ಮಾದರಿ ವಿಧಾನ ಸಭಾ ಅಧಿವೇಶನ ಸ್ಪರ್ಧೆ ಕೆ.ಹೊಸಹಳ್ಳಿ ಗ್ರಾಮದ ಯುವಕ ಶಂಕರ್ ಓಬಳಬಂಡಿ – ರಾಜ್ಯ ಮಟ್ಟಕ್ಕೆ ಆಯ್ಕೆ.
ಕೆ.ಹೊಸಹಳ್ಳಿ ನ.12

ಸಿಂಧನೂರು ತಾಲೂಕಿನ ಕೆ.ಹೊಸಹಳ್ಳಿ ಗ್ರಾಮದ ಶಂಕರ್ ಓಬಳಬಂಡಿ ಅವರು ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ಬೆಂಗಳೂರು ಹಾಗೂ ಸುಫಿಯಾ ಕಾನೂನು ಕಾನೂನು ವಿಶ್ವವಿದ್ಯಾಲಯ ತುಮಕೂರು ಇವರ ಸಹಯೋಗದಲ್ಲಿ ಸೋಮವಾರ ತುಮಕೂರಿನ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದ ಕಾನೂನು ವಿದ್ಯಾರ್ಥಿಗಳಿಗೆ ತುಮಕೂರು ವಲಯ ಮಟ್ಟದ 2025-26 ನೆಯ ಸಾಲಿನ “ಮಾದರಿ ವಿಧಾನ ಸಭಾ ಅಧಿವೇಶನ ಸ್ಪರ್ಧೆಯಲ್ಲಿ ಮಂಗಳೂರು ಎಸ್.ಡಿ.ಎಂ ಕಾನೂನು ಮಹಾವಿದ್ಯಾಲಯದ ದ್ವಿತೀಯ ವರ್ಷದ LLB ವಿದ್ಯಾರ್ಥಿಯಾಗಿದ್ದ ಶಂಕರ್ ಓಬಳಬಂಡಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದರು.

ಮಂಗಳೂರು ಎಸ್.ಡಿ.ಎಂ ಕಾಲೇಜಿನಿಂದ 4 ವಿದ್ಯಾರ್ಥಿಗಳು ಭಾಗವಹಿಸಿದ್ದು ಮಾದರಿ ಶಾಸಕರ ಆಯ್ಕೆ ಸಂದರ್ಭದಲ್ಲಿ ಬಹುಮತ ಪಡೆದು ಆಡಳಿತ ಪಕ್ಷದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿ ವಿರೋಧ ಪಕ್ಷದ ಟಿಕೆ ಟಿಪ್ಪಣಿಗಳಿಗೆ ಅಂಕಿ ಅಂಶಗಳ ಮೂಲಕ ಉತ್ತರಿಸಿದ ಆಡಳಿತ ಪಕ್ಷದ ಮಾದರಿ ಮುಖ್ಯಮಂತ್ರಿ ಶಂಕರ್ ಓಬಳಬಂಡಿ ದ್ವಿತೀಯ ಸ್ಥಾನ ಪಡೆದು.ಮಾದರಿ ವಿಧಾನ ಸಭೆಯಲ್ಲಿ ಮಂಡಿಸಲಾದ ಕರ್ನಾಟಕ ಅನಧಿಕೃತ ಕಾನೂನು ವೃತ್ತಿ ಪ್ರತಿಬಂಧಕ/ನಿಷೇದ (ನಕಲಿ ನ್ಯಾಯವಾದಿಗಳ) ವಿಧೇಯಕ 2025 ದ ಉಪಯೋಗ ಮತ್ತು ಮಹತ್ವಕಾಂಕ್ಷೆಯನ್ನು ತಿಳಿಸಿದ ಮಾದರಿ ಮುಖ್ಯಮಂತ್ರಿ ರಾಜ್ಯಮಟ್ಟಕ್ಕೆ ಆಯ್ಕೆಯಾದರು.

ತುಮಕೂರು ವಲಯ ಮಟ್ಟದ ಮಾದರಿ ವಿಧಾನಸಭಾ ಅಧಿವೇಶನ ಸ್ಪರ್ಧೆಯಲ್ಲಿ 7 ಕ್ಕೂ ಅಧಿಕ ಜಿಲ್ಲೆಗಳ 13 ಕಾಲೇಜುಗಳ 50ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಈ ಕಾರ್ಯಕ್ರಮವನ್ನು ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ಬೆಂಗಳೂರು ಇದರ ನಿರ್ದೇಶಕರಾದ ಪ್ರೊ.ಸಿ.ಎಸ್ ಪಾಟೀಲ್ ಉದ್ಘಾಟಿಸಿದರು.

ಈ ಸಂಧರ್ಭದಲ್ಲಿ ಕರ್ನಾಟಕ ಸರ್ಕಾರದ ನವದೆಹಲಿಯ ವಿಶೇಷ ಪ್ರತಿನಿಧಿ ಹಾಗೂ ಶಿರಾ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಟಿ.ಬಿ ಜಯಚಂದ್ರ, ಮಾಜಿ ಸಚಿವರಾದ ಕೆ.ಎನ್ ರಾಜಣ್ಣ, ತುಮಕೂರು ನಗರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಟಿ.ಬಿ ಜ್ಯೋತಿ ಗಣೇಶ್, ಎಚ್.ಎಮ್.ಎಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಡಾ, ಎಸ್.ಷಪಿ ಅಹಮದ್ ಅಧ್ಯಕ್ಷತೆ ವಹಿಸಿದ್ದರು. ನಂತರ ಸ್ಪರ್ಧೆಯಲ್ಲಿ ಭಾಗವಹಿಸಿ ಆಯ್ಕೆ ಯಾದ ಎಲ್ಲಾ ಸ್ಪರ್ಧಾಳುಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಇದೇವೇಳೆ ದ್ವಿತೀಯ ಸ್ಥಾನ ಪಡೆದ ಶಂಕರ್ ಓಬಳಬಂಡಿ ಅವರಿಗೆ ಕೆ ಹೊಸಹಳ್ಳಿ ಗ್ರಾಮಸ್ಥರು, ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರು ಅಭಿನಂದನೆಗಳು ತಿಳಿಸಿದರು.

