ಕಲಾವಿದರನ್ನು ಬೆಳೆಸಿ ಕಲೆಯನ್ನು ಉಳಿಸಿ – ಬಹುಭಾಷಾ ನಟಿ ಭಾರತಿ ವಿಷ್ಣುವರ್ಧನ್.
ಸಿದ್ಧನಕೊಳ್ಳ ಜ.17

ನಾಟಕ ರಂಗ ಹಾಗೂ ಚಲನ ಚಿತ್ರರಂಗ ಉಳಿಯಲು ಕಲಾವಿದರನ್ನು ಬೆಳೆಸಿದಾಗ ಕಲೆಯು ಉಳಿಯುತ್ತದೆ. ಧಾರ್ಮಿಕ ಆಧ್ಯಾತ್ಮಿಕ ತಾಣದಲ್ಲಿ ಪ್ರಶಸ್ತಿ ಸ್ವೀಕರಿಸಿರುವುದು ಸಂತಸವಾಗಿದೆ. ನನ್ನೆಲ್ಲ ಸಾಧನೆಗೆ ವಿಷ್ಣುವರ್ಧನ ಕಾರಣ. ಅವರಿಗೆ ಈ ಪ್ರಶಸ್ತಿ ಸಲ್ಲಬೇಕು ಎಂದು ಬಹುಭಾಷಾ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಹೇಳಿದರು.
ಅವರು ಇಲಕಲ್ಲ ತಾಲೂಕಿನ ಸಿದ್ಧನಕೊಳ್ಳದಲ್ಲಿ ಮೂರು ದಿನಗಳ ಕಾಲ ನಡೆದ ಸಿದ್ದಶ್ರೀ ಉತ್ಸವ ಹಾಗೂ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ-೨೦೨೬ ದಲ್ಲಿ ಎರಡನೆ ದಿನದ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ “ಶ್ರೀಸಿದ್ಧಶ್ರೀ”-೨೦೨೬ ರ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅವರು, ಸಿದ್ದನಕೊಳ್ಳದ ಶ್ರೀಮಠವು ನಾಡಿನಾದ್ಯಂತ ಯುವ ಕಲಾವಿದರನ್ನು ಬೆಳೆಸಿ ಪೋಷಿಸುತ್ತಿದೆ. ಅದರಲ್ಲೂ ಉತ್ತರ ಕರ್ನಾಟಕದ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಹೆಮ್ಮೆಯ ವಿಷಯ ಎಂದರು. ಇದೆ ವೇಳೆ ಅವರು ಬಸವಣ್ಣನವರ ವಚನವನ್ನು ಹಾಡುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ಬಹುಭಾಷಾ ಹಿರಿಯ ನಟಿ, ಕಲಾವಿದೆ ಭಾರತಿ ವಿಷ್ಣುವರ್ಧನ ಅವರಿಗೆ “ಶ್ರೀ ಸಿದ್ಧಶ್ರೀ” ರಾಷ್ಟ್ರೀಯ ಪ್ರಶಸ್ತಿ ಹಾಗೂ ಹಿರಿಯ ರಂಗಭೂಮಿ ಕಲಾವಿದೆ ಮಾಲತಿ ಸುಧೀರ್ ಅವರಿಗೆ ರಾಜ್ಯ ಪ್ರಶಸ್ತಿಯನ್ನು ಶ್ರೀಮಠದ ಧರ್ಮಾಧಿಕಾರಿ ಡಾ. ಶಿವಕುಮಾರ ಸ್ವಾಮೀಜಿ ಹಾಗೂ ಜಾತ್ರಾಮಹೋತ್ಸವ ಸ್ವಾಗತ ಸಮಿತಿಯ ಅಧ್ಯಕ್ಷರು, ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಶಾಸಕರಾದ ಡಾ, ವಿಜಯಾನಂದ ಕಾಶಪ್ಪನವರ ಪ್ರಧಾನ ಮಾಡಿದರು.
ರಾಷ್ಟ್ರೀಯ ಪ್ರಶಸ್ತಿಯು ರೂ.೫೦ ಸಾವಿರ ನಗದು, ರಾಜ್ಯ ಪ್ರಶಸ್ತಿಯು ರೂ.೨೫ ಸಾವಿರ ನಗದು, ಪ್ರಶಸ್ತಿ ಫಲಕ ಹೊಂದಿದೆ. ಜೊತೆಗೆ ಇಲಕಲ್ ಸೀರೆಯನ್ನು ಉಡುಗೊರೆ ಯಾಗಿ ಪ್ರಶಸ್ತಿಯೊಂದಿಗೆ ನೀಡಿ ಇರ‍್ವರು ಕಲಾವಿದರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕೀರ್ತಿ ಅನಿರುದ್ಧ, ಅಪ್ಪಾಸಾಹೇಬ ನಾಡಗೌಡ, ಶಿವಾನಂದ ಮುತ್ತನವರ, ಡಿವೈಎಸ್ಪಿ ಸಂತೋಷ ಬನ್ನಟ್ಟಿ, ಸಂಗಮೇಶ ಹುದ್ದಾರ, ಚಲನ ಚಿತ್ರೋತ್ಸವ ಸಂ, ಡಾ, ಪ್ರಭು ಗಂಜಿಹಾಳ, ಚಲನ ಚಿತ್ರೋತ್ಸವ ಸಮಿತಿಯ ಡಾ, ವೀರೇಶ ಹಂಡಿಗಿ, ಸುನಂದಾ ಕಲಬುರ್ಗಿ, ಲೋಕೇಶ ವಿದ್ಯಾಧರ, ವೀರೇಶ ಪುರವಂತರ, ಸಂಗನಗೌಡ ಕುರುಡಗಿ ಸೇರಿದಂತೆ ಅನೇಕ ಗಣ್ಯರು, ಕಲಾವಿದರು ಇದ್ದರು.
ಐಹೊಳೆಯ ಕಲಾವಿದ ವೀರೇಶ ಪುರವಂತರ ಸಹೋದರರು ನಿರ್ಮಿಸಿದ ವೇದಿಕೆಯಲ್ಲಿ ನಡೆದ ಚಲನ ಚಿತ್ರೋತ್ಸವದಲ್ಲಿ ಉಚಿತವಾಗಿ ಒಟ್ಟು ೨೮ ಹೊಸ ಚಲನ ಚಿತ್ರಗಳ ಟೀಸರ್, ಟ್ರೈಲರ್, ಪೋಸ್ಟರ್ ಬಿಡುಗಡೆ ಹಾಗೂ ನಿರ್ಮಾಪಕರು, ನಿರ್ದೇಶಕರು, ಕಲಾವಿದರಿಗೆ ಸ್ಮರಣಿಕೆ, ಪ್ರಶಂಸಾಪತ್ರ ನೀಡಿ ಶಾಲುಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು. ಜೊತೆಗೆ ರಾಜ್ಯದ ವಿವಿಧ ಪ್ರತಿಭಾನ್ವಿತ ಕಲಾವಿದರಿಂದ ಸಂಗೀತ, ನೃತ್ಯ, ಹಾಸ್ಯ ಮನೋರಂಜನೆ ಕಾರ್ಯಕ್ರಮಗಳು ಜರುಗಿ ಭಕ್ತಾಧಿಗಳು ಹಾಗೂ ಪ್ರೇಕ್ಷಕಾಭಿಮಾನಿಗಳನ್ನು ರಂಜಿಸಿದವು.
ಚಲನ ಚಿತ್ರೋತ್ಸವಕ್ಕಿಂತ ಮೊದಲು ಹೆಲಿಕ್ಯಾಪ್ಟರ್ ಮೂಲಕ ಶ್ರೀಮಠದ ಆವರಣದಲ್ಲಿ ಶಾಸಕರಾದ ಡಾ, ವಿಜಯಾನಂದ ಕಾಶಪ್ಪನವರ ಪುಷ್ಪ ಸಮರ್ಪಣೆ ಮಾಡಿದ್ದು ವಿಶೇಷವಾಗಿತ್ತು.
ರಾಜ್ಯ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಚಾನಲ್:ಡಾ ಪ್ರಭು ಗಂಜಿಹಾಳ ಗದಗ
