ಕುರಹಟ್ಟಿಯಲ್ಲಿ ಅಕ್ರಮ ಮೊಹರಂ ದಂಧೆ ಪತ್ತೆ – ಜೆಸಿಬಿ, ಟಿಪ್ಪರ್ ವಶಕ್ಕೆ.
ಕುರಹಟ್ಟಿ ಮಾ.11

ರೋಣ ತಾಲ್ಲೂಕಿನ ಕುರಹಟ್ಟಿ ಗ್ರಾಮದ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮೊಹರಂ ಮಣ್ಣು ಸಾಗಾಣಿಕೆ ದಂಧೆಯನ್ನು ಪತ್ತೆ ಹಚ್ಚಲಾಗಿದ್ದು, ಕಂದಾಯ ಇಲಾಖೆಯ ಅಧಿಕಾರಿಗಳು ಒಂದು ಜೆ.ಸಿ.ಬಿ ಹಾಗೂ ಎರಡು ಟಿಪ್ಪರ್ ವಾಹನಗಳನ್ನು ಜಪ್ತಿ ಮಾಡಿದ್ದಾರೆ.
ಕುರಹಟ್ಟಿ ಗ್ರಾಮದ ಸರ್ವೇ ನಂಬರ್ 55/1 ಮತ್ತು 55/5 ರ ಜಮೀನಿನಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮಣ್ಣು ಲೂಟಿ ಮಾಡಲಾಗುತ್ತಿತ್ತು. ಹಣಮಂತಪ್ಪ ಬಸವಂತಪ್ಪ ಚವಡಿ ಹಾಗೂ ಮೈಲಾರಪ್ಪ ಬಸವಂತಪ್ಪ ಚವಡಿ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಈ ಅಕ್ರಮ ಗಣಿಗಾರಿಕೆ ನಡೆಯುತ್ತಿತ್ತು. ಗುತ್ತಿಗೆದಾರರಾದ ಎಂ.ಎಸ್ ಪಾಟೀಲ್ ಎಂಬುವವರ ಸೂಚನೆಯಂತೆ ಮಣ್ಣು ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ.

ಪತ್ರಕರ್ತ ಹಾಗೂ ಸಾಮಾಜಿಕ ಕಾರ್ಯಕರ್ತ ಅಂದಪ್ಪ ಮಾದರ ಅವರು ಅಕ್ರಮವನ್ನು ಪತ್ತೆ ಹಚ್ಚಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಕುರಹಟ್ಟಿ ಗ್ರಾಮ ಲೆಕ್ಕಾಧಿಕಾರಿ ಕೀರ್ತಿ ಗಾಣಿಗೇರ, ಕಂದಾಯ ನಿರೀಕ್ಷಕರು ಹಾಗೂ ಸಹಾಯಕ ಬಸವರಾಜ ವಾಲ್ಮೀಕಿ ಅವರು ಅಕ್ರಮದಲ್ಲಿ ತೊಡಗಿದ್ದ ವಾಹನಗಳನ್ನು ವಶಕ್ಕೆ ಪಡೆದು ರೋಣ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ತಹಶೀಲ್ದಾರರಿಗೆ ದೂರು:-
ಜಪ್ತಿ ಮಾಡಲಾದ ವಾಹನಗಳನ್ನು ಈಗ ಬಿಡುಗಡೆ ಮಾಡಲಾಗಿದ್ದು, ಅಕ್ರಮ ಎಸಗಿದ ಗುತ್ತಿಗೆದಾರರು ಹಾಗೂ ಜಮೀನು ಮಾಲೀಕರ ಮೇಲೆ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಮತ್ತು ಎಷ್ಟು ದಂಡ ವಿಧಿಸಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ರೋಣ ತಹಶೀಲ್ದಾರರಿಗೆ ಲಿಖಿತ ಮನವಿ ಸಲ್ಲಿಸಲಾಗಿದೆ. ಸಾರ್ವಜನಿಕ ಆಸ್ತಿಯ ಲೂಟಿ ಮಾಡಿದವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸ ಬೇಕೆಂದು ಅಂದಪ್ಪ ಮಾದರ ಆಗ್ರಹಿಸಿದ್ದಾರೆ.

