‘ಮುಸ್ಲಿಮರು ಭಾರತದ ಈ ನೆಲದ ಮಕ್ಕಳೆ ಹೊರತು ಹೊರಗಿನವರಲ್ಲ’ ಎಂದು ಸಾರುವ ಕೃತಿ-ಕೆ.ಟಿ ಹುಸೈನ್ ಅವರ ‘ಭಾರತದ ಸಾಮಾಜಿಕ ವಿಕಸನ ಮತ್ತು ಮುಸ್ಲಿಮರು’….. ಡಿ.ಶಬ್ರಿನಾ ಮಹಮದ್ ಅಲಿ.

ಮೂಲ: ಕೆ.ಟಿ.ಹುಸೈನ್ (ಮಲಯಾಳಂ)

ಕನ್ನಡಕ್ಕೆ:ಅರಫಾ ಮಂಚಿ (ಸನ್ಮಾರ್ಗ ಉಪ ಸಂಪಾದಕರು)

ಮಂಗಳೂರಿನ ಶಾಂತಿ ಪ್ರಕಾಶನದಿಂದ ಪ್ರಕಟಗೊಂಡ ‘ಭಾರತದ ಸಾಮಾಜಿಕ ವಿಕಸನ ಮತ್ತು ಮುಸ್ಲಿಮರು’ ಕೃತಿ ನವೆಂಬರ್ ೧೨ ರಂದು ಮಂಗಳೂರಿನಲ್ಲಿ ಡಾ, ರಾಮ್ ಪುನಿಯಾನಿ,ಖ್ಯಾತ ಇತಿಹಾಸ ತಜ್ಞರು, ಮುಂಬೈ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ, ಪುರುಷೋತ್ತಮ ಬಿಳಿಮಲೆ ವಾರ್ತಾ ಭಾರತಿಯ ಪ್ರಧಾನ ಸಂಪಾದಕರಾದ ಜ|ಅಬ್ದುಲ್ ಸಲಾಂ ಪುತ್ತಿಗೆ, ಶಾಂತಿ ಪ್ರಕಾಶನದ ಅಧ್ಯಕ್ಷರಾದ ಮುಹಮ್ಮದ್ ಸಾದ್, ಮತ್ತಿತರ ಅನೇಕ ಗಣ್ಯರ ಉಪಸ್ಥಿತಿಯಲ್ಲಿ ಬಿಡುಗಡೆ ಗೊಂಡಿತು. ಈ ಕೃತಿ ಓದುವ ಕುತೂಹಲ ದಿಂದ ಬಿಡುಗಡೆಯಾದ ದಿನವೇ ಶಾಂತಿ ಪ್ರಕಾಶನಕ್ಕೆ ಕರೆ ಮಾಡಿ ಖರೀದಿಸಿದೆ. ಒಂದೆರಡು ದಿನಗಳಲ್ಲಿ ಕೃತಿ ಕೈಸೇರಿತು.

ತಡ ಮಾಡದೇ ಓದಲು ಪ್ರಾರಂಭಿಸಿದೆ. ಪ್ರಕಾಶಕರ ನುಡಿ & ಪ್ರಸ್ತಾವನೆ ಎರಡನ್ನ ಓದಿ ಮುಗಿಸುವದರೊಳಗೆ ನನ್ನಲಿದ್ದ ಅನೇಕ ಸಂದೇಹಗಳಿಗೆ ಸ್ಪಷ್ಟ ಉತ್ತರ ಸಿಕ್ಕಿದ್ದು ನೋಡಿ ಆನಂದವಾಯಿತು. ೪೪೦ ಪುಟಗಳಿರುವ ಈ ಕೃತಿಯಲ್ಲಿ ಲೇಖಕ ಕೆ.ಟಿ ಹುಸೈನ್ ಅವರು ೭ ಭಾಗಗಳಲ್ಲಿ ತಮ್ಮ ವಿಚಾರವನ್ನ ಅತ್ಯಂತ ಪ್ರಾಮಾಣಿಕತೆ ಯಿಂದ ಮಂಡಿಸಿರುವುದು ಸ್ವಾಗತರ್ಹವೆನಿಸಿತು. ಪೂರ್ಣ ಕೃತಿ ಓದಿ ಮುಗಿಸುವ ಹೊತ್ತಿಗೆ ನಾನು ಹಿಡಿದಿರುವ ಈ ಕೃತಿ ಕೇವಲ ಕೃತಿಯಲ್ಲ; ಮುಸ್ಲಿಮರ ಸತ್ಯ ಇತಿಹಾಸಕೆ ಕವಿದ ಕತ್ತಲನು ಸರಿಸಿ ಬೆಳಕ ಪಸರಿಸುವ ಕೈದೀವಿಗೆಯೇ ಸರಿ ಎಂಬಂತೆ ನನಗೆ ಭಾಸವಾಯಿತು. “ಪ್ರತಿ ಓದುಗನ ಅರಿವನ್ನ ವಿಸ್ತರಿಸುವ ಅತ್ಯಂತ ಮೌಲ್ಯಯುತವಾದ ಕೃತಿ ಇದಾಗಿದೆ” ಎಂದು ನಾನು ತುಂಬಾ ಹೆಮ್ಮೆಯಿಂದ ಹೇಳ ಬಯಸುತ್ತೇನೆ. ಲೇಖಕರು ಮಂಡಿಸಿರುವ ವಿಚಾರಗಳಂತೂ ಒಂದಕ್ಕಿಂತ ಒಂದು ಅದ್ಭುತವಾಗಿದ್ದು, ಪ್ರಸ್ತುತ ದಿನಮಾನಕ್ಕೆ ಆ ವಿಚಾರಗಳೆಲ್ಲವೂ ಅತೀ ಅವಶ್ಯಕ ವೆನಿಸಿದವು.

ಸುದೀರ್ಘ ವಿಚಾರ ಮಂಡನೆ ಇರುವುದರಿಂದ ಕೇವಲ ಒಂದೆರಡು ಮಾತುಗಳಲ್ಲಿ ಈ ಕೃತಿಯ ಅಭಿಪ್ರಾಯ ಮಂಡಿಸಲಾಗದು! ಆದಕಾರಣ ನಾನು ೭ ಭಾಗಗಳಲ್ಲಿ ಒಂದೊಂದೆ ಭಾಗದ ಕುರಿತು ಪ್ರತಿ ಭಾಗ ಯಾವ ವಿಚಾರ ಕುರಿತು ಚರ್ಚಿಸಿದೆ, ಆ ಭಾಗದ ತಿರುಳೇನು ಎಂಬುದನ್ನ ಹಂಚಿ ಕೊಳ್ಳಲಿಚ್ಛಿಸಿದ್ದೇನೆ.

ಭಾಗ ೧:-ಭಾರತದ ಸಾಮಾಜಿಕ ವಿಕಸನ & ಮುಸ್ಲಿಮರು.ಮೊದಲ ಈ ಭಾಗ ಎತ್ತಿದ ಪ್ರಶ್ನೆಗಳು ಹೀಗಿವೆ….

೧) ಮುಸ್ಲಿಂರು ಭಾರತದ ಈ ನೆಲದ ಮಕ್ಕಳೆ ಹೊರತು ಹೊರಗಿನವರಲ್ಲ.ಹೇಗೆ?

೨) ಭಾರತಕ್ಕೆ ಇಸ್ಲಾಂ ಮೊದಲ ಬಾರಿ ಬಂದಾಗ ಇಲ್ಲಿನ ಜನರೇಕೆ ಆಕರ್ಷಿತರಾಗಿ ಒಪ್ಪಿ ಅಪ್ಪಿ ಕೊಂಡರು?

ಈ ಕೃತಿಯಲ್ಲಿ ಮೇಲಿನ ಮೊದಲ ಪ್ರಶ್ನೆಗೆ ಉತ್ತರ ಏನಿದೆ, ಹೇಗೆ ಎಂಬುದನ್ನ ನೋಡುವ ಕುತೂಹಲವೇ..ಹಾಗಾದರೆ ತಮ್ಮ ಪ್ರೀತಿಯ ಓದು ಮುಂದುವರೆಸಿ….

ಮುಸ್ಲಿಮರು ಭಾರತದ ಮಣ್ಣಿನ ಮಕ್ಕಳೇ ಹೊರತು ಹೊರಗಿನವರಲ್ಲ, ಹೇಗೆ?

ಲೇಖಕರಾದ ಕೆ.ಟಿ ಹುಸೈನ್ ಅವರು ಕೃತಿಯ ಪ್ರಸ್ತಾವನೆಯಲ್ಲಿ ಹೀಗೆ ಹೇಳುತ್ತಾರೆ,’ಭಾರತ’ ಜಗತ್ತಿನಲ್ಲಿ ಅತಿ ಹೆಚ್ಚು ಮುಸ್ಲಿಮರನ್ನು ಹೊಂದಿರುವ ಮೂರನೇ ದೇಶವಾಗಿದೆ. ಭಾರತದಿಂದ ವಿಭಜನೆ ಗೊಂಡ ಪಾಕಿಸ್ತಾನ ಬಾಂಗ್ಲಾದೇಶಗಳನ್ನು ಸೇರಿಸಿದಾಗ ಜಗತ್ತಿನಲ್ಲಿ ಭಾರತ ಉಪ ಖಂಡವು ಅತ್ಯಂತ ಹೆಚ್ಚು ಮುಸ್ಲಿಮರಿರುವ ನಾಡನೆಸಿ ಕೊಳ್ಳುತ್ತದೆ. ಭಾರತದಲ್ಲಿ ಮುಸ್ಲಿಮರು ಅತಿ ದೊಡ್ಡ ಅಲ್ಪಸಂಖ್ಯಾತ ವರ್ಗ. ಅವರ ಜನಸಂಖ್ಯೆ ಭಾರತದ ಒಟ್ಟು ಜನ ಸಂಖ್ಯೆಯ ಶೇಕಡ 15 ರಿಂದ ಶೇಕಡ 20 ರ ಒಳಗೆ ಬರುತ್ತದೆ. ಜಗತ್ತಿನ ಹಲವು ದೇಶಗಳಲ್ಲಿ ಇಲ್ಲಿಗೆ ಬೇರೆ ದೇಶಗಳಿಂದ ವಲಸೆ ಬಂದವರನ್ನು ‘ಧಾರ್ಮಿಕ ಅಲ್ಪಸಂಖ್ಯಾತರು’ ಎಂದು ಕರೆಯಲಾಗುತ್ತದೆ. ಆದರೆ ಭಾರತದ ಮುಸ್ಲಿಮರನ್ನು ಇಲ್ಲಿಗೆ ಎಲ್ಲಿಂದಲೊ ವಲಸೆ ಬಂದವರೆಂದು ಕರೆಯುವಂತಿಲ್ಲ. ಅವರು ತಲೆ ತಲಾಂತರಗಳಿಂದ ಇಲ್ಲಿ ಹುಟ್ಟಿ ಬೆಳೆದವರು. ಅವರು ಈ ನಾಡನ್ನು ಹಲವು ರೀತಿಯಲ್ಲಿ ಶ್ರೀಮಂತ ಗೊಳಿಸಿದ್ದಾರೆ. ಇಲ್ಲಿಯೇ ಬದುಕಿ ಇಲ್ಲಿಯೇ ಸತ್ತು ಮಣ್ಣಾಗುವ ಇಲ್ಲಿನ ಮಣ್ಣಿನ ಮಕ್ಕಳು ಅವರಾಗಿದ್ದಾರೆ.

ಮುಸ್ಲಿಮರ ಪೂರ್ವಜರು ಶತಮಾನಗಳ ಹಿಂದೆ ಭಾರತಕ್ಕೆ ಬೋಧಕರಾಗಿ ಬಂದರು. ಅದೇ ರೀತಿ ಅವರಲ್ಲಿ ವ್ಯಾಪಾರಕ್ಕೆ ಅಥವಾ ದಂಡೆತ್ತಿ ಬಂದವರು ಕೂಡ ಇದ್ದಾರೆ. ಇಲ್ಲಿಗೆ ಬಂದ ಮೇಲೆ ಅವರು ತಮ್ಮ ದೇಶಕ್ಕೆ ಮರಳಲಿಲ್ಲ, ಇಲ್ಲಿನ ಸಂಪತ್ತನ್ನು ಅಲ್ಲಿಗೆ ಸಾಗಿಸಲಿಲ್ಲ ಅದಕ್ಕೆ ಬದಲಾಗಿ ಅವರು ಈ ನಾಡಿನ ಸಾಮಾಜಿಕ ಜೀವನ ಸಂಸ್ಕೃತಿಗಳನ್ನು ರೂಪಿಸುವುದರಲ್ಲಿ ಮುಖ್ಯ ಪಾತ್ರವಹಿಸಿದರು ಮತ್ತು ಇಲ್ಲಿಯೇ ಬದುಕಿದರು ಇಲ್ಲಿಯೇ ಮರಣ ಹೊಂದಿದರು.

ಆದುದರಿಂದ ಒಂದು ಜನ ವಿಭಾಗವನ್ನು ಇಲ್ಲಿನ ಮಣ್ಣಿನ ಮಕ್ಕಳು ಮತ್ತು ಉಳಿದವರನ್ನು ಹೊರಗಿನಿಂದ ಬಂದವರೆಂದು ವಾದಿಸಲು ಯಾರಿಗೂ ಸಾಧ್ಯವಿಲ್ಲ ಎಂಬುದನ್ನೇ ಇದು ತೋರಿಸಿ ಕೊಡುತ್ತದೆ. ವಾಸ್ತವದಲ್ಲಿ ಅರ್ಯರು ದ್ರಾವಿಡರು ಮತ್ತು ಮುಸ್ಲಿಮರೆಲ್ಲ ಇದೇ ಮಣ್ಣಿನ ಮಕ್ಕಳೇ ಯಾಗಿದ್ದಾರೆ. ಹಿಂದಿನ ಕಾಲದಲ್ಲಿ ಇವರೇ ಇವರಲ್ಲಿ ಹಲವರ ವಿರುದ್ಧ ಪರಸ್ಪರ ಯುದ್ಧವನ್ನು ಮಾಡಿರಬಹುದು, ಅದರಂತೆ ಆರ್ಯರು ದ್ರಾವಿಡರೊಂದಿಗೆ ಯುದ್ಧ ಮಾಡಿದ್ದಾರೆ, ಮುಸ್ಲಿಮರು ಆರ್ಯ ವಂಶದ ರಾಜರುಗಳೊಂದಿಗೆ ಯುದ್ಧವನ್ನು ಮಾಡಿದ್ದಾರೆ. ಮಾತ್ರವಲ್ಲ ಪರಸ್ಪರ ಸಹಕರಿಸಿ ಶಾಂತವಾಗಿಯೂ ಇಲ್ಲಿ ಜೀವನ ನಡೆಸಿದ್ದಾರೆ. ಇದೆ ಸಹವರ್ತಿತ್ವ ಮತ್ತು ಘರ್ಷಣೆಗಳು ಭಾರತವನ್ನು ರೂಪಿಸಿವೆ. ಹೀಗೆ ರೂಪಗೊಂಡ ನಾಡನ್ನೇ ‘ವಿವಿಧತೆ ಬಹುತ್ವವನ್ನು ಒಳಗೊಂಡ ಭಾರತ’ ಎಂದು ಕರೆಯಲಾಗುತ್ತಿದೆ.

ನಮ್ಮ ಭಾರತ ಏಷ್ಯ ಮತ್ತು ಯುರೋಪಿನ ಹಲವು ದೇಶಗಳಿಂದ ಭಿನ್ನವಾಗಿದೆ. ಭೂಮಿಯಲ್ಲಿರುವ ಹಲವು ಸಮುದಾಯಗಳು ಇಲ್ಲಿ ನೆಲೆಸಿರುವುದರಿಂದ ಈ ವಿಭಿನ್ನತೆ ಭಾರತಕ್ಕೆ ಬಂತು‌. ಭಾರತದಲ್ಲಿ ನಡೆದ ಪರಸ್ಪರ ಸಾಂಸ್ಕೃತಿಕ ಕೊಡುಕೊಳ್ಳುವಿಕೆಗಳು ಕೂಡ ಈ ವಿಭಿನ್ನತೆಗೆ ಇನ್ನೊಂದು ಕಾರಣವಾಗಿದೆ. ವಿವಿಧ ಸಂಸ್ಕೃತಿ ವಿವಿಧ ನಂಬಿಕೆಗಳ ದೇಶ ಭಾರತ. ಒಂದೇ ನಂಬಿಕೆ ಮತ್ತು ಒಂದೇ ಸಂಸ್ಕೃತಿ ಅಡಿಯಲ್ಲಿ ಎಂದೂ ಭಾರತ ಏಕೀಕರಣ ಗೊಳ್ಳಲಿಲ್ಲ! ಹಾಗೆ ನಡೆದಿದ್ದರೆ ಭಾರತದ ವಿಶೇಷತೆಯಾದ ಸಾಂಸ್ಕೃತಿಕ ವೈವಿಧ್ಯತೆಯ ಇಲ್ಲಿ ಅಸ್ತಿತ್ವದಲ್ಲಿ ಇರುತ್ತಿರಲಿಲ್ಲ. ಇದೇ ವೇಳೆ ಇಲ್ಲಿನ ಪ್ರತಿಯೊಂದು ವಿಭಾಗಗಳು ಮತ್ತು ಅವುಗಳ ಸಂಸ್ಕೃತಿಗಳು ಪರಸ್ಪರ ಪ್ರಭಾವಕ್ಕೊಳಗಾಗಿವೆ. ಆದ್ದರಿಂದ ಭಾರತದಲ್ಲಿ ‘ಏಕ ಸಂಸ್ಕೃತಿ’ ಎಂಬುದು ಬೆಳೆಯಲೇ ಇಲ್ಲ! ಭಾರತದ ವೈವಿಧ್ಯತೆಯನ್ನು ಸಾಂಸ್ಕೃತಿಕವಾಗಿ ಒಂದೇ ಕಡೆ ಹಿಡಿದು ನಿಲ್ಲಿಸಲು ಸಾಧ್ಯವಿಲ್ಲ ಮತ್ತು ಏಕ ಸಂಸ್ಕೃತಿಯಲ್ಲಿ ವಿಲೀನವಾಗಲಾರದು! ಭಾರತದ ಈ ವೈವಿಧ್ಯತೆಗಳ ವಿಶೇಷತೆಯನ್ನು ಉಳಿಸಿ ಕೊಂಡೆ ಸಾಂಸ್ಕೃತಿಕ ಕೊಡುಕೊಳ್ಳುವಿಕೆ ನಡೆಯಿತು. ಸಮಾಜದಲ್ಲಿ ಜನರ ಜೊತೆಗೂಡಿ ಜೀವಿಸೋದು ಕೂಡ ಭಾರತದ ವಿಶೇಷತೆಯಾಗಿದೆ ಎಂದು ಹೇಳಿದ್ದಾರೆ.

ಲೇಖಕರ ಈ ಮಾತುಗಳೆಲ್ಲವೂ ಸತ್ಯ ಅನಿಸಿದವು. ಭಾರತದ ಮಣ್ಣಿನಲ್ಲಿ ಜನಿಸಿದ ಪ್ರತಿಯೊಬ್ಬರು ಈ ಮಣ್ಣಿನ ಮಕ್ಕಳೇ ಯಾಗಿರುತ್ತಾರೆ. ಹೀಗಿರುವಾಗ ಮುಸ್ಲಿಂರನ್ನು ಮಾತ್ರ ಏಕೆ ಬೇರೆಯಾಗಿ ಕಾಣಬೇಕು ಎಂಬ ಪ್ರಶ್ನೆ ಸಹಜವಾಗಿ ಓದುಗನಲ್ಲಿ ಮೂಡುತ್ತದೆ. ಉದಾ. ಆಗಿ ನನ್ನನ್ನೇ ನಾ ತೆಗೆದು ಕೊಳ್ಳುತ್ತೇನೆ. ನಾನು ಒರ್ವ ಮುಸ್ಲಿಂ ಆಗಿದ್ದು, ನನಗೆ ಭಾರತದ ಬಗ್ಗೆ ಅಪಾರ ದೇಶಾಭಿಮಾನ ಇದೆ. ಭಾರತದ ತ್ರಿವರ್ಣ ಧ್ವಜವನ್ನು ನೋಡಿದರೆ ಮೈ ಮನ ರೋಮಾಂಚನವಾಗುತ್ತದೆ. ರಾಷ್ಟ್ರೀಗೀತೆ, ವಂದೇಮಾತರಂ ಗೀತೆಗಳನ್ನು ಕೇಳಿದಾಗ ನನ್ನ ಮನ ಆಕಾಶದಲ್ಲಿ ತೇಲಾಡುತ್ತದೆ. ಅಷ್ಟೇಯೇಕೆ, ಈ ನೆಲದ ಭಾಷೆ, ಇತಿಹಾಸ, ಕಲೆ, ಸಾಹಿತ್ಯ, ವಾಸ್ತುಶಿಲ್ಪ & ಸಂಸ್ಕೃತಿಯ ಮೇಲೆ ಅಪಾರ ಗೌರವವಿದೆ. ದೇಶವೆಂದಾಕ್ಷಣ ನೆನಪಾಗುವುದೇ ನಮ್ಮ ಭಾರತ. ಹೀಗಿರುವಾಗ ನನ್ನನ್ನು ಹೊರಗಿನವಳು ಎಂದು ಹೇಳಲು ನಿಮಗೆ ಹೇಗೆ ಸಾಧ್ಯವಾಗುವುದು? ಹಾಗೇ ಬಿಂಬಿಸಿದಾಗ ನನ್ನ ಮನಸ್ಸಿಗೆ ಆಗುವ ನೋವನ್ನು ನಿಮ್ಮಿಂದ ಊಹಿಸಲು ಸಾಧ್ಯವೇ? ಖಂಡಿತಾ ಇಲ್ಲ! ಈ ಮಣ್ಣಿನಲಿ ಹುಟ್ಟಿ ಇಲ್ಲೇ ಸಾಯುವ ಪ್ರತಿಯೊಬ್ಬರು ಈ ದೇಶದವರೆ ಆಗಿದ್ದಾರೆ. ಆದ್ದರಿಂದ ನಾವು ಭವ್ಯ ಭಾರತವನ್ನು ‘ಬಹುತ್ವ’ವಾಗಿಯೇ ನೋಡಬೇಕು & ವಿವಿಧತೆಯಲ್ಲಿ ಏಕತೆಯನ್ನು ಕಾಣಬೇಕು ಎಂಬ ಸಾರ್ವಕಾಲಿಕ ಸತ್ಯವನ್ನು ಲೇಖಕ ಬಿ.ಟಿ ಹುಸೈನ್ ಅವರು ಈ ಕೃತಿಯಲ್ಲಿ ಎತ್ತಿ ಹಿಡಿದಿದ್ದಾರೆ. ಮುಸ್ಲಿಂರನ್ನು ಶತ್ರುಗಳಂತೆ ಬಿಂಬಿಸುವ ಕೆಲ ಅಜ್ಞಾನಿಗಳಂತೂ ಈ ಕೃತಿಯನ್ನು ಓದಲೇ ಬೇಕಿದೆ.

೨) ಹಾಗೂ ಭಾರತಕ್ಕೆ ಮೊದಲ ಬಾರಿಗೆ ಇಸ್ಲಾಂ ಬಂದಾಗ ಜನರೇಕೆ ಆಕರ್ಷಿತರಾಗಿ ಒಪ್ಪಿ ಅಪ್ಪಿ ಕೊಂಡರು?

ಈ ವಿಚಾರ ಮಂಡನೆಯಲ್ಲಿ, ಲೇಖಕರು ಪ್ರತಿ ಓದುಗರಿಗೆ ಸ್ಪಷ್ಟ ಉತ್ತರವನ್ನು ನೀಡುವಲ್ಲಿ ಯಶಸ್ವಿ ಯಾಗಿದ್ದಾರೆ ಎಂದೇ ಹೇಳಬಹುದು. ಅವರ ಮಂಡನೆ ಹೀಗಿದೆ,….. ಪ್ರವಾದಿ ಮುಹಮ್ಮದರು ಬದುಕಿದ್ದ ಕಾಲದಲ್ಲಿ ಅರೇಬಿಯಾದಲ್ಲಿ ಸೃಷ್ಟಿಯಾದ ಸಾಮಾಜಿಕ ನವೋತ್ಥಾನ ಮತ್ತು ಪರಿವರ್ತನೆಯನ್ನು ಅವರ ಅನುಯಾಯಿಗಳು ಹೆಚ್ಚು ವಿಳಂಬವಾಗದಂತೆ ಪೌರತ್ಯ ನಾಡುಗಳು ಮತ್ತು ಪರ್ಷಿಯ ಆಫ್ರಿಕಾ ಯುರೋಪ್ ಮುಂತಾದೆಡೆ ಪ್ರಚಾರ ಮಾಡಿದರು. ಈ ಪ್ರಚಾರಕರಲ್ಲಿ ಸೈನಿಕರಿದ್ದರು ವ್ಯಾಪಾರಿಗಳಿದ್ದರೂ ಧರ್ಮ ಬೋಧಕರಿದ್ದರು. ಅವರು ಅಲ್ಲಿ ಧರ್ಮ ಪ್ರಚಾರ ಮಾಡಿದ್ದಷ್ಟೇ ಅಲ್ಲ; ಬದಲಾಗಿ ಒಂದು ಜೀವನ ರೀತಿ ಸಂಸ್ಕೃತಿಯನ್ನೇ ಅಲ್ಲಿಗೆ ಕೊಡುಗೆ ನೀಡಿದರು. ಇಸ್ಲಾಂ ಸ್ಪೇನಿಗೆ ತಲುಪಿದಾಗ ಅಲ್ಲಿಯ ವರೆಗೆ ಸ್ನಾನ ಮಾಡುವ ಅಭ್ಯಾಸವೇ ಇರಲಿಲ್ಲ. ಅವರು ಸ್ನಾನ ಮಾಡುವುದನ್ನು ‘ಸ್ವಚ್ಛತೆ ವಿಶ್ವಾಸದ ಭಾಗ’ ಎಂದಿರುವ ಇಸ್ಲಾಮಿನ ಅನುಯಾಯಿಗಳಿಂದ ಕಲಿತರು.

ಈ ಸಾಮಾಜಿಕ ನವೋತ್ಥಾನವೂ ಖಂಡಿತ ಭಾರತಕ್ಕೂ ತಲುಪಿದೆ. ಹಲವು ದಾರಿಗಳ ಮೂಲಕ ಇಸ್ಲಾಂ ಭಾರತಕ್ಕೆ ಬಂತು. ಅದು ಕೇರಳ ಸಹಿತ ಪಶ್ಚಿಮ ಕರಾವಳಿಗೆ ವ್ಯಾಪಾರಿಗಳ ಮೂಲಕ ಬಂತು. ಇಸ್ಲಾಮ್ ಇಲ್ಲಿಗೆ ಬಂದಿರುವ ಕಾಲದ ಕುರಿತು ವಿಭಿನ್ನ ಅಭಿಪ್ರಾಯಗಳು ಕಾಣುತ್ತವೆ. ಆದರೂ ಭಾರತಕ್ಕೆ ಮುಸ್ಲಿಮರು ಮೊಟ್ಟ ಮೊದಲ ಕಾಲಿಟ್ಟ ಜಾಗ ಮಲಬಾರ್ ಒಳಗೊಂಡ ಪಶ್ಚಿಮ ಕರಾವಳಿಯಾಗಿದೆ ಎಂಬ ವಿಷಯ ನಿರ್ವಿವಾದವಾಗಿದೆ ಎಂಬುದನ್ನ‌ ಅತ್ಯಂತ ಖಚಿತವಾಗಿ ಲೇಖಕ ಕೆ.ಟಿ ಹುಸೈನ್ ಅವರು ಹೇಳುತ್ತಾರೆ.

ಇಸ್ಲಾಂನ ವಿಶೇಷತೆ:-

ಇಸ್ಲಾಮಿನಲ್ಲಿ ಜಾತಿಗಳಿಲ್ಲ ಅಸ್ಪೃಶ್ಯತೆ ಇಲ್ಲ ಎಂಬುದು ಮುಸ್ಲಿಮರೊಂದಿಗೆ ಬೆರೆಯುವ ಅವಕಾಶ ಸಿಕ್ಕಿದ ಪ್ರತಿಯೊಬ್ಬ ಅಸ್ಪೃಶ್ಯ ವ್ಯಕ್ತಿಗೆ ಅರ್ಥವಾಗಿತ್ತು. ಒಟ್ಟಿಗೆ ಕೂತು ಒಂದೇ ಪಾತ್ರೆಯಿಂದ ಕುಡಿಯುವುದು ತಿನ್ನುವುದು ರಾಜ ಪ್ರಜೆ ಎಂಬ ವ್ಯತ್ಯಾಸಗಳಿಲ್ಲದೆ ಭುಜಕ್ಕೆ ಭುಜ ತಾಗಿಸಿ ನಮಾಜ್ ಮಾಡುವುದೆಲ್ಲವೂ ಮುಸ್ಲಿಮರ ಜೀವನದ ಸಮಾನತೆಯ ಪ್ರತ್ಯಕ್ಷ ದರ್ಶನವು ಭಾರತೀಯರಲ್ಲಿ ಆಶ್ಚರ್ಯವನ್ನುಂಟು ಮಾಡಿತು. ಮೊಹಮ್ಮದ್ ಬಿನ್ ಕಾಸಿಂ ಸಿಂಧನ ವಶಪಡಿಸಿ ಕೊಂಡ ನಂತರ ತನ್ನ ಅರಮನೆಯಲ್ಲಿ ಔತಣಕೂಟ ಏರ್ಪಡಿಸಿದನು. ಈ ಮೊದಲು ಅರಮನೆಯನ್ನು ಒಬ್ಬ ಅಸ್ಪೃಶ್ಯ ಜಾತಿಯ ವ್ಯಕ್ತಿ ದೂರದಲ್ಲಿ ನಿಂತು ನೋಡಲು ಕೂಡ ಸಾಧ್ಯ ಇರಲಿಲ್ಲ. ಅಂತಹುದರಲ್ಲಿ, ಈಗ ಅದೇ ಅರಮನೆಯ ಅಂಗಳದಲ್ಲಿ ಅಸ್ಪೃಶ್ಯರು ಸಹಿತ ಭಾಗವಹಿಸಿದ ಸಾಮೂಹಿಕ ಔತಣಕೂಟವನ್ನು ಮಹಮದ್ ಬಿನ್ ಕಾಸಿಂ ಏರ್ಪಡಿಸಿದರು. ಈ ಔತಣಕೂಟದಿಂದ ತೃಪ್ತಿಗೊಂಡ ಅಸ್ಪೃಶ್ಯರಲ್ಲಿ ಅನೇಕರು ಇಸ್ಲಾಂ ಸ್ವೀಕರಿಸಿದರು.

ಎಂ.ಎನ್ ರಾಯ್ ಹೇಳಿರುವುದನ್ನು ಲೇಖಕರು ಇಲ್ಲಿ ಸ್ಮರಿಸಿ ಕೊಂಡಿದ್ದಾರೆ “ಇಸ್ಲಾಮಿನ ಆಗಮನದೊಂದಿಗೆ ಭಾರತೀಯರು ಎಷ್ಟು ಶತಮಾನಗಳಿಂದ ಆಚರಿಸುತ್ತಿದ್ದ ಸರ್ವ ವಿಧದ ಆಚಾರ ಅನುಷ್ಠಾನಗಳ ಸಿಂಧುತ್ವವು ಪ್ರಶ್ನಿಸಲ್ಪಟ್ಟಿತು. ಹೆಚ್ಚು ತರ್ಕ ಬದ್ಧವಾದ ಏಕದೇವನ ಹುಡುಕಾಟದತ್ತ ಅವರ ಬುದ್ಧಿ ಚಲಿಸಿತು. ಎಷ್ಟೋ ವಿಭಾಗಗಳಿಂದ ಜನರಲ್ಲಿ ದೇವರ ಅಲೋಕಿಕ ಶಕ್ತಿಯ ಕುರಿತ ನಂಬಿಕೆ ನೆಲೆಯುರಿತ್ತು. ಶಕ್ತಿಶಾಲಿ ದೇವರುಗಳಿಂದ ತಮ್ಮನ್ನು ರಕ್ಷಿಸುವ ಅಧಿಕಾರ ಪುರೋಹಿತರಿಗೆ ಮಾತ್ರ ಇದೆ ಎಂದು ಜನರು ನಂಬಿದ್ದರು ಅವರಲ್ಲಿದ್ದ ಈ ನಂಬಿಕೆಯ ಲಾಭ ಪಡೆದುಕೊಂಡ ಪುರೋಹಿತ ವರ್ಗವು ಕೊಬ್ಬಿ ಹೋಗಿತ್ತು

ಸಾವಿರಾರು ಭಕ್ತ ಜನರು ತಮ್ಮ ಇಷ್ಟಮೂರ್ತಿಗಳಿಗೆ ವಂದಿಸುತ್ತಿದ್ದರು. ಆದರೆ ಹಠಾತ್ತನೆ ಮುಸ್ಲಿಮರ ದಾಳಿ ನಡೆದಾಗ ಜನರ ಆಚಾರಣೆ ಮತ್ತು ನಂಬಿಕೆಗಳೆಲ್ಲ ಕಾಗದ ಅರಮನೆಯಂತೆ ಕುಸಿದು ಬಿದ್ದವು. ದಾಳಿಕೊರರ ವಿರುದ್ಧ ತಮ್ಮ ಇಷ್ಷ ದೇವರುಗಳಿಂದ ಏನಾದರೂ ಬರಬಹುದು ಮತ್ತು ತಮಗೆ ಸಹಾಯ ಸಿಗಬಹುದೆಂದು ಅವರು ನಿರೀಕ್ಷಿಸಿದ್ದರು. ತಮ್ಮ ದೇವರುಗಳಿಗಿರುವ ಯಾವುದೋ ಒಂದು ಅದ್ಭುತ ಶಕ್ತಿ ಆಕ್ರಮಣಕಾರರನ್ನು ಸುಟ್ಟು ಹಾಕುತ್ತದೆ ಎಂದೇ ಅವರು ನಂಬಿದ್ದರು. ಆದರೆ ಅವರು ನಿರೀಕ್ಷಿಸಿದಂತೆ ಏನು ಆಗಲಿಲ್ಲ ಅತಿಕ್ರಮಣಕಾರರಿಗೆ ಅಧೀನವಾದ ಜನರ ದೇವರಿಂದ ಯಾವ ಅದ್ಭುತವು ಸಂಭವಿಸಲಿಲ್ಲ ವಶಪಡಿಸಿ ಕೊಂಡವರ ದೇವನಿಂದ ಆ ಅದ್ಭುತ ಸಂಭವಿಸಿತು. ಆದ್ದರಿಂದ ಜನರ ವಿಶ್ವಾಸವು ಅತಿಕ್ರಮಣಕಾರರ ಆ ಏಕದೇವನಿಗೆ ಅಧೀನವಾಯಿತು ಇಂತಹ ಸಂದಿಗ್ಧ ಘಟ್ಟದಲ್ಲಿ ಸಂಪೂರ್ಣ ಧಾರ್ಮಿಕರು ಎನಿಸಿ ಕೊಂಡಿದ್ದ ಜನರು ಇಸ್ಲಾಮಿಗೆ ಮತಾಂತರ ಗೊಂಡರು.

ಹೀಗೆ ಜನರು ಇಸ್ಲಾಂನ ಏಕದೇವಪೋಸನೆ, ಸಮಾನತೆ ಮಹಿಳೆಯರಿಗೆ ಸಮಾನ ಅವಕಾಶ, ಜ್ಞಾನ ಹಂಚುವಿಕೆ, ಕಲೆ ಮತ್ತು ವಾಸ್ತು ಶಿಲ್ಪದ ಸೌಂದರ್ಯ, ಶಿಕ್ಷಣದ ಸಾರ್ವತ್ರಿಕರಣ ಈ ಎಲ್ಲಾ ಪ್ರಭಾವಗಳಿಂದ ಇಸ್ಲಾಂ ಬಹಳ ವಿಶೇಷವಾಗಿ ಭಾರತೀಯರಿಗೆ ಕಂಡು ಬಂದಿತ್ತು.

ತತ್ವದ ಪ್ರಭಾವಕ್ಕೊಳಗಾಗಿ ಇಸ್ಲಾಂ ಸ್ವೀಕರಿಸಿದವರು:-

ಕೇರಳದ ಒಬ್ಬ ರಾಜ ಇಸ್ಲಾಮನ ಪ್ರಭಾವಕ್ಕೊಳಗಾಗಿ ಇಸ್ಲಾಂ ಸ್ವೀಕರಿಸಿದ್ದು ಒಂದು ಇತಿಹಾಸವಾಗಿದೆ. ಉಮವಿ ಖಲಿಫರಾಗಿ ಅಬ್ದುಲ್ ಮುಹಮ್ಮದ್ ಅಲಿ ಬಂದಾಗ ಸಿಂಧ್ ನವರಿಗೆ ‘ಇಸ್ಲಾಮಕ್ಕೆ ಬನ್ನಿ’ ಎಂದು ಪ್ರೀತಿಯ ಪತ್ರ ಬರೆದಿದ್ದರು. ಗಮನಿಸ ಬೇಕಾದ ಅಂಶ, ಪತ್ರದಲ್ಲಿ ಯಾವುದೇ ಬಲವಂತ ಮಾಡಿರಲಿಲ್ಲ. ಅವರ ಪತ್ರದ ರೀತಿಗೆ ಮತ್ತು ಇಸ್ಲಾಂನ ತತ್ವಕ್ಕೆ ತಲೆಬಾಗಿ ಅನೇಕ ಮಂದಿ ಇಸ್ಲಾಮನ್ನು ಸ್ವೀಕರಿಸಿದರು. ಅಷ್ಟೇ ಅಲ್ಲ ರಾಜ ಜಯಸಿಂಗ್ ‘ಇಸ್ಲಾಂ’ ಸ್ವೀಕರಿಸಿದ್ದು ಅತ್ಯಂತ ಪ್ರಮುಖ ಘಟನೆಯಾಗಿದೆ.

ಇಷ್ಟೆಲ್ಲಾ ಜನರ ಪ್ರೀತಿಗೆ ಪಾತ್ರವಾದ ‘ಇಸ್ಲಾಂ’ ಭಕ್ತಿ ಆಂದೋಲಗಳ ಮೇಲೆ ತೌಹೀದ್ (ಏಕದೇವೋಪಾಸನೆ) ಪ್ರಭಾವ ಬೀರಿರುವುದನ್ನು ನಾವು ಕಾಣುತ್ತೇವೆ. ಗುರುನಾನಕರ ‘ಸಿಖ್ ಧರ್ಮ’ ಹಾಗೂ ಹಿಂದೂ ಸಮಾಜ ಸುಧಾರಕರಾದ ರಾಜರಾಂ ಮೋಹನ್ ರಾಯ್ ರವರ ‘ಬ್ರಹ್ಮ ಸಮಾಜ’ ಮತ್ತು ಸ್ವಾಮಿ ದಯಾನಂದ ಸರಸ್ವತಿ ಅವರ ‘ಆರ್ಯ ಸಮಾಜ’ ಗಳ ಮೇಲೆ ಇಸ್ಲಾಮಿನ ಏಕದೇವೋಪಾಸನೆ ಅಗಾಧವಾದ ಪ್ರಭಾವ ಬೀರಿದೆ ಎಂಬುದು ನಿರ್ವಿವಾದವಾಗಿದೆ. ಅದರಲ್ಲೂ ದಯಾನಂದ ಸರಸ್ವತಿ ಮತ್ತು ರಾಜಾರಾಮ್ ಮೋಹನ್ ರಾಯ್ ವಿಗ್ರಹರಾಧನೆಯನ್ನು ವಿರೋಧಿಸಿದ್ದರು. ಈ ಆಂದೋಲನಗಳು ‘ಜನರಿಗೆ ವೇದಗಳ ಕಡೆಗೆ ಮರಳಿರಿ’ ಎಂದು ಕರೆ ನೀಡಿದವು. ಅಷ್ಟೇ ಅಲ್ಲದೆ ಶ್ರೀ ಶಂಕರರ ಅದ್ವೈತ ಸಂಕಲ್ಪದಲ್ಲಿ ಇಸ್ಲಾಮಿನ ಏಕದೇವೋಪಸನೆಯ ಪ್ರಭಾವವಿದೆ ಎಂದು ಅಭಿಪ್ರಾಯಗಳು ಕೂಡ ಇವೆ ಎಂಬ ವಿಚಾರ ಮಂಡಿಸಿದ್ದಾರೆ. ಹೀಗೆ ಲೇಖಕರು ಭಾರತಕ್ಕೆ ‘ಇಸ್ಲಾಂ’ ಆಗಮನ ಹೇಗಾಯಿತು, ಜನರೇಕೆ ಅದನ್ನು ಒಪ್ಪಿ ಅಪ್ಪಿ ಕೊಂಡರು ಎಂಬ ಇತಿಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಾ, ಉದಾಹರಣೆ ಸಮೇತ ಅರುಹಿದ್ದಾರೆ. ಇಷ್ಟು ವಿಚಾರ ಭಾಗ ಒಂದರದಾಗಿದ್ದು….ಭಾಗ ಎರಡು ಮುಂದುವರೆಯುವುದು.

ಧನ್ಯವಾದಗಳೊಂದಿಗೆ…

ಡಿ.ಶಬ್ರಿನಾ ಮಹಮದ್ ಅಲಿ.ಲೇಖಕಿ

ಚಳ್ಳಕೆರೆ (ಚಿತ್ರದುರ್ಗ)

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button