ಸೂಲಗಿತ್ತಿ ತಳುಕಿನ ತಿಮ್ಮಕ್ಕರ ಸಹಜ ಹೆರಿಗೆ ಸೇವೆ ಶ್ಲಾಘನೀಯವಾದದ್ದು – ಡಾ, ವೈ.ರಾಜಾರಾಮ್ ಗುರುಗಳು ಅಭಿಮತ.
ಚಳ್ಳಕೆರೆ ಅ.17





ಕಾಲುವೆಹಳ್ಳಿಯ ಶತಾಯುಷಿ ಸೂಲಗಿತ್ತಿ ತಳುಕಿನ ತಿಮ್ಮಕ್ಕರ ಸಾವಿರಾರು ನಿಸ್ವಾರ್ಥ ಸಹಜ ಹೆರಿಗೆ ಸೇವೆಯು ಅತ್ಯಂತ ಶ್ಲಾಘನೀಯವಾದದ್ದು ಎಂದು ಚಳ್ಳಕೆರೆಯ ನರಹರಿ ನಗರದ ಶ್ರೀನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಪರಮಪೂಜ್ಯ ಡಾ.ವೈ ರಾಜಾರಾಮ್ ಗುರುಗಳು ತಿಳಿಸಿದರು.
ತಾಲೂಕಿನ ಕಾಲುವೆಹಳ್ಳಿಯ ಶತಾಯುಷಿ ಸೂಲಗಿತ್ತಿ ತಳುಕಿನ ತಿಮ್ಮಕ್ಕರ ನಿಸ್ವಾರ್ಥ ಸೂಲಗಿತ್ತಿ ಸೇವೆಯನ್ನು ಗುರುತಿಸಿ ಶ್ರೀನರಹರಿ ಸೇವಾ ಪ್ರತಿಷ್ಠಾನ ಮತ್ತು ಸದ್ಭಕ್ತರ ಉದಾರ ಆರ್ಥಿಕ ನೆರವಿನಿಂದ ಅವರಿಗೆ ನಿರ್ಮಿಸಿದ ನೂತನ ಶೌಚಾಲಯವನ್ನು ಪೂಜೆಯಾಂದಿಗೆ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಶ್ರೀನರಹರಿ ಸೇವಾ ಪ್ರತಿಷ್ಠಾನವು “ಮಾನವ ಸೇವೆಯೇ ಮಾಧವ ಸೇವೆ” ಎಂಬ ಧ್ಯೇಯವನ್ನು ಇಟ್ಟುಕೊಂಡು ಕೆಲಸ ಮಾಡುತ್ತಿದೆ.
ಈ ಪ್ರತಿಷ್ಠಾನದಿಂದ ನೀಡಿರುವ ಧನ ಸಹಾಯವನ್ನು ಶೌಚಾಲಯದ ನಿರ್ಮಾಣಕ್ಕೆ ಬಳಸಿರುವುದು ಒಳ್ಳೆಯ ಬೆಳವಣಿಗೆ. ಸೂಲಗಿತ್ತಿಯಾಗಿ ಯಾವುದೇ ಫಲಾಪೇಕ್ಷೆ ಇಲ್ಲದೆ ತಿಮ್ಮಕ್ಕ ಮಾಡಿರುವ ಸೇವೆ ನಮ್ಮೆಲ್ಲರಿಗೂ ಮಾದರಿಯಾಗ ಬೇಕು ಎಂದು ತಿಳಿಸಿದರು.

ನರಹರಿ ನಗರದ ನಿವೃತ್ತ ದೈಹಿಕ ಶಿಕ್ಷಕ ರಾಮಚಂದ್ರಪ್ಪ ಮಾತನಾಡಿ ಆಗಿನ ಕಾಲದಲ್ಲಿ ಆಸ್ಪತ್ರೆಗಳಿಲ್ಲದ ಗ್ರಾಮೀಣ ಪ್ರದೇಶಗಳಲ್ಲಿ ಸಹಜ ಹೆರಿಗೆ ಮಾಡಿಸಿ ಸಾವಿರಾರು ತಾಯಿ-ಮಗುವಿಗೆ ಪುನರ್ಜನ್ಮ ನೀಡಿರುವ ಸೂಲಗಿತ್ತಿ ತಳುಕಿನ ತಿಮ್ಮಕ್ಕರ ನಿಸ್ವಾರ್ಥ ಸೇವೆ ಇಂದಿನ ವೈದ್ಯರು ಮತ್ತು ಇತರರಿಗೆ ಆದರ್ಶವಾಗಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ನಿರೂಪಣೆಯನ್ನು ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ ಮಾಡಿದರೆ ಪ್ರಾರ್ಥನೆಯನ್ನು ಕಾಲುವೆಹಳ್ಳಿಯ ಭಜನೆ ಬೋರಣ್ಣ ಮತ್ತು ಪಾಲಕ್ಕ ನಡೆಸಿ ಕೊಟ್ಟರು.
ಶೌಚಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಲುವೆಹಳ್ಳಿಯ ಶತಾಯುಷಿ ಸೂಲಗಿತ್ತಿ ತಳುಕಿನ ತಿಮ್ಮಕ್ಕ, ಆಟೋ ಓಂಕಾರಪ್ಪ, ಓಬಕ್ಕ, ಕರಿಯಣ್ಣ, ಮಂಜುಳಾ, ಬೋರಕ್ಕ, ಗೌತಮಿ, ಮೌನಶ್ರೀ, ಚಿನ್ಮಯಿ, ಪವನ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.