ಪ್ರಶಿಕ್ಷಣಾರ್ಥಿಗಳು ಸ್ವಾಮಿ ವಿವೇಕಾನಂದರ ಸಮಗ್ರ ಕೃತಿಗಳ ಅಧ್ಯಯನ ಮಾಡ ಬೇಕು – ಡಾ, ಸಿ.ಟಿ ಬಸವರಾಜಪ್ಪ ಸಲಹೆ.
ಚಳ್ಳಕೆರೆ ಫೆ.28

ಪ್ರಶಿಕ್ಷಣಾರ್ಥಿಗಳು ಸ್ವಾಮಿ ವಿವೇಕಾನಂದರ ಸಮಗ್ರ ಕೃತಿಗಳನ್ನು ಅಧ್ಯಯನ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಚಳ್ಳಕೆರೆಯ ಬಾಪೂಜಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಾಂಶುಪಾಲರಾದ ಡಾ.ಬಸವರಾಜಪ್ಪ ಅವರು ಸಲಹೆ ನೀಡಿದರು.
ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ನಗರದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಶ್ರೀ ಎನ್.ಜಯಣ್ಣ ಶಿಕ್ಷಣ ಮಹಾ ವಿದ್ಯಾಲಯದ ಪ್ರಥಮ ಮತ್ತು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಗಾಗಿ ಆಯೋಜಿಸಿದ್ದ ವ್ಯಕ್ತಿತ್ವ ನಿರ್ಮಾಣಕಾರಿ ತರಗತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು “ಸಮರ್ಥ ಶಿಕ್ಷಕ ರಾಷ್ಟ್ರ ರಕ್ಷಕ” ಎಂಬ ವಿಷಯವಾಗಿ ವಿಶೇಷ ಉಪನ್ಯಾಸ ನೀಡಿದರು.
ಭಾರತವನ್ನು ತಿಳಿಯ ಬೇಕಾದರೆ ನಾವು ಸ್ವಾಮಿ ವಿವೇಕಾನಂದರನ್ನು ಓದಬೇಕು. ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ ವೃತ್ತಿಯಾಗಿದ್ದು ಶಿಕ್ಷಕನಾದವನು ಪ್ರತಿನಿತ್ಯ ಕಲಿಯುತ್ತ ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರ ತೆಗೆಯಬೇಕು. ಪ್ರಶಿಕ್ಷಣಾರ್ಥಿಗಳು ಡಿ.ವಿ.ಜಿ ಯವರ ಮಂಕುತಿಮ್ಮನ ಕಗ್ಗ ಸೇರಿದಂತೆ ವ್ಯಕ್ತಿತ್ವವನ್ನು ಅರಳಿಸಿ ಬೆಳೆಸುವ ಪುಸ್ತಕಗಳನ್ನು ಅಧ್ಯಯನ ಮಾಡಬೇಕು ಎಂದರು.

ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರು ಪ್ರಶಿಕ್ಷಣಾರ್ಥಿಗಳಿಗೆ ಧ್ಯಾನಾಭ್ಯಾಸಿ ಮಾಡಿಸಿ ಮಾತನಾಡಿ ಶಿಕ್ಷಕರಾಗುವವರು ಮಾನವತೆಗೆ ಸಂಬಂಧಿಸಿದ “ಶ್ರೀಮದ್ ಭಗವದ್ಗೀತೆ” ಮತ್ತು ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ಒಳಗೊಂಡ “ಚೈತನ್ಯ ಚಿಲುಮೆ” ಪುಸ್ತಕವನ್ನು ಓದಬೇಕು. ನೈತಿಕ ಮೌಲ್ಯಗಳನ್ನು ರೂಢಿಸಿ ಕೊಂಡು ಉತ್ತಮ ಚಾರಿತ್ರ್ಯವಂತ ವ್ಯಕ್ತಿತ್ವವನ್ನು ರೂಪಿಸಿ ಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಆರಂಭದಲ್ಲಿ ಪ್ರಾರ್ಥನೆ ಮತ್ತು ಭಜನೆಯನ್ನು ಯತೀಶ್ ಎಂ ಸಿದ್ದಾಪುರ ನಡೆಸಿ ಕೊಟ್ಟರು.
ತರಗತಿಯ ಕೊನೆಯಲ್ಲಿ ಪುಸ್ತಕ ಮಾರಾಟ ಮತ್ತು ಅನ್ನ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥರಾದ ನಾಗೇಶ್, ಶ್ಯಾಮ್ ಸುಂದರ್,ಅನಿತಾ, ಸಂತೋಷ್, ಅಂಬುಜಾ, ಸಂಧ್ಯಾ, ಅಭಿಷೇಕ್, ವೀರೇಂದ್ರ, ವಿನುತಾ,ಚಂದನ,ಜಯಶ್ರೀ, ಪೂಜಾ, ಅಂಜಲಿ, ವೈಷ್ಣವಿ,ಪಾರ್ವತಿ, ಅಶೋಕ ಸೇರಿದಂತೆ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

