ದಕ್ಷ ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ ಅವರ ವಿರುದ್ಧದ ಪಿತೂರಿ ಖಂಡನೀಯ – ಶಿವಾನಂದ.ಆರ್ ಕೆ ಆಕ್ರೋಶ.
ಮಂಗಳೂರು ಜ.23

ಅಬಕಾರಿ ಇಲಾಖೆಯಲ್ಲಿ ಪಾರದರ್ಶಕತೆ ಮತ್ತು ಕ್ರಾಂತಿಕಾರಿ ಸುಧಾರಣೆಗಳನ್ನು ತರುತ್ತಿರುವ ಸನ್ಮಾನ್ಯ ಅಬಕಾರಿ ಸಚಿವರಾದ ಆರ್.ಬಿ ತಿಮ್ಮಾಪುರ ಹಾಗೂ ಅವರ ಕುಟುಂಬದ ವಿರುದ್ಧ ಕೇಳಿ ಬರುತ್ತಿರುವ ಲಂಚದ ಆರೋಪಗಳು ಕೇವಲ ಸುಳ್ಳಿನ ಕಂತೆ ಹಾಗೂ ರಾಜಕೀಯ ಪ್ರೇರಿತ ಪಿತೂರಿ ಯಾಗಿದೆ ಎಂದು ಆದಿ ಜಾಂಬವ ಯುವ ಬ್ರಿಗೇಡ್ (ರಿ) ಮಂಗಳೂರು ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಶಿವಾನಂದ.ಆರ್ ಕೆ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಚಿವ ತಿಮ್ಮಾಪುರ ಅವರು ದಲಿತ ಸಮುದಾಯದ ಪ್ರಭಾವಿ ನಾಯಕರಾಗಿದ್ದು, ಇಲಾಖೆಯಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಆನ್‌ಲೈನ್ ಮೂಲಕ ಸನ್ನದು ಪಡೆಯುವ ಸರಳೀಕೃತ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ. ಇಲಾಖೆಯಲ್ಲಿ ದಲಿತರಿಗೆ ಮತ್ತು ಶೋಷಿತರಿಗೆ ಒಳ ಮೀಸಲಾತಿ ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯ ಒದಗಿಸುತ್ತಿರುವ ಅವರ ಏಳಿಗೆಯನ್ನು ಸಹಿಸದ ವಿರೋಧಿಗಳು ಈ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ರಾಜಕೀಯ ಪಿತೂರಿ:-
ಸಚಿವರ ಮಗನ ಹೆಸರನ್ನು ಅನಗತ್ಯವಾಗಿ ಎಳೆದು ತಂದು ಅವರ ತೇಜೋವಧೆ ಮಾಡುವ ಮೂಲಕ ಸಚಿವರ ರಾಜಕೀಯ ಭವಿಷ್ಯವನ್ನು ಹಾಳು ಮಾಡಲು ಸಂಚು ರೂಪಿಸಲಾಗಿದೆ.ವೈಯಕ್ತಿಕ ಹಿತಾಸಕ್ತಿಗಾಗಿ ಈ ಪ್ರಕರಣದಲ್ಲಿ ಅಧಿಕಾರಿಗಳನ್ನು ಸಂಪರ್ಕಿಸಿ ಸಚಿವರನ್ನು ಸಿಲುಕಿಸಲು ಪ್ರಯತ್ನಿಸಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ಯಾಗಬೇಕು.
ಇತ್ತೀಚಿನ ದಿನಗಳಲ್ಲಿ ದಲಿತ ಸಮುದಾಯದ ಪ್ರಬಲ ಸಚಿವರುಗಳನ್ನು ಗುರಿಯಾಗಿಸಿ ಕೊಂಡು ವ್ಯವಸ್ಥಿತವಾಗಿ ದೂರುಗಳನ್ನು ದಾಖಲಿಸುವ ತಂತ್ರಗಳು ನಡೆಯುತ್ತಿವೆ. ಇದು ಇಡೀ ದಲಿತ ಸಮಾಜಕ್ಕೆ ಮಾಡುತ್ತಿರುವ ಅವಮಾನವಾಗಿದೆ.
ಸಚಿವ ತಿಮ್ಮಾಪುರ ಅವರು ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದು, ಇಂತಹ ಕ್ಷುಲ್ಲಕ ರಾಜಕಾರಣಕ್ಕೆ ಅವರು ಕಿವಿಗೊಡ ಬಾರದು. ಒಂದು ವೇಳೆ ಸಚಿವರ ವಿರುದ್ಧ ಈ ಪಿತೂರಿ ಹೀಗೆಯೇ ಮುಂದುವರಿದರೆ, ಆದಿ ಜಾಂಬವ ಯುವ ಬ್ರಿಗೇಡ್ ಮತ್ತು ಇಡೀ ದಲಿತ ಸಮುದಾಯವು ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ನಡೆಸಲಿದೆ ಎಂದು ಶಿವಾನಂದ.ಆರ್ ಕೆ ಅವರು ಎಚ್ಚರಿಕೆ ನೀಡಿದ್ದಾರೆ.

