ಹಿಂದೂ-ಮುಸ್ಲಿಂ ಭಾವೈಕ್ಯದ ಮಹಾನ್ ಸಂತ ಕಬೀರದಾಸರು – ಶ್ರೀಮತಿ ರತ್ನಮ್ಮ.ಜಯಚಂದ್ರ ಅಭಿಪ್ರಾಯ.
ಚಳ್ಳಕೆರೆ ಮಾ.20

ಕಬೀರದಾಸರು ಹಿಂದೂ-ಮುಸ್ಲಿಂ ಭಾವೈಕ್ಯದ ಮಹಾನ್ ಸಂತರಾಗಿ ಅವರು ರಚಿಸಿದ ದೋಹೆಗಳು ಅತ್ಯಂತ ಅರ್ಥಪೂರ್ಣವಾಗಿದ್ದು ಅವುಗಳ ಅನುಸಂಧಾನದಿಂದ ಜೀವನ ಸಾರ್ಥಕವಾಗುತ್ತದೆ ಎಂದು ಚಳ್ಳಕೆರೆಯ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸದಸ್ಯರಾದ ಶ್ರೀಮತಿ ರತ್ನಮ್ಮ ಜಯಚಂದ್ರ ತಿಳಿಸಿದರು.
ತ್ಯಾಗರಾಜ ನಗರದ ಸದ್ಭಕ್ತರಾದ ಶ್ರೀಮತಿ ತಿಪ್ಪಮ್ಮ ಉಮಾಶಂಕರ್ ಅವರ ಸೂಜಿಮಲ್ಲೇಶ್ವರ ನಿವಾಸದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು “ಕಬೀರದಾಸ”ರ ಬಗ್ಗೆ ವಿಶೇಷ ಉಪನ್ಯಾಸ ಮತ್ತು ಅವರ ದೋಹೆಗಳನ್ನು ಹಾಡಿದರು.
ಬಟ್ಟೆ ನೇಯುವ ಕಾಯಕ ಮಾಡುತ್ತಿದ್ದ ಕಬೀರದಾಸರು ಯಾವುದೇ ಔಪಚಾರಿಕ ಶಿಕ್ಷಣ ಪಡೆಯದಿದ್ದರೂ ಕೂಡ ಅಪಾರ ಆಧ್ಯಾತ್ಮಿಕ ಜ್ಞಾನವನ್ನು ಹೊಂದಿದ್ದರು.

ಸತ್ಸಂಗ ಕಾರ್ಯಕ್ರಮದಲ್ಲಿ ಭಾಗಿ ಸದ್ಭಕ್ತ ವೃಂದ…..
ಅವರ ಮೇಲೆ ಹಿಂದೂ ಮತ್ತು ಮುಸ್ಲಿಂ ಧರ್ಮಗಳ ಪ್ರಭಾವವಿತ್ತು. ಏಕದೇವತಾಧನೆಯನ್ನು ಪ್ರೋತ್ಸಾಹಿಸುತ್ತಿದ್ದ ಅವರು ದೇವರು ಒಬ್ಬನೇ ಎಂದು ಸಾರಿ ಅವನನ್ನು ಜಾತಿ-ಧರ್ಮಗಳನ್ನು ಮೀರಿ ಪೂಜಿಸಬೇಕು ಎಂದು ಕರೆ ನೀಡಿದವರು ಅವರು ಎಂದು ತಿಳಿಸಿದರು.
ಸತ್ಸಂಗದ ಪ್ರಯುಕ್ತ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ಶ್ರೀರಾಮಕೃಷ್ಣರ ನಾಮಸ್ಮರಣೆ, ಶ್ರೀಮತಿ ಪ್ರಮೀಳಾ ಜಗದೀಶ್, ಗೀತಾ ಪ್ರಕಾಶ್, ತಿಪ್ಪಮ್ಮ ಉಮಾಶಂಕರ್ ಅವರಿಂದ ವಿಶೇಷ ಭಜನೆ, ಯತೀಶ್ ಎಂ ಸಿದ್ದಾಪುರ ಅವರಿಂದ “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ, ದಿವ್ಯತ್ರಯರಿಗೆ ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು.
ಸತ್ಸಂಗ ಕಾರ್ಯಕ್ರಮದಲ್ಲಿ ಎಚ್ ಲಕ್ಷ್ಮೀದೇವಮ್ಮ, ಅನ್ನಪೂರ್ಣ, ಮಂಜುಳಾ, ಪುಷ್ಪಾ, ಸರ್ವಮಂಗಳಾ ಶಿವಣ್ಣ,ಪ್ರೇಮಾ, ಗೀತಾ ಸುಂದರೇಶ್ ದೀಕ್ಷಿತ್ ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

