“ದೇಹವನಷ್ಟೇ ಸಿಂಗರಿಸದೇ ಮನಸ್ಸನ್ನು ಸಿಂಗರಿಸೋಣಾ! – ಡಿ.ಶಬ್ರಿನಾ ಮಹಮದ್ ಅಲಿ”.

ಅರೇ ಏನಿದು? ಸಿಂಗಾರ ಇರುವುದು ದೇಹಕ್ಕಷ್ಟೇ;ಮನಸ್ಸಿಗೆ ಹೇಗೆ ಎಂದು ಗಾಬರಿಯಾಗುತಿದ್ದೀರಾ ಅಲ್ಲವೇ? ಅಲ್ಲೆ ನೋಡಿ ನಾವು ಎಡವಿರೋದು! ‘ಅಂದ’ ಎನ್ನುವುದು ದೇಹಕ್ಕಷ್ಟೇ ಎಂದು ತಿಳಿದು ಕಣ್ಣಿಗೆ ಕಾಣುವ ನಮ್ಮ ‘ದೇಹ’ವನ್ನಷ್ಟೆ ಚೆಂದಗಾಣಿಸಿ, ಕಾಣದ ‘ಮನಸ್ಸ’ನೊಳಗೆ ಸ್ವಾರ್ಥ,ದುರಾಸೆ ತುಂಬಿಕೊಂಡು,ಸರಳವಾಗಿರಬೇಕಿದ್ದ ನಮ್ಮ ಜೀವನವನ್ನ ಕಗ್ಗಂಟಾಗಿಸಿ, ನೆಮ್ಮದಿಯ ಹುಡುಕಾಟದಲ್ಲಿ ಸೋತು ಗೊಂದಲದಲ್ಲಿ ಸಿಲುಕಿ ಒದ್ದಾಡುತಿದ್ದೇವೆ.
ನಮ್ಮ ನಾಡು ಕಂಡ ಸಂತ ಶ್ರೀ ಸಿದ್ದೇಶ್ವರಶ್ರೀಗಳು ‘ಮಾನವ ಜನ್ಮ’ಕುರಿತು ಹೀಗೆ ಹೇಳಿದ್ದಾರೆ. ಒಂದು ಸಸಿಯು ಬೆಳೆದು ಹೆಮ್ಮರವಾಗಬೇಕಾದರೆ ಅದಕ್ಕೆ ರಕ್ಷಣೆ ಪೋಷಣೆ ಎರಡು ಬೇಕು. ದನ ಕರುಗಳು ಬಂದು ತಿಂದು ಹಾಕದಂತೆ ಸಸಿಗೆ ಬೇಲಿ ಹಾಕಿ ರಕ್ಷಿಸಬೇಕು. ಅದು ಗಟ್ಟಿ ಮುಟ್ಟಾಗಿ ಬೆಳೆದು ಹೆಮ್ಮರವಾಗಿ ನಿಲ್ಲಬೇಕಾದರೆ ಅದಕ್ಕೆ ಗೊಬ್ಬರ,ನೀರು, ಗಾಳಿ ಬೆಳಕು ಮೊದಲಾದ ಪೋಷಕಾಂಶಗಳನ್ನು ನೀಡಬೇಕು. ಒಮ್ಮೆ ಅದು ಹೆಮ್ಮರವಾಗಿ ಬೆಳೆದು ನಿಂತರೆ, ಮುಂದೆ ಎಂಥ ಮಳೆ ಗಾಳಿ ಬಿಸಿಲೆಗೂ ಅದು ಹೆದರುವುದಿಲ್ಲ. ಅದೇ ಸಸಿ ಹೆಮ್ಮರವಾಗಿ ನೂರು ಕಾಲ ಜಗಕ್ಕೆ ನೆರಳು,ನೆರವುನೀಡುತ್ತದೆ ದೇವರಂತೆ ಪೂಜೆಗೊಳ್ಳುತ್ತದೆ. ಶಿಶು ಕೂಡ ಸಸಿಯಂತೆ ಕೋಮಲವಾಗಿರುತ್ತದೆ. ಕಾಮಕ್ರೋಧಾದಿ ದನಕರುಗಳು ಬಂದು ಸಸಿಯನ್ನು ತಿಂದು ಹಾಕದಂತೆ ಸದ್ಗುಣ, ಸದಾಚಾರ ಬೇಲಿ ಹಾಕಿ ರಕ್ಷಿಸಬೇಕು. ಸದ್ಭಕ್ತಿ ಸುಜ್ಞಾನದ ರಸಗೊಬ್ಬರವನ್ನು ಹಾಕಿ ಅದನ್ನು ಪೋಷಿಸಬೇಕು. ಆಗ ಅದೇ ಮಗುವು ಮುಂದೊಂದು ದಿನ ಬುದ್ಧನಂತೆ ಶಾಂತಿದೂತನಾಗಿ, ಮಹಾವೀರರಂತೆ ವೀರ ವಿರಾಗಿಯಾಗಿ, ಬಸವನಂತೆ ಭಕ್ತಿ ಭಂಡಾರಿಯಾಗಿ ಬೆಳೆದು ನಿಲ್ಲುತ್ತದೆ. ಒಂದು ವೇಳೆ ಆ ಮಗುವಿಗೆ ಯೋಗ್ಯವಾದ ರಕ್ಷಣೆ ಪೋಷಣೆ ದೊರೆಯದಿದ್ದರೆ ಅನಾಹುತ ಅವಘಡ ತಪ್ಪಿದ್ದಲ್ಲ ಎಂದಿದ್ದಾರೆ.
ಈ ನಿಟ್ಟಿನಲ್ಲಿ ನಮ್ಮ ಬದುಕಿನ ಸಬಲೀಕರಣಕ್ಕೆ ಮಾನಸಿಕ ಸದೃಢತೆ ಬಹುಮುಖ್ಯ ಪಾತ್ರ ವಹಿಸುತ್ತದೆ. ಹಾಗಾಗಿ ನಾವು ಮಾನಸಿಕವಾಗಿ ಹೇಗೆ ಸದೃಢರಾಗಬೇಕು,ಮನಸ್ಸನ್ನು ಹೇಗೆ ಸಿಂಗರಿಸಬೇಕು ಎಂಬುದರತ್ತ ಗಮನ ಹರಿಸೋಣಾ…
ಜ್ಞಾನ ಸಂಪಾದನೆ”
ಓದು ವ್ಯಕ್ತಿಯನ್ನು ರೂಪಿಸುತ್ತದೆ. ಚರ್ಚೆ ಆತನನ್ನು ಸಿದ್ಧಗೊಳಿಸುತ್ತದೆ. ಬರಹ ಪರಿಪೂರ್ಣ ವ್ಯಕ್ತಿಯನ್ನಾಗಿ ಮಾಡುತ್ತದೆ”ಎಂದು ಬ್ರಿಟನ್‌ನ ತತ್ವಜ್ಞಾನಿ ಪ್ರಾನ್ಸಿಸ್ ಬೇಕನ್ ನುಡಿದಿದ್ದಾರೆ. ಅಷ್ಟೇಯಲ್ಲದೇ ಪುಸ್ತಕಗಳನ್ನು ಓದುವುದರಿಂದ, ಪರಿಶುದ್ಧ,ಸುಂದರ ಜೀವನ ಸಾಗಿಸಲು ನಮಗೆ ಬೇಕಾದ ಸದ್ಗುಣ,ನಿಸ್ವಾರ್ಥ, ಸಹನೆ,ತಾಳ್ಮೆ,ಸಕರಾತ್ಮಕ ಚಿಂತನೆ ಎಲ್ಲವೂ ಪ್ರಾಪ್ತಿಯಾಗುತ್ತವೆ. ಹಾಗಾಗಿ ನಾವು ಪರಿಪೂರ್ಣ ವ್ಯಕ್ತಿ ಆಗಬೇಕಾದರೆ ದೇಹ,ಮನಸ್ಸು ಎರಡೂ ಒಂದಾಗಿ ಜ್ಞಾನವನ್ನು ಸಂಪಾದಿಸಬೇಕು. ದುಬಾರಿ ಒಡವೆ ವಸ್ತ್ರ,ಅಲಂಕಾರ ವಗೇರ ವಗೇರ ಎಂದು ದೇಹಕ್ಕಾಗಿ ಲಕ್ಷಾಂತರ ರೂಪಾಯಿಗಳನ್ನು ಯೋಚಿಸದೆ ಖರ್ಚು ಮಾಡುವ ನಾವು ಅದರಂತೆ ಜ್ಞಾನಾರ್ಜನೆಗಾಗಿ ಇಂತಿಷ್ಟೆಂದು ಪ್ರತಿ ತಿಂಗಳು ಎತ್ತಿಡಬೇಕು! ಆ ಹಣದಿಂದ ದಿನಪತ್ರಿಕೆಗಳು,ವಾರಪತ್ರಿಕೆಗಳು,ಪಾಕ್ಷಿಕ, ತ್ರೈಮಾಸಿಕ,ವಾರ್ಷಿಕ ಹೀಗೆ ವರ್ಷಪೂರ್ತಿ ನಮ್ಮ ಮನೆ ಬಾಗಿಲಿಗೆ ಬರುವ ಪತ್ರಿಕೆಗಳಿಗೆ ಚಂದಾದಾರಾಗಬೇಕು. ಪತ್ರಿಕೆಗಳ ಬೆಲೆ ಒಡವೆ ವಸ್ತ್ರದಷ್ಟು ದುಬಾರಿ ಇರುವುದಿಲ್ಲ. ದಿನಪತ್ರಿಕೆಗಳು,೫ ರೂಗಳ ಒಳಗೆ, ಮಾಸಿಕ ಪತ್ರಿಕೆಗಳು ೧೦೦ ರ ಒಳಗೆ ಇರುತ್ತವೆ. ಇದಕ್ಕಿಂತ ಹೆಚ್ಚಿನ ಬೆಲೆಯ ಯಾವ ಪತ್ರಿಕೆಗಳು ಇಲ್ಲ! ತಿಂಗಳಿಗೆ ಕನಿಷ್ಟ ೫೦೦ ರೂಗಳನ್ನು ಪತ್ರಿಕೆಗಳಿಗೆಂದು ವಿನಿಯೋಗಿಸಿದರೆ ಸಾಕು ಅವುಗಳಿಂದ ನಮಗೆ (ಆತ್ಮಕ್ಕೆ)ಬೇಕಾದ ಎಷ್ಟೋ ಜ್ಞಾನ ಲಭಿಸುತ್ತದೆ. ಅವುಗಳಲ್ಲಿನ ಯಾವುದೋ ಒಂದು ಕತೆ,ಕವನ,ವಿಮರ್ಶೆ ನಮಗೆ ಆತ್ಮಸ್ಥೈರ್ಯ ತುಂಬಬಹುದು, ನಮ್ಮಿಂದಾದ ತಪ್ಪಿಗೆ ಪ್ರಾಯಶ್ಚಿತ್ಯದ ಮಾರ್ಗ ತಿಳಿಸಬಹುದು, ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಸಮಚಿತ್ತರಾಗುವಂತೆ ನಮ್ಮನ್ನು ಪ್ರೇರೇಪಿಸಬಹುದು. ಆ ಕಾರಣಕ್ಕಾಗಿ ನಾವು ಓದಬೇಕಿದೆ. ದಿನಪತ್ರಿಕೆಗಳ ಕುರಿತು ನಮಗೆಲ್ಲಾ ತಿಳಿದೇಯಿದೆ. ಮಾಸಪತ್ರಿಕೆಗಳ ಕುರಿತಾದರೆ,ಎಂದಿನಂತೆ ಮಯೂರ,ಸುಧಾ,ಬಸವಪಥ, ಕರ್ಮವೀರ, ಕಸ್ತೂರಿ, ಅಕ್ಷರ ಸಂಗಾತ,ಮಿಂಚುಳ್ಳಿ, ಟೀಚರ್ ಇತ್ಯಾದಿ ಅನೇಕ ಪತ್ರಿಕೆಗಳಿವೆ. ಅವುಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು.
ಇನ್ನೂ ಗ್ರಂಥಗಳು ಕಡೆ ಬರೋದಾದರೆ, ಒಂದೆರಡು ಬಾರಿ ಹಾಕಿಕೊಂಡು ಬಿಸಾಡುವ ಬಟ್ಟೆಗಾಗಿ ಖರ್ಚು ಮಾಡುವ ಸಾವಿರಾರು ರೂಗಳಿಂದ ಒಮ್ಮೆ, ಉತ್ತಮ ವಿಚಾರವುಳ್ಳ ನೂರಾರು ಪುಸ್ತಕಗಳನ್ನು ಕೊಂಡರೆ ನಮ್ಮ ಜ್ಞಾನ ವಿಸ್ತಾರವಾಗುವುದರ ಜೊತೆಗೆ ಅವುಗಳನ್ನು ನಮ್ಮ ಮುಂದಿನ ಮಕ್ಕಳಿಗೂ ಸಂಗ್ರಹಿಸಿಡಬಹುದು. ಮಹಿಳೆಯರು ಒಂದು ಲಕ್ಷ ಕೊಟ್ಟು ೧೦,ಗ್ರಾಂ ಚಿನ್ನ ಕೊಂಡು ಬೀರು,ಲಾಕರ್ ಲಿ ಇಡುವ ಬದಲು ಅದರ ಅರ್ಧದಷ್ಟು ಹಣವನ್ನ ಗ್ರಂಥಗಳ ಖರೀದಿಗೆ ವಿನಿಯೋಗಿಸಿದರೆ ಸಾಕು,ಇನ್ನೂ ಪುರುಷರು ಮೋಜು ಮಸ್ತಿಗೆಂದು ಲಕ್ಷಾಂತರ ರೂ.ಗಳನ್ನು ಖರ್ಚು ಮಾಡುವ ಅರ್ಧದಷ್ಟನ್ನು ಒಮ್ಮೆ ಪುಸ್ತಕ ಖರೀದಿಗೆ ವಿನಿಯೋಗಿಸಿದರೆ ಸಾಕು, ಖಚಿತವಾಗಿ ಪ್ರತಿ ಮನೆಯಲ್ಲೂ ಒಂದೊಂದು ಗ್ರಂಥಾಲಯವೇ ನಿರ್ಮಾಣವಾಗುವುದು ಯೋಚಿಸಿ ನೋಡಿ! ಅಷ್ಟೇಯಲ್ಲದೇ ರಾಷ್ಟ್ರೀಯ ಹಬ್ಬಗಳ ಸಮಯದಲ್ಲಿ,ಕನ್ನಡ ರಾಜ್ಯೋತ್ಸವದ ನವೆಂಬರ್ ತಿಂಗಳಲ್ಲಿ,ಕನ್ನಡ ಪುಸ್ತಕ ಪ್ರಾಧಿಕಾರ, ಇತರೆ ಪ್ರಕಾಶನಗಳು ಶೇ ೫೦ ರಷ್ಟು ರಿಯಾಯಿತಿಯಲ್ಲಿ ಪುಸ್ತಕಗಳನ್ನು ಮಾರಾಟ ಮಾಡುತ್ತವೆ. ಇದರ ಸದುಪಯೋಗ ಪಡೆದುಕೊಂಡರೆ ನಮ್ಮ ಆತ್ಮವಿಶ್ವಾಸ ಹೆಚ್ಚಿಸುವ ಎಷ್ಟೋ ಗ್ರಂಥಗಳನ್ನು ನಮ್ಮದಾಗಿಸಿಕೊಳ್ಳಬಹುದು. ಅವುಗಳೊಂದಿಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸಾಕಷ್ಟು ಲೇಖಕರು,ಪ್ರಕಾಶಕರು ಕಾಲ ಕಾಲಕ್ಕೆ ವಿಚಾರವುಳ್ಳ ಪುಸ್ತಕಗಳನ್ನು ಪ್ರಕಟಿಸುತ್ತಾರೆ. ಅವುಗಳನ್ನು ನಾವು ತಪ್ಪದೇ ಕೊಂಡು ಓದಬೇಕು.
ಸಂವಾದ, ಸಾಹಿತ್ಯ ಕಾರ್ಯಕ್ರಮಗಳಿಗೆ ಹಾಜರಾಗುವುದು.
‘ದೇಶ ಸುತ್ತು ಕೋಶ ಓದು’ ಎಂಬುದನ್ನ ತಮಾಷೆಗೆ ಹೇಳಿದ್ದಲ್ಲ! ಅದರಲ್ಲಿ ನಾವು ತಿಳಿಯಬೇಕಾದ ಆಳದ ಅರ್ಥವಿದೆ,ಅನುಭವವಿದೆ, ಅನುಭಾವವೂ ಇದೆ. ಇದ್ದಲ್ಲಿಯೇ ನಾವು ಇದ್ದಾಗ ಬಾವಿಯೊಳಗಿನ ಕಪ್ಪೆಯಂತಾಗಿ, ನಮಗೆ ನಾವೇ ಸರ್ವಜ್ಞರಂತೆ ಭಾವಿಸಿ ಅಲ್ಪ ಜ್ಞಾನಿಗಳಾಗಿ ಬೀಗುತ್ತೇವೆ. ಹಾಗಾಗಬಾರದೆಂದರೆ ಅರಿವುಳ್ಳವರು,ವಿಚಾರವಂತರು ಸೇರುವ ಕವಿಗೋಷ್ಠಿ, ಪುಸ್ತಕ ಲೋಕಾರ್ಪಣೆ,ವಿಮರ್ಶೆ, ಕಥಾ ಕಮ್ಮಟ,ವಚನ ಕಮ್ಮಟ, ಕಾವ್ಯಕೂಟ ಹೀಗೆ ಸಾಹಿತ್ಯಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅವರ ಮಾತುಗಳನ್ನು ನೇರವಾಗಿ ಕೇಳಬೇಕು. ಆಗ ನಮಗರಿವಿಲ್ಲದೆ ನಮ್ಮಲ್ಲಿನ ಸಮಸ್ಯೆಗಳಿಗೆ ಪರಿಹಾರ,ಗೊಂದಲಗಳಿಗೆ ಸಮಾಧಾನದ ಉತ್ತರ ಪಡೆಯುವಲ್ಲಿ ನಮ್ಮ ‘ಮನಸ್ಸು’ ಸನ್ನದ್ದಾಗಿ ತೆರೆದುಕೊಳ್ಳಲು ಪ್ರಾರಂಭಿಸುತ್ತದೆ! ಅಷ್ಟೇಯಲ್ಲದೆ ತಿಳುವಳಿಕಸ್ತರ ಪರಿಚಯದಿಂದ, ಅವರೊಂದಿಗಿನ ಒಡನಾಟದಿಂದ ನಮ್ಮಗಳ ಜ್ಞಾನದ ಮಟ್ಟ ಯಾವ ಹಂತದಲ್ಲಿದೆ ಎಂಬುದು ಕೂಡ ಸ್ಪಷ್ಟವಾಗುತ್ತದೆ. ಈ ತಿಳುವಳಿಕೆಯು ನಮ್ಮ ಮುಂದಿನ ಅಧ್ಯಯನ,ಅಧ್ಯಾಪನಕ್ಕೆ ಅನುವು ಮಾಡಿಕೊಡುತ್ತದೆ. ಹಾಗೆಯೇ ನಮ್ಮ ದೇಹ,ಮನಸ್ಸು ಎರಡೂ ಪ್ರಶಾಂತತೆಯನ್ನು ಬಯಸುತ್ತವೆ. ಆದ್ದರಿಂದ ನಾವು ನಮ್ಮ ಆತ್ಮಸಂತೋಷಕ್ಕಾಗಿ ಆಗಾಗ ಪ್ರಶಾಂತ ಸ್ಥಳಗಳಿಗೆ ಪ್ರವಾಸ ಕೈಗೊಳ್ಳಬೇಕು. ಅದಕಾಗಿಯೂ ಇಂತಿಷ್ಟು ಹಣವೆಂದು ಮೀಸಲಿಡಬೇಕು.
ಈಗ ಸಮಯದ ಹೊಂದಾಣಿಕೆ ಹೇಗೆ?ಎಂಬುದರತ್ತಾ ಕಣ್ ಆಯಿಸೋಣಾ.
ನನ್ನ ಪ್ರಕಾರ ‘ಸಮಯದ ಹೊಂದಾಣಿಕೆ’ ಎಲ್ಲರ ದೊಡ್ಡ ಅಲ್ಲಾ,ದಡ್ಡ ನೆಪ! ಏಕೆಂದರೆ ಸಾಮಾನ್ಯ ವ್ಯಕ್ತಿಯಿಂದ ಅಸಾಮನ್ಯ ಸಾಧಕರೆಲ್ಲರಿಗೂ ಇರುವುದು ಒಂದು ದಿನಕ್ಕೆ ೨೪ ಗಂಟೆಗಳು ಮಾತ್ರ! ಸಮಯದ ಹೊಂದಾಣಿಕೆ ಮಾಡಿಕೊಂಡವ ಸಾಧಕನಾಗುತ್ತಾನೆ; ‘ಸಮಯದ ಕೊರತೆ’ ಎಂದು ನೆಪ ಹೇಳಿದವ ಸಾಮನ್ಯನಾಗಿಯೇ ಉಳಿಯುತ್ತಾನೆ! ಹಾಗಾಗಿ ನಮ್ಮ ಸಮಯವನ್ನ ಹೇಗೆ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ,ಯಾವುದಕ್ಕೆ ಮೀಸಲಿಡುತ್ತೆವೆ ಎಂಬುದು ನಮ್ಮ ವಿವೇಚನೆಯಲ್ಲಡಗಿದೆ. ಪ್ರತಿಯೊಂದಕ್ಕೂ ಸಮಯವಿಲ್ಲ ಎಂದು ನೆಪ ಹೇಳುವವರಿಂದ ಏನನ್ನೂ ಮಾಡಲಾಗದು!. ಆಸಕ್ತಿಯಿದ್ದರೆ ಸಮಯ ತಾನಾಗಿಯೇ ಹೊಂದಾಣಿಕೆ ಆಗುತ್ತದೆ. ಆಸಕ್ತಿಯೊಂದಿಗೆ ಛಲವೂ ಇದ್ದರಂತೂ ‘ಆತ್ಮಾನಂದ’ ಕಟ್ಟಿಟ್ಟ ಬುತ್ತಿ! ಹಾಗಾದರೆ ನಾವು ಮೊದಲು ಮಾಡಬೇಕಾಗಿರುವುದು ನಮ್ಮ ದಿನನಿತ್ಯದಲ್ಲಿ ಅಗತ್ಯವಿರುವ ಕಾರ್ಯಗಳಿಗಾಗಿ ವ್ಯಯವಾಗುವ ಸಮಯವನ್ನು ಬಿಟ್ಟು ಅನಗತ್ಯವಾಗಿ ಎಲ್ಲಿ ಕಳೆಯುತಿದ್ದೇವೆ ಎಂಬುದನ್ನ ಆತ್ಮಾವಲೋಕನ ಮಾಡಿಕೊಳ್ಳಬೇಕು. ಆ ನಂತರ ಆ ಸಮಯವನ್ನು ಸಕಾರಾತ್ಮಕವಾಗಿ ಬಳಕೆ ಮಾಡಿಕೊಳ್ಳಲು ಸಮಯದ ಹೊಂದಾಣಿಕೆ ಮಾಡಿಕೊಳ್ಳಬೇಕು.
ಅಗತ್ಯವಿದ್ದಷ್ಟು ಮಾತ್ರ ಮೊಬೈಲ್ ಬಳಕೆ:
ತೊದಲುವ ಮಗುವಿನಿಂದ ನಡುಗುವ ತಾತಾನೂ ಕೂಡ ಮೊಬೈಲಲಿ ತುಂಬಾ ಬಿಜಿಯಾಗಿದ್ದಾರೆ. ಮಾನವ ಸಂಕುಲದ ದುರಾದೃಷ್ಟಕರವೆಂದರೆ ಇದೇ ಆಗಿದೆ. ಸತ್ ಸಂಗತಿಗಳಿಗಾಗಿ ವ್ಯಯವಾಗಬೇಕಿದ್ದ ಅಮೂಲ್ಯ ಸಮಯವೆಲ್ಲಾ ಮೊಬೈಲ್ ತಿಂದು ತೇಗುತಿದೆ! ಅಷ್ಟೇಯಲ್ಲದೆ ಮಾನವ ಹರಿಬಿಡಬೇಕಾದ ಆಲೋಚನೆಗಳನ್ನೆಲ್ಲಾ ತನ್ನ ತೆಕ್ಕೆಗೆ ಹಾಕಿಕೊಂಡು ಮಾನವನನ್ನ ಮಂಕಾಗಿಸುತಿದೆ. ಇದರಿಂದ ಆಚೆ ಬಂದು ಆ ಸಮಯವನ್ನು ಈಗಾಗಲೇ ನಾವು ಸಂಗ್ರಹಿಸಿದ ಪತ್ರಿಕೆಗಳನ್ನು, ಪುಸ್ತಕಗಳನ್ನು ಓದಲು, ಅವುಗಳ ಕುರಿತು ಬರೆಯಲು,ಪ್ರವಾಸಕ್ಕಾಗಿ ತೆರಳಲು ಮೀಸಲಿಡಬೇಕು. ಅನಗತ್ಯ ಚರ್ಚೆ& ಹರಟೆಯ ಬದಲು ಆರೋಗ್ಯಕರ ಮಾತುಕತೆಯಲ್ಲಿ ತೊಡಗಿಸಿಕೊಳ್ಳಬೇಕು. ಆಗ ನಮ್ಮ ಆತ್ಮಶಕ್ತಿ ತಾನಾಗಿಯೇ ಹೆಚ್ಚುತ್ತಾ ಹೋಗುತ್ತವೆ.
ಕೊನೆಯದಾಗಿ……….ಬದುಕನ್ನು ತುಂಬೊಲವಿನಿಂದ ಅಪ್ಪಿಕೊಂಡು ಜೀವಿಸಿದವರೆಂದರೆ ನಮ್ಮ ಜನಪದರು,ವಚನಕಾರರು,ದಾಸರು,& ಸಂತರು. ಅವರೆಲ್ಲರೂ ಜೀವನದ ಪ್ರತಿ ಕ್ಷಣವನ್ನು ಆನಂದದಿಂದ ಅನುಭವಿಸಿದರು. ಅವರೆಂದೂ ಸುಖಕ್ಕಾಗಿ ಹಾತೊರೆಯಲಿಲ್ಲ,ಕಷ್ಟಗಳಿಗೆ ಹೆದರಿಲಿಲ್ಲ. ಬದುಕು ಹೇಗೆ ಬರುತ್ತೋ ಹಾಗೆಯೇ ಸ್ವೀಕರಿಸಿ ಸಮಚಿತ್ತದಿಂದ ಬದುಕಿದರು. ನಾವೂ,ನಮ್ಮಲ್ಲಿನ ವ್ಯಾಮೋಹ,ದುರಾಸೆ,ಸ್ವಾರ್ಥ,ಅಪೇಕ್ಷೆ, ಅಹಂಕಾರ, ಬಿಟ್ಟು ಅವರಂತೆ ಜೀವಿಸಬಾರದೇಕೆ? ಹೀಗೆ ಆಲೋಚಿಸುತ್ತಿರುವಾಗ ಮಾನವ ಬದುಕಿನ ಸ್ವರೂಪ ತಿಳಿಸುವ ಅಂಬಿಗರ ಚೌಡಯ್ಯ ಅವರ ಒಂದು ವಚನವನ್ನು ಮತ್ತೆ ಮತ್ತೆ ಓದಬೇಕು ಅನಿಸುತ್ತದೆ.
ಬಡತನಕ್ಕೆ ಉಂಬುವ ಚಿಂತೆ, ಉಣಲಾದರು ಉಡುವ ಚಿಂತೆ ಉಡಲಾದರೆ ಇಡುವ ಚಿಂತೆ,ಇಡಲಾದರೆ ಹೆಂಡಿರ ಚಿಂತೆ ಹೆಂಡಿರಾದರೆ ಮಕ್ಕಳ ಚಿಂತೆ, ಮಕ್ಕಳಾದರೆ ಬದುಕಿನ ಚಿಂತೆ ಬದುಕಾದರೆ ಕೇಡಿನ ಚಿಂತೆ, ಕೇಡಾದರೆ ಮರಣದ ಚಿಂತೆಇಂತೀ ಹಲವು ಚಿಂತೆಯಲಿ ಇಪ್ಪವರ ಕಂಡೆನುಶಿವನ ಚಿಂತೆಯಲ್ಲಿದ್ದವರೊಬ್ಬರನೂ ಕಾಣೆನೆಂದಾತನಮ್ಮ ಅಂಬಿಗರ ಚೌಡಯ್ಯ(ನಿಜ)ಶರಣನು.
ಈ ಪ್ರಪಂಚ ನಾವು ಭಾವಿಸಿಕೊಂಡಷ್ಟು ಸರಳವಿಲ್ಲದಿರಬಹುದು, ಹಲವು ಸಮಸ್ಯೆಗಳು ನಮ್ಮನ್ನು ಸದಾ ಕಾಡುತ್ತಲೆ ಇರುಬಹುದು, ಮನುಷ್ಯ ಜೀವನ ಚಿಂತೆಯಿಂದ ಎಂದೂ ಮುಕ್ತವಾಗಿಲ್ಲ ಎಂದನಿಸಬಹುದು, ಹಾಗೆಂದು ನಾವು ಎದೆಗುಂದಬೇಕಿಲ್ಲ,ನಿರಾಶರಾಗಬೇಕಿಲ್ಲ. ಪ್ರತಿ ಹೆಜ್ಜೆಯಲ್ಲೂ ಎಲ್ಲದಕೂ ಪರಿಹಾರವಿದೆ ಎಂದು ನಮಗೆ ನಾವು ನಾವೇ ಸಾಂತ್ವಾನ ಹೇಳಿಕೊಳ್ಳಬೇಕು. ನಮ್ಮದು ಮಾನವ ಜನ್ಮವಾದ್ದರಿಂದ ಅಂಬಿಗರ ಚೌಡಯ್ಯ ಹೇಳಿರುವಂತೆ ಒಂದರ ನಂತರ ಒಂದು ಚಿಂತೆ ಸಹಜವಾದರೂ ಆತ್ಮ ದೇಹ ಎರಡೂ ಒಂದಾಗಿ ಸಮಚಿತ್ತತೆ ಗಳಿಸಿಕೊಂಡಾಗ ನಮ್ಮಲ್ಲಿನ ದ್ವೇಷ,ಅಸೂಯೆ,ಅಹಂಕಾರ,ಸ್ವಾರ್ಥ, ದುರಾಸೆ,ಮೋಹ,ಮದ,ಈ ಎಲ್ಲಾ ನಕರಾತ್ಮಕ ಭಾವಗಳು ನಶಿಸಿಹೋಗುತ್ತವೆ. ಅವುಗಳ ಜಾಗದಲ್ಲಿ ಪ್ರೀತಿ, ವಿಶ್ವಾಸ,ನಿಸ್ವಾರ್ಥ,ಸಹನೆ,ಕರುಣೆ ,ಮಮತೆ ಎಂಬ ಸಕರಾತ್ಮಕ ಭಾವಗಳು ಮೈದಳೆಯುತ್ತವೆ. ಇಷ್ಟು ಬದಲಾವಣೆ ನಮ್ಮಲ್ಲಾದರೆ ಸಾಕು;ಕಷ್ಟಗಳು ಬರಸಿಡಿಲಿನಂತೆ ಬಂದಪ್ಪಳಿಸಿದರೂ….ಗೆಲವು ಮಾತ್ರ ನಮ್ಮದೇ ಕಣ್ರಿ! ನಮ್ಮ ಈ ಗೆಲುವಿಗಾಗಿಯಾದರೂ ನಾವು,ನಮ್ಮ ದೇಹದೊಳಗಿನ ಮನಸ್ಸಿಗೂ ಹಣ,ಸಮಯ ಮೀಸಲಿಡಬೇಕು ಅಲ್ವೆ!
ಡಿ.ಶಬ್ರಿನಾ ಮಹಮದ್ ಅಲಿ,ಲೇಖಕಿ,ಚಳ್ಳಕೆರೆ

