ಗ್ರಾಮ ಪಂಚಾಯಿತಿ ಅಕ್ರಮಕ್ಕೆ ಸಾಕ್ಷ್ಯನಾಶದ ಸಂಚು..? ದಾಖಲೆಗಳೇ ಇಲ್ಲವೆಂದು – ನೂಣುಚಿ ಕೊಂಡ ಪಿ.ಡಿ.ಓ.

ಜಕ್ಕಲಿ ಫೆ.23

ರೋಣ ತಾಲ್ಲೂಕಿನ ಜಕ್ಕಲಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಕಂಪ್ಯೂಟರ್ ಆಪರೇಟರ್ ಅಕ್ರಮ ನೇಮಕಾತಿ ಹಾಗೂ ದಾಖಲೆಗಳ ತಿದ್ದುಪಡಿ ಹಗರಣ ಈಗ ಹೊಸ ತಿರುವು ಪಡೆದು ಕೊಂಡಿದೆ. ಆಪರೇಟರ್ ಶಕುಂತಲಾ ನವಲಗುಂದ ಅವರನ್ನು ಸೇವೆಯಿಂದ ವಜಾ ಗೊಳಿಸಲು 2018 ರಲ್ಲಿ ನಡೆದಿದ್ದ ಗ್ರಾಮ ಸಭೆಯ ನಿರ್ಣಯದ ಮೂಲ ಪ್ರತಿಗಳೇ ನಾಪತ್ತೆ ಯಾಗಿವೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (PDO) ಹಾರಿಕೆ ಉತ್ತರ ನೀಡುವ ಮೂಲಕ ಭ್ರಷ್ಟರ ರಕ್ಷಣೆಗೆ ನಿಂತಿರುವ ಸಂಶಯ ವ್ಯಕ್ತವಾಗಿದೆ.

ಕಳೆದ 11 ವರ್ಷಗಳಿಂದ ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಆಪರೇಟರ್, ಪಂಚಾಯಿತಿಗೆ ಸರಿಯಾಗಿ ಹಾಜರಾಗದೆ ಸಾರ್ವಜನಿಕ ಕೆಲಸಗಳಿಗೆ ಅಡ್ಡಿ ಪಡಿಸುತ್ತಿದ್ದಾರೆ ಎಂಬ ದೂರು ಕೇಳಿ ಬಂದಿತ್ತು. ಈ ಕುರಿತು ರಾಷ್ಟ್ರ ಕ್ರಾಂತಿ ನ್ಯೂಸ್ ಸರಣಿ ವರದಿಗಳನ್ನು ಪ್ರಕಟಿಸಿದ ಬೆನ್ನಲ್ಲೇ ಎಚ್ಚೆತ್ತು ತಾಲ್ಲೂಕು ಪಂಚಾಯಿತಿ ಇ.ಓ (EO), 2018 ರ ಗ್ರಾಮ ಸಭೆಯ ವಜಾ ನಿರ್ಣಯದ ಮೂಲ ಪ್ರತಿಯನ್ನು ಸಲ್ಲಿಸುವಂತೆ ನೋಟಿಸ್ ನೀಡಿದ್ದರು.

ಆದರೆ, ಫೆಬ್ರವರಿ 18 ರಂದು ಇ.ಓ ಅವರಿಗೆ ಪತ್ರ ಬರೆದಿರುವ ಜಕ್ಕಲಿ ಪಿ.ಡಿ.ಓ ಪಂಚಾಯಿತಿಯಲ್ಲಿ ಅಂತಹ ಯಾವುದೇ ಠರಾವು ಪ್ರತಿ ಲಭ್ಯವಿಲ್ಲ ಎಂದು ತಿಳಿಸಿದ್ದಾರೆ. ಪತ್ರಿಕಾ ವರದಿಗಳಲ್ಲಿ ಮತ್ತು ಸಾರ್ವಜನಿಕ ದೂರುಗಳಲ್ಲಿ ಠರಾವು ಇರುವ ಬಗ್ಗೆ ಸ್ಪಷ್ಟ ಉಲ್ಲೇಖವಿದ್ದರೂ, ಈಗ ದಾಖಲೆಗಳೇ ಇಲ್ಲ ಎನ್ನುತ್ತಿರುವುದು ಸಾಕ್ಷ್ಯನಾಶ ಮಾಡುವ ಉದ್ದೇಶ ಪೂರ್ವಕ ಸಂಚು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಗರಣದ ಕುರಿತು ಪ್ರತಿಕ್ರಿಯಿಸಿರುವ ರಾಷ್ಟ್ರ ಕ್ರಾಂತಿ ನ್ಯೂಸ್ ಸಂಪಾದಕ ಅಂದಪ್ಪ ಮಾದರ, ದಾಖಲೆಗಳನ್ನು ಮುಚ್ಚಿಟ್ಟು ಭ್ರಷ್ಟರನ್ನು ಬಚಾವ್ ಮಾಡಲು ಅಧಿಕಾರಿಗಳು ಯತ್ನಿಸುತ್ತಿದ್ದಾರೆ. ನಮ್ಮ ಬಳಿ ಭದ್ರವಾದ ಸಾಕ್ಷ್ಯಗಳಿದ್ದು, ಈ ಕೂಡಲೇ ಜಿಲ್ಲಾ ಪಂಚಾಯಿತಿ ಸಿ.ಇ.ಓ ಹಾಗೂ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು. ಬಡವರ ಮತ್ತು ಮೀಸಲಾತಿ ಹಕ್ಕುಗಳ ಮೇಲೆ ಕಣ್ಣು ಹಾಕುವವರ ವಿರುದ್ಧ ಕಾನೂನು ಸಮರ ಮುಂದುವರಿಯಲಿದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಈ ಹಗರಣದ ಹಿಂದೆ ಯಾರ ಕೈವಾಡವಿದೆ..? ಸಾಕ್ಷ್ಯನಾಶಕ್ಕೆ ಪ್ರಯತ್ನಿಸಿದ ಅಧಿಕಾರಿಗಳ ಮೇಲೆ ಜಿಲ್ಲಾಡಳಿತ ಕ್ರಮ ಕೈಗೊಳ್ಳುವುದೇ..? ಕಾದು ನೋಡ ಬೇಕಿದೆ.

ಬಾಕ್ಸ್ ನ್ಯೂಸ್:-

ಸಂಪಾದಕ ಅಂದಪ್ಪ ಮಾದರ ಅವರ ವಿಶೇಷ ಹೇಳಿಕೆ ಜಕ್ಕಲಿ ಗ್ರಾಮ ಪಂಚಾಯಿತಿಯಲ್ಲಿ 2018 ರ ಗ್ರಾಮ ಸಭೆಯ ಠರಾವು ಲಭ್ಯವಿಲ್ಲ ಎಂದು ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಿರುವುದು ಸೂರ್ಯನ ಬೆಳಕಿನಷ್ಟೇ ಸ್ಪಷ್ಟವಾಗಿರುವ ಸಾಕ್ಷ್ಯನಾಶದ ಸಂಚು. ಅಧಿಕೃತ ಠರಾವು ಪ್ರತಿಗಳು ಲಭ್ಯವಿಲ್ಲ ಎಂದರೆ, ಆಡಳಿತ ವ್ಯವಸ್ಥೆಯು ಭ್ರಷ್ಟರ ರಕ್ಷಣೆಗೆ ಕವಚವಾಗಿ ನಿಂತಿದೆ ಎಂದರ್ಥ. ಬಡವರ ಹಕ್ಕುಗಳನ್ನು ಹತ್ತಿಕ್ಕುವ ಮತ್ತು ಮೀಸಲಾತಿ ಪಟ್ಟಿಯಲ್ಲಿ ಅಕ್ರಮ ಎಸಗುವ ಇಂತಹ ವ್ಯವಸ್ಥಿತ ಹಗರಣವನ್ನು ನಾವು ಇಲ್ಲಿಗೇ ಬಿಡುವುದಿಲ್ಲ. ನಮ್ಮ ಬಳಿ ಈ ಹಗರಣದ ಬಗ್ಗೆ ಎಲ್ಲಾ ಬಲವಾದ ಸಾಕ್ಷ್ಯಗಳು ಮತ್ತು ದಾಖಲೆಗಳಿವೆ. ಈ ಕೂಡಲೇ ಈ ಹಗರಣದ ಸಮಗ್ರ ತನಿಖೆಗಾಗಿ ಜಿಲ್ಲಾ ಪಂಚಾಯಿತಿ CEO ಮತ್ತು ಲೋಕಾಯುಕ್ತಕ್ಕೆ ದೂರು ನೀಡಲಾಗುವುದು. ನ್ಯಾಯ ಸಿಗುವವರೆಗೂ ರಾಷ್ಟ್ರ ಕ್ರಾಂತಿ ನ್ಯೂಸ್ ತನ್ನ ಹೋರಾಟವನ್ನು ನಿಲ್ಲಿಸುವುದಿಲ್ಲ.ಅಂದಪ್ಪ ಮಾದರ, ಸಂಪಾದಕರು, ರಾಷ್ಟ್ರ ಕ್ರಾಂತಿ ನ್ಯೂಸ್ ಎಂದು ವರದಿಯಾಗಿದೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button