ಜಾತಿ ರಕ್ಕಸರ ಅಟ್ಟಹಾಸಕ್ಕೆ ಅಂತ್ಯ ಹಾಡಿದ ಹೆಣ್ಣು ಮಗಳು ಮಾನ್ಯ – ರೋಣ ತಾಲೂಕ ದಲಿತ ಯುವ ಮುಖಂಡ ಅಂದಪ್ಪ ಮಾದರ ತೀವ್ರ ಆಕ್ರೋಶ.
ರೋಣ ಡಿ.26

ಕರ್ನಾಟಕವು ಪ್ರಗತಿಪರ ರಾಜ್ಯವೆಂದು ಕರೆಸಿ ಕೊಳ್ಳಲು ನಮಗೆ ಈಗ ಭಯವಾಗುತ್ತಿದೆ. ಜಾತಿಯ ವಿಷ ಕುಡಿದು ಹೆತ್ತ ಮಗಳನ್ನೇ ಸೀಳುವ ಹಂತಕರು ಇರುವ ಈ ನಾಡು ಬಸವಣ್ಣ ನವರ ಕಲ್ಯಾಣ ರಾಜ್ಯವಾಗಲು ಹೇಗೆ ಸಾಧ್ಯ? ಎಂದು ರೋಣ ತಾಲೂಕಿನ ದಲಿತ ಯುವ ಮುಖಂಡರಾದ ಅಂದಪ್ಪ ಮಾದರ ಅವರು ಗುಡುಗಿದ್ದಾರೆ.
ಹುಬ್ಬಳ್ಳಿಯ ಈಶ್ವರ ನಗರದ ಭೀಕರ ಮರ್ಯಾದಾ ಹತ್ಯೆ ಹಾಗೂ ಬಾಗಲಕೋಟೆಯ ಚವಡಪುರ ಗ್ರಾಮದ ದೇವಸ್ಥಾನ ಪ್ರವೇಶದ ಮೇಲಿನ ಹಲ್ಲೆಯನ್ನು ಖಂಡಿಸಿ ಅವರು ಸಾರ್ವಜನಿಕ ಹೇಳಿಕೆ ನೀಡಿದ್ದಾರೆ.
1, ಗರ್ಭಿಣಿ ಮಗಳ ಹೊಟ್ಟೆ ಸೀಳಿದ ಕ್ರೌರ್ಯ ಮನು ಕುಲಕ್ಕೆ ಕಂಟಕ:-
ಹುಬ್ಬಳ್ಳಿಯ ಘಟನೆ ಕೇಳಿದರೆ ಮೈ ನಡುಗುತ್ತದೆ. ಪ್ರೀತಿಸಿ ಮದುವೆಯಾದ ಮಗಳು ಗರ್ಭಿಣಿ ಎಂದು ತಿಳಿದಿದ್ದರೂ ಆಕೆಯ ಹೊಟ್ಟೆಯನ್ನು ಸೀಳಿ ಹತ್ಯೆ ಮಾಡಿರುವುದು ಪೈಶಾಚಿಕ ಕೃತ್ಯ.
ಜಾತಿ ಎಂಬ ಭೂತ ಮನುಷ್ಯನನ್ನು ಎಷ್ಟು ಕ್ರೂರಿಯನ್ನಾಗಿ ಮಾಡುತ್ತದೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಿಲ್ಲ. ತನ್ನ ಮಗಳ ಪ್ರಾಣಕ್ಕಿಂತ ಜಾತಿಯ ಗೌರವವೇ ದೊಡ್ಡದಾಯಿತು ಎನ್ನುವ ಇಂತಹ ಸಮಾಜಘಾತಕ ಶಕ್ತಿಗಳನ್ನು ಸಮಾಜ ದಿಂದ ಬಹಿಷ್ಕರಿಸ ಬೇಕು. ಈ ಹಂತಕರಿಗೆ ನ್ಯಾಯಾಲಯವು ಯಾವುದೇ ದಯೆ ತೋರದೆ ಮರಣ ದಂಡನೆ ವಿಧಿಸ ಬೇಕು.
2. ಚವಡಪುರದ ಅಸ್ಪೃಶ್ಯತೆ ಸನಾತನ ಕ್ರೌರ್ಯದ ಮುಂದುವರಿಕೆ:-
ಬಾಗಲಕೋಟೆಯ ಚವಡಪುರದಲ್ಲಿ 26 ಜನರ ಗುಂಪು ಒಬ್ಬ ದಲಿತ ವ್ಯಕ್ತಿಯ ಮೇಲೆ ಹಲ್ಲೆ ಮಾಡಿರುವುದು ಸಂವಿಧಾನಕ್ಕೆ ಎಸಗಿದ ದ್ರೋಹ. ಅಂಬೇಡ್ಕರ್ ಅವರು ನಮಗೆ ಸಮಾನತೆಯ ಹಕ್ಕು ನೀಡಿದ್ದರೂ. ಇಂದಿಗೂ ದೇವಸ್ಥಾನದ ಒಳಗೆ ಹೋಗಲು ರಕ್ತ ಸುರಿಸ ಬೇಕಾದ ಸ್ಥಿತಿ ಇರುವುದು ದುರದೃಷ್ಟಕರ. ದಲಿತರ ಮತ ಬೇಕು, ಆದರೆ ದಲಿತರು ದೇವಸ್ಥಾನಕ್ಕೆ ಬರುವುದು ಬೇಡ ಎನ್ನುವ ಇವರ ದ್ವಿಮುಖ ನೀತಿಯನ್ನು ನಾವು ಮೆಟ್ಟಿ ನಿಲ್ಲುತ್ತೇವೆ. ಹಲ್ಲೆ ಮಾಡಿದ ಪ್ರತಿಯೊಬ್ಬನನ್ನೂ ಜೈಲಿಗೆ ಅಟ್ಟುವ ವರೆಗೂ ನಾವು ಸುಮ್ಮನಿರುವುದಿಲ್ಲ.
ಗೃಹ ಸಚಿವರು ಮತ್ತು ಮುಖ್ಯಮಂತ್ರಿಗಳು ಕೇವಲ ಟ್ವೀಟ್ ಮಾಡಿ ಕೈತೊಳೆದು ಕೊಳ್ಳಬಾರದು. ಇಂತಹ ಪ್ರಕರಣಗಳನ್ನು ವಿಚಾರಣೆ ನಡೆಸಲು ಫಾಸ್ಟ್ ಟ್ರ್ಯಾಕ್ (ವಿಶೇಷ) ನ್ಯಾಯಾಲಯ ಸ್ಥಾಪಿಸಬೇಕು. ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ಭದ್ರತೆ ಮತ್ತು ತಲಾ 50 ಲಕ್ಷ ರೂ.ಗಳ ಪರಿಹಾರ ನೀಡಬೇಕು. ತಪ್ಪಿದಲ್ಲಿ ರೋಣ ತಾಲೂಕಿನ ಪ್ರತಿಯೊಂದು ಹಳ್ಳಿಯಿಂದ ದಲಿತ ಸಮುದಾಯ ಮತ್ತು ವಿದ್ಯಾರ್ಥಿ ಸಂಘಟನೆಗಳು ಒಗ್ಗೂಡಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಿದ್ದೇವೆ.
ಜಾತಿಯ ಬೇಲಿಗಳನ್ನು ಒಡೆಯುವ ಪ್ರೇಮಿಗಳಿಗೆ ರಕ್ಷಣೆ ನೀಡದಿದ್ದರೆ ಮತ್ತು ದಲಿತರ ಘನತೆಯನ್ನು ಕಾಪಾಡದಿದ್ದರೆ.ಈ ಪ್ರಜಾಪ್ರಭುತ್ವಕ್ಕೆ ಅರ್ಥವೇ ಇರುವುದಿಲ್ಲ. ನಮ್ಮ ತಾಳ್ಮೆಯನ್ನು ಪರೀಕ್ಷಿಸಬೇಡಿ, ನ್ಯಾಯ ಸಿಗದಿದ್ದರೆ ಹೋರಾಟದ ಕಿಚ್ಚು ಹತ್ತಿರಲಿದೆ.ಎಂದು ಅಂದಪ್ಪ ಮಾದರ, ದಲಿತ ಯುವ ಮುಖಂಡರು, ರೋಣ.ಇವರು ಪತ್ರಿಕಾ ಮಾಧ್ಯಮದ ಮೂಲಕ ಆಕ್ರೋಶ ವ್ಯಕ್ತಪಡೆಸುವುದರೊಂದಿಗೆ ಎಚ್ಚರಿಸಿದ್ದಾರೆ.

