ಧಾರವಾಡ ನುಡಿ ಸಡಗರ ಎರಡು – ದಿನ ಕಾರ್ಯಕ್ರಮ ಆಯೋಜನೆ.
ಧಾರವಾಡ ಡಿ.27

ಚೇತನ ಫೌಂಡೇಶನ ಹಾಗೂ ಕ.ವಿ.ವಿ ಕನಕ ಅಧ್ಯಯನ ಪೀಠದ ಸಹಯೋಗದಲ್ಲಿ ಡಿ.27 ಮತ್ತು ಡಿ.28 ರಂದು ಎರಡು ದಿನಗಳ ಕಾಲ ಕನಕ ಭವನದಲ್ಲಿ ಧಾರವಾಡ ನುಡಿ ಸಡಗರ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ನುಡಿ ಸಡಗರ ಸಂಯೋಜಕ ಚಂದ್ರಶೇಖರ ಮಾಡಲಗೇರಿ ಹೇಳಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.27 ರಂದು ಬೆಳಿಗ್ಗೆ 10:30 ಗಂಟೆಗೆ ಕವಿವಿ ಕುಲಪತಿ ಪ್ರೊ.ಎ.ಎಂ ಖಾನ್ ಚಾಲನೆ ನೀಡಲಿದ್ದಾರೆ. ಕನಕ ಅಧ್ಯಯನ ಪೀಠದ ಸಂಯೋಜಕ ಡಾ, ಹನಮಗೌಡ ಸಿ ಆಶಯ ನುಡಿಗಳನ್ನಾಡಲಿದ್ದು, ಮುಖ್ಯ ಅತಿಥಿಗಳಾಗಿ ಡಾ, ರಾಜಶೇಖರ ಮಠಪತಿ, ಡಾ, ಶರಣು ಮುಷ್ಠಿಗೇರಿ, ಡಾ, ಶರಣಬಸಪ್ಪ ಯತ್ನಳ್ಳಿ ಸೇರಿದಂತೆ ಗಣ್ಯರು ಆಗಮಿಸಲಿದ್ದಾರೆ ಎಂದರು.
ಬೆಳಿಗ್ಗೆ 11:30 ಗಂಟೆಗೆ ಕನಕದಾಸರ ಕೀರ್ತನೆಗಳಲ್ಲಿ ಧರ್ಮ, ಸಂಸ್ಕೃತಿಯ ಧೋರಣೆಗಳು ಎಂಬ ವಿಷಯ ಕುರಿತು ಮೊದಲ ಗೋಷ್ಠಿ ಇರಲಿದ್ದು, ಡಾ, ಸಿ.ಡಿ ದೊಡ್ಡಮನಿ ವಿಷಯ ಮಂಡಿಸಲಿದ್ದಾರೆ. ಗದಗದ ಸಾಹಿತಿ ಡಾ, ಆರ್.ಜಿ ಚಿಕ್ಕಮಠ ಅಧ್ಯಕ್ಷತೆ ವಹಿಸಲಿದ್ದಾರೆ. ಇದಾದ ಬಳಿಕ 1:30 ಗಂಟೆಗೆ ಗಜಲ್/ ಆಚೆ,ಈಚೆ ಗೋಷ್ಠಿ ಜರುಗಲಿದ್ದು, ಲೇಖಕಿ ನಿರ್ಮಲಾ ಶೆಟ್ಟರ ಆಶಯ ನುಡಿಗಳನ್ನಾಡಲಿದ್ದಾರೆ. ಇದಾದ ಬಳಿಕ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ನಂತರ ಸಾಧಕರಿಗೆ ಪ್ರಶಸ್ತಿ ಪ್ರಧಾನ ನೆರವೇರಲಿದೆ. ಡಾ, ಸುಧಾರಾಣಿ ಎನ್, ಡಾ, ತೇಜಸ್ವಿ ಕಿರಣ್, ಡಾ, ಆರ್.ಜಿ ಚಿಕ್ಕಮಠ ಸೇರಿದಂತೆ ವಿವಿಧ ಕ್ಷೇತ್ರದ 50 ಸಾಧಕರಿಗೆ ವಿವಿಧ ಪ್ರಶಸ್ತಿ ಪ್ರಧಾನ ಆಗಲಿದೆ ಎಂದರು.
ಡಿ.28 ರಂದು ಬೆಳಿಗ್ಗೆ 10:00 ಗಂಟೆಗೆ ಬೇಂದ್ರೆ ಕಾವ್ಯದ ದೇಶಿಯತೆ, ಕಾವ್ಯ ವಾಚನ ಹಾಗೂ ಮುಕ್ತ ಸಂವಾದ ಗೋಷ್ಠಿ ನಡೆಯಲಿದ್ದು, ಲೇಖಕ ಡಾ, ಪ್ರಕಾಶ ಖಾಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಜನಪದ ಕಲಾವಿದ ಶಂಕರ ಬೈಚಬಾಳ ವಿಷಯ ಮಂಡಿಸಲಿದ್ದು, ಮಹದೇವ ಬಸರಕೋಡ ಆಶಯ ನುಡಿಗಳನ್ನಾಡಲಿದ್ದಾರೆ. ಮಧ್ಯಾಹ್ನ 1:30 ಗಂಟೆಗೆ ರಂಗಭೂಮಿ, ಚಲನ ಚಿತ್ರ ಕಲಾವಿದರ, ತಂತ್ರಜ್ಞರ ಬದುಕಿನ ಕಥೆಗಳು ಎಂಬ ವಿಷಯ ಕುರಿತು ಗೋಷ್ಠಿ ನಡೆಯಲಿದೆ. ಹಿರಿಯ ರಂಗಕರ್ಮಿ ಡಾ, ಶಶಿಧರ ನರೇಂದ್ರ ಅಧ್ಯಕ್ಷತೆ ವಹಿಸಲಿದ್ದು, ಸುಪ್ರಿಯಾ ಹಾಗೂ ಸುರೇಂದ್ರ ಗುಡ್ಡೇಹೋಟಲ್ ವಿಷಯ ಮಂಡಿಸಲಿದ್ದಾರೆ ಎಂದರು.
ಮಧ್ಯಾಹ್ನ 3:30 ಗಂಟೆಗೆ ಸಮಾರೋಪ ಜರುಗಲಿದ್ದು, ಈ ವೇಳೆ ಸಾಧಕರಿಗೆ ಪ್ರಶಸ್ತಿ ಪ್ರಧಾನ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಕಸಾಪ ಜಿಲ್ಲಾಧ್ಯಕ್ಷ ಡಾ, ಲಿಂಗರಾಜ ಅಂಗಡಿ ಪ್ರಶಸ್ತಿ ಪ್ರಧಾನ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಸಾಹಿತಿ ಸುರೇಶ ಕೋರಕೊಪ್ಪ, ಎಲ್.ಐ ಲಕ್ಕಮ್ಮನವರ, ಅನುಪಮ ಹಂಸಭಾವಿ, ಮೃತ್ಯುಂಜಯ ವಸ್ತ್ರದ, ದಾನೇಶ ಬಿಂದಲಗಿ, ಪೂರ್ಣಿಮಾ ಕುಂಬಾರ ಆಗಮಿಸಲಿದ್ದಾರೆ. ಈ ವೇಳೆ ಡಾ, ಉಮೇಶ ತಿಮ್ಮಾಪೂರ ಅವರ ಕಗ್ಗಲ್ಲ ಕ್ರಾಸ ಕಥಾ ಸಂಕಲನಕ್ಕೆ 2025 ನೇ. ಸಾಲಿನ ಅತ್ಯುತ್ತಮ ಕಥಾ ಸಂಕಲನ ಪ್ರಶಸ್ತಿ ಪ್ರಧಾನ ನೆರವೇರಲಿದೆ ಎಂದರು. ಪತ್ರಿಕಾ ಗೋಷ್ಠಿಯಲ್ಲಿ ರಾಜೇಂದ್ರಕುಮಾರ ಮಠ ಇದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ

