ಕ್ರೀಡಾ ಅಖಾಡದಲ್ಲಿ ಜಕ್ಕಲಿ ಶಿಕ್ಷಕನ ಚಿನ್ನದ ಸಾಧನೆ – ರಾಜ್ಯ ಮಟ್ಟಕ್ಕೆ ಕುಂಬಾರ ಗುರುಗಳ ಲಗ್ಗೆ.
ಜಕ್ಕಲಿ/ರೋಣ ಜ.06

ಶಿಕ್ಷಕರು ಕೇವಲ ಜ್ಞಾನದ ದೀವಿಗೆಯಷ್ಟೇ ಅಲ್ಲ, ದೈಹಿಕ ಕ್ರೀಡಾ ಅಖಾಡದಲ್ಲೂ ತಾವೇ ಶ್ರೇಷ್ಠ ಎಂಬುದನ್ನು ರೋಣ ತಾಲ್ಲೂಕಿನ ಜಕ್ಕಲಿ ಗ್ರಾಮದ ಶಿಕ್ಷಕರೊಬ್ಬರು ಸಾಬೀತು ಪಡಿಸಿದ್ದಾರೆ.
ಗದಗ ಜಿಲ್ಲಾ ಕೇಂದ್ರದಲ್ಲಿ ಇತ್ತೀಚಿಗೆ ನಡೆದ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಜಕ್ಕಲಿ ಗ್ರಾಮದ ಶಿಕ್ಷಕ ಶ್ರೀ ವಿ. ಎ ಕುಂಬಾರ ಅವರು ದ್ವಿ-ಚಿನ್ನದ ಪದಕಗಳನ್ನು ಮುಡಿಗೇರಿಸಿ ಕೊಂಡು ಇಡೀ ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ.
ಜಿಲ್ಲಾ ಮಟ್ಟದಲ್ಲಿ ಡಬಲ್ ಧಮಾಕಾ:-
ಗದಗದ ಕೆ.ಎಚ್ ಪಾಟೀಲ ಕ್ರೀಡಾಂಗಣದಲ್ಲಿ ಜನವರಿ 3 ಮತ್ತು 4 ರಂದು ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಕುಂಬಾರ ಅವರು ಎರಡು ವಿಭಿನ್ನ ಕ್ರೀಡೆಗಳಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಅಸಾಧಾರಣ ಸಾಧನೆ ಮಾಡಿದ್ದಾರೆ.
ಯೋಗದಲ್ಲಿ ಅಗ್ರಸ್ಥಾನ:-

ಸಾಂಪ್ರದಾಯಿಕ ಯೋಗ ಸ್ಪರ್ಧೆಯಲ್ಲಿ ಕಠಿಣ ಆಸನಗಳನ್ನು ಸರಳವಾಗಿ ಪ್ರದರ್ಶಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ.ಈಜಿನಲ್ಲಿ ಮಿಂಚಿನ ವೇಗ 100 ಮೀಟರ್ ಫ್ರೀಸ್ಟೈಲ್ ಈಜು ಸ್ಪರ್ಧೆಯಲ್ಲಿ ನೀರ ಆಟಗಾರರಂತೆ ವೇಗವಾಗಿ ಈಜಿ ಪ್ರಥಮ ಸ್ಥಾನ ಅಲಂಕರಿಸಿದ್ದಾರೆ.
ನರೇಗಲ್ ಸಮೀಪದ ಜಕ್ಕಲಿ ಗ್ರಾಮದ ಹೆಚ್.ಪಿ.ಕೆ.ಜಿ.ಎಸ್ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯ ದಕ್ಷ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ವಿ.ಎ ಕುಂಬಾರ ಅವರು, ಈಗ ಜಿಲ್ಲಾ ಮಟ್ಟದ ಈ ಸಾಧನೆಯೊಂದಿಗೆ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಅಧಿಕೃತವಾಗಿ ಆಯ್ಕೆ ಯಾಗಿದ್ದಾರೆ.ಶಿಕ್ಷಕರ ಈ ಐತಿಹಾಸಿಕ ಸಾಧನೆಯನ್ನು ಶಾಲಾ ಎಸ್.ಡಿ.ಎಂ.ಸಿ (SDMC) ಅಧ್ಯಕ್ಷರಾದ ಶ್ರೀ ಅಂದಪ್ಪ ಆರ್. ಮಾದರ ಅವರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
ನಮ್ಮ ಶಾಲೆಯ ಶಿಕ್ಷಕರು ಬೋಧನೆಯ ಜೊತೆಗೆ ಕ್ರೀಡಾ ಕ್ಷೇತ್ರದಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುವುದು ನಮ್ಮ ಗ್ರಾಮಕ್ಕೆ ಸಂದ ಗೌರವ. ಅವರು ರಾಜ್ಯ ಮಟ್ಟದಲ್ಲೂ ವಿಜಯ ಶಾಲಿಯಾಗಿ ಜಿಲ್ಲೆಯ ಹೆಸರನ್ನು ಬೆಳಗಿಸಲಿ ಎಂದು ಹಾರೈಸಿದ್ದಾರೆ.
ಶಾಲೆಯ ಮುಖ್ಯೋಪಾಧ್ಯಾಯರು, ಸಹ ಶಿಕ್ಷಕ ವೃಂದ, ಎಸ್.ಡಿ.ಎಂ.ಸಿ ಸರ್ವ ಸದಸ್ಯರು ಹಾಗೂ ಪಾಲಕರು ಕುಂಬಾರ ಗುರುಗಳಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದರು.

