯೇಕ ಸಂಪ್ರದಾಯ ಅಥವಾ ಪಂಥ ಅಥವಾ ಪರಂಪರೆ ಎಂದು ಪರಿಗಣಿಸಬೇಕಾಗುತ್ತದೆ” ಎಂದು ಅಭಿಪ್ರಾಯ ತಾಳಿದ್ದಾರೆ.

ಜಾತಿ ಸಮೀಕ್ಷೆ;

ಜಾಗೃತವಾಗಿದ್ದಾರೆಯೇ ಒಬಿಸಿಗಳು?ಧರ್ಮದ ವಿಚಾರವಾಗಿ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುತ್ತಿರುವ ಸಂಬಂಧ ‘ಈದಿನ ಡಾಟ್ ಕಾಮ್‌’ಗೆ ಪ್ರತಿಕ್ರಿಯಿಸಿರುವ ಶಂಕರ್ ಬಿದರಿ, “ಮಹಾಸಭಾದ ರಾಷ್ಟ್ರೀಯ ಘಟಕ ತಾಳುವ ನಿಲುವಿಗೆ ಬದ್ಧ. ರೇಣುಕ ಪ್ರಸನ್ನ ಅವರು ರಾಷ್ಟ್ರೀಯ ಘಟಕದ ಪ್ರತಿನಿಧಿಯೂ ಆಗಿರುವುದರಿಂದ ಅವರ ಹೇಳಿಕೆಯನ್ನೇ ಅಧಿಕೃತವೆಂದು ಭಾವಿಸಿ” ಎಂದರು. “ವೀರಶೈವ ಲಿಂಗಾಯತರು ಕಾನೂನಾತ್ಮಕವಾಗಿ ಹಿಂದೂ ಧರ್ಮದ ಭಾಗ” ಎಂಬ ತಮ್ಮ ಹೇಳಿಕೆಯನ್ನು ಸಮರ್ಥಿಸಿದ ಅವರು, “ಇದು ಎಲ್ಲರಿಗೂ ಗೊತ್ತಿರುವ ವಿಷಯ. ವಿವೇಚನೆ ಪ್ರಕಾರ ಧರ್ಮವನ್ನು ಬರೆಯಿಸಿ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಅಂದರೆ ಧರ್ಮದ ಕಾಲಂನಲ್ಲಿ ಹಿಂದೂ ಅಂತ ಬರೆಸಬಹುದು. ಆದರೆ ನನ್ನ ವೈಯಕ್ತಿಕ ಅಭಿಪ್ರಾಯ ಹೇಳಲಾರೆ” ಎಂದು ಸ್ಪಷ್ಟಪಡಿಸಿದರು.

ಯಾರ್ಯಾರು ಏನೇನು ಹೇಳಿದ್ದಾರೆ?

ವಚನಾನಂದ ಸ್ವಾಮೀಜಿ (ಹರಿಹರ ಪಂಚಮಸಾಲಿ ಪೀಠ): “ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಎಂದು ಬರೆಸಬೇಕು.” ಅರವಿಂದ ಬೆಲ್ಲದ (ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ): “ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯ ಧರ್ಮದ ಕಾಲಂನಲ್ಲಿ ಹಿಂದೂ ಎಂದೇ ಬರೆಸಬೇಕು… ಇವೆಲ್ಲ ರಾಜಕೀಯ ಪ್ರೇರಿತ ಹೇಳಿಕೆಗಳು… ಬಸವಣ್ಣ ಮೌಢ್ಯದ ಬಗ್ಗೆ ಹೇಳಿದ್ದಾರೆಯೇ ಹೊರತು, ಹಿಂದೂ ಧರ್ಮ ಬೇಡ ಎಂದು ಎಲ್ಲಿಯೂ ಹೇಳಿಲ್ಲ. ಎಡಪಂಥೀಯರ ಟೂಲ್‌ಕಿಟ್‌ನಿಂದ ಸಮಾಜವನ್ನು ದಾರಿ ತಪ್ಪಿಸಲಾಗುತ್ತಿದೆ.

ಮುಖ್ಯಮಂತ್ರಿ ಖುರ್ಚಿ ಭದ್ರಪಡಿಸಿ ಕೊಳ್ಳಲು ಸಿದ್ದರಾಮಯ್ಯ ಅವರು ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದ್ದಾರೆ. ಆ ಮೂಲಕ ಹಿಂದೂ ಸಮಾಜವನ್ನು ಒಡೆದು, ಹೈಕಮಾಂಡ್‌ ಮನವೊಲಿಸಲು ಯತ್ನಿಸುತ್ತಿದ್ದಾರೆ.” ಎಂದು ಆರೋಪಿಸಿದ್ದಾರೆ.

ವೀರಭದ್ರಚನ್ನಮಲ್ಲ ದೇಶೀಕೇಂದ್ರ ಸ್ವಾಮೀಜಿ (ನಿಡುಮಾಮಿಡಿ ಮಠ): “ಜಾತಿಗಣತಿ ಸಮೀಕ್ಷೆಯ ಧರ್ಮದ ಕಾಲಂನಲ್ಲಿ ವೀರಶೈವರು ಲಿಂಗಾಯತರು ಏನನ್ನೂ ಬರೆಸದೆ ಖಾಲಿ ಬಿಡಬೇಕು. ಜಾತಿ ಹಾಗೂ ಉಪಜಾತಿ ಕಾಲಂನಲ್ಲಿ ತಮ್ಮ ತಮ್ಮ ಜಾತಿ ಉಪಜಾತಿಯನ್ನು ಮಾತ್ರ ಬರೆಸಬೇಕು… ಯಾಕೆಂದರೆ ವೀರಶೈವ ಅಥವಾ ಲಿಂಗಾಯತ ಎನ್ನುವುದು ಧರ್ಮವೇ ವಿನಾ ಜಾತಿಯಲ್ಲ.”‘ಲಿಂಗಾಯತ’ ಪರ ಒಮ್ಮತಲಿಂಗಾಯತ ಮಠಾಧೀಶರ ಒಕ್ಕೂಟವು ತಮ್ಮ ನಿಲುವನ್ನು ಸ್ಪಷ್ಟವಾಗಿ ತಿಳಿಸಿದೆ. “ಲಿಂಗಾಯತ ಸಮುದಾಯವರು ಧರ್ಮದ ಕಾಲಂನಲ್ಲಿ ‘ಹಿಂದೂ’ ಎಂದು ಬರೆಸಬಾರದು. ‘ಲಿಂಗಾಯತ’ ಎಂದು ಬರೆಸಿಕೊಳ್ಳಬೇಕು” ಎಂದು ಒತ್ತಾಯಿಸಿದೆ.

ಒಕ್ಕೂಟದ ಅಧ್ಯಕ್ಷರಾದ ಡಾ.ಬಸವಲಿಂಗ ಪಟ್ಟದೇವರು, “ಲಿಂಗಾಯತವು ಪ್ರತ್ಯೇಕ ಸ್ವತಂತ್ರ ಧರ್ಮವಾದರು, ಅದರೊಳಗೆ 97 ಬೇರೆ ಬೇರೆ ಹೆಸರಿನ ಜಾತಿ(ಒಳಪಂಗಡ)ಗಳಿವೆ. ಈವರೆಗೆ ನಡೆದ ಜನಗಣತಿಗಳಲ್ಲಿ ಬಹುತೇಕ ಲಿಂಗಾಯತರು ತಮ್ಮ ಧರ್ಮವನ್ನು ‘ಹಿಂದೂ’ ಎಂದು ಬರೆಸಿದ್ದು ಕಂಡು ಬರುತ್ತದೆ. ಅದು ತಮ್ಮ ಧರ್ಮದ ಬಗ್ಗೆ ಲಿಂಗಾಯತರಲ್ಲಿದ್ದ ಅರಿವಿನ ಕೊರತೆಯ ಸಂಕೇತವಾಗಿದೆ” ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿರಿ:

ಹೆಣ ಮುಂದಿಟ್ಟುಕೊಂಡು ಹಣ ಮಾಡುವ ಪತ್ರಿಕೋದ್ಯಮದ ಒಂದು ಸ್ಯಾಂಪಲ್“ಜನಗಣತಿಯಲ್ಲಿ ಕೆಲವು ಲಿಂಗಾಯತ ವಿರೋಧಿ ಸಂಸ್ಥೆಗಳು, ಎಲ್ಲ ಲಿಂಗಾಯತರು ಹಿಂದೂ ಎಂದು ಬರೆಸಬೇಕೆಂದು ಹೇಳುತ್ತಾ, ಲಿಂಗಾಯತರನ್ನು ದಾರಿ ತಪ್ಪಿಸುತ್ತಿವೆ. 2023 ರ ಡಿಸೆಂಬರ್‌ನಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯು ಲಿಂಗಾಯತರು ಹಿಂದೂಗಳಲ್ಲವೆಂದು ಸ್ಪಷ್ಟವಾಗಿ ನಿರ್ಣಯ ಮಾಡಿದೆ. ಜಾತಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರ 2002ರಲ್ಲಿ ಹೊರಡಿಸಿದ ಆದೇಶದಲ್ಲಿ ಅನ್ಯಾಯವಾಗಿ ಸತ್ಯಕ್ಕೆ ವಿರುದ್ಧವಾಗಿ ಕೆಲವು ಗುಂಪುಗಳ ಒತ್ತಡಕ್ಕೆ ಮಣಿದು ಲಿಂಗಾಯತರನ್ನು ‘ವೀರಶೈವ ಲಿಂಗಾಯತ’ರೆಂದು ಅಧಿಸೂಚನೆ ಹೊರಡಿಸಿದ್ದು ತಪ್ಪಾಗಿದೆ” ಎಂದಿದ್ದಾರೆ.

“ಲಿಂಗಾಯತದಲ್ಲಿರುವ 97 ಉಪಜಾತಿಗಳಲ್ಲಿ ವೀರಶೈವ ಒಂದು ಜಾತಿ ಮಾತ್ರ. ಲಿಂಗಾಯತದಲ್ಲಿ ವೀರಶೈವವಿದೆ. ಆದರೆ ವೀರಶೈವದಲ್ಲಿ ಲಿಂಗಾಯತವಿಲ್ಲ. ಆದುದರಿಂದ ‘ವೀರಶೈವj ಲಿಂಗಾಯತ’ ಎನ್ನುವುದು ಸಂಪೂರ್ಣವಾಗಿ ತಪ್ಪು. ಇದೇ ತಪ್ಪನ್ನು ಅಖಿಲ ಭಾರತ ವೀರಶೈವ ಮಹಾಸಭೆಯು ಮುಂದುವರೆಸುತ್ತಿದೆ. ಇದರಲ್ಲಿ ಆ ಸಂಘಟನೆಗಳ ಪದಾಧಿಕಾರಿಗಳ ರಾಜಕೀಯ ಹಿತಾಸಕ್ತಿ ಅಡಗಿದೆ. ಇಂತಹ ರಾಜಕಾರಣಿಗಳ ಮಾತನ್ನು ಲಿಂಗಾಯತರು ಕೇಳಬಾರದು” ಎಂದು ಎಚ್ಚರಿಸಿದ್ದಾರೆ.

ತೋಂಟದ ಸಿದ್ದರಾಮ ಸ್ವಾಮೀಜಿಯವರ ಅಭಿಪ್ರಾಯವೂ ಇದೇ ಆಗಿದೆ. “ತರಾತುರಿಯಲ್ಲಿ ನಡೆಯುತ್ತಿರುವ ಈ ಸಮೀಕ್ಷೆಯಿಂದಾಗಿ ಜನರಲ್ಲಿ, ವಿಶೇಷವಾಗಿ ಲಿಂಗಾಯತರಲ್ಲಿ ಸಾಕಷ್ಟು ಗೊಂದಲಗಳು ಉಂಟಾಗಿವೆ’ ಎಂದಿರುವ ಅವರು, “ಸಂವಿಧಾನದ ಕಲಂ 25ರ ಪ್ರಕಾರ ದೇಶದಲ್ಲಿ ಪ್ರಚಲಿತದಲ್ಲಿರುವ ಎಲ್ಲ ಧರ್ಮಗಳನ್ನು ಮಾನ್ಯ ಮಾಡಬೇಕಾಗಿರುವುದು ಸರ್ಕಾರದ ಕರ್ತವ್ಯ. ಈ ಕಾರಣಕ್ಕಾಗಿಯೇ ಜನಗಣತಿ ಅರ್ಜಿಯ ಎಂಟನೇ ಕಾಲಂನ 11ನೇ ಉಪಕಾಲಂನಲ್ಲಿ ‘ಇತರೆ’ ಎಂದು ಪ್ರತ್ಯೇಕ ಕಾಲಂ ಮೀಸಲಾಗಿರಿಸಿದೆ. ಇಲ್ಲಿ ‘ಲಿಂಗಾಯತ ಧರ್ಮ’ ಎಂದು ಬರೆಯಲು ಗಣತಿದಾರರಿಗೆ ಸೂಚಿಸಬೇಕು. ಹಾಗೆಯೇ ಅವರು ಬರೆದುಕೊಂಡಿರುವುದನ್ನು ಖಚಿತಪಡಿಸಿಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

ಲಿಂಗಾಯತ ಧರ್ಮ ಪ್ರತಿಪಾದಕರಾಗಿರುವ ಮಹಾಂತ ದೇವರು, ಬೆಳ್ಳಿ ಮಠ ಶಿವರುದ್ರ ಸ್ವಾಮೀಜಿ ಬೇಲಿ ಮಠ, ಸಿದ್ದಲಿಂಗ ಮಹಾಸ್ವಾಮೀಜಿ, ಅಲ್ಲಮಪ್ರಭು ಮಹಾಸ್ವಾಮೀಜಿ, ಗಂಗಾಮಾತಾಜಿ, ಬಸವಲಿಂಗ ಸ್ವಾಮಿ, ಚನ್ನಬಸವ ಸ್ವಾಮಿ, ನಂಜುಂಡಸ್ವಾಮಿ, ಸಾಣೆಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಹಲವರ ಅಭಿಮತವೂ ಇದೇ ಆಗಿದೆ.

ಪ್ರತಾಪ್ ಸಿಂಹಗೆ ಎಸ್‌.ಎಂ.ಜಾಮದಾರ್ ತಿರುಗೇಟು: ಕಾನೂನಾತ್ಮಕ ಮತ್ತು ಧಾರ್ಮಿಕ ಚರ್ಚೆ

ಲಿಂಗಾಯತ ಧರ್ಮಕ್ಕಾಗಿ ಹೋರಾಡುತ್ತಿರುವವರು ಧರ್ಮದ ಕಾಲಂ ಬಗ್ಗೆ ಸ್ಪಷ್ಟವಾಗಿದ್ದಾರೆ. ಹೀಗೆಯೇ ಬರೆಯಬೇಕೆಂದು ಒತ್ತಾಯಿಸಿದ್ದಾರೆ. ಸಂಘಪರಿವಾರದ ಭಾಗವಾಗಿರುವ ಬಿಜೆಪಿಗೆ ಈ ಬಿಕ್ಕಟ್ಟನ್ನು ಎದುರಿಸುವುದು ಸವಾಲಿನ ಕೆಲಸ. ಯಾವುದನ್ನು ಬರೆಸಬೇಕೆಂದು ಹೇಳಲಾಗದ ಸಂದಿಗ್ಧತೆಗೆ ಬಿಜೆಪಿಯ ಹಲವು ನಾಯಕರು ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ, ಸ್ವಾಮೀಜಿಗಳ ವಿರುದ್ಧ ನಾಲಗೆ ಹರಿಬಿಟ್ಟಿದ್ದಾರೆ.

“ಪ್ರತ್ಯೇಕ ಧರ್ಮ ಪ್ರತಿಪಾದಿಸುವ ಕಾವಿಧಾರಿಗಳೇ, ನಿಮ್ಮ ದೇವರು ಯಾವುದು ಎಂಬುದನ್ನು ಮೊದಲು ಸ್ಪಷ್ಟಪಡಿಸಿ. ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಹಿಂದೂಗಳ ದೇವರು, ಕ್ರಿಶ್ಚಿಯನ್, ಇಸ್ಲಾಂ ಸೇರಿ ಎಲ್ಲ ಧರ್ಮಗಳಿಗೆ ಒಂದೊಂದು ದೇವರಿದೆ. ಪ್ರತ್ಯೇಕ ಧರ್ಮದ ಬಗ್ಗೆ ಕಾವಿ ಹಾಕಿಕೊಂಡ ನಾಲ್ವರು ಸ್ವಾಮೀಜಿಗಳು ಮಾತನಾಡುತ್ತಿದ್ದಾರೆ. ಬಸವಣ್ಣನ ವಚನಗಳಲ್ಲಿರುವ ಕೂಡಲಸಂಗಮ ಎಂದರೆ ಶಿವ. ಇದು ಹಿಂದೂ ದೇವರು. ಕಾವಿ, ರುದ್ರಾಕ್ಷಿ, ವಿಭೂತಿ ಕೂಡ ಹಿಂದೂ ಧರ್ಮದವು. ಹಾಗಾದರೆ ನಿಮ್ಮದು ಪ್ರತ್ಯೇಕ ಧರ್ಮವಾಗಲು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದ್ದಾರೆ.ಮುಂದುವರಿದು, “ಪ್ರತ್ಯೇಕ ಧರ್ಮ ಪ್ರತಿಪಾದನೆ ವಿವೇಚನಾರಹಿತ ವಿಚಾರ. ಹಿಂದೂ ಧರ್ಮವನ್ನು ಇಲ್ಲಿಯವರೆಗೆ ಒಡೆದದ್ದು ಸಾಕು. ಶಿವ ಹಿಂದೂ ಧರ್ಮದ ಶಕ್ತಿಶಾಲಿ ದೇವರು. ಇದಕ್ಕೆ ಹೊಸ ವ್ಯಾಖ್ಯಾನ ನೀಡಿ ಗೊಂದಲ ಸೃಷ್ಟಿಸಬೇಡಿ. ರಾಜಕೀಯ ಹಿತಾಸಕ್ತಿಗೆ ಧರ್ಮ ಒಡೆಯಬೇಡಿ. ಸಿದ್ದರಾಮಯ್ಯ ಅವರ ಕುತಂತ್ರಕ್ಕೆ ಬಲಿಯಾಗಬೇಡಿ” ಎಂದಿದ್ದಾರೆ.

ಪ್ರತಾಪ್ ಸಿಂಹ ಅವರಿಗೆ ಖಾರವಾಗಿ ಪ್ರತಿಕ್ರಿಯಿಸಿರುವ ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್‌.ಎಂ.ಜಾಮದಾರ್, “ಪ್ರತಾಪ ಅವರೆ, ಕ್ರೈಸ್ತ, ಇಸ್ಲಾಂ ಮತ್ತು ಯಹೂದಿ ಈ ಮೂರೂ ಧಮ೯ಗಳು ಯಹೂದಿ ಧಮ೯ದ ಹಳೆಯ ಬೈಬಲ್ಲಿನ ಜೆನಿಸಿಸ್‌ ಕತೆಯನ್ನು ಸಂಪೂಣ೯ವಾಗಿ ಒಪ್ಪತ್ತವೆ ಎನ್ನುವುದು ನಿಮಗೆ ತಿಳಿದಿರಲೇಬೇಕು. ಇಲ್ಲವಾದರೆ ಮತ್ತೊಮ್ಮೆ ಓದಿಕೊಳ್ಳಿ. ಅಂದ ಮಾತ್ರಕ್ಕೆ ಇಸ್ಲಾಂ ಕೂಡ ಯಹೂದಿ ಧಮ೯ದ ಒಂದು ಶಾಖೆಯೇ? ಹಾಗೆಯೇ, ಕ್ರೈಸ್ತ ಧಮ೯ವೂ ಯಹೂದಿ ಧಮ೯ದ ಮತ್ತೊಂದು ಶಾಖೆಯೇ? ಉತ್ತರಿಸಿ. ನೀವೇನಾದರೂ ಹಾಗೆ ಹೇಳಿದರೆ, ಅವರು ನಿಮ್ಮನ್ನು ಸೂಕ್ತ ಸ್ಥಳಕ್ಕೆ ರವಾನಿಸುತ್ತಾರೆ” ಎಂದು ಕುಟುಕಿದ್ದಾರೆ.

“ಇದೇ ತರಹದ ವಾದವನ್ನು ನಿಮ್ಮ ಪಟಾಲಮ್ಮದವರು ಇತೀಚಿನವರೆಗೂ ಭಾರತದಲ್ಲಿ ಹುಟ್ಟಿ ಬೆಳೆದು ವೈದಿಕ ಧಮ೯ಕ್ಕೆ ಪಯಾ೯ಯವಾಗಿರುವ ಸಿಖ್, ಬೌದ್ಧ ಮತ್ತು ಜೈನ ಧಮ೯ಗಳಿಗೂ ನೀಡುತ್ತಿದ್ದದ್ದನ್ನು ಯಾರೂ ಮರೆತಿಲ್ಲ. ನಿಮ್ಮ ದುದೈ೯ವದಿಂದ 1963ರಲ್ಲಿ ನಡೆದ ರಾಜಕೀಯ ಪರಿಹಾರದ ಅಂಗವಾಗಿ ಸಿಖ್ಖರಿಗೆ ‘ಪ್ರತ್ಯೇಕ ಧಮ೯’ದ ಮಾನ್ಯತೆ ದೊರೆಯಿತು. ಹೊಸದಾಗಿ 1992ರಲ್ಲಿ ರಚನೆಯಾದ ರಾಷ್ಟ್ರೀಯ ಅಲ್ಪ ಸಂಖ್ಯಾತ ಆಯೋಗದ ಕಾನೂನಿನ ಅಡಿಯಲ್ಲಿ ಬೌದ್ಧ ಧಮ೯ಕ್ಕೆ 1993ರಲ್ಲಿ ‘ಅಲ್ಪಸಂಖ್ಯಾತ ಧಮ೯’ದ ಮಾನ್ಯತೆ ನೀಡಲಾಯಿತು. ಅದೇ ಕಾನೂನಿನ ಅಡಿಯಲ್ಲಿ ಮೋದಿಯವರು ಪ್ರಧಾನ ಮಂತ್ರಿಯಾಗುವ ಕೆಲವೇ ತಿಂಗಳ ಹಿಂದೆ 2014ರಲ್ಲಿ ಜೈನರನ್ನು ‘ಅಲ್ಪಸಂಖ್ಯಾತ ಸಮುದಾಯ’ವೆಂದು ಘೋಷಿಸಲಾಯಿತು. ಹೀಗೆ ಮೂರೂ ಸಲ ನೀವು ಸೋತ ನಂತರ ಈಗ ಲಿಂಗಾಯತ ಸ್ವಾಮಿಗಳ ವಿರುದ್ಧ ಕಿಡಿಕಾರುತ್ತಿದ್ದೀರಿ?” ಎಂದು ಪ್ರಶ್ನಿಸಿದ್ದಾರೆ.

“ಲಿಂಗಾಯತರ ʼಶಿವʼ ಎಂಬ ದೇವರು ʼವೈದಿಕʼ ರ ಶಿವನಲ್ಲ. ಲಿಂಗಾಯತ ಶಿವನಿಗೆ ದಾಕ್ಷಾಯಣಿ, ಗಂಗೆ, ಪಾವ೯ತಿಯಂತಹ ಹೆಂಡತಿಯರಿಲ್ಲ. ಗಣೇಶ ಮತ್ತು ಕುಮಾರರಂತಹ ಮಕ್ಕಳಿಲ್ಲ. ಅವನು ಸ್ವಗ೯/ಕೈಲಾಸವಾಸಿಯಲ್ಲ. ಅವನು ಬೂದಿಬಡಕನಲ್ಲ, ಸ್ಮಶಾನದಲ್ಲಿ ಪಿಶಾಚಿಯಂತೆ ತಿರುಗುವನಲ್ಲ. ನೀಲಕಂಠನಲ್ಲ, ಇವೆಲ್ಲ ಒಂದು ಸಾವಿರಕ್ಕು ಹೆಚ್ಚು ಶಿವನಿಗೆ ಕೊಟ್ಟ ಹೆಸರುಗಳು ಮತ್ತು ಹೆಸರಿಗೊಂದಂದರಂತೆ ಬರೆದ ಸಾವಿರ ಕತೆಗಳು ಹತ್ತು ಶೈವ ಪುರಾಣಗಳ (ಶಿವ ಪುರಾಣ, ಲಿಂಗ ಪುರಾಣ, ಸ್ಕಂದ ಪುರಾಣ, ಭವಿಷ್ಯ ಪುರಾಣ, ಮಾಕ೯೦ಡೆಯ ಪುರಾಣ, ವರಾಹ ಪುರಾಣ, ಕೂಮ೯ ಪುರಾಣ, ವಾಮನ ಪುರಾಣ, ಬ್ರಹ್ಮಾಂಡ ಪುರಾಣ, ಮತ್ಸ್ಯ ಪುರಾಣಗಳ) ಸೃಷ್ಟಿಗಳು.

ಲಿಂಗಾಯತ ಶರಣರು ಪುರಾಣಗಳನ್ನು ‘ಪುಂಡರ ಗೋಷ್ಟಿಗಳು’ ಎಂದು ಕರೆದು ಅಂತಹ ಪುರಾಣಗಳನ್ನು ಮತ್ತು ಅವುಗಳಲ್ಲಿ ಬರುವ ಕತೆಗಳನ್ನು ತಿರಸ್ಕರಿಸಿದ್ದಾರೆ” ಎಂದಿದ್ದಾರೆ. ‘ಈದಿನ’ ದೊಂದಿಗೆ ಮಾತನಾಡಿ ಈ ಮಾತುಗಳನ್ನು ಪುನರುಚ್ಚರಿಸಿದ ಜಾಮದಾರ್ ಅವರು, “ಲಿಂಗಾಯತ ಸ್ವತಂತ್ರ ಧರ್ಮ. ಜಾತಿ ಮತ್ತು ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದೇ ಬರೆಸುತ್ತೇವೆ. ಹಾಗೆಯೇ ಬರೆಸುವಂತೆ ಪ್ರಚಾರ ಮಾಡುತ್ತಿದ್ದೇವೆ” ಎಂದರು.ಇದನ್ನೂ ಓದಿರಿ: ನಿಗಮ ಮಂಡಳಿ | ಎಐಸಿಸಿ ಪಟ್ಟಿಯಲ್ಲಿನ ಏಳು ಹೆಸರು ಕೈಬಿಟ್ಟ ಸಿದ್ದರಾಮಯ್ಯ, ಇಬ್ಬರು ಹೊಸ ಸೇರ್ಪಡೆಲಿಂಗಾಯತ ಸಮುದಾಯದ ಹೋರಾಟಗಾರ ಸಿದ್ದಪ್ಪ ಮೂಲಗೆ ಪ್ರತಿಕ್ರಿಯಿಸಿ, “ನಾವು ಹಿಂದೂಗಳಲ್ಲ, ವೀರಶೈವರೂ ಅಲ್ಲ ಎಂಬ ಅರಿವು ಜನರಲ್ಲಿ ಮೂಡುತ್ತಿದೆ. ಸ್ವಯಂಪ್ರೇರಿತವಾಗಿ ಲಿಂಗಾಯತ ಧರ್ಮವೆಂದೇ ಬರೆಸುತ್ತಿದ್ದಾರೆ. ಹನ್ನೆರಡನೇ ಶತಮಾನದಲ್ಲಿ ಶರಣರ ಹತ್ಯಾಕಾಂಡದ ನಂತರ, ಲಿಂಗಾಯತ ಧರ್ಮದೊಳಗೆ ಬೇರೆ ವಿಷಯಗಳನ್ನು ಸೇರಿಸಲಾಯಿತು. ನಾವು ಕೂಡ ಹಿಂದೂಗಳು ಎಂದು ಲಿಂಗಾಯತರು ಭಾವಿಸಿದ್ದರು. ಆದರೆ ನಮಗೆ ಧರ್ಮ ಗುರು ಇದ್ದಾರೆ, ಧರ್ಮ ಸಂಹಿತೆ ಇದೆ, ನಮ್ಮದೇ ಆದ ಸಂಸ್ಕೃತಿ ಮತ್ತು ಸಾಮಾಜಿಕ ಹಿನ್ನಲೆ ಇದೆ ಎಂಬುದು ಜನಕ್ಕೆ ಅರ್ಥವಾಗಿದೆ” ಎಂದರು.

ಒಟ್ಟಾರೆಯಾಗಿ ಹೇಳುವುದಾದರೆ ಜಾತಿ ಸಮೀಕ್ಷೆಯು ಮತ್ತೊಮ್ಮೆ ಲಿಂಗಾಯತ ಮತ್ತು ವೀರಶೈವ ಚರ್ಚೆಯನ್ನು ಮುನ್ನೆಲೆಗೆ ತಂದಿದೆ. ಆದರೆ ಈ ಬಾರಿ ಹೊಸದೊಂದು ಬೆಳವಣಿಗೆಯಾಗಿರುವುದನ್ನು ಗುರುತಿಸುವ ಸಿದ್ದಪ್ಪ ಮೂಲಗೆ, “ನಾವೆಲ್ಲರೂ ಹಿಂದೂ ಧರ್ಮದ ಭಾಗವೆಂದೇ ಪ್ರತಿಪಾದಿಸುತ್ತಿದ್ದ ವೀರಶೈವರು ಈಗ ನಾವು ಪ್ರತ್ಯೇಕ ಧರ್ಮದವರು ಎಂದು ಪ್ರತಿಪಾದಿಸುತ್ತಿದ್ದಾರೆ” ಎಂದು ತಿಳಿಸಿದರು.

ಕಾಲ ಬೈರವ (ಶಿವ) ಶೈವಪರಂಪರೆ ಒಕ್ಕಲಿಗ, ಮೈಲಾರಿಂಗೆಶ್ವರ (ಶಿವ)ಶೈವಾರದಕರು, ಕುರುಬ, ನಾರಾಯಣ ಗುರುಗಳು ಶಿವಾರಾದಕರು ಶಿವನನ್ನು ಯಾರು ಬೇಕಾದರೂ ಪೂಜೆ ಮಾಡ ಬಹುದು ಎಂದು ಸಾರಿದವರು. ಆಸ್ಪರ್ಶತೆಯ ವಿರುದ್ಧ ಹೋರಾಟ ಮಾಡಿದವರು, ಕುದ್ರೋಳಿ ಶಿವಲಿಂಗ, ಎಲ್ಲವು ಬಿಲ್ಲವರದ್ದೇ ಶಿವಾರಾದಕರು ಶೈವರು, ಧರ್ಮಸ್ಥಳ ಶಿವಲಿಂಗ ಶೈವರದ್ದು, ವಿಠ್ಠಲ್ ಅರಮನೆ ಶೈವಾರಾದಕರು, ಉಡುಪಿ ಶಿವನ ದೇವಸ್ಥಾನ ಹೆಚ್ಚು ಇದ್ದ ಕಾರಣ ಇದಕ್ಕೆ ಶಿವಬೆಳ್ಳಿ ಎಂದೇ ಕರೆಯುತ್ತಿದ್ದರು. ಕೊಲ್ಲೂರು ಮೂಲ ಶಿವಲಿಂಗ, ಮುರುಡೇಶ್ವರ ರಾವಣ ಬಿಟ್ಟು ಹೋದ ಶಿವಲಿಂಗ, ಶೃಂಗೇರಿ ಶಿವಲಿಂಗ, ಎಲ್ಲವು ಶೈವರದ್ದೇ ಈ ದೇಶದ ಮೂಲ ಧರ್ಮವೇ ಶೈವ ಧರ್ಮ ಅದೇ ಸನಾತನ ಧರ್ಮ.

ವರದಿ:ಆರತಿ.ಗಿಳಿಯಾರು.ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button