“ಗಂಗೆ ಗೌರಿ” ಚಲನ ಚಿತ್ರದ ಟ್ರೇಲರ್ – ಆಡಿಯೋ ಬಿಡುಗಡೆ.
ಬೆಂಗಳೂರು ಆ.29

ಗೌರಿ ಗಣೇಶ ಹಬ್ಬದ ಪ್ರಯುಕ್ತ ‘ಗಂಗೆ ಗೌರಿ’ ಕನ್ನಡ ಚಲನ ಚಿತ್ರದ ಟ್ರೇಲರ್ ಮತ್ತು ಹಾಡುಗಳ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ಶ್ರೀ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ಕುಡುಚಿ ಕ್ಷೇತ್ರದ ಮಾಜಿ ಶಾಸಕ ಪಿ.ರಾಜೀವ್, ಬಂಜಾರ ಸಂಸ್ಕೃತಿ ಹಾಗೂ ಭಾಷಾ ಆಕಾಡೆಮಿ ಅಧ್ಯಕ್ಷ ಡಾ, ಎ.ಆರ್ ಗೋವಿಂದಸ್ವಾಮಿ, ಡೇರಿಂಗ್ ಸ್ಟಾರ್ ಪ್ರಿಯಾಹಾಸನ್ ಮತ್ತು ಕರ್ನಾಟಕ ಚಲನ ಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನರ‍್ಕೆ ವಿಶ್ವನಾಥ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಚಿತ್ರ ತಂಡಕ್ಕೆ ಶುಭ ಕೋರಿದರು. ಹಿರಿಯ ನಟ ಗಣೇಶ್‌ರಾವ್ ಕೇಸರ್‌ಕರ್ ಮಾತನಾಡಿ ಶಿವನಾಗಿ ನಾನು ಕಾಣಿಸಿ ಕೊಂಡಿದ್ದು, ನನ್ನ ೩೫೦ ನೇ. ಚಿತ್ರ ಎಂಬುದು ವಿಶೇಷ. ಹಾಗೂ ಜಿ.ಆರ್ ಫಿಲಂಸ್ ಅಡಿಯಲ್ಲಿ ಎರಡನೇ ಕಾಣಿಕೆಯಾಗಿ ನಿರ್ಮಾಣ ಮಾಡಲಾಗಿದೆ ಎಂದರು. ಬೆಂಗಳೂರು, ಶ್ರೀರಂಗಪಟ್ಟಣ, ಮೈಸೂರು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ನಿರ್ದೇಶಕರು ಹೇಳುವಂತೆ ಶಿವ ಪುರಾಣದಲ್ಲಿ ಗಂಗೆ ಗೌರಿ ಸಂಬಂಧ ಏನು? ಗಂಗೆ ಯಾಕೆ ಶಿವನ ತಲೆ ಮೇಲೆ ಇರುತ್ತಾಳೆ? ಗೌರಿ ಯಾಕೆ ಶಿವನ ತೊಡೆ ಮೇಲೆ ಕೂತಿರುತ್ತಾಳೆ? ಇದಕ್ಕೆ ಕಾರಣವೇನು? ಇಬ್ಬರನ್ನು ಶಿವನು ಯಾವ ರೀತಿ ಸಂಭಾಳಿಸುತ್ತಾನೆ ಎಂಬುದು ಚಿತ್ರದಲ್ಲಿದೆ. ಇದು ನನ್ನ ೩೨ ನೇ. ಚಿತ್ರವಾಗಿದೆ ಎಂದು ನಿರ್ದೇಶಕ ಬಿ.ಎ ಪುರುಷೋತ್ತಮ್ ಓಂಕಾರ್ ಸ್ವಾಮಿ ಹೇಳಿದರು. ಕಾರ್ಯಕ್ರಮದಲ್ಲಿ ಚಿತ್ರ ತಂಡದವರೆಲ್ಲ ಪಾಲ್ಗೊಂಡಿದ್ದರು. ರಂಗಭೂಮಿ ನಟಿ ರಾಣೆಬೆನ್ನೂರಿನ ರೂಪಾಲಿ ಮೂರು ಶೇಡ್‌ಗಳಲ್ಲಿ ಅಂದರೆ ಗೌರಿ, ಪಾರ್ವತಿ, ದಾಕ್ಷಾಯಿಣಿ ಅವತಾರಗಳಲ್ಲಿ ಕಾಣಿಸಿ ಕೊಂಡಿದ್ದಾರೆ. ಗಂಗೆಯಾಗಿ ನಿಖಿತಾಸ್ವಾಮಿ. ತಾರಾಗಣದಲ್ಲಿ ಜಯಸಿಂಹ ಮುಸೂರಿ, ಎಸ್ಕಾರ್ಟ್ ಶ್ರೀನಿವಾಸ್, ಜಿಮ್ ಶಿವು ಬಸವರಾಜ ದೇಸಾಯಿ, ಧನಲಕ್ಷಿ, ಮಮತಗೌಡ, ಕು.ಋತುಸ್ಪರ್ಶ, ಗೀತಾ, ರಕ್ಷಾಗೌಡ ನಟಿಸಿದ್ದಾರೆ. ರಾಜ್ ಭಾಸ್ಕರ್ ಸಂಗೀತ, ಗೌರಿ ವೆಂಕಟೇಶ್ ಛಾಯಾಗ್ರಹಣ, ಸಂಕಲನ ಗ್ರಾಫಿಕ್ಸ್-ಡಿಐ ಅನಿಲ್, ಪತ್ರಿಕಾ ಸಂಪರ್ಕ ಚಂದ್ರಶೇಖರ, ಡಾ, ಪ್ರಭು ಗಂಜಿಹಾಳ, ಡಾ, ವೀರೇಶ ಹಂಡಿಗಿ, ಚಿತ್ರಕಥೆ-ಸಾಹಿತ್ಯ ಮತ್ತು ನಿರ್ದೇಶನ ಬಿ.ಎ ಪುರುಷೋತ್ತಮ್ ಅವರದ್ದಾಗಿದೆ. ಗಣೇಶರಾವ್ ಕೇಸರಕರ ನಿರ್ಮಾಪಕರಾಗಿದ್ದು, ಸಹ ನಿರ್ಮಾಪಕರಾಗಿ ತುಳಜಾಬಾಯಿ, ರೂಪ.ಎಸ್ ದೊಡ್ಮನಿ, ಸುಮಿತ ಪ್ರವೀಣ್, ಬಸವರಾಜ್ ದೇಸಾಯಿ ಇದ್ದಾರೆ.
*****
ಡಾ, ಪ್ರಭು ಗಂಜಿಹಾಳ
ಮೊ:೯೪೪೮೭೭೫೩೪೬

