ಅಂಬಿಗರ ಚೌಡಯ್ಯ ಪ್ರತಿಮೆಗೆ ಅವಮಾನ ಮಾಡಿದ ದುಷ್ಕರ್ಮಿಗಳನ್ನು ತಕ್ಷಣವೇ ಬಂಧಿಸಲು – ಬಸವರಾಜ ಹಡಪದ ಸುಗೂರ.ಎನ್ ರವರಿಂದ ತೀವ್ರ ಆಗ್ರಹ.
ಕಲಬುರಗಿ ಅ.16





ಇತ್ತೀಚಿಗೆ ಚಿತ್ತಾಪುರ ಮತ ಕ್ಷೇತ್ರದ ಶಹಾಬಾದ ತಾಲೂಕಿನ ಮುತ್ತಗಾ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಪ್ರತಿಮೆಯನ್ನು ದುಷ್ಕರ್ಮಿಗಳು ವಿರೂಪ ಗೊಳಿಸಿರುವ ಹೇಯ ಕೃತ್ಯ ಉಗ್ರವಾಗಿ ಖಂಡಿಸುತ್ತೇನೆ ಎಂದು ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾ ಗೌರವಾಧ್ಯಕ್ಷರಾದ ಶ್ರೀ ಬಸವರಾಜ ಹಡಪದ ಸುಗೂರ ಎನ್ ಅವರು ಹೇಳಿದರು.
ಕಲಬುರಗಿ ನಗರದಲ್ಲಿ ಮಾತನಾಡಿದ ಅವರು,ಶ್ರೀ ಅಂಬಿಗರ ಚೌಡಯ್ಯನವರು 12 ನೇ. ಶತಮಾನದಲ್ಲಿ ವಚನ ಕ್ರಾಂತಿಯಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡು ಸಾಮಾಜಿಕ ಪ್ರಜ್ಞೆಯನ್ನು ಜಾಗೃತ ಗೊಳಿಸಿದ ಬಸವಣ್ಣ ನವರ ಅನುಯಾಯಿ. ಸಾವಿರಾರು ವರ್ಷಗಳಿಂದ ಜನ ಸಮೂಹದಲ್ಲಿ ಮೂಢ ನಂಬಿಕೆಗಳ ವಿರುದ್ಧ ಅರಿವು ಮೂಡಿಸಿದ ಮಹಾ ಜ್ಞಾನಿ. ಸಮಾಜದಲ್ಲಿನ ಮೌಡ್ಯದ ಅಂಧಕಾರವನ್ನು ಅಳಿಸಿ, ಚಿಂತನೆಯ ಬೆಳಕು ಹೊತ್ತಿಸುವಲ್ಲಿ ಅಂಬಿಗರ ಚೌಡಯ್ಯ ಅವರ ಪಾತ್ರ ದೊಡ್ಡದಾಗಿದೆ. ಆದರೆ, ವಿಕೃತ ಮನಸ್ಥಿತಿಯ ಕೆಲವರು ಮಹಾನ್ ವಚನಕಾರರ ಪ್ರತಿಮೆಯನ್ನು ವಿರೂಪ ಗೊಳಿಸಿ ನಮ್ಮ ಭವ್ಯ ಪರಂಪರೆಗೆ ಮಾಡಿರುವ ಅಪಮಾನ. ಇದನ್ನು ರಾಜ್ಯ ಸರ್ಕಾರವು ಗಂಭೀರವಾಗಿ ಪರಿಗಣಿಸಿ ಆರೋಪಿಯನ್ನು ತಕ್ಷಣವೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳ ಬೇಕೆಂದು ಬಸವರಾಜ ಹಡಪದ ಸುಗೂರ ಎನ್ ಒತ್ತಾಯಿಸಿದರು.
ಅಂಬಿಗರ ಚೌಡಯ್ಯನವರ ಮೂರ್ತಿಯನ್ನುಭಗ್ನ ಗೊಳಿಸಿರುವ ಸಮಾಜ ಘಾತಕ ವ್ಯಕ್ತಿಗಳನ್ನುತಕ್ಷಣವೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಜಿಲ್ಲಾಡಳಿತವು ಗ್ರಾಮದಲ್ಲಿ ನೂತನ ಮೂರ್ತಿಯನ್ನು ನಿರ್ಮಾಣ ಮಾಡಿ ಕೊಡಬೇಕು. ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಗೌರವಾಧ್ಯಕ್ಷರಾದ ಬಸವರಾಜ ಹಡಪದ ಸುಗೂರ ಎನ್ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದರು.