ದಾಸಸಾಹಿತ್ಯಕ್ಕೆ ಕನಕದಾಸರ ಕೊಡುಗೆ ಅಪಾರ – ಶ್ರೀಮತಿ ಎಚ್.ಲಕ್ಷ್ಮೀದೇವಮ್ಮ ಅಭಿಮತ.
ಚಳ್ಳಕೆರೆ ನ.12

ಕನ್ನಡದ ದಾಸಸಾಹಿತ್ಯಕ್ಕೆ ದಾಸ ಶ್ರೇಷ್ಠ ಕನಕದಾಸರ ಸಾಹಿತ್ಯಿಕ ಕೊಡುಗೆ ಅಪಾರವಾದದ್ದು ಎಂದು ಚಳ್ಳಕೆರೆಯ ತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ ತಿಳಿಸಿದರು.

ತ್ಯಾಗರಾಜ ನಗರದ ಸದ್ಭಕ್ತರಾದ ಶ್ರೀಮತಿ ಸೌಮ್ಯ ಪ್ರಸಾದ್ ಅವರ ಎಸ್.ಪಿ ನಿವಾಸದಲ್ಲಿ “ಕನಕದಾಸರ ಜಯಂತ್ಯುತ್ಸವ” ದ ಪ್ರಯುಕ್ತ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು “ಕನಕದಾಸರ ಜೀವನ ಸಂದೇಶ ಮತ್ತು ಅವರ ಸಾಹಿತ್ಯಿಕ ಕೃತಿಗಳ” ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ದಾಸಕೂಟದ ಅಶ್ವಿನಿ ದೇವತೆಗಳಲ್ಲಿ ಒಬ್ಬರಾಗಿ ನೂರಾರು ಮೌಲ್ಯಯುತ ಕೀರ್ತನೆಗಳನ್ನು “ಕಾಗಿನೆಲೆ ಆದಿಕೇಶವ” ನ ಹೆಸರಿನಲ್ಲಿ ಬರೆದಿರುವ ಕನಕದಾಸರ ಪ್ರಸಿದ್ಧ ಕೃತಿಗಳೆಂದರೆ ವರ್ಗಸಂಘರ್ಷದ ಬಗ್ಗೆ ತಿಳಿಸುವ ರಾಗಿ-ಭತ್ತದ ಕಥೆಯಾದ ರಾಮಧಾನ್ಯ ಚರಿತೆ, ಹರಿಭಕ್ತಿಸಾರ, ಮೋಹನತರಂಗಿಣಿ, ನಳಚರಿತ್ರೆ ಸೇರಿದಂತೆ ಇನ್ನೂ ಅನೇಕ ಸಾಹಿತ್ಯಿಕ ಮತ್ತು ಆಧ್ಯಾತ್ಮಿಕ ಕೃತಿಗಳ ರಚನೆಯ ಮೂಲಕ ಕನ್ನಡದ ದಾಸಸಾಹಿತ್ಯ ಪರಂಪರೆಯನ್ನು ಶ್ರೀಮಂತ ಗೊಳಿಸಿದ್ದಾರೆ ಎಂದರು.
ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀಲಲಿತಾ ಸಹಸ್ರನಾಮ ಪಠಣ, ಶ್ರೀರಾಮಕೃಷ್ಣರ ನಾಮಸ್ಮರಣೆ, ಶ್ರೀಮತಿ ಎಂ.ಗೀತಾ ನಾಗರಾಜ್ ಮತ್ತು ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ ಅವರಿಂದ ವಿಶೇಷ ಭಜನೆ ಹಾಗೂ ಯತೀಶ್.ಎಂ ಸಿದ್ದಾಪುರ ಅವರಿಂದ “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ, ಆರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು.
ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಶ್ರೀಮತಿ ಸೌಮ್ಯ ಪ್ರಸಾದ್, ಶಾಂತಮ್ಮ, ಜಿ.ಯಶೋಧಾ ಪ್ರಕಾಶ್, ಗೀತಾ ವೆಂಕಟೇಶ್, ಬಿ.ಟಿ ಗಂಗಾಂಬಿಕೆ, ಉಷಾ ಶ್ರೀನಿವಾಸ್, ಕವಿತಾ ಗುರುಮೂರ್ತಿ, ಸರಸ್ವತಿ ನಾಗರಾಜ್, ಗೀತಾ ಸುಂದರೇಶ್ ದೀಕ್ಷಿತ್, ಸರಸ್ವತಿ ರಾಜು, ಪಂಕಜ ಚೆನ್ನಪ್ಪ ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

