ಸಸ್ಯಗಳಿಗೂ ಜೀವವಿದೆ. ಸಸ್ಯಗಳನ್ನು ತರಿತರಿದು ತಿನ್ನುವುದು ಹಿಂಸೆ ಅಲ್ಲವೇ..? ✍️ಡಿ.ಶಬ್ರಿನಾ ಮಹಮದ್ ಅಲಿ, ಚಳ್ಳಕೆರೆ.

ಬಸವಣ್ನವರ ವಚನ ಹೀಗಿದೆ….

ಮರ ಗಿಡ ಬಳ್ಳಿ ಧಾನ್ಯಂಗಳ ಬೆಳಸೆಲ್ಲವ ತರಿತರಿದು ಪ್ರಾಣವ ಕೊಂದುಂಡುಶರೀರವ ಹೊರೆವ ದೋಷಕ್ಕೆ ಇನ್ನಾವುದು ವಿದ್ಥಿಯಯ್ಯಾ ಒಂದಿಂದ್ರಿಯ ಮೊದಲಾಗಿ ಐದಿಂದ್ರಿಯ ಕಡೆಯಾದ ಜೀವಜಾಲದಲ್ಲಿದೆ ಚರಾಚರವೆಲ್ಲ. ಅದು ಕಾರಣಕೂಡಲಸಂಗನ ಶರಣರು ಲಿಂಗಕ್ಕರ್ಪಿಸಿ ಪ್ರಸಾದವ ಕೊಂಡು ನಿರ್ದೋಷಿಗಳಾಗಿ ಬದುಕಿದರು.

ನಟ ಡಾಲಿ ಧನಂಜಯ ಅವರು ಬಾಡೂಟ ಸೇವಿಸಿದ್ದನ್ನ ಮಹಾ ಅಪರಾಧದಂತೆ ಮಾಧ್ಯಮದಲ್ಲಿ ಬಿಂಬಿಸುತ್ತಿರುವ ಈ ಹೊತ್ತಲ್ಲಿ ಬಸವಣ್ಣನವರ ಈ ಮೇಲಿನ ವಚನ ನನಗೆ ತುಂಬಾ ನೆನಪಾಯಿತು. ತಿನ್ನುವ ಅನ್ನದಲ್ಲಿ ಜಾತಿ ಹುಡುಕುವ ಹುಳುಕು‌ ಮನಸ್ಸಿನವರ ನಡೆ ಕಂಡು ನಗುವುದೊ,ಬೈಯುವುದೊ ಅನ್ನುವುದಕ್ಕಿಂತ ಹೆಚ್ಚಾಗಿ,ಬಸವಣ್ಣನವರನ್ನು ಅರ್ಥ ಮಾಡಿಕೊಳ್ಳುವ ತಿಳುವಳಿಕೆ ಈ ಸಮಾಜಕ್ಕಿಲ್ಲ ಎಂಬುದು ನನಗೆ ಖಚಿತವಾಯಿತು. ಕಾರಣ ಗುರು ಬಸವಣ್ಣನವರು ಪ್ರಕೃತಿಯ ಅಣು ಅಣುವಿನಲ್ಲೂ ಜೀವಂತಿಕೆ ಕಂಡವರು. ಎಲ್ಲದಕ್ಕಿಂತ ಮಿಗಿಲಾಗಿ ಮನುಷ್ಯರನ್ನ ಮನುಷ್ಯರಂತೆ ಕಾಣುವ ಮೂಲಕ ಮಹಾ ಮಾನವೀಯತೆಯನ್ನ ಸಾರಿದವರು. ಆದರೆ ಇಂದು ಅವರ ‘ದಯೆಯೇ ಧರ್ಮದ ಮೂಲ’ ಅನ್ಜುವ ವಿಶಾಲ ಚಿಂತನೆಯನ್ನ ಆಹಾರಕ್ಕೆ ಮಾತ್ರ ಸೀಮಿತ ಮಾಡಿರುವುದು ಅತ್ಯಂತ ಶೋಚನೀಯ ಸಂಗತಿ ಎಂಬುದು ನನ್ನ ಅಭಿಪ್ರಾಯ.

ಏಕೆಂದರೆ, ಬಸವಣ್ಣನವರ ಚಿಂತನೆಗಳು ಬೆಳಕಿನಂತಹವು. ಅಂತಹ ಬೆಳಕಿಗೂ ಅಲ್ಪಜ್ಞಾನಿಗಳು ಕೆಲವೊಮ್ಮೆ ಗ್ರಹಣ ಹಿಡಿಸಿಬಿಡುತ್ತಾರೆ. ತೊಂದರೆಯೇನಿಲ್ಲ, ಕಾರಣ ಗ್ರಹಣ ತುಂಬಾ ಹೊತ್ತಿರದು! ೧೨ ನೇ ಶತಮಾನದಲ್ಲಿ ಶೂದ್ರರರನ್ನ, ಮಹಿಳೆಯರನ್ನ ಮೃಗಗಳಿಗಿಂತ ಕಡೆಯಾಗಿ ಕಾಣುತಿದ್ದರು. ಜಾತಿ,ಲಿಂಗ,ವರ್ಗ,ವರ್ಣಗಳ ಹೆಸರಲಿ ಅಳಿಸಲಾಗದಂತಹ ಶೋಷಣೆ ದೌರ್ಜನ್ಯವನ್ನ ಎಸುಗುತಿದ್ದರು. ಅದನ್ನ ಕಂಡ ಬಸವಣ್ಣನವರು ‘ಇವನಾರವ ಇವನಾರವ ಎಂದೆನಿಸಿದರಯ್ಯಾ ಇವ ನಮ್ಮವ ಇವ ನಮ್ಮವಾ ಎಂದೆನಿಸಯ್ಯ’ ಎಂದು ಹೇಳುವ ಮೂಲಕ ದಯೆಯೇ ಧರ್ಮದ ಮೂಲ ಎಂಬ ತತ್ವವನ್ನ ಸಾರಿದರು. ಹೊಲೆಗಂಡಲ್ಲದೆ ಪಿಂಡದ ನೆಲಗಾಶ್ರಯವಿಲ್ಲ …ಎಂಬ ವಚನದ ಮೂಲಕ ಮಾನವನ ಹುಟ್ಟಿನಲ್ಲಿ ಸಮಾನತೆ ಇದೆ ಎಂದರು. ನೆಲವೊಂದು ಹೊಲೆಗೇರಿ‌ ಶಿವಾಲಯಕ್ಕೆ ಎಂಬ ವಚನದ ಮೂಲಕ ಪ್ರಕೃತಿಯಲ್ಲಿ ಸಮಾನತೆ ಇದೆ ಎಂದು ತಿಳಿಸಿದರು. ಇಷ್ಟೆಲ್ಲಾ ಹೇಳಿದ್ದು ಮನುಷ್ಯರನ್ನು ಮನುಷ್ಯರಂತೆ ಕಾಣಿ, ಅವರ ಮೇಲೆ ದಯೆ ತೋರಿ ಸಮಾನತೆಯಿಂದ ಕಾಣಿ ಮಾನವೀಯತೆಯಿಂದ ಬದುಕಿ ಎಂಬದನ್ನ ಸಾರಲಿಕ್ಕಾಗಿ. ಆದರೆ ಇಂದು ಅವರ ಮಾತುಗಳನ್ನ ಆಹಾರಕ್ಕೆ ಮಾತ್ರ ಸೀಮಿತಗೊಳಿಸಿ ಇಂತಹ ಅಸಂಬದ್ಧ ಚರ್ಚೆಗೆ ಅವಕಾಶ ಮಾಡಿಕೊಡುತಿದ್ದಾರೆ.

ಬಸವಣ್ಣನವರ ಮತ್ತೊಂದು ಮಾತು,’ಸಕಲ ಜೀವಿಗಳಿಗೆ ಲೇಸನು‌ ಬಯಸಬೇಕು’ ಎಂಬುದು. ವಿಶಾಲ ಅರ್ಥದಲ್ಲಿರುವ ಇವರ ವಚನವನ್ನು ಇಂದಿನವರು ಪ್ರಾಣಿಹಿಂಸೆಗೆ ಮಾತ್ರ ಸೀಮಿತ ಮಾಡಿದ್ದಾರೆ. ಈ ಮೂಲಕ ಮಾಂಸಹಾರ ಸೇವನೆ ನಿಷಿದ್ಧ ಎಂದು ಭಾವಿಸಿದ್ದಾರೆ. ಪ್ರಾರಂಭದಲ್ಲಿ ನಾನು ಪ್ತಸ್ತಾಪಿಸಿದ ವಚನದಲ್ಲಿಯೇ ಬಸವಣ್ಙನವರು ಹೇಳಿದ್ದಾರೆ, ಸಸ್ಯಗಳಿಗೂ ಜೀವವಿದೆ ಆದ್ದರಿಂದ ನಾವು ಯಾವುದನ್ನೆ ತಿನ್ನುವ ಮೊದಲು ಲಿಂಗಕರ್ಪಿತ ಮಾಡಿ ತಿಂದರೆ ನಿರ್ದೊಷಿಗಳಾಗಿತ್ತೇವೆ ಎಂದು. ಈ ಒಂದು ವಚನ ಅರ್ಥಮಾಡಿಕೊಂಡರೆ ಆಹಾರ ಅವರವರ ಆಯ್ಕೆ ಎಂಬುದು ನಮಗೆ ಸ್ಪಷ್ಟವಾಗುತ್ತದೆ.

ಬಸವಣ್ಣನವರ ಮತ್ತೊಂದು ವಚನ…

ಎಡದ ಕೈಯಲ್ಲಿ ಕತ್ತಿ, ಬಲದ ಕೈಯಲ್ಲಿ ಮಾಂಸಬಾಯಲ್ಲಿ ಸುರೆಯ ಗಡಿಗೆ, ಕೊರಳಲ್ಲಿ ದೇವರಿರಲುಅವರನ್ನು ಲಿಂಗನೆಂಬೆ, ಸಂಗನೆಂಬೆಕೂಡಲ ಸಂಗಮದೇವಾ ಅವರ ಮುಖಲಿಂಗಿಗಳೆಂಬೆನು

ಎಂದು ಹೇಳುತ್ತಾರೆ. ವೃತ್ತಿಯಿಂದ ಚಾಂಡಾಲನೇ ಆಗಿರಲಿ. ಪ್ರವೃತ್ತಿಯಿಂದ ಮಾಂಸಾಹಾರಿ, ಸುರೆ ಸೇವಿಸುವವನಾಗಿರಲಿ, ಅಂಥವನು ಕೂಡಾ ಶರಣಸಿದ್ಧಾಂತವನ್ನು ಗೌರವಿಸುವವನಾದರೆ ಸಮಾನತೆಯ ಪ್ರತೀಕವಾದ ಲಿಂಗ ಧರಿಸಿದನಾದರೆ ಅವನನ್ನು ಸಂಗಯ್ಯನೆಂದೇ ಕಾಣುತ್ತೇನೆ ಎಂದು ಈ ವಚನದಲ್ಲಿ ತುಂಬ ಸ್ಪಷ್ಟವಾಗಿ ಬಸವಣ್ಣನವರು ಹೇಳಿದ್ದಾರೆ. ಆದ್ದರಿಂದಲೇ ಬಸವಣ್ಣನವರು ಮಾದಾರ ಚೆನ್ನಯ್ಯಾ,ಡೋಹರ ಕಕ್ಕಯ್ಯ, ಮಡಿವಾಳ ಮಾಚಿದೇವ ಈ ಎಲ್ಲರನ್ನ ಅಪ್ಪ,ಚಿಕ್ಕಪ್ಪ,ದೊಡ್ಡಪ್ಪ ಎಂದು ಕರೆದು ಒಪ್ಪಿಕೊಂಡಿದ್ದಾರೆ. ಬಸವಣ್ಣನವರ ಈ ಮಾನವೀಯ ನಡೆಯನ್ನ ಈಗಿನವರು ಏನೆಂದು ಅರ್ಥೈಸಿಕೊಳ್ಳುವರೋ?

ಅಲ್ಲಮಪ್ರಭುಗಳ ಒಂದು ವಚನ ಹೀಗಿದೆ….“ಮದ್ಯ ಮಾಂಸಾದಿಗಳಮುಟ್ಟೆವೆಂಬಿರಿ, ನೀವು ಕೇಳಿರೆ.ಮದ್ಯವಲ್ಲವೇನು ಅಷ್ಟಮದಂಗಳು?ಮಾಂಸವಲ್ಲವೇನು ಸಂಸಾರ ಸಂಗ?ಈ ಉಭಯವನತಿಗಳೆದಾತನೆ,ಗುಹೇಶ್ವರಲಿಂಗದಲ್ಲಿ ಲಿಂಗೈಕ್ಯನು”

ಈ ವಚನದಲ್ಲಿ ಅಲ್ಲಮರು ಅಷ್ಟಮದಗಳನ್ನು ಮದ್ಯಪಾನಕ್ಕೆ,ಸಂಸಾರ ಸಂಗವನು ಮಾಂಸಾಹಾರಕ್ಕೆ ಹೋಲಿಸುತ್ತಾರೆ. ನಾವಿಲ್ಲಿ ಗಮನಿಸಬೇಕಾಗಿರುವದೆನೆಂದರೆ, ಊಟ ನಮ್ಕಿಚ್ಛೆ ನೋಟ ಪರರಿಚ್ಛೆ ಎಂಬುದನ್ನ ಅರಿತು, ನಾವು ತಿನ್ನುವ ಆಹಾರ ಯಾವುದೇಯಾಗಿರಲಿ ಅದು ಚರ್ಚಾ ವಿಷಯ ಅಲ್ಲವೇ ಅಲ್ಲಾ! ಹಾಗೇ ಯೋಚಿಸಿದರೆ ಮನುಷ್ಯ ಉಪವಾಸದಿಂದ ನರಳಿ ನರಳಿ ಸಾಯಬೇಕಾಗುತ್ತದೆ. ಏಕೆಂದರೆ, ಸಸ್ಯಗಳಿಗೂ ಜೀವವಿದೆ,ಹಣ್ಣು ತರಕಾರಿ,ಧಾನ್ಯಗಳನ್ನ ಕೀಳುವಂತಿಲ್ಲ,ಹಿಂಸಿಸುವಂತಿಲ್ಲ ಅಲ್ಲವೇ! ಚರ್ಚಿಸಲು ಸಾಕಷ್ಟು ಸಮಸ್ಯೆಗಳಿವೆ. ಶಿಕ್ಷಣ,ನಿರುದ್ಯೋಗ,ಸಮಾನತೆ ಈ ಕುರಿತು ಚರ್ಚೆಗಳಾಗಲಿ. ಅನಗತ್ಯ ವಿಷಯಕ್ಕಿಂತ, ಮನುಷ್ಯರಾಗಿ ಹುಟ್ಟಿದ ನಾವೆಲ್ಲಾ ಒಂದೇ ಎಂಬುದನ್ನರಿತು ಮಾನವೀಯತೆಯಿಂದ ಬದುಕುವುದೇ ನಮ್ಮ ಗುರಿಯಾಗಬೇಕಿದೆ. ಏನಂತಿರಿ?….

ಡಿ.ಶಬ್ರಿನಾ ಮಹಮದ್ ಅಲಿ,ಚಳ್ಳಕೆರೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button