ಗ್ರಾಮ ಪಂಚಾಯತಿ ನೌಕರರ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸಬೇಕು – ಹೆಚ್.ಶರ್ಫುದ್ದೀನ್ ಪೋತ್ನಾಳ್.
ಮಾನ್ವಿ ನ.12

ಗ್ರಾಮ ಪಂಚಾಯತಿ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘ ತಾಲೂಕು ಘಟಕದ ಗೌರವಾಧ್ಯಕ್ಷ ಹೆಚ್. ಶರ್ಫುದ್ದೀನ್ ಪೋತ್ನಾಳ್ ತಿಳಿಸಿದ್ದಾರೆ.ಪಟ್ಟಣದ ತಾಲೂಕು ಪಂಚಾಯತಿ ಕಾರ್ಯಾಲಯದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, “ರಾಜ್ಯ ಪಂಚಾಯತಿ ನೌಕರರ ಸಂಘದ ಸಿಬ್ಬಂದಿಗಳು 15 ನೇ. ಹಣಕಾಸು ಆಯೋಗದ ಅನುದಾನದಡಿ ವೇತನ ಪಾವತಿ, ಪಿಂಚಣಿ ಹೊಂದಿದ ವರ್ಗಕ್ಕೆ ಪರಿಹಾರ ಧನ, ಸೇವಾ ಅವಧಿಯ ಜೀವವಿಮೆ ಸೌಲಭ್ಯ ಸೇರಿದಂತೆ ಹಲವು ಬೇಡಿಕೆಗಳನ್ನು ವರ್ಷಗಳಿಂದ ಮುಂದುವರಿಸುತ್ತಿದ್ದಾರೆ. ಹಲವಾರು ಪಂಚಾಯತಿಗಳು ಧ್ವಜಾರೋಹಣ ಭತ್ಯೆ ನೀಡದೆ, ಸಂಗ್ರಹಿಸಿದ ತೆರಿಗೆ ಹಣದಿಂದಲೂ ವೇತನ ಪಾವತಿಸಲು ಹಿಂಜರಿಯುತ್ತಿವೆ. ಸಿಬ್ಬಂದಿಗಳು ತಿಂಗಳು ಗಟ್ಟಲೆ ವೇತನವಿಲ್ಲದೆ ಸಂಕಷ್ಟದಲ್ಲಿದ್ದಾರೆ” ಎಂದು ವಿಷಾದ ವ್ಯಕ್ತಪಡಿಸಿದರು.
“ಈ ಎಲ್ಲಾ ಬೇಡಿಕೆಗಳನ್ನು ಈ ತಿಂಗಳ 20 ರೊಳಗೆ ಈಡೇರಿಸಬೇಕು, ಇಲ್ಲವಾದಲ್ಲಿ ಅದೇ ದಿನ ತಾಲೂಕು ಪಂಚಾಯತಿ ಎದುರು ಧರಣಿ ನಡೆಸಲಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.

ಸಂಘದ ಅಧ್ಯಕ್ಷ ಅಂಬಣ್ಣ ನಾಯಕ ಬ್ಯಾಗವಾಟ ಅವರು ಮಾತನಾಡಿ “ಗ್ರಾಮ ಪಂಚಾಯತಿ ಸಿಬ್ಬಂದಿಗಳು ತಳ ಮಟ್ಟದಲ್ಲಿ ಸರ್ಕಾರದ ಎಲ್ಲಾ ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ. ಆದರೆ ಅವರ ಬದುಕು ಸುರಕ್ಷಿತವಾಗಿಲ್ಲ. ಸರ್ಕಾರ ಹಾಗೂ ಅಧಿಕಾರಿಗಳು ಸಿಬ್ಬಂದಿಯ ಕಷ್ಟವನ್ನು ಮನಗಂಡು ತಕ್ಷಣವೇ ಬೇಡಿಕೆಗಳಿಗೆ ಸ್ಪಂದಿಸಬೇಕು” ಎಂದು ಹೇಳಿದರು.
ಅವರು ಮುಂದುವರಿದು “ಸರಕಾರದ ಆದೇಶದಂತೆ 15 ನೇ. ಹಣಕಾಸು ಅನುದಾನದಡಿ ವೇತನ ಪಾವತಿಸಬೇಕು. ಪ್ರತಿ ತಿಂಗಳ 5 ರೊಳಗೆ ವೇತನ ನೀಡಬೇಕು. ಸೇವಾ ಅವಧಿಯಲ್ಲಿ ಮೃತಪಟ್ಟ ನೌಕರರ ಕುಟುಂಬದ ಸದಸ್ಯರಿಗೆ ಕೆಲಸದ ಅವಕಾಶ ನೀಡಬೇಕು. ಜೀವ ವಿಮೆಯ ವ್ಯವಸ್ಥೆ ಮಾಡಬೇಕು. ಪಿಂಚಣಿ ಹೊಂದಿದ ಸಿಬ್ಬಂದಿಗಳಿಗೆ ಉಪ ಧನ ನೀಡಬೇಕು. ಬಾಕಿ ಉಳಿದ ವೇತನವನ್ನು ತಕ್ಷಣ ಪಾವತಿಸಬೇಕು. ಪ್ರತಿನಿತ್ಯ ಧ್ವಜಾರೋಹಣದ ಭತ್ಯೆ ನೀಡಬೇಕು ಮತ್ತು ಯಾವುದೇ ದೂರುಗಳ ಆಧಾರದ ಮೇಲೆ ವೇತನ ನಿಲ್ಲಿಸಬಾರದು” ಎಂದು ಬೇಡಿಕೆಗಳನ್ನು ಪ್ರಸ್ತಾಪಿಸಿದರು.

ಈ ವೇಳೆ ಕಾರ್ಯಾಧ್ಯಕ್ಷ ಮಹಮ್ಮದ್ ನೀರಮಾನವಿ, ಪ್ರಧಾನ ಕಾರ್ಯದರ್ಶಿ ಸುಭಾನ್, ಚಂದ್ರಶೇಖರ ಕಪಗಲ್, ಉಪಾಧ್ಯಕ್ಷರಾದ ಪ್ರವೀಣಕುಮಾರ ನೀರಮಾನ್ವಿ, ಚಕ್ರಪಾಣಿ ಕರಡಿಗುಡ್ಡ, ವೆಂಕೋಬ ನಾಯಕ ಮದ್ಲಾಪೂರು, ವೆಂಕಟೇಶ ಬಿ.ಸಿ. ಹಿರೇಕೊಟ್ಟೆಕಲ್, ಸಹ ಕಾರ್ಯದರ್ಶಿಗಳಾದ ಯೇಸುರಾಜು ಕುರ್ಡಿ, ಹುಚ್ಚಯ್ಯ ಪೋತ್ನಾಳ, ವೆಂಕಟಗಿರಿ ಉಟಕನೂರು, ವಿಜಯ ಕುಮಾರ ಅರೋಲಿ, ಸಂ. ಕಾರ್ಯದರ್ಶಿಗಳು : ಸಿದ್ದಲಿಂಗಯ್ಯ, ಯಲ್ಲಪ್ಪ ಚೀಕಲಪರ್ವಿ, ಸದಸ್ಯರಾದ ಮಲ್ಲೇಶ್ ಸಾದಾಪೂರ, ಆಂಜನೇಯ ಗೋರ್ಕಲ್, ರಾಮು, ಬಸವಲಿಂಗಪ್ಪ, ರವಿ, ಅಶೋಕ ಸೇರಿದಂತೆ ತಾಲೂಕು ಘಟಕದ ಸದಸ್ಯರು ಹಾಗೂ ವಿವಿಧ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್. ಭಾಷಾ ನಕ್ಕುಂದಿ ಮಾನ್ವಿ

