ಒಳ ಮೀಸಲಾತಿ ಜಾರಿಗೆ ಜಿಲ್ಲಾ ಯುವ ಮುಖಂಡರ ಗುಡುಗು – ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ.
ಗದಗ ಮಾ.16

ರಾಜ್ಯದಲ್ಲಿ ಒಳ ಮೀಸಲಾತಿ ಜಾರಿ ವಿಚಾರ ಈಗ ನಿರ್ಣಾಯಕ ಹಂತಕ್ಕೆ ತಲುಪಿದ್ದು, ಸರ್ಕಾರದ ವಿಳಂಬ ನೀತಿಯ ವಿರುದ್ಧ ಗದಗ ಜಿಲ್ಲೆಯ ಯುವ ಮುಖಂಡರು ಸಮರ ಸಾರಿದ್ದಾರೆ. ಕಾಂಗ್ರೆಸ್ ಸರ್ಕಾರವು ಉದ್ದೇಶ ಪೂರ್ವಕವಾಗಿ ಎಡ ಮತ್ತು ಬಲಗೈ ಸಮುದಾಯಗಳ ನಡುವೆ ಗೊಂದಲ ಸೃಷ್ಟಿಸಿ, ಒಡೆದು ಆಳುವ’ ನೀತಿ ಅನುಸರಿಸುತ್ತಿದೆ ಎಂದು ಗದಗ ಜಿಲ್ಲಾ ದಲಿತ ಯುವ ಮುಖಂಡ ಸುರೇಶ್ ವೈ. ಚಲವಾದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಮಾಧ್ಯಮದೊಂದಿಗೆ ಮಾತನಾಡಿದ ಅವರು, ದಶಕಗಳಿಂದ ತುಳಿತಕ್ಕೊಳಗಾದ ಸಮುದಾಯಗಳು ಸಾಮಾಜಿಕ ನ್ಯಾಯಕ್ಕಾಗಿ ಬೀದಿಗಿಳಿದು ಹೋರಾಡುತ್ತಿವೆ. ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿದರೂ, ಒಳ ಮೀಸಲಾತಿ ಜಾರಿ ಗೊಳಿಸದೆ ಕಾಂಗ್ರೆಸ್ ಸರ್ಕಾರವು ಸಮುದಾಯಗಳ ನಡುವೆ ಒಡಕು ಮೂಡಿಸುವ ಕೆಲಸ ಮಾಡುತ್ತಿದೆ. ಇದು ಕೇವಲ ರಾಜಕೀಯ ಗೇಮ್ ಪ್ಲಾನ್ ಆಗಿದೆ ಎಂದು ನೇರವಾಗಿ ಆರೋಪಿಸಿದರು.
ಮುಂದುವರಿದು ಮಾತನಾಡಿದ ಅವರು, ರಾಜ್ಯದಲ್ಲಿ ಸಿಎಂ ಬದಲಾವಣೆ ಕೂಗು ಹೆಚ್ಚಾದಂತೆ, ಬಹು ಸಂಖ್ಯಾತ ದಲಿತರಿಗೆ ಸಿಎಂ ಸ್ಥಾನ ನೀಡಬೇಕಾದ ಪ್ರಮೇಯ ಬರ ಬಹುದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆತಂಕ ಗೊಂಡಿದ್ದಾರೆ. ಹೀಗಾಗಿ ಬ್ಯಾಕ್ ಲಾಗ್ ಹುದ್ದೆ ತುಂಬುವ ನೆಪದಲ್ಲಿ ರೋಸ್ಟರ್ ಬಿಂದುವಿನಲ್ಲಿ ಗೊಂದಲ ಸೃಷ್ಟಿಸಿ. ಒಂದೇ ತಾಯಿ ಮಕ್ಕಳಂತಿರುವ ಸಹೋದರ ಸಮುದಾಯಗಳ ನಡುವೆ ವಿಷ ಬೀಜ ಬಿತ್ತಿ, ದಲಿತರು ಮುಖ್ಯಮಂತ್ರಿಯಾಗುವ ಅವಕಾಶವನ್ನೇ ತಪ್ಪಿಸುವ ಸಂಚು ಇದಾಗಿದೆ ಎಂದು ಕಿಡಿಕಾರಿದರು.
ಬರುವ ಮಾರ್ಚ್ 27 ರಂದು ನಡೆಯಲಿರುವ ಸಚಿವ ಸಂಪುಟ ಸಭೆಯು ಈ ಹೋರಾಟಕ್ಕೆ ಅಂತಿಮ ಪರೀಕ್ಷೆಯಾಗಿದೆ. ಈ ಸಭೆಯಲ್ಲಿ ಸರ್ಕಾರವು ಯಾವುದೇ ನೆಪ ಹೇಳದೆ ಒಳ ಮೀಸಲಾತಿಯನ್ನು ಯಥಾವತ್ತಾಗಿ ಜಾರಿ ಗೊಳಿಸಬೇಕು. ಇಲ್ಲವಾದಲ್ಲಿ ಗದಗ ಜಿಲ್ಲೆಯಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಎಸ್‌ಸಿ/ಎಸ್‌ಟಿ ದೌರ್ಜನ್ಯ ಪ್ರತಿಬಂಧಕ ಕಾಯ್ದೆ 1989 ರ ವಿಭಾಗ ಮಟ್ಟದ ಸಮಿತಿ ನಾಮನಿರ್ದೇಶಿತ ಸದಸ್ಯರಾದ ಬಸವರಾಜ್ ಮುಳ್ಳಾಳ್, ಅರ್ಹ ಸಮುದಾಯಗಳಿಗೆ ಸಿಗಬೇಕಾದ ಹಕ್ಕನ್ನು ವಂಚಿಸುವುದು ಸಂವಿಧಾನ ವಿರೋಧಿ ನಡೆ. ಕಾಂಗ್ರೆಸ್ ಯಾವತ್ತೂ ದಲಿತರ ಪರವಾಗಿಲ್ಲ. ಮೂರು ದಶಕಗಳ ಹೋರಾಟಕ್ಕೆ ಈ ಸರ್ಕಾರ ಕಿಂಚಿತ್ತೂ ಬೆಲೆ ಕೊಟ್ಟಿಲ್ಲ. ಇವರ ಕಪಟ ನಾಟಕವನ್ನು ಸಮುದಾಯ ಅರ್ಥ ಮಾಡಿ ಕೊಂಡಿದೆ. ಸರ್ಕಾರ ಇನ್ನೂ ಮುಂದೆ ನಮ್ಮ ತಾಳ್ಮೆ ಪರೀಕ್ಷಿಸ ಬಾರದು ಎಂದು ಗುಡುಗಿದರು.
ಒಟ್ಟಿನಲ್ಲಿ ಒಳ ಮೀಸಲಾತಿ ವಿಚಾರದಲ್ಲಿ ಸರ್ಕಾರದ ವಿಳಂಬ ಧೋರಣೆ ಯುವಕರ ಕೆಂಗಣ್ಣಿಗೆ ಗುರಿಯಾಗಿದೆ. ಮಾರ್ಚ್ 27 ರ ನಿರ್ಧಾರದ ಮೇಲೆ ಸರ್ಕಾರದ ಭವಿಷ್ಯ ಅಡಗಿದ್ದು, ಜಾರಿಯಾಗದಿದ್ದಲ್ಲಿ ತೀವ್ರ ಸ್ವರೂಪದ ಹೋರಾಟ ಅನಿವಾರ್ಯವಾಗಲಿದೆ. ಒಂದು ವೇಳೆ ಅವಘಡಗಳು ಸಂಭವಿಸಿದರೆ ಅದಕ್ಕೆ ಸರ್ಕಾರವೇ ನೇರ ಹೊಣೆ ಮತ್ತು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರದಂತೆ ತಡೆಯುತ್ತೇವೆ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ದಲಿತ ಯುವ ಮುಖಂಡ ಲಕ್ಷ್ಮಣ ಪೂಜಾರ ಉಪಸ್ಥಿತರಿದ್ದರು.

