ಹರ್ಷೋದ್ಘಾರ ದೊಂದಿಗೆ ನೆರವೇರಿದ ಶ್ರೀ ಬನಶಂಕರಿದೇವಿ – ಮಹಾ ರಥೋತ್ಸವ ಜರುಗಿತು.
ಮುದ್ದೇಬಿಹಾಳ ಜ.03

ಪಟ್ಟಣದಲ್ಲಿ ನಡೆಯುತ್ತಿರುವ ಶ್ರೀ ಬನಶಂಕರಿ ದೇವಿಯ 7 ದಿನಗಳ ಜಾತ್ರಾ ಮಹೋತ್ಸವದ 5 ನೇ. ದಿನವಾದ ಶನಿವಾರ ಸಂಜೆ ಸಹಸ್ರಾರು ಭಕ್ತರ ಹರ್ಷೋದ್ಘಾರದೊಂದಿಗೆ, ಭಕ್ತರ ಹರಕೆ ಸಮೇತ ಶ್ರೀ ಬನಶಂಕರಿದೇವಿಯ ಮಹಾರಥೋತ್ಸವ ಸಾಂಗವಾಗಿ ನೆರವೇರಿತು. ಎಲ್ಲಾ ವಯೋಮಾನದ ಭಕ್ತರು ದೇವಸ್ಥಾನ ಮುಂಭಾಗದಿಂದ ಪಾದಗಟ್ಟೆಯ ವರೆಗೆ ಅಂದಾಜು 100-150 ಮೀಟರ್ ವರೆಗೆ ಪಾದಗಟ್ಟಿಯ ತನಕ ಸರ್ವಾಲಂಕೃತ ತೇರನ್ನು ಎಳೆದು ಪುನೀತರಾದರು. ಈ ವೇಳೆ ಚಿತ್ತಾಕರ್ಷಕ ಸಿಡಿಮಡ್ಡಿನ ಅಬ್ಬರ ಜೋರಾಗಿತ್ತು. ಭಕ್ತರು ತೇರಿನ ಮೇಲೆ ಉತ್ತತ್ತಿ ಸೇರಿ ಹರಕೆ ಹೊತ್ತುಕೊಂಡಿದ್ದ ವಸ್ತುಗಳನ್ನೆಸೆದು ಹರ್ಷಿಸಿದರು. ಇದಕ್ಕೂ ಮುನ್ನ ಮಧ್ಯಾಹ್ನ ಸಂಪ್ರದಾಯದಂತೆ ಶಂಕರಪ್ಪ ಗುಡ್ಡದ ಇವರ ನಿವಾಸದಿಂದ ಹೊರಟ ಶ್ರೀದೇವಿಯ ರಥೋತ್ಸವದ ಕಳಸವನ್ನು ಕಿಲ್ಲಾದಲ್ಲಿರುವ ಶ್ರೀಕಾಳಿಕಾದೇವಿ ದೇವಸ್ಥಾನದ ಪಕ್ಕದ ತೆರೆದ ಬಾವಿಯಲ್ಲಿ ಗಂಗಸ್ಥಳ ಮುಗಿಸಿಕೊಂಡು ಶಿರೋಳ ಗ್ರಾಮದಿಂದ ಬಂದ ರಥೋತ್ಸವದ ಹಗ್ಗದ ಮೆರವಣಿಗೆ ಸಮೇತ ದೇವಸ್ಥಾನಕ್ಕೆ ಕರೆ ತರಲಾಯಿತು.

ಅಣ್ಣಪ್ಪ ತಾರನಾಳ ಇವರು ತರಹೇವಾರಿ ಪುಷ್ಪಗಳಿಂದ ಅಲಂಕರಿಸಿದ್ದ ತೇರಿನ ಮೇಲೆ ಕಳಸವನ್ನು ಶಾಸ್ತ್ರೋಕ್ತ ಪೂಜೆಯೊಂದಿಗೆ ಪ್ರತಿಷ್ಠಾಪಿಸಲಾಯಿತು. ನಂತರ ಪಲ್ಲಕ್ಕಿ ಮೆರವಣಿಗೆ ಸಮೇತ ಭಕ್ತರು ದೇವಿಯ ಜಯಘೋಷದೊಂದಿಗೆ ತೇರನ್ನು ಎಳೆದು ಸಂಭ್ರಮಿಸಿದರು. ಮುದ್ದೇಬಿಹಾಳ ಠಾಣೆಯ ಪೊಲೀಸ್ ಸಿಬ್ಬಂದಿ ಭದ್ರತೆ ಒದಗಿಸಿದ್ದರು. ಜನದಟ್ಟಣೆಯಿಂದಾಗಿ ಬನಶಂಕರಿ ವೃತ್ತ ಮಾರ್ಗವಾಗಿ ನಾಲತವಾಡ ಭಾಗಕ್ಕೆ ಹೋಗಿ, ಬರುವ ವಾಹನಗಳ ಸಂಚಾರವನ್ನು ಪೊಲೀಸರು ತೊಂದರೆಯಾಗದ ರೀತಿಯಲ್ಲಿ ನಿಯಂತ್ರಿಸಿದರು. ಇದಕ್ಕೂ ಮುನ್ನ ಬೆಳಿಗ್ಗೆ ಶ್ರೀ ದೇವಿಗೆ ಮಹಾರುದ್ರಾಭಿಷೇಕ ನೆರವೇರಿಸಲಾಗಿತ್ತು. ಮದ್ಯಾಹ್ನ ಭಕ್ತರಿಗೆ ದಿ। ಛಗನಲಾಲ ಓಸ್ವಾಲ್, ದಿ| ನೇಮಿಚಂದ ಓಸ್ವಾಲ್ ಇವರ ಸ್ಮರಣಾರ್ಥ ಅವರ ಪುತ್ರರಾದ ಸಂಜೀವಕುಮಾರ ಮತ್ತು ಸತೀಶಕುಮಾರ ಅವರು ಮಹಾದಾಸೋಹದ ವ್ಯವಸ್ಥೆ ಕಲ್ಪಿಸಿದ್ದರು. ಮಹಾರಥೋತ್ಸವದ ನಂತರ ದಾನಿಗಳಿಗೆ, ಸಾಧಕರಿಗೆ ಸನ್ಮಾನ, ಕಿರುತೆರೆ ಹಾಸ್ಯ ಕಲಾವಿದರಾದ ಗೋಪಾಲ ಹೂಗಾರ ಮತ್ತು ಗೋಪಾಲ ಇಂಚಗೇರಿ ನೇತೃತ್ವದ ಕಲಾ ಸಿಂಚನ ಮೆಲೋಡಿಸ್ ತಂಡದಿಂದ ಹಾಸ್ಯ ಸಂಗೀತ ರಸಮಂಜರಿ ಏರ್ಪಡಿಸಲಾಗಿತ್ತು. ಕಾಂಗ್ರೆಸ್ ಮುಖಂಡ, ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ ಅವರ ದಾನವನ್ನು ಸ್ಮರಿಸಲಾಯಿತು.

