“ಸಂಗಮ ಸಿರಿ” ಪ್ರಶಸ್ತಿಗೆ – ಡಾ, ಸಾದರ, ಹಾಗೂ ಡಾ, ಪಟ್ಟಣ ಆಯ್ಕೆ.
ಹುಬ್ಬಳ್ಳಿ ಡಿ.10

ಹಿರಿಯ ಸಾಹಿತಿ ಡಾ, ಸಂಗಮೇಶ ಹಂಡಿಗಿ ಅವರ ಸ್ಮರಣೆಯಲ್ಲಿ ಡಾ, ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನ ಕೊಡ ಮಾಡುವ ರಾಜ್ಯ ಮಟ್ಟದ ಪ್ರಶಸ್ತಿಗೆ ಈ ವರ್ಷ ಡಾ, ಬಸವರಾಜ ಸಾದರ ಹಾಗೂ ಡಾ, ಶಶಿಕಾಂತ್ ಪಟ್ಟಣ ಅವರು ಆಯ್ಕೆ ಆಗಿದ್ದಾರೆ.
ಡಾ, ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನ ಕಳೆದ ನಾಲ್ಕು ವರ್ಷಗಳಿಂದ ವಿವಿಧ ಸಾಹಿತ್ಯ ಕ್ಷೇತ್ರದ ಸಾಧಕರನ್ನು ಗುರುತಿಸಿ “ಸಂಗಮ ಸಿರಿ” ರಾಜ್ಯ ಮಟ್ಟದ ಪ್ರಶಸ್ತಿ ನೀಡುತ್ತ ಬಂದಿದೆ. ಈ ವರ್ಷ ವಚನ ಸಾಹಿತ್ಯ ಪೂರಕ ಸಾಹಿತ್ಯದಲ್ಲಿ ಕಾರ್ಯ ಮಾಡಿದವರಿಗೆ “ಸಂಗಮ ಸಿರಿ” ಪ್ರಶಸ್ತಿ ನೀಡಲು ನಿರ್ಧರಿಸಿದಂತೆ ಈ ಕ್ಷೇತ್ರದಲ್ಲಿ ಕಾರ್ಯ ಮಾಡಿದ ಆಕಾಶವಾಣಿ ನಿರ್ದೇಶಕರಾಗಿ ನಿವೃತ್ತರಾದ ಬೆಂಗಳೂರಿನ ಡಾ, ಬಸವರಾಜ ಸಾದರ ಹಾಗೂ ಮಹಾರಾಷ್ಟ್ರ ಪುಣೆಯ ವಿಜ್ಞಾನಿ ಡಾ, ಶಶಿಕಾಂತ್ ಪಟ್ಟಣ ಅವರನ್ನು ಆಯ್ಕೆ ಮಾಡಲಾಗಿದೆ.
ಡಾ, ಬಸವರಾಜ ಸಾದರವರು ಆಕಾಶವಾಣಿಯ ದಕ್ಷಿಣ ವಲಯ ನಿರ್ದೇಶಕರಾಗಿ ನಿವೃತ್ತರಾಗಿ ಶರಣ ಸಾಹಿತ್ಯದಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದಾರೆ. ೪೧ ಮೌಲಿಕ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಆಕಾಶವಾಣಿಗಳಲ್ಲಿ ವಚನಗಳ ವಿವರಣೆ ನೀಡುವ ಮೂಲಕ ವಚನಗಳ ಸಾರವನ್ನು ಮನೆ ಮನೆಗೆ ತಲುಪಿಸಿದ ಕೀರ್ತಿ ಇವರದು.
ಇದರ ಜೊತೆಗೆ ಕಾರ್ಯಕ್ರಮಗಳ ಸಂಘಟನೆ, ಬರವಣಿಗೆಯಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದಾರೆ. ಸದ್ಯ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರು ಆಗಿದ್ದಾರೆ. ಡಾ, ಶಶಿಕಾಂತ ಪಟ್ಟಣ ಅವರು ಮೂಲತಃ ರಾಮದುರ್ಗ ದವರು. ಸಧ್ಯ ಪುಣೆಯಲ್ಲಿ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಸಂಸ್ಥಾಪಕರು. ಔಷಧೀಯ ವಿಜ್ಞಾನದ ಶ್ರೇಷ್ಠ ವಿಜ್ಞಾನಿಯಾದ ಅವರು ವಚನ ಸಾಹಿತ್ಯದ ಕುರಿತು ಹಲವು ಕೆಲಸಗಳನ್ನು ಮಾಡಿದ್ದಾರೆ.
ವಿವಿಧ ಪ್ರಕಾರದ ೬೪ ಕೃತಿಗಳ ರಚನೆ, ಉಪನ್ಯಾಸ, ಸಂಘಟನೆ ಮೂಲಕ ಶರಣ ಸಾಹಿತ್ಯ ಪೂರಕ ಕಾರ್ಯವನ್ನು ಮಾಡಿದ್ದಾರೆ. ಈ ಇರ್ವರಿಗೂ ತಲಾ ೫,೦೦೦ ರೂ. ನಗದು ಹಾಗೂ ಪ್ರಶಸ್ತಿ ಫಲಕ ನೀಡಿ ಇದೇ ಡಿ. ೨೮ ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಜಿ. ಬಿ. ಗೌಡಪ್ಪಗೋಳ, ಗೌರವಾಧ್ಯಕ್ಷ ಗಣಪತಿ ಗಂಗೊಳ್ಳಿ, ಕಾರ್ಯಕ್ರಮ ಸಂಯೋಜಕ ಡಾ, ಪ್ರಭು ಗಂಜಿಹಾಳ ತಿಳಿಸಿದ್ದಾರೆ.
ರಾಜ್ಯ ಮಟ್ಟದ ವಿಶೇಷ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಡಾ, ಪ್ರಭು ಗಂಜಿಹಾಳ ಗದಗ

