💥 ಬ್ರೇಕಿಂಗ್ ನ್ಯೂಸ್!🔥’ನಕಲಿ ಟ್ರಾಪ್’ ಹಿಂದಿದೆಯೇ ಅಸಲಿ ಡೀಲ್..?ಹಿಂದಿನ ಉಡುಪಿ ಲೋಕಾಯುಕ್ತ DYSP ಮಂಜುನಾಥ್ ರಿಂದ ‘ಅಪಾರ ಹಣ ಬೇಡಿಕೆ’ – ರೋಚಕ ತಿರುವು ಪಡೆದ ಪ್ರಕರಣ!!!💥

ಉಡುಪಿ/ಕುಂದಾಪುರ ನ.10

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು, ಗಂಗೊಳ್ಳಿ ಗ್ರಾಮ ಪಂಚಾಯತ್‌ನ ಹಿಂದಿನ ಪಿಡಿಓ ಶ್ರೀ ಉಮಾಶಂಕರ್ ಹೆಚ್. ಅವರ ವಿರುದ್ಧ ನಡೆದಿದೆ ಎನ್ನಲಾದ ಲೋಕಾಯುಕ್ತ ಟ್ರ್ಯಾಪ್ ಪ್ರಕರಣವು ರಾಜ್ಯಾದ್ಯಂತ ವಿವಾದಕ್ಕೆ ತಿರುಗಿದೆ. ಇದು ಕೇವಲ ಟ್ರ್ಯಾಪ್ ಅಲ್ಲ, ಬದಲಿಗೆ, ಪ್ರಾಮಾಣಿಕ ದಲಿತ ಅಧಿಕಾರಿಯ ವಿರುದ್ಧ ನಡೆದ ಪೂರ್ವ ನಿಯೋಜಿತ ಕೃತ್ಯ ಒಳಸಂಚು ಮತ್ತು ಲೋಕಾಯುಕ್ತದ ಹೆಸರಿನಲ್ಲಿ ನಡೆದ ದೌರ್ಜನ್ಯ ಎಂದು ಸ್ವತಃ ಅಧಿಕಾರಿಯೇ ಎಸ್.ಸಿ/ಎಸ್.ಟಿ ದೌರ್ಜನ್ಯ ವಿಶೇಷ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಲೋಕಾಯುಕ್ತ ಪೊಲೀಸರ ತನಿಖಾ ವಿಧಾನಗಳು, ಟ್ರ್ಯಾಪ್ ಮಹಜರ್ ದಾಖಲೆಗಳು ಮತ್ತು ಪಂಚಾಯತ್ ಸಿ.ಸಿ.ಟಿ.ವಿ ಸಾಕ್ಷ್ಯಗಳ ನಡುವಿನ ಅಘಾತಕಾರಿ ವೈರುಧ್ಯಗಳು, ಈ ಪ್ರಕರಣದಲ್ಲಿ ತಕ್ಷಣದ ನ್ಯಾಯಾಂಗ ತನಿಖೆಯ ಅಗತ್ಯವನ್ನು ಸಾರುತ್ತಿವೆ. ಲೋಕಾಯುಕ್ತ ಎಂಬ ಸಾಂವಿಧಾನಿಕ ಸಂಸ್ಥೆಯೇ ತನ್ನ ವಿಶ್ವಾಸಾರ್ಹತೆ ಕಳೆದುಕೊಳ್ಳುವ ಮಟ್ಟಿಗೆ ಈ ಪ್ರಕರಣವು ಗಂಭೀರ ಸ್ವರೂಪ ಪಡೆದುಕೊಂಡಿದೆ.

ಘಟನೆಯ ಹಿನ್ನೆಲೆ:-

ದೂರುದಾರ ಆರೋಪಿ ಮಹಮ್ಮದ್ ಹನೀಫ್ ಮತ್ತು ಅವನ ತಮ್ಮ ಎಂ.ಡಿ ಆಸಿಫ್ ಇಬ್ಬರು ಕೆಲವು ತಿಂಗಳ ಹಿಂದೆ ಪಂಚಾಯತ್ ಕಚೇರಿಗೆ ಬಂದು ಅಕ್ರಮವಾಗಿ ನಡೆಯುತ್ತಿರುವ ದನದ ಕಸಾಯಿಖಾನೆಗೆ ಪಂಚಾಯತ ಯಿಂದ ಪರವಾನಿಗೆ ನೀಡಲು ಎರಡು ಲಕ್ಷ ಹಣ ನೀಡುವುದಾಗಿ ಹೇಳಿದ್ದು ಪಿಡಿಓ ಅವರು ಇದಕ್ಕೆ ನಿರಾಕರಿಸಿದ್ದರಿಂದ ಈ ನಕಲಿ ಲೋಕಾಯುಕ್ತ ಟ್ರ್ಯಾಪ್ ಮಾಡಿ ಪಿಡಿಓ ಅವರನ್ನು ಸಿಲುಕಿಸುವ ಯೋಜನೆ ರೂಪಿಸಲಾಗಿದೆ ಎಂದು ಪಿಡಿಓ ಆರೋಪಿಸಿದ್ದಾರೆ. ಈ ವಿಚಾರವನ್ನು ಸಾರ್ವಜನಿಕ ವಲಯಗಳಲ್ಲಿ ಮಾಹಿತಿ ಕಲೆ ಹಾಕಿದಾಗ ಕಸಾಯಿಖಾನೆಗೆ ಪರವಾನಿಗೆ ಪಡೆಯಲು ಈ ಇಬ್ಬರು ಬಾರಿ ಪ್ರಯತ್ನ ಮಾಡಿ ಪ್ರಯತ್ನ ವಿಫಲವಾದ ವಿಚಾರವು ತಿಳಿದು ಬಂದಿದೆ.ಅಲ್ಲದೆ ಟ್ರ್ಯಾಪ್ ದಿನವೇ ಗಂಗೊಳ್ಳಿ ಗ್ರಾಮಸ್ಥರು ಇದೊಂದು ನಕಲಿ ಟ್ರ್ಯಾಪ್ ಎಂದು ಪಿಡಿಓ ಅಧಿಕಾರಿ ಪರ ಘೋಷಣೆ ಕೂಗುತ್ತ ಈ ಬಗ್ಗೆ ನಾವು ಸಾಕ್ಷಿ ಹೇಳುತ್ತೇವೆ ಎಂದು ಪ್ರತಿಭಟನೆ ಮಾಡಿದ ವಿಚಾರ ಗಮನಿಸ ಬೇಕಾದ ಅಂಶವಾಗಿದೆ.

ಪಿ.ಡಿ.ಓ ಶ್ರೀ ಉಮಾಶಂಕರ್ ಅವರಿಂದ 21 ಮಂದಿ ಆರೋಪಿಗಳ ವಿರುದ್ಧ ಸ್ಪೋಟಕ ಕಾನೂನು ಸಮರ!

ದೌರ್ಜನ್ಯಕ್ಕೋಳಗಾದ ಪಿಡಿಓ ಶ್ರೀ ಉಮಾಶಂಕರ್ ಎಚ್ ಅವರು, ದೂರುದಾರ ಮಹಮ್ಮದ್ ಹನೀಫ್ ಬಿನ್ ದಿ. ಹುಸೇನ್,ಸುಲ್ತಾನ್ ಮೊಹಲ್ಲಾ ಗಂಗೊಳ್ಳಿ ಎಂ.ಡಿ. ಆಸೀಫ್ ಬಿನ್ ದಿ.ಹುಸೇನ್,ಸುಲ್ತಾನ್ ಮೊಹಲ್ಲಾ ಗಂಗೊಳ್ಳಿ ಮತ್ತು ಲೋಕಾಯುಕ್ತ ಪೊಲೀಸ್ ಸಿಬ್ಬಂದಿ ಸೇರಿದಂತೆ 21 ಮಂದಿ ಆರೋಪಿಗಳ ವಿರುದ್ಧ ಎಸ್.ಸಿ/ಎಸ್.ಟಿ ದೌರ್ಜನ್ಯ ತಡೆ ಅಧಿನಿಯಮ (1989/2016) ಹಾಗೂ ಸೆಕ್ಷನ್ 4 ರಡಿ ಮತ್ತು ಬಿ.ಎನ್.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲು ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡುತ್ತಿದ್ದಾರೆ. ಟ್ರ್ಯಾಪ್ ನಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಅಧಿಕಾರಿಯ ಹೆಸರು ದೂರಿನಲ್ಲಿ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ಪ್ರಕರಣದಲ್ಲಿ ದಲಿತ ಅಧಿಕಾರಿಯ ವಿರುದ್ಧ ದೌರ್ಜನ್ಯ ಎಸೆಗಿದ ಉಡುಪಿ ಲೋಕಾಯುಕ್ತ ಪೊಲೀಸರಾದ ಪ್ರಮುಖ ಹುದ್ದೆ ಮಂಜುನಾಥ್ (ಹಿಂದಿನ ಪ್ರಭಾರ ಡಿ.ವೈ.ಎಸ್.ಪಿ ಉಡುಪಿ ಲೋಕಾಯುಕ್ತ) ₹15 ಲಕ್ಷ ಲಂಚದ ಬೇಡಿಕೆ, ನಿಯಮ ಬಾಹಿರ ವರ್ತನೆ SC/ST ದೌರ್ಜನ್ಯ. ಹಣ ತುರುಕಿಸಿದವರು ರಮೇಶ್ ಸಿ.ಪಿ.ಸಿ (ಲೋಕಾಯುಕ್ತ ಸಿಬ್ಬಂದಿ) ಬಲವಂತವಾಗಿ ಹಣ ತುರುಕಿಸಿ ದೌರ್ಜನ್ಯ. ತನಿಖಾಧಿಕಾರಿ ಚಂದ್ರಶೇಖರ.ಕೆ ಎನ್ (ಪೊಲೀಸ್ ನಿರೀಕ್ಷಕ) ತನಿಖಾ ವೈಫಲ್ಯ ಮತ್ತು ದೌರ್ಜನ್ಯಕ್ಕೆ ಸಹಕಾರ.ಪೂರ್ವ ನಿಯೋಜಿತ ಸುಳ್ಳು ದೂರು. ಇತರೆ ಸಿಬ್ಬಂದಿ ಅಬ್ದುಲ್ ಜಲಾಲ್, ಶಿವರಾಂ ಗಾಣಿಗ ಸಿಪಿಸಿ, ವಿನಾಯಕ ಸಿಪಿಸಿ, ಸೂರಜ್ ಎಪಿಸಿ, ಶರತ್ ಸಿಂಗ್ ಸಿಪಿಸಿ, ರಾಘವೇಂದ್ರ ಎಪಿಸಿ, ಸತೀಶ್ ಹಂದಾಡಿ ಸಿಎಚ್.ಸಿ, ರೋಹಿತ್, ನಾಗೇಶ್ ಉಡುಪ ಎ.ಎ.ಎಸ್.ಐ, ಸಿ.ಎಚ್.ಸಿ ನಾಗರಾಜು, ಸಿ.ಎಚ್.ಸಿ ಮಹೇಶ್ ಪ್ರಸನ್ನ, ಸಿಪಿಸಿ ರವೀಂದ್ರ ಸಿಪಿಸಿ ಟ್ರ್ಯಾಪ್ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವಿಕೆ. ಸುಳ್ಳು ಸಾಕ್ಷಿಗಳು ಸಂತೋಷ್ ಕುಮಾರ್, ಪೂಜಿತ್ ಪಿ.ಜಿ ಸುಳ್ಳು ಸಾಕ್ಷಿ ಹೇಳಲು ಒಪ್ಪಂದ ಮಾಡಿಕೊಂಡ ಆರೋಪ.

ಸಿ.ಸಿ.ಟಿ.ವಿ Vs ಟ್ರ್ಯಾಪ್ ಮಹಜರ್: :19 ಸೆಕೆಂಡ್ ಗಳಲ್ಲಿ ಲಂಚ ಸ್ವೀಕಾರ ಅಸಾಧ್ಯ!’ ಉಡುಪಿ ಲೋಕಾಯುಕ್ತ ಪೊಲೀಸರ ಕಳ್ಳಾಟ ಎಳೆ ಎಳೆಯಾಗಿ ಬಯಲು! ಗಂಗೊಳ್ಳಿ ಪಂಚಾಯಿತಿನ ಸಿ.ಸಿ.ಟಿ.ವಿ ದೃಶ್ಯಾವಳಿ ಮತ್ತು ಲೋಕಾಯುಕ್ತರು ನೀಡಿರುವ ಟ್ರ್ಯಾಪ್ ಮಹಜರ್ ದಾಖಲೆಗಳ ನಡುವಿನ ವ್ಯತ್ಯಾಸಗಳು, ಈ ಟ್ರ್ಯಾಪ್ ಸಂಪೂರ್ಣವಾಗಿ ನಕಲಿ ಮತ್ತು ಲೋಕಾಯುಕ್ತ ಪೊಲೀಸರ ಕಳ್ಳಾಟದಿಂದ ಕೂಡಿದೆ ಎಂಬುದನ್ನು ಸ್ಪಷ್ಟಪಡಿಸುತ್ತವೆ.

ಸಿ.ಸಿ.ಟಿ.ವಿ ಪುರಾವೆಗಳ ಸವಾಲು:-

ಸಿ.ಸಿ.ಟಿ.ವಿ ದೃಶ್ಯಾವಳಿಯ ಪ್ರಕಾರ, ದೂರುದಾರ ಹನೀಫ್ ಟ್ರ್ಯಾಪ್ ಮಹಜರಿನಲ್ಲಿ ಪಿಡಿಓ ರವರು ಹಣ ಕೊಟ್ಟ ಮೇಲೆ 9 & 11ಎ ದಾಖಲೆಗಳನ್ನು ತನಗೆ ನೀಡಿದರು ಎಂದು ಟ್ರ್ಯಾಪ್ ಮಹಜರಿನಲ್ಲಿ ಹೇಳಿಕೆ ನೀಡಿದ್ದು ಆದರೆ ಕಚೇರಿಯ ಸಿ.ಸಿ ಕ್ಯಾಮೆರಾ ಫುಟೇಜ್ ಪರಿಶೀಲಿಸಿದಾಗ ದೂರುದಾರ ಹನೀಫ್ ನು ಪಿಡಿಓ ಕೊಠಡಿಗೆ ಪ್ರವೇಶಿಸುವಾಗ 9 & 11ಎ ದಾಖಲೆಗಳನ್ನು ಪಿಡಿಓ ಕೊಠಡಿಯ ಹೊರಗಿರುವ ಕುರ್ಚಿ ಮೇಲೆ ಇಟ್ಟು ಬರಿಗೈಯಲ್ಲಿ ಪ್ರವೇಶಿಸಿ, ಹಣ ಕೊಟ್ಟ ಮೇಲೆ ಪಿಡಿಓ ರವರು 9 & 11ಎ ದಾಖಲೆಯನ್ನು ನೀಡಿದ್ದಾರೆ ಎಂದು ಹೇಳಿಕೆ ನೀಡಿದ್ದನ್ನು ಗಮನಿಸಿದಾಗ ದೂರುದಾರನು ಪಿಡಿಓ ಕೊಠಡಿಯ ಒಳಗೆ ಬಂದು ತನ್ನ ಜೇಬಿನಿಂದ ಹಣವನ್ನು ತೆಗೆದು ಪಿಡಿಓ ರವರಿಗೆ ನೀಡಿ ನಂತರ ಪಿಡಿಓ ರವರು ಹಣವನ್ನು ಲೆಕ್ಕ ಮಾಡಿ ನಂತರ ಪಿಡಿಓ ರವರು ತನ್ನ ಎಡ ಬದಿಯ ಪ್ಯಾಂಟ್ ಕಿಸೆಗೆ ಹಾಕಿಕೊಂಡು ನಂತರ ದಾಖಲೆಗಳನ್ನು ನೀಡಿರುತ್ತಾರೆ ಎಂದು ಹೇಳಿಕೆ ದಾಖಲಿಸಿರುತ್ತಾನೆ ಪಿಡಿಓ ಕೊಠಡಿಯಿಂದ ಹೊರಗೆ ಹೋಗುವಾಗ ಹಣವನ್ನು ಪಿಡಿಓ ಟೇಬಲ್ ಮೇಲಿಟ್ಟು ಬರಿಗೈಯಲ್ಲಿ ಹೊರಗೆ ಹೋಗಿರುತ್ತಾನೆ.

ಆದರೆ ದೂರುದಾರನು ಕೇವಲ 19 ಸೆಕೆಂಡುಗಳ ಕಾಲ ಪಿಡಿಓ ಕೊಠಡಿಯಲ್ಲಿದ್ದು ಟ್ರ್ಯಾಪ್ ಮಹಜರ್ ನಲ್ಲಿ ಹೇಳಿರುವಂತೆ ಪಿಡಿಓ ಅವರು 20,000 (500 ರ 40 ನೋಟುಗಳು) ಎಣಿಸಿ ಜೇಬಿಗೆ ಹಾಕಲು ಮತ್ತು ಇತರ ಸಂಭಾಷಣೆ ಸೇರಿ, ದಾಖಲೆಗಳನ್ನು ನೀಡಲು ಕೇವಲ 19 ಸೆಕೆಂಡುಗಳು ಅಕ್ಷರಶಃ ಅಸಾಧ್ಯ. ಈ ಸಾಕ್ಷ್ಯವೇ ಲಂಚ ಸ್ವೀಕಾರದ ಆರೋಪ ಸುಳ್ಳು ಎಂಬುದಕ್ಕೆ ಬಲವಾದ ಆಧಾರವಾಗಿದೆ.

ಬಲವಂತದ ಕೃತ್ಯ ಮತ್ತು ಧ್ವನಿ ತಿರುಚುವಿಕೆ (ಕಳ್ಳಾಟದ ಪುರಾವೆ):-

ಹಿಂದೆ ರೌಡಿ ಶೀಟರ್ ಆಗಿದ್ದ ಮಹಮ್ಮದ್ ಹನೀಫ್

ಲೋಕಾಯುಕ್ತ ಸಿಬ್ಬಂದಿ ರಮೇಶ್ ಸಿಪಿಸಿ ಅವರು ಏಕಾಏಕಿ ಕೋಣೆಗೆ ನುಗ್ಗಿ ನಾವು ಲೋಕಾಯುಕ್ತರು ಎಂದು ಹೇಳಿದಾಗ ಪಿಡಿಓ ರವರು ಗೌರವದಿಂದ ಎದ್ದು ನಿಂತಾಗ, ಆರೋಪಿ ಹನೀಫನು ಪಿಡಿಓ ಕೇಬಲ್ ಮೇಲಿಟ್ಟಿದ್ದ ಹಣವನ್ನು ಬಲವಂತವಾಗಿ ಪಿಡಿಓ ಅವರ ಪ್ಯಾಂಟಿನ ಎಡಕಿಸೆಗೆ ತುರುಕಿಸಿದ್ದಾರೆ ಎಂದು ಪಿಡಿಓ ಆರೋಪಿಸಿದ್ದಾರೆ. ಅಲ್ಲದೆ, (22.01.2025) ಟ್ರ್ಯಾಪ್ ದಿನದಂದು ಲೋಕಾಯುಕ್ತರು ದೂರುದಾರನಾದ ಹನೀಫನಿಗೆ ನೀಡಿದ ವಾಯ್ಸ್ ರೆಕಾರ್ಡರ್ ಅಲ್ಲಿ ಯಾವುದೇ ಸಂಭಾಷಣೆ ರೆಕಾರ್ಡ್ ಆಗದಿದ್ದರೂ ಸಹ ಆರೋಪಿ ಹನೀಫನ ಮೊಬೈಲ್ ಅಲ್ಲಿ ಸಂಭಾಷಣೆ ರೆಕಾರ್ಡ್ ಆಗಿದೆ ಎಂದು ಫೋನ್ ಅನ್ನು ಒಂದು ವಾರ ತನ್ನ ಬಳಿ ಇಟ್ಟುಕೊಂಡು ಟ್ರ್ಯಾಪ್ ಆದ ಒಂದು ವಾರದ ನಂತರ (28.01.2025) ರಂದು ಬೇರೆ ದಿನದ ಸಂಭಾಷಣೆಯನ್ನು ಬಲವಂತವಾಗಿ ಟ್ರ್ಯಾಪ್ ಪಂಚನಾಮೆಗೆ ಸೇರಿಸಿರುವುದು ದಾಖಲೆಗಳ ಸುಳ್ಳು ಸೃಷ್ಟಿಯ ಗಂಭೀರತೆಯನ್ನು ತಿಳಿಸುತ್ತದೆ.

ಹಿಂದಿನ ಲೋಕಾಯುಕ್ತ ಪ್ರಭಾರ ಡಿ.ವೈ.ಎಸ್.ಪಿ ಮಂಜುನಾಥ್,SC/ST ದೌರ್ಜನ್ಯದ ಭಯಾನಕ ಕಥೆ ಹಿಂದಿನ ಲೋಕಾಯುಕ್ತ ಪ್ರಭಾರ ಡಿ.ವೈ.ಎಸ್.ಪಿ ಮಂಜುನಾಥ್ ಅವರ ಮೇಲಿನ ಆರೋಪಗಳು ಅತ್ಯಂತ ಗಂಭೀರ ಸ್ವರೂಪದ್ದಾಗಿದ್ದು ಸಂಸ್ಥೆಯೊಳಗೆ ನಡೆಯುತ್ತಿರುವ ವ್ಯವಸ್ಥಿತ ಭ್ರಷ್ಟಾಚಾರದ ಜಾಲವನ್ನು ಬಯಲು ಮಾಡುವಂತಿವೆ.

₹15 ಲಕ್ಷ ಲಂಚಕ್ಕೆ ಬೇಡಿಕೆ:-

ಹಿಂದಿನ ಲೋಕಾಯುಕ್ತ ಡಿ.ವೈ.ಎಸ್.ಪಿ ಮಂಜುನಾಥ್ ಅವರು ಪಿಡಿಓ ರವರನ್ನು ಪ್ರತ್ಯೇಕ ಕೊಠಡಿಗೆ ಕರೆದು ಬಾಗಿಲು ಹಾಕಿ, “ನಿಮ್ಮ ಕೇಸ್ ನಲ್ಲಿ ಯಾವುದೇ ಎವಿಡೆನ್ಸ್ ಇಲ್ಲ. ನನಗೆ 15 ಲಕ್ಷ ರೂಪಾಯಿ ಕೊಟ್ಟರೆ ಕೇಸ್ ಅನ್ನು ಈ ಹಂತದಲ್ಲಿಯೇ ನಿಮ್ಮ ಪರವಾಗುವಂತೆ ಮಾಡುತ್ತೇನೆ” ಎಂದು ನೇರವಾಗಿ ಬೇಡಿಕೆ ಇಟ್ಟಿರುವುದು ಪಂಚಾಯತ ಸಿ.ಸಿ ಕ್ಯಾಮೆರಾದಲ್ಲಿ ದಾಖಲಾಗಿದೆ ಎಂದು ಪಿಡಿಓ ಗಂಭೀರ ಆರೋಪ ಮಾಡಿದ್ದಾರೆ. ಇದು ಟ್ರ್ಯಾಪ್ ಕಾರ್ಯಾಚರಣೆಯ ನಿಯಮ ಬಾಹಿರ ವರ್ತನೆ ಯಾಗಿದ್ದು ಟ್ರ್ಯಾಪ್ ಕಾರ್ಯಾಚರಣೆಯು ಪಾರದರ್ಶಕ ಆಗಿರತಕ್ಕದ್ದು ಬಾಗಿಲು ಹಾಕಿ ಮಾತನಾಡುವ ಪ್ರಮೇಯವೇ ಇರುವುದಿಲ್ಲ.

ಮಾನವ ಹಕ್ಕುಗಳ ದಮನ ಮತ್ತು ಜಾತಿ ನಿಂದನೆ:-

ಲೋಕಾಯುಕ್ತ ಸಿಬ್ಬಂದಿಗಳು ದಲಿತ ಸಮುದಾಯಕ್ಕೆ ಸೇರಿದ ಪಿಡಿಓ ಅವರ ಜಾತಿಯನ್ನು ಉಲ್ಲೇಖಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, “ನಿನ್ನ ಜನ್ಮಕ್ಕೆ ಬೆಂಕಿ ಹಾಕ” ಎಂಬುದಾಗಿ ಮಾತನಾಡಿದ್ದಾರೆ ಅತ್ಯಂತ ಹೀನಾಯವಾಗಿ, ನಡೆಸಿಕೊಂಡು ಮೊಬೈಲ್ ನಲ್ಲಿ ಫೋಟೋ ತೆಗೆದು, ಬೆದರಿಕೆ ಹಾಕಿರುವುದು SC/ST ದೌರ್ಜನ್ಯ ತಡೆ ಅಧಿನಿಯಮದ ಸ್ಪಷ್ಟ ಉಲ್ಲಂಘನೆ ಮತ್ತು ನಾಗರೀಕ ಹಕ್ಕುಗಳ ಘೋರ ದಮನವಾಗಿದೆ.

ಹಿಂದಿನ ಲೋಕಾಯುಕ್ತ ಪ್ರಭಾರ ಡಿ.ವೈ.ಎಸ್.ಪಿ ಮಂಜುನಾಥ್ ರವರು ಪ್ರತ್ಯೇಕ ಕೊಠಡಿಗೆ ಪಿ.ಡಿ.ಓ ರವರನ್ನು ಕರೆದು ಬಾಗಿಲು ಹಾಕಿ ₹15 ಲಕ್ಷ ಹಣ ಡಿಮ್ಯಾಂಡ್ ಮಾಡಿದ ಸಿ.ಸಿ.ಟಿ.ವಿ ಪುಟೇಜ್ ವಿಡಿಯೋ…

ಸಂಬಂಧಪಟ್ಟ ಇಲಾಖೆಗಳ ಮೌನ:-

ಲೋಕಾಯುಕ್ತದ ಬೆದರಿಕೆಗೆ ಮಣಿದವೇ? ನ್ಯಾಯಾಲಯದ ಕದ ತಟ್ಟಲು ಅನಿವಾರ್ಯತೆ! ದೌರ್ಜನ್ಯಕ್ಕೋಳಗಾದ ಪಿಡಿಓ ಉಮಾಶಂಕರ್ ರವರು ನ್ಯಾಯಾಲಯದ ಕದ ತಟ್ಟುವ ಮುನ್ನ ಗಂಗೊಳ್ಳಿ ಪಿ.ಎಸ್.ಐ ಹರೀಶ್ ನಾಯಕಗೆ ದೂರು ಸಲ್ಲಿಸಿದ್ದರೂ ಸಹ ಎಸ್ಸಿ/ಎಸ್ಟಿ ಕಾಯ್ದೆಯಡಿ ಎಫ್.ಐ.ಆರ್ ದಾಖಲಿಸದೇ ಕರ್ತವ್ಯ ಲೋಪ ಎಸಗಿರುತ್ತಾರೆ ಈ ಬಗ್ಗೆ ಪೊಲೀಸ್ ದೂರು ಪ್ರಾಧಿಕಾರಕ್ಕೆ ಸದ್ರಿಯವರ ವಿರುದ್ಧ ದೂರು ಸಲ್ಲಿಸಲು ತಯಾರಿ ನಡೆಸಿದ್ದಾರೆ ನಂತರ ಸಂಬಂಧಪಟ್ಟ ಇಲಾಖೆಗಳಿಗೆ ಜಿಲ್ಲಾ ಪಂಚಾಯತ ಜಿಲ್ಲಾಡಳಿತ ಉಡುಪಿ ಸಮಾಜ ಕಲ್ಯಾಣ ಇಲಾಖೆಗೆ ಪೊಲೀಸ್ ಇಲಾಖೆಗೆ ದೂರುಗಳನ್ನು ನೀಡಿದ್ದರೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಆಘಾತಕಾರಿ ಸಂಗತಿ. ಉಡುಪಿ ಲೋಕಾಯುಕ್ತ ಕಚೇರಿಯಲ್ಲಿ ರಾಜೇಂದ್ರ ನಾಯಕ್ ಎನ್ನುವ ಪಿಎಸ್ಐ ಕಾರ್ಯ ನಿರ್ವಹಿಸುತ್ತಿದ್ದು ಈತನು ಗಂಗೊಳ್ಳಿ ಟ್ರ್ಯಾಪ್ ದಿನದಂದು ತಾಲ್ಲೂಕು ಪಂಚಾಯತ ಅಧಿಕಾರಿಗಳು ಪಂಚಾಯತ ಕಚೇರಿಯ ಸಿ.ಸಿ ಕ್ಯಾಮೆರಾ ಪುಟೇಜ್ ನೀಡಿರುವುದಿಲ್ಲ ಎಂದು ಮೇಲಾಧಿಕಾರಿಗಳಿಗೆ ಮತ್ತು ಮಾನ್ಯ ನ್ಯಾಯಾಲಯಕ್ಕೆ ಸುಳ್ಳು ವರದಿ ಸಲ್ಲಿಸಿದ್ದಾರೆ ಆದರೆ ಲೋಕಾಯುಕ್ತರೇ ತಯಾರಿಸಿದ ಟ್ರ್ಯಾಪ್ ಮಹಜರ್ ನಲ್ಲಿ ಕಚೇರಿಯ ಸಿ.ಸಿ ಕ್ಯಾಮೆರಾ ಪುಟೇಜ್ ಪರಿಶೀಲಿಸಲಾಗಿದೆ ಎಂದು ದಾಖಲಿಸಿರುವುದನ್ನು ನೋಡಬಹುದು ಇಲ್ಲಿಯೂ ಕರ್ತವ್ಯ ಲೋಪ ಎಸಗಲಾಗಿದೆ.

ದೂರುಗಳಿಗೆ ಸ್ಪಂದನೆ ಶೂನ್ಯ:-

ದೂರು ಅರ್ಜಿಗಳನ್ನು ಸ್ವೀಕರಿಸಿದ ನಂತರ ಸಂಬಂಧಪಟ್ಟ ಇಲಾಖೆಗಳು ತಿಂಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ, ದೂರು ಅರ್ಜಿಗೆ ಉತ್ತರ ನೀಡಿಲ್ಲ, ಅಥವಾ ಪ್ರಕರಣವನ್ನು ದಾಖಲಿಸಿಲ್ಲ.

ಸಂದೇಹದ ಸುಳಿ:-

ಉಡುಪಿ ಲೋಕಾಯುಕ್ತ ಪೊಲೀಸರು, ಈ ಪ್ರಕರಣವನ್ನು ಮುಂದಕ್ಕೆ ಅಧಿಕಾರಿಯ ಪರವಾಗಿ ನಿಲ್ಲದಂತೆ ನೋಡಿ ಕೊಳ್ಳಲು, ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳನ್ನು ಹೆದರಿಸಿರುವ ಅಥವಾ ಪ್ರಭಾವ ಬೀರಿರುವ ಎಲ್ಲಾ ಅನುಮಾನಗಳು ಹೆಚ್ಚಾಗಿ ಕಂಡು ಬಂದಿರುತ್ತವೆ. ಪ್ರಕರಣ ದಾಖಲಾಗಿ ಇಷ್ಟು ದಿನವಾದರೂ ಕ್ರಮ ಕೈಗೊಳ್ಳದೆ ಇರುವುದು ಇದೇ ಅನುಮಾನಕ್ಕೆ ಕಾರಣವಾದ ವಿಚಾರವಾಗಿದೆ. ನಂತರದಲ್ಲಿ ಸಂತ್ರಸ್ತ ಪಿಡಿಓ ರವರು ಪೋಲಿಸ್ ಅಧೀಕ್ಷಕರು ನಾಗರೀಕ ಹಕ್ಕು ಮತ್ತು ಜ್ಯಾರಿ ನಿರ್ದೇಶನಾಲಯ ಮಂಗಳೂರು ಇವರಿಗೆ ದೂರು ಸಲ್ಲಿಸಿದ್ದು ಸದರಿಯವರು ಈ ಬಗ್ಗೆ ಮಾನ್ಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವಂತೆ ಹಿಂಬರಹ ನೀಡಿದ್ದರು.

ಮಹಮ್ಮದ್ ಹನೀಫ್ 9 & 11ಎ ಪ್ರತಿಯನ್ನು ಪಿ.ಡಿ.ಓ ಕೊಠಡಿ ಹೊರಗೆ ಕುರ್ಚಿ ಮೇಲೆ ಇಟ್ಟು ಪಿ.ಡಿ.ಓ ಕೊಠಡಿ ಒಳಗೆ ಬರಿಗೈಯಲ್ಲಿ ಪ್ರವೇಶದ ಸಿ.ಸಿ.ಟಿ.ವಿ ಪುಟೇಜ್ ವಿಡಿಯೋ…

ಸಾರ್ವಜನಿಕ ಆಗ್ರಹ ಮತ್ತು ಪತ್ರಿಕೋದ್ಯಮದ ಹರಸಾಹಸ:-

ನ್ಯಾಯ ಖಚಿತವಾಗಲಿ! ಸಂವಿಧಾನದ ನಾಲ್ಕನೇ ಅಂಗವಾದ ಮಾಧ್ಯಮವು, ಈ ಗಂಭೀರ ಪ್ರಕರಣದ ಜಾಡು ಹಿಡಿದು, ಟ್ರ್ಯಾಪ್ ಮಹಜರಿಗೂ ಮತ್ತು ಪಂಚಾಯತ್ ನ ಸಿಸಿಟಿವಿ ದೃಶ್ಯಗಳಿಗೂ ಯಾವುದೇ ಸಂಬಂಧವಿಲ್ಲದಿರುವುದನ್ನು ಬಯಲಿಗೆ ಎಳೆಯಲು ಹಗಲಿರುಳು ಶ್ರಮಿಸಿದೆ. ಮಾಧ್ಯಮವು ತನಿಖೆ ನಡೆಸಿದಾಗ, ಉಡುಪಿ ಲೋಕಾಯುಕ್ತ ಕಚೇರಿಯಲ್ಲಿ ಸಿ.ಸಿ.ಟಿ.ವಿ ಇಲ್ಲದಿರುವುದನ್ನು ಮತ್ತು ಹಿಂದಿನ ಡಿವೈಎಸ್ ಪಿ ಮಂಜುನಾಥ್ ಅವರು, ” ನಮಗೇನು ಸಿ.ಸಿ.ಟಿ.ವಿ ಹಾಕಲೇಬೇಕು ಎಂದು ಯಾವ ಕಾನೂನು ಇಲ್ಲ “ಎಂದು ಹೇಳಿದ್ದನ್ನು ಬಹಿರಂಗ ಗೊಳಿಸುವ ಮೂಲಕ ಲೋಕಾಯುಕ್ತದ ಕಾರ್ಯವೈಖರಿ ಮತ್ತು ಪಾರದರ್ಶಕತೆ ಇಲ್ಲದಿರುವ ಬಗ್ಗೆ ಸಾರ್ವಜನಿಕ ವಲಯಗಳಲ್ಲಿ ಬೆಳಕಿಗೆ ಬಂದಿದೆ. ಸತ್ಯಕ್ಕಾಗಿ ನಿಲ್ಲುವ ಈ ಪ್ರಯತ್ನ ದೌರ್ಜನ್ಯಕ್ಕೋಳಗಾದ ಪ್ರಾಮಾಣಿಕ ಅಧಿಕಾರಿಗೆ ನ್ಯಾಯ ಒದಗಿಸುವ ಗುರಿ ಹೊಂದಿದೆ.

ಸಾರ್ವಜನಿಕರು ಮತ್ತು ಮಾಧ್ಯಮದ ತಕ್ಷಣದ ಆಗ್ರಹಗಳು: –

ಗಂಗೊಳ್ಳಿ ಪಂಚಾಯತ್ ಟ್ರ್ಯಾಪ್ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸೆಗಿರುವ ಮತ್ತು ದೌರ್ಜನ್ಯಸೆಗಿರುವ ಎಲ್ಲಾ 21 ಮಂದಿ ಆರೋಪಿಗಳನ್ನು ( ಅಧಿಕಾರಿಗಳು / ಸಿಬ್ಬಂದಿಯನ್ನು) ತಕ್ಷಣವೇ ಅಮಾನತ್ ಗೊಳಿಸಬೇಕು. ಅವರ ವಿರುದ್ಧ ನಿಷ್ಪಕ್ಷಪಾತ ಉನ್ನತ ಮಟ್ಟದ ನ್ಯಾಯಾಂಗ ತನಿಗೆ (judicial Inquiry ) ನಡೆಸಬೇಕು.

ಸಿಸಿಟಿವಿ ಮತ್ತು ಇತರ ಸಾಕ್ಷಾಧಾರಗಳ ಹಿನ್ನೆಲೆಯಲ್ಲಿ ಪಿಡಿಓ ಉಮಾಶಂಕರ್ ಹೆಚ್. ಅವರಿಗೆ ಕೂಡಲೇ ನ್ಯಾಯ ಒದಗಿಸಿ ಗೌರವ ಮರುಸ್ಥಾಪನೆ ಮಾಡಬೇಕು. ಈ ವರದಿಯು ರಾಜ್ಯ ಸರ್ಕಾರ ಮತ್ತು ಮಾನ್ಯ ನ್ಯಾಯಾಲಯದ ಗಮನಕ್ಕೆ ಬರಲಿ, ಅನ್ಯಾಯ ಮಾಡಿದ ಅಧಿಕಾರಿಗಳಿಗೆ ಶಿಕ್ಷೆಯಾಗಲಿ ಮತ್ತು ಪ್ರಾಮಾಣಿಕ ಅಧಿಕಾರಿಗೆ ನ್ಯಾಯ ಸಿಗಲಿ ಎಂಬುವುದು ನಾಡಿನ ಜನರ ಪ್ರಬಲ ಆಶಯವಾಗಿದೆ.

ವರದಿ:ಆರತಿ.ಗಿಳಿಯಾರು.ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button