ಸರ್ಕಾರಿ ಶಾಲೆಗಳ ಶ್ರೇಯೋಭಿವೃದ್ಧಿಗೆ – ಎಸ್.ಡಿ.ಎಂ.ಸಿ ಸಮಿತಿಯ ವಿಶೇಷ ಕಾಳಜಿ.
ಜಕ್ಕಲಿ ಫೆ.11

ಪಿ.ಡಬ್ಲ್ಯೂ.ಡಿ ಅಧಿಕಾರಿಗಳೊಂದಿಗೆ ಪರಿಶೀಲನಾ ಪೋಟೋ
ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಜಕ್ಕಲಿ (ಫೆಬ್ರವರಿ 09, 2026) ಗದಗ ಜಿಲ್ಲೆ ರೋಣ ತಾಲೂಕು ನರೇಗಲ್ ಸಮೀಪದ ಜಕ್ಕಲಿ ಗ್ರಾಮದ ಮಕ್ಕಳ ಭವಿಷ್ಯವನ್ನು ರೂಪಿಸುವ ಸರ್ಕಾರಿ ಮಾದರಿ ಪ್ರಾಥಮಿಕ ಗಂಡು ಮಕ್ಕಳ ಶಾಲೆ (GMPS) ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯಲ್ಲಿ (HPKGS) ಸುಧಾರಣೆ ತರುವ ನಿಟ್ಟಿನಲ್ಲಿ ಎಸ್‌ಡಿಎಂಸಿ ಸಮಿತಿಯು ಸಕ್ರಿಯವಾಗಿ ತೊಡಗಿಸಿ ಕೊಂಡಿದೆ.
ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಅಂದಪ್ಪ ಮಾದರ ಅವರ ನೇತೃತ್ವದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳನ್ನು ಶಾಲೆಗೆ ಆಮಂತ್ರಿಸಿ, ಪ್ರಸ್ತುತ ಇರುವ ಸಮಸ್ಯೆಗಳ ಕುರಿತು ಸೌಹಾರ್ದಯುತವಾಗಿ ಚರ್ಚಿಸಿ ಪರಿಶೀಲನೆ ನಡೆಸಲಾಯಿತು.
ಶಿಥೀಲಗೊಂಡ ಕೊಠಡಿಗಳ ವೀಕ್ಷಣೆ ಶಾಲೆಯ ಐದು ಕೊಠಡಿಗಳು ಹಳೆಯದಾಗಿದ್ದು, ಶಿಥೀಲ ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ರೋಣ ಲೋಕೋಪಯೋಗಿ ಇಲಾಖೆಯ (PWD) ಎಂಜಿನಿಯರ್ ಸಂತೋಷ್ ನೀಲಗುಂದ ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಈ ವೇಳೆ ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ಇಂಜಿನಿಯರ್ ಅವರಿಗೆ ಈ ಕೊಠಡಿಗಳ ವಸ್ತು ಸ್ಥಿತಿಯನ್ನು ವಿವರಿಸಿ, ಅವುಗಳನ್ನು ಶೀಘ್ರವಾಗಿ ತೆರವು ಗೊಳಿಸಲು ಅಗತ್ಯವಿರುವ ಕಾನೂನು ಪ್ರಕ್ರಿಯೆಗಳನ್ನು ಕೈಗೊಳ್ಳುವಂತೆ ವಿನಂತಿಸಿದರು.
ಬಾಕ್ಸ್ ನ್ಯೂಸ್:-

ಪಂಚಾಯಿತಿ ಸಿಬ್ಬಂದಿಯವರು ಶಾಲೆಯ ನೀರಿನ ಕೊಠಡಿ ಮುಂದೆ ನಿಂತಿರುವ ಫೋಟೋ
ಮೂಲಭೂತ ಸೌಕರ್ಯಗಳಿಗೆ ಆದ್ಯತೆ ಶಾಲಾ ಆವರಣದಲ್ಲಿ ಕುಡಿಯುವ ನೀರಿನ ಸಮಸ್ಯೆ, ಚರಂಡಿ ವ್ಯವಸ್ಥೆ ಮತ್ತು ಸ್ವಚ್ಛತೆಯ ಕುರಿತು ಚರ್ಚಿಸಲು ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಭೇಟಿ ಮಾಡಲಾಯಿತು. ಶಾಲೆಯ ನಲ್ಲಿಗಳಲ್ಲಿ ನೀರಿನ ಒತ್ತಡ ಕಡಿಮೆ ಇರುವ ಬಗ್ಗೆ ವಾಟರ್ ಮ್ಯಾನ್ ಮತ್ತು ಪಂಚಾಯಿತಿ ಸಿಬ್ಬಂದಿಗೆ ತೋರಿಸಿ, ಮಕ್ಕಳಿಗೆ ಯಾವುದೇ ತೊಂದರೆ ಯಾಗದಂತೆ ಸಮರ್ಪಕ ನೀರು ಒದಗಿಸಲು ಮನವಿ ಮಾಡಲಾಯಿತು. ಅಲ್ಲದೆ, ಶಾಲೆಯ ಹಿಂಭಾಗದಲ್ಲಿ ಕಸದ ವಿಲೇವಾರಿ ಮತ್ತು ಶೌಚಾಲಯಗಳ ಸ್ವಚ್ಛತೆಯನ್ನು ಕಾಪಾಡುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದು ಸರಿ ಪಡಿಸಲು ಕೋರಲಾಯಿತು.
ಈ ಪರಿಶೀಲನಾ ಸಭೆಯಲ್ಲಿ ಗ್ರಾಮ ಪಂಚಾಯಿತಿ ಎಸ್‌ಡಿಎ (SDA) ನಾಗಪ್ಪ ಕೆಂಗಾರ, ವಾಟರ್ ಮ್ಯಾನ್ ರವಿಕಿರಣ್ ಕಮ್ಮಾರ ಮತ್ತು ಸಂಜೀವಕುಮಾರ ತಳವಾರ ಅವರು ಪಾಲ್ಗೊಂಡು ಸಕಾರಾತ್ಮಕವಾಗಿ ಸ್ಪಂದಿಸಿದರು.
ಶಿಕ್ಷಣ ಕ್ಷೇತ್ರದ ಹಿತದೃಷ್ಟಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯಾಧ್ಯಾಪಕರಾದ ಎಸ್.ಬಿ ಗವಿ, ಎ.ಬಿ ಜಕ್ಕಲಿ, ಎಸ್‌ಡಿಎಂಸಿ ಉಪಾಧ್ಯಕ್ಷರಾದ ಕವಿತಾ ಆದಿ, ಸದಸ್ಯರಾದ ಶರಣಮ್ಮ ಬಂಡಿ, ಬಸಪ್ಪ ಬಂಡಿ, ಹಾಗೂ ಶಿಕ್ಷಕ ಎಂ.ಬಿತಾಳಿಕೋಟಿ ಅವರು ಉಪಸ್ಥಿತರಿದ್ದು ಅಮೂಲ್ಯವಾದ ಸಲಹೆಗಳನ್ನು ನೀಡಿದರು.
ಬಾಕ್ಸ್ ನ್ಯೂಸ್:-

ಅಧ್ಯಕ್ಷರು ಅಂದಪ್ಪ ಮಾದರ ರವರ ಫೋಟೋ
ಗೌರವಯುತ ಜನ ಪ್ರತಿನಿಧಿಗಳೇ ಮತ್ತು ಅಧಿಕಾರಿಗಳೇ… ನೆನಪಿರಲಿ, ಇವತ್ತು ತಾವು ಯಾವ ಎಸಿ ರೂಮುಗಳಲ್ಲಿ ಕುಳಿತು ಅಧಿಕಾರ ನಡೆಸುತ್ತಿದ್ದೇವೆಯೋ, ಅದಕ್ಕೆ ಅಡಿಪಾಯ ಹಾಕಿದ್ದೇ ಇಂತಹ ಸರ್ಕಾರಿ ಶಾಲೆಗಳು. ಆದರೆ ಇಂದು ನಮ್ಮ ಜಕ್ಕಲಿ ಗ್ರಾಮದ ಶಾಲೆಗಳ ಪರಿಸ್ಥಿತಿ ನೋಡಿದರೆ ರಕ್ತ ಕುದಿಯುತ್ತದೆಮಕ್ಕಳ ಜೀವದ ಜೊತೆ ಚೆಲ್ಲಾಟವಾಡುವುದನ್ನು ಮೊದಲು ನಿಲ್ಲಿಸಿ. ಶಾಲೆಯ ಐದು ಕೊಠಡಿಗಳು ಉರುಳಿ ಬೀಳುವ ಹಂತದಲ್ಲಿದ್ದರೂ, ನೀರು-ಸ್ವಚ್ಛತೆಯಂತಹ ಕನಿಷ್ಠ ಸೌಲಭ್ಯಗಳಿಲ್ಲದಿದ್ದರೂ ನೀವು ಕಣ್ಮುಚ್ಚಿ ಕುಳಿತೀರುವುದು ನಾಚಿಕೆಗೇಡಿನ ಸಂಗತಿ. ಚುನಾವಣೆ ಬಂದಾಗ ಮತ ಕೇಳಲು ಬರುವ ನಿಮ್ಮ ಕೈಗಳಿಗೆ, ನಮ್ಮ ಶಾಲೆಯ ಮಕ್ಕಳು ಜೀವ ಭಯದಲ್ಲಿ ಪಾಠ ಕೇಳುತ್ತಿರುವುದು ಕಾಣಿಸುತ್ತಿಲ್ಲವೇ?ನಾವು ಕೇಳುತ್ತಿರುವುದು ಅರಮನೆಯನ್ನಲ್ಲ, ನಮ್ಮ ಹಳ್ಳಿಯ ಮಕ್ಕಳಿಗೆ ಸುರಕ್ಷಿತವಾದ ಒಂದು ನೆಲೆ ಮತ್ತು ಕುಡಿಯಲು ಶುದ್ಧ ನೀರನ್ನು ಮಾತ್ರ. ಇನ್ನಾದರೂ ನಿಮ್ಮ ನಿರ್ಲಕ್ಷ್ಯದ ನಿದ್ರೆಯಿಂದ ಎಚ್ಚೆತ್ತು ಕೊಳ್ಳಿ. ಅನಾಹುತ ನಡೆದ ಮೇಲೆ ಬಂದು ಮೊಸಳೆ ಕಣ್ಣೀರು ಸುರಿಸುವ ಬದಲು, ಈಗಲೇ ಶಾಲೆಯ ಅಭಿವೃದ್ಧಿಗೆ ಸ್ಪಂದಿಸಿ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇಡೀ ಗ್ರಾಮಸ್ಥರೊಂದಿಗೆ ಸೇರಿ ನಿಮ್ಮನ್ನು ಪ್ರಶ್ನಿಸುವುದು ಅನಿವಾರ್ಯವಾಗುತ್ತದೆ. ಇದು ಕೇವಲ ವಿನಂತಿಯಲ್ಲ, ಸಾರ್ವತ್ರಿಕವಾಗಿ ಎಚ್ಚರಿಕೆ ಕೂಡ ಆಗಿದೆ ಎಂದು ವರದಿಯಾಗಿದೆ.

