“ಇಂದಿನ ಯುವಕ-ಯುವತಿಯರು ಡಾ, ಬಿ.ಆರ್ ಅಂಬೇಡ್ಕರ್ ರಂತೆ ಶಿಕ್ಷಣ ದತ್ತ ಸಾಗಿದರೆ ಮರ್ಯಾದಾಹತ್ಯೆಗೆ ಕಡಿವಾಣ ಬೀಳುವುದು ಖಚಿತ”..!

ಹುಬ್ಬಳ್ಳಿಯಲ್ಲಿ ನಡೆದಿರುವ ಈ ಮರ್ಯಾದೆ ಹತ್ಯೆ ವಿಡಿಯೋ ನೋಡಿ ಮನಸ್ಸಿಗೆ ಆಘಾತವಾಯಿತು.ಆ ಯುವಕನ ರೋದನೆಗೆ ಮನಸ್ಸು ಮಮ್ಮಲ ಮರುಗಿತು. ಬಾಬಾ ಸಾಹೇಬರು ಯಾಕೋ ತುಂಬಾ ನೆನಪಾದರು. ಅವರು ಹೇಳಿರುವಂತೆ “ಉನ್ನತ ಶಿಕ್ಷಣ ಪಡೆದು ಉನ್ನತ ಸ್ಥಾನ ಅಲಂಕರಿಸುವುದು ನಮ್ಮ ಮೊದಲ ಆದ್ಯತೆ ಆಗಬೇಕು”. ಇಂತಾದಾಗ ನಾನೇ ಶ್ರೇಷ್ಠ ಅನ್ನುವವರು ಕೂಡ ನಮ್ಕ ಬಳಿ ಬಂದು ಒಂದೇ ತಟ್ಟೆಯಲ್ಲಿ ಉಣ್ಣುತ್ತಾರೆ ಅಷ್ಟೇಯೇಕೆ, ನಮ್ಮೊಟ್ಟಿಗೆ ಸಂಬಂಧ ಕೂಡ ಅವರಾಗಿಯೇ ಬೆಳೆಸುತ್ತಾರೆ ಎಂಬ ಸತ್ಯ ಕಣ್ಣೆದಿರು ಬಂದು ನಿಂತಿತು. ಇದರರ್ಥ ಮನುಷ್ಯರು ಜಾತಿಯನ್ನ ಬಡತನದಲ್ಲಿ ಹುಡುಕುತ್ತಾರೆ ವಿನಾ ಶ್ರೀಮಂತಿಕೆಯಲ್ಲಿ ಅಲ್ಲಾ! ಎನ್ನುವುದಾಗಿದೆ. ಇದನ್ನ ನಾವು ಮನ ಗಾಣಬೇಕಿದೆ.
ನಾವು ಇಂದು ಊಹಿಸಲಾಗದಂತಹ ಶೋಷಣೆಯನ್ನು ಬಾಬಾಸಾಹೇಬ್ ಅಂಬೇಡ್ಕರ್ ಅವರು ಅಂದೇ ಅನುಭವಿಸಿದ್ದಾರೆ. ಆದರೆ ಅವರು ಅದ್ಯಾವುದಕೂ ಅಂಜದೆ ಅಳುಕದೆ ಸಮಾಜವನ್ನ ಪ್ರಶ್ನಿಸಿ, ಕಷ್ಟಪಟ್ಟು ಶಿಕ್ಷಣ ಪಡೆದು ಮಹಾಜ್ಞಾನಿ ಎನಿಸಿಕೊಳ್ಳುವ ಮೂಲಕ ಇಡೀ ಜಗತ್ತಿನ ಅಸ್ಪೃಶ್ಯರರಿಗೆ ಸ್ಪೂರ್ತಿಯಾಗಿ ನಿಂತಿದ್ದಾರೆ. ಶೋಷಣೆಯ ನೋವುಂಡವರೆಲ್ಲರೂ ಬಾಬಾಸಾಹೇಬರ ಈ ಶಿಕ್ಷಣಮಾರ್ಗ ಅನುಸರಿಸಿದರೆ ಹುಬ್ಬಳ್ಳಿಯಲ್ಲಿ ನಡೆದಂತಹ ಮರ್ಯಾದಾಹತ್ಯೆಗಳಿಗೆ ಕಡಿವಾಣ ಬೀಳುವುದು ಖಚಿತ ಎಂದೇ ಹೇಳಬಹುದು.

ಆದ್ದರಿಂದ…ಇಂದು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಉಚಿತ ಶಿಕ್ಷಣ,ಉಚಿತ ಹಾಸ್ಟೆಲ್,ಉಚಿತ ತರಬೇತಿಗಳು…ಹೀಗೆ ಸಾಲು ಸಾಲು ಅವಕಾಶಗಳಿವೆ. ಆದರೆ ಅವುಗಳನ್ನು ಬಳಸಿ ಕೊಂಡು ಜೀವನ ರೂಪಿಸಿ ಕೊಳ್ಳುತ್ತಿರುವವರ ಸಂಖ್ಯೆ ಎಷ್ಟಿದೆ ಯೋಚಿಸ ಬೇಕಿದೆ. ಎಷ್ಟೊ ಯುವಕರು ಯುವತಿಯರು ಅರ್ಧಕ್ಕೆ ಶಿಕ್ಷಣವನ್ನು ನಿಲ್ಲಿಸಿ ಬಿಡುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಂತೂ ಎಸ್ ಎಸ್ ಎಲ್.ಸಿ ಮುಗಿಸುವುದು ಸಹ ಕಷ್ಟವಾಗಿಬಿಟ್ಟಿದೆ. ಇವರೆಲ್ಲಾ ಅಂಬೇಡ್ಕರರನ್ನು ಗುರುವಾಗಿ,ಆದರ್ಶವಾಗಿಟ್ಟುಕೊಂಡು ಅವರ ಹಾದಿಯಲ್ಲಿ ಏಕೆ ಸಾಗುತ್ತಿಲ್ಲ ಎಂದು ಯೋಚಿಸಿದಾಗ ಮನಸ್ಸು ಭಾರವಾಗುತ್ತದೆ& ಸಿಗುವ ಕಾರಣಗಳಂತೂ ಅತ್ಯಂತ ಕ್ಷುಲ್ಲಕವಾಗಿರುತ್ತವೆ. ಹೆತ್ತವರೇ ಹೇಳಿಬಿಡುತ್ತಾರೆ ಅವನು/ಳು ಓದಲ್ಲವೆಂದು. ವಾಸ್ತವವಾಗಿ ಹೇಳಬೇಕೆಂದರೆ, ನಗರ ಪ್ರದೇಶದ ಪೋಷಕರಲ್ಲಿರುವ ಶಿಕ್ಷಣದ ಕಾಳಜಿ ಮೆಚ್ಚುವಂತಿದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿನ ಪೋಷಕರಲ್ಲಿ ಆ ಕೊರತೆ ಎದ್ದುಕಾಣುತ್ತಿದೆ.
ಶಿಕ್ಷಣಕ್ಕೆ ಎಂತಹ ಶಕ್ತಿ ಇದೆ ಎಂದು ತಮ್ಮ ಜೀವನದ ಮೂಲಕ ಇಡೀ ಜಗತ್ತಿಗೆ ಸಾರಿದವರು ಬಾಬಾಸಾಹೇಬ್ ಅಂಬೇಡ್ಕರ್ ಅವರು. ಅಂತಹ ದಿಟ್ಟತನದ ನಿಲುವಿಗೆ ಇಂದಿನ ಯುವಕರು& ಯುವತಿಯರು ಏಕೆ ಅಂಟಿಕೊಳ್ಳುತ್ತಿಲ್ಲ ಎಂದು ಚರ್ಚಿಸ ಬೇಕಿದೆ. ಹುಬ್ಬಳ್ಳಿಯ ಘಟನೆಯನ್ನೆ ಉದಾಹರಣೆಯಾಗಿ ತೆಗೆದುಕೊಂಡರೆ, ತನ್ನ ಮಗಳನ್ನು ಮದುವೆಯಾದ ವ್ಯಕ್ತಿ ಒಂದು ಸರ್ಕಾರಿ ಹುದ್ದೆಯಲ್ಲಿದ್ದಿದ್ದರೆ ಅಥವಾ ಒಂದೊಳ್ಳೆ ಉದ್ಯಮಿಯೋ ಆಗಿದ್ದರೆ ಇಂತಹ ಹತ್ಯೆ ಮಾಡುತಿದ್ದನೆ? ಒಮ್ಮೆ ಯೋಚಿಸಿ ನೋಡಿ! ಬಡತನದಲ್ಲಿ ಕಂಡ ಅಸಮಾನತೆಗಳನ್ನು ಅಳಿಸುವ ಶಕ್ತಿ ಶಿಕ್ಷಣಕ್ಕಿದೆ ಎಂಬುದನ್ನ ನಾವು ಗಂಭಿರವಾಗಿ ಪರಿಗಣಿಸ ಬೇಕಿದೆ.

ಅನಾದಿ ಕಾಲದಿಂದ ರಾಜರೋಷವಾಗಿ ಅಟ್ಟಹಾಸ ಮೆರೆದ ಅಸಮಾನತೆಯ ಪೀಡೆಯಿಂದ ಇಂದಿಗೂ ಮುಕ್ತಿ ಇಲ್ಲ ಎನ್ನುವುದಕೆ ಇಂದು ನಡೆಯುತ್ತಿರುವ ಇಂತಹ ಅಮಾನವೀಯ ಕೃತ್ಯಗಳೇ ಸಾಕ್ಷಿಯಾಗಿ ನಿಂತಿವೆ. ಸಾವಿರಾರು ವರುಷಗಳಿಂದ ಬುದ್ಧ, ಪ್ರವಾದಿ, ಬಸವಣ್ಣ ರಾದಿಯಾಗಿ ಸಮಾನತೆಯನ್ನು ಎಷ್ಟು ಸಾರಿದರು ಜನಗಳ ತಲೆಗೆ ಇನ್ನೂ ಹೋಗಿಲ್ಲ. ಅದೇ ಜಾತಿ, ಅದೇ ಮೇಲು ಕೀಳು ಭಾವ ತುಂಬಿ ತುಳು ಕಾಡುತಿದೆ. ಜಾತಿ ಎನ್ನುವುದು ಮನುಷ್ಯನಿಗೆ ಅಂಟಿದ ವಾಸಿ ಯಾಗದ ರೋಗ ವಾಗಿಬಿಟ್ಟಿದೆಯೆನೊ ಎಂಬ ಶಂಕೆ ಮೂಡುವಷ್ಟು ಅವ್ಯವಸ್ಥೆ ಇದೆ. ಇದಕ್ಕೆಲ್ಲಾ ಮದ್ದು ಅಂದರೆ ಶಿಕ್ಷಣ ಮಾತ್ರ.ಹಾಗಾಗಿ ಶಿಕ್ಷಣವನ್ನು ಎಲ್ಲರೂ ಅಸ್ತ್ರವಾಗಿ ಮಾಡಿಕೊಂಡು ಈ ಜಾತಿ ಪದ್ಧತಿಯನ್ನ ಹೋಗಲಾಡಿಸ ಬೇಕಿದೆ.
ಈ ಕಾರ್ಯಸಾಧನೆಯಲ್ಲಿ ಶಿಕ್ಷಕರು & ಪೋಷಕರ ಪಾತ್ರ ಮಹತ್ವದ್ದಾಗಿದ್ದು, ಇದಕಾಗಿ ಸಮಾಜದ ಪ್ರತಿಯೊಬ್ಬ ಪ್ರಜೆಯು ಕೂಡ ಸಹಕರಿಸ ಬೇಕಿದೆ. ಮಕ್ಕಳು ಓದುವ ವಯಸ್ಸಿನಲ್ಲಿ ಓದಿನ ಕಡೆ ಮಾತ್ರ ಗಮನ ಕೊಡುವಂತೆ ಜಾಗೃತಿ ಮೂಡಿಸ ಬೇಕಿದೆ. ಬದುಕಿಗೆ ಭದ್ರವಾಗಿ ಒಂದೊಳ್ಳೆ ವೃತ್ತಿಯ ನಂತರ ತಮ್ಮಿಚ್ಛೆಯಂತೆ ಬದುಕಲು ಯಾವ ಜಾತಿಯೂ ಅಡ್ಡ ಬರುವುದಿಲ್ಲ ಎಂಬ ಸತ್ಯವನ್ನ ಅವರಿಗೆ ಅರ್ಥೈಸ ಬೇಕಿದೆ. ಈ ಕುರಿತು ಮಕ್ಕಳಲಿ ಪ್ರಭಾವ ಬೀರಲು, ಬಾಬಾ ಸಾಹೇಬರನ್ನು ಆದರ್ಶವಾಗಿಟ್ಟು ಕೊಂಡು, ಅವರು ತಮ್ಮ ಜೀವನದ ಶೋಷಣೆಯ ಕಲ್ಲು ಮುಳ್ಳಿನ ಹಾದಿಯನ್ನ ಶಿಕ್ಷಣದ ಮೂಲಕ ಹೇಗೆ ಹಸನ ಮಾಡಿ ಕೊಂಡರು ಎಂಬುದನ್ನ ತಿಳಿಸ ಬೇಕಿದೆ. ಅವರಂತೆ ನಾವು ಶಿಕ್ಷಣ ಪಡೆದು ಉನ್ನತ ಸ್ಥಾನಮಾನ ಗಳಿಸಿದರೆ, ಜಾತಿ ಮತ ಪಂಥ ಎಂಬ ಯಾವ ಅಡ್ಡ ಗೋಡೆಗಳಿಲ್ಲದ ಬದುಕು ನಮ್ಮದಾಗುತ್ತದೆ ಎಂಬುದನ್ನ ಅವರಿಗೆ ಮನದಟ್ಟು ಮಾಡಬೇಕಿದೆ. ಹಾಗಾದಾಗ ಮಾತ್ರ ಇಂತಹ ಮರ್ಯಾದಾಹತ್ಯೆಗಳಿಗೆ ಕಡಿವಾಣ ಬೀಳುತ್ತದೆ ಎಂಬುದು ನನ್ನ ಅಂಬೋಣವಾಗಿದೆ.
ಡಿ.ಶಬ್ರಿನಾ.ಮಹಮದ್ ಅಲಿ
ಚಳ್ಳಕೆರೆ

