ಪರಬ್ರಹ್ಮ ಸ್ವರೂಪವನ್ನು ವರ್ಣಿಸಲಾಗದು – ಪೂಜ್ಯ ವೈ.ರಾಜಾರಾಮ್ ಸದ್ಗುರುಗಳು.
ಚಳ್ಳಕೆರೆ ಡಿ.27

ಪ್ರತಿಯೊಬ್ಬರ ಒಳಗೂ ನೆಲೆಸಿರುವ ಪರಬ್ರಹ್ಮ ಸ್ವರೂಪವನ್ನು ವರ್ಣಿಸಲು ಸಾಧ್ಯವಿಲ್ಲ ಎಂದು ಚಳ್ಳಕೆರೆಯ ನರಹರಿ ನಗರದ ಶ್ರೀನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಪರಮಪೂಜ್ಯ ವೈ ರಾಜಾರಾಮ್ ಸದ್ಗುರುಗಳು ತಿಳಿಸಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ “ಕೇನ ಉಪನಿಷತ್” ಪ್ರವಚನ ಮಾಲಿಕೆ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಕೇನ ಎಂಬ ಪದದಿಂದ ಇದು ಪ್ರಾರಂಭವಾಗುವುದಿಂದ ಇದಕ್ಕೆ “ಕೇನೋಪನಿಷತ್” ಎಂದು ಕರೆಯುತ್ತಾರೆ, ಇದು ಜೈಮಿನಿ ಬ್ರಾಹ್ಮಣದ ಒಂಬತ್ತನೇ ಮಂಡಲದಲ್ಲಿದೆ, ಇದು ಸಾಮವೇದದಲ್ಲಿ ಬರುವುದು. ಈ ಉಪನಿಷತ್ತಿನಲ್ಲಿ ನಾಲ್ಕು ಅಧ್ಯಾಯಗಳಿವೆ,ಇಲ್ಲಿ ಒಂದಕ್ಕೂ ಮತ್ತೊಂದಕ್ಕೂ ಪರಸ್ಪರ ಹೊಂದಾಣಿಕೆಯನ್ನು ನೋಡುತ್ತೇವೆ.

ಮೊದಲ ಅಧ್ಯಾಯ ಬ್ರಹ್ಮವನ್ನು ವಿಷಯೀಕರಿಸುವುದಕ್ಕೆ ಆಗುವುದಿಲ್ಲ ಎಂದು ಹೇಳುವುದು, ಎರಡನೇ ಅಧ್ಯಾಯ ಬ್ರಹ್ಮವನ್ನು ಯಾರು ಅರಿತಿರುವರೋ ಅವರೇ ನಿಜವಾಗಿ ಇದನ್ನು ತಿಳಿದವರು ಎನ್ನುವುದು, ಮೂರನೇ ಅಧ್ಯಾಯ ಒಂದು ಸಣ್ಣ ಕಥೆಯಿಂದ ಪ್ರಾರಂಭವಾಗುವುದು, ನಾಲ್ಕನೇ ಅಧ್ಯಾಯವು ಅದರ ಸ್ವರೂಪವೇನು ಎಂಬುದನ್ನು ವಿವರಿಸುವುದು ಎಂದು ಅದರ ಒಳಾರ್ಥವನ್ನು ಸವಿವರವಾಗಿ ಉದಾಹರಣೆಗಳ ಮೂಲಕ ಕಟ್ಟಿಕೊಟ್ಟರು.

ಈ ಸತ್ಸಂಗದ ಆರಂಭದಲ್ಲಿ ನವಲಗುಂದದ ಶ್ರೀಶಾರದೇಶ್ವರಿ ಆಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ಅನನ್ಯಮಯೀ ಮತ್ತು ಶ್ರೀಶಾರದಾಶ್ರಮದ ಸದ್ಭಕ್ತರಿಂದ ವಿಶೇಷ ಭಜನೆ ನಡೆಯಿತು.

ಸತ್ಸಂಗದ ಅಧ್ಯಕ್ಷತೆಯನ್ನು ಆಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರು ವಹಿಸಿದ್ದರು.
ಕಾರ್ಯಕ್ರಮದ ಸ್ವಾಗತ ಪರಿಚಯವನ್ನು ವೆಂಕಟಲಕ್ಷ್ಮೀ ಮಾಡಿದರೆ ವಂದನಾರ್ಪಣೆಯನ್ನು ಯತೀಶ್ ಎಂ ಸಿದ್ದಾಪುರ ನೆರವೇರಿಸಿದರು.
ಸತ್ಸಂಗದಲ್ಲಿ ಎಚ್, ಲಕ್ಷ್ಮೀದೇವಮ್ಮ , ಎಂ.ಗೀತಾ ನಾಗರಾಜ್, ಗೀತಾ ವೆಂಕಟೇಶರೆಡ್ಡಿ, ರಾಧಾ ಪದ್ಮನಾಭ, ಗೀತಾ ಭಕ್ತವತ್ಸಲ, ಸುಶೀಲಮ್ಮ ಅಯ್ಯಪ್ಪ, ಪ್ರೇಮಲೀಲಾ, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ವೀರಮ್ಮ, ರಶ್ಮಿ ರಮೇಶ್, ವಿಜಯಲಕ್ಷ್ಮೀ, ಉಷಾ ಶ್ರೀನಿವಾಸ್, ಗಂಗಾಧರಶೆಟ್ಟಿ, ಸರಸ್ವತಿ ಪಾಂಡು, ವಾಸವಿ, ನಳಿನ, ಲಕ್ಷ್ಮೀ, ನಳಿನಿ ಹರಿಕೃಷ್ಣ, ಅಂಬಿಕಾ ಪರಮೇಶ್ವರ್, ಪುಷ್ಪಲತಾ, ಸಿ.ಎಸ್ ಭಾರತಿ, ರಾಮಚಂದ್ರಪ್ಪ, ಮಲ್ಲಿಕಾರ್ಜುನಪ್ಪ, ಜಿ.ಯಶೋಧಾ ಪ್ರಕಾಶ್, ಕವಿತಾ,ಸಂಜನಾ, ಋತಿಕ್, ಸಂತೋಷ್, ಡಾ, ಭೂಮಿಕಾ ಸೇರಿದಂತೆ ಸಾಕಷ್ಟು ಸಂಖ್ಯೆಯ ಸದ್ಭಕ್ತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

