“ಆಧ್ಯಾತ್ಮವೆಂಬ ಅಮೃತ ಪಾನ”…..

ಹಿಂದೂ ಧರ್ಮದ ಪುಣ್ಯ ಗ್ರಂಥಗಳ ಪ್ರಕಾರ, ಮನುಷ್ಯ ಜನ್ಮವು ಅತ್ಯಂತ ಶ್ರೇಷ್ಠವಾದದ್ದು. ಒಂದು ಆತ್ಮವು ಮನುಷ್ಯ ಜನ್ಮ ಪಡೆಯಲು ಪ್ರಾಣಿ, ಪಕ್ಷಿ , ಕೀಟ, ಹೀಗೆ ಲಕ್ಷಾಂತರ ಜೀವಿಗಳ ಯೋನಿಗಳಲ್ಲಿ ಜನ್ಮವೆತ್ತಿ, ಪಾಪ-ಪುಣ್ಯಗಳ ಕರ್ಮ ಫಲದ ಆಧಾರದ ಮೇಲೆ ಅಂತಿಮವಾಗಿ ಮನುಷ್ಯನಾಗಿ ಹುಟ್ಟುತ್ತದೆ. ಇದು ನಿರ್ದಿಷ್ಟ ಜನ್ಮ ಸಂಖ್ಯೆಯನ್ನು ಹೊಂದಿಲ್ಲದಿದ್ದರೂ, ಪುಣ್ಯದ ಬಲದಿಂದ ಮಾತ್ರವೇ ಈ ಜನ್ಮ ಲಭ್ಯವೆಂದು ನಂಬಲಾಗಿದೆ. ಗರುಡ ಪುರಾಣ ಮತ್ತು ಇತರ ಧರ್ಮಗ್ರಂಥಗಳ ಪ್ರಕಾರ, ಆತ್ಮವು 84 ಲಕ್ಷ ಯೋನಿಗಳನ್ನು ಸುತ್ತಿ ಬಂದು ನಂತರ ಮಾನವ ದೇಹವನ್ನು ಪಡೆಯುತ್ತದೆ ಎಂಬುದು ಎಲ್ಲರ ದಟ್ಟವಾದ ನಂಬಿಕೆಯಾಗಿದೆ.
ಏಳು ಜನ್ಮಗಳ ಕಲ್ಪನೆಗಳ ಪ್ರಕಾರ ಕೆಲವೊಮ್ಮೆ, ಹಿಂದಿನ ಏಳು ಜನ್ಮಗಳ ಕರ್ಮಫಲವು ಮನುಷ್ಯನನ್ನು ಬೆನ್ನಟ್ಟುತ್ತದೆ ಎಂದು ಹೇಳಲಾಗುತ್ತದೆ, ಆದರೆ ಮನುಷ್ಯ ಜನ್ಮವೇ ಸಿಗಬೇಕೆಂದರೆ ಹಿಂದಿನ ಜನ್ಮದಲ್ಲಿ ಮಾಡಿದ ಎಲ್ಲ ಪಾಪ ಕರ್ಮಗಳು ನಾಶವಾಗಿ ಪುಣ್ಯ ಸಂಪಾದನೆ ಮಾಡಿರಬೇಕು. ಆಗ ಮಾತ್ರವೇ ಆ ಆತ್ಮದ ಸದ್ಗುಣ ಮತ್ತು ಪುಣ್ಯ ಕಾರ್ಯಗಳ ಮೂಲಕ ಆಧಾರದ ಮೇಲೆ ಮಾತ್ರವೇ ಈ ಅಮೂಲ್ಯವಾದ ಮನುಷ್ಯ ಜನ್ಮ ದೊರೆಯುತ್ತದೆ ಎಂದು ಹೇಳಲಾಗುತ್ತದೆ.
ಇಷ್ಟೆಲ್ಲಾ ಕಷ್ಟ ನಷ್ಟಗಳನ್ನು ಅನುಭವಿಸಿ ಈ ಮನುಷ್ಯ ಜನ್ಮವನ್ನು ಆ ಭಗವಂತ ನಮಗೆ ನೀಡಿರುವನೆಂದ ಮೇಲೆ ನಾವು ಆ ಭಗವಂತನನ್ನೇ ಮರೆತರೆ ಹೇಗೆ..? ಮನುಷ್ಯನಾಗಿ ಹುಟ್ಟಿದ ಮೇಲೆ ವಯೋಸಹಜ ಬದಲಾವಣೆ ಸಹಜ. ಬೆಳೆದು ದೊಡ್ಡವರಾದ ಮೇಲೆ ಮದುವೆ, ಮಕ್ಕಳು, ಸಂಸಾರದ ಜವಾಬ್ದಾರಿ, ಉದ್ಯೋಗ, ವ್ಯವಹಾರದ ಜಂಜಾಟಕ್ಕೆ ಸಿಲುಕಿದ ಮನುಷ್ಯ ಭಗವಂತನನ್ನೇ ಮರೆತು ಕೇವಲ ಹಣ ಆಸ್ತಿ ಗಳಿಸುವುದರಲ್ಲೇ ಮಗ್ನನಾಗಿ ಬಿಡುತ್ತಾನೆ. ಆದರೆ ಎಷ್ಟೇ ದುಡಿದು ಹಣ ಆಸ್ತಿ ಸಂಪಾದನೆ ಮಾಡಿದರೂ ಅವನಿಗೆ ನಿಜವಾದ ಆನಂದ ದೊರೆಯುವುದೇ…? ಖಂಡಿತ ಇಲ್ಲ. ನಿಜವಾದ ಆನಂದ ಅಡಗಿರುವುದು ಹಣ, ಆಸ್ತಿ, ದುಬಾರಿ ಕಾರು, ಬಂಗಲೆ, ಬಟ್ಟೆ, ಬಂಗಾರದಲ್ಲಿ ಅಲ್ಲ. ನಿಜವಾದ ಆನಂದ ಅಡಗಿರುವುದು ಭಗವಂತನ ನಾಮ ಸ್ಮರಣೆಯಲ್ಲಿ ಮಾತ್ರ. ಇದು ಅಕ್ಷರಶಃ ಸತ್ಯ.
ಮನುಷ್ಯನ ದುರಂತವೆಂದರೆ ಹಗಲಿರುಳು ಕಷ್ಟ ಪಟ್ಟು ಆಸ್ತಿ, ಮನೆ, ಕಾರು, ಒಡವೆ ವಸ್ತ್ರಗಳನ್ನು ಕೊಂಡು ಕೊಳ್ಳುಲು ತುಂಬಾ ಹಣ ಖರ್ಚು ಮಾಡಬೆಕಾಗುತ್ತದೆ. ಹಾಗೆ ಕೊಂಡುಕೊಂಡರೂ ಸಹ ನಿಜವಾದ ಆನಂದ ಸಿಗುವುದಿಲ್ಲ. ಆದರೆ ಒಂದಾಣೆಯನ್ನೂ ಖರ್ಚು ಮಾಡದೆಯೇ ಕೇವಲ ಭಗವಂತನ ನಾಮಸ್ಮರಣೆ ಮಾಡುವುದರಿಂದ ಆತ್ಮ ಸಾಕ್ಷಾತ್ಕಾರ ಆಗುವುದಲ್ಲದೇ. ಮನಸ್ಸಿಗೆ ನಿಜವಾದ ಆನಂದವೂ ದೊರೆಯುತ್ತದೆ. ಆದರೆ ವಿಪರ್ಯಾಸ ನೋಡಿ… ಉಚಿತವಾಗಿ ದೊರೆಯುವ ನಿಜಾನಂದದ ಬೆಲೆಯೇ ನಮಗೆ ಗೊತ್ತಿಲ್ಲ.
ನಿಜವಾದ ಆತ್ಮ ಸಾಕ್ಷಾತ್ಕಾರಕ್ಕೆ ಆಧ್ಯಾತ್ಮ ಎಂಬುದು ಅತ್ಯುತ್ತಮವಾದ ತಳಹದಿ ಎಂಬುದರಲ್ಲಿ ಸಂಶಯವೇ ಇಲ್ಲ. ಆಧ್ಯಾತ್ಮ ಎಂದರೆ ತನ್ನ ಆತ್ಮ ಅಥವಾ ಮೂಲ ಸ್ವರೂಪವನ್ನು ಅರಿಯುವ ಪ್ರಕ್ರಿಯೆ. ಇದು ಕೇವಲ ಧಾರ್ಮಿಕ ಆಚರಣೆಯಲ್ಲ. ಬದಲಾಗಿ ಶಾಂತಿ, ಸತ್ಯ ಮತ್ತು ಆಂತರಿಕ ಶಕ್ತಿಯನ್ನು ಅರಸುವ ಜೀವನಶೈಲಿಯಾಗಿರುತ್ತದೆ.ಯೋಗ, ಧ್ಯಾನ, ಮತ್ತು ಆತ್ಮಾವಲೋಕನದ ಮೂಲಕ ಪರಮಾತ್ಮನೊಂದಿಗೆ ಐಕ್ಯವಾಗುವುದೇ ಆಧ್ಯಾತ್ಮದ ಮುಖ್ಯ ಉದ್ದೇಶವಾಗಿರುತ್ತದೆ. ಇದು ಹೊರಗಿನ ಪ್ರಪಂಚಕ್ಕಿಂತ ಅಂತರಂಗದ (ಮನಸ್ಸು ಮತ್ತು ಆತ್ಮ) ಕಡೆಗೆ ಗಮನ ಹರಿಸುತ್ತದೆ. ಅಹಂಕಾರವನ್ನು ತೊರೆದು, ಪ್ರೀತಿ ಮತ್ತು ಕರುಣೆಯನ್ನು ಬೆಳೆಸಿಕೊಳ್ಳುವುದು ಮತ್ತು ಇದರ ಮೂಲ ಉದ್ದೇಶವೇ ಆಂತರಿಕ ಶಾಂತಿ, ಮತ್ತು ಜೀವನದ ಗುರಿಯನ್ನು ಅರಿಯುವುದಾಗಿರುತ್ತದೆ. ಧ್ಯಾನ, ಯೋಗ, ಪ್ರಾರ್ಥನೆ, ಮಂತ್ರ ಜಪ, ಆತ್ಮವಿಮರ್ಶೆ, ಮತ್ತು ಪ್ರಕೃತಿಯೊಂದಿಗೆ ಸಮಯ ಕಳೆಯುವುದು ಆಧ್ಯಾತ್ಮಿಕ ಪ್ರಮುಖ ಅಭ್ಯಾಸಗಳಾಗಿವೆ. ಹೀಗೆ ಆಧ್ಯಾತ್ಮಿಕ ಸಾಧನೆಯ ಮೂಲಕ ಅಂತಿಮವಾಗಿ ಮೋಕ್ಷ ಪಡೆದು ಪರಮಾನಂದ ಸಾಧಿಸುವುದು ಇದರ ಮೂಲ ಉದ್ದೇಶವಾಗಿದೆ. ಮನುಷ್ಯ ಜನ್ಮ ಪಡೆದು ಬಂದದ್ದೇ ಮೋಕ್ಷ ಸಾಧನೆಗೆ ಎಂದಮೇಲೆ ಆಧ್ಯಾತ್ಮವೆಂಬ ಅಮೃತವನ್ನು ನಾವು ಆಸ್ವಾದಿಸಿದಾಗ ಮಾತ್ರ ಅದರ ರುಚಿ ನಮಗೆ ಮುದ ನೀಡಬಲ್ಲದು.
ದಿನಕ್ಕೆ ಕನಿಷ್ಠ ಹದಿನೈದರಿಂದ ಇಪ್ಪತ್ತು ನಿಮಿಷ ಧ್ಯಾನ ಮಾಡುವುದು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮೆದುಳಿನ ಅಲೆಗಳನ್ನು ಸಕಾರಾತ್ಮಕವಾಗಿ ಬದಲಾಯಿಸುತ್ತದೆ.ಆತ್ಮಸಾಕ್ಷಾತ್ಕಾರಕ್ಕಾಗಿ ಆಂತರಿಕ ಚಿಂತನೆ, ಮತ್ತು ಸಕಾರಾತ್ಮಕ ಉದ್ದೇಶಗಳನ್ನು ಪಟ್ಟಿ ಮಾಡುವುದು ತುಂಬಾ ಸಹಕಾರಿ. ಅಂತೆಯೇ ಇತರರಿಗೆ ನಿಸ್ವಾರ್ಥತೆಯಿಂದ ಸಹಾಯ ಮಾಡುವುದು, ದಾನ ಮಾಡುವುದು ಮತ್ತು ಸೇವಾ ಮನೋಭಾವವನ್ನು ಬೆಳೆಸಿಕೊಳ್ಳುವುದು ಆಧ್ಯಾತ್ಮಿಕತೆಯ ಪ್ರಮುಖ ಲಕ್ಷಣವಾಗಿದೆ. ಅಲ್ಲದೇ ಮಹಾಭಾರ, ರಾಮಾಯಣ, ಭಗವದ್ಗೀತೆ, ಉಪನಿಷತ್ತುಗಳು ವೇದಗಳು ಅಥವಾ ಇತರ ಜ್ಞಾನವರ್ಧಕ ಪವಿತ್ರ ಗ್ರಂಥಗಳ ಅಧ್ಯಯನ ಆಧ್ಯಾತ್ಮಿಕ ಜ್ಞಾನವನ್ನು ಹೆಚ್ಚಿಸುತ್ತದೆ. ಇದರಿಂದ ಕೋಪವನ್ನು ಜಯಿಸುವ ಶಕ್ತಿ ದೊರೆಯುತ್ತದೆ. ಕೋಪ ನಿರ್ವಹಣೆ ಮತ್ತು ಕ್ಷಮಾಗುಣವನ್ನು ರೂಢಿಸಿಕೊಳ್ಳುವುದು ಆಂತರಿಕ ಶಾಂತಿಗೆ ಬಹಳ ಅವಶ್ಯಕ. ಯೋಗ, ಪ್ರಾಣಾಯಾಮ ಅಥವಾ ಪ್ರಕೃತಿಯ ಸನ್ನಿಧಿಯಲ್ಲಿ ಏಕಾಂತವಾಗಿ ಸಮಯ ಕಳೆಯುವುದು ಆಧ್ಯಾತ್ಮಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದರಿಂದ ನಮ್ಮ ಅರಿವಿಗೇ ಬಾರದಂತೆ ಪ್ರಕೃತಿಯೊಂದಿಗೆ ಒಂದು ಮಧುರ ಸ್ನೇಹ ಸಂಬಂಧ ಏರ್ಪಡುತ್ತದೆ. ಆಧ್ಯಾತ್ಮಿಕ ಸಾಧನೆಯಿಂದ ನಮಗಾಗುವ ಪ್ರಯೋಜನಗಳೆಂದರೆ. ಆಂತರಿಕ ಘರ್ಷಣೆಗಳು, ಭಯ ಮತ್ತು ಚಿಂತೆಗಳಿಂದ ಮುಕ್ತಿ ದೊರೆಯುತ್ತದೆ. ಜೀವನದಲ್ಲಿ ಒಂದು ಸ್ಪಷ್ಟತೆ ಸಿಗುತ್ತದೆ. ಜೀವನದ ಉದ್ದೇಶ ಮತ್ತು ನಮ್ಮ ದೃಷ್ಟಿಕೋನದಲ್ಲಿ ಬದಲಾವಣೆ ಮೂಡುತ್ತದೆ. ಅಷ್ಟೇ ಅಲ್ಲದೆ ಆಂತರಿಕ ದೈವಿಕ ಶಕ್ತಿಯ ಜಾಗೃತಿ ಯಾಗಿ ಅದ್ಭುತ ಶಕ್ತಿ ಸಾಮರ್ಥ್ಯ ನಮ್ಮಲ್ಲಿ ಜಾಗೃತವಾಗುತ್ತದೆ.
ಆಧ್ಯಾತ್ಮಿಕ ಮೌಲ್ಯಗಳು ಜೀವನದ ಆಳವಾದ ಉದ್ದೇಶ, ಆಂತರಿಕ ಶಾಂತಿ ಮತ್ತು ನೈತಿಕ ಶ್ರೇಷ್ಠತೆಯನ್ನು ಎತ್ತಿಹಿಡಿಯುವ ಸಾರ್ವತ್ರಿಕ ಗುಣಗಳಾಗಿವೆ. ಇವು ಸತ್ಯ, ಪ್ರೀತಿ, ಕರುಣೆ, ಅಹಿಂಸೆ, ಕ್ಷಮೆ, ಮತ್ತು ನಿಸ್ವಾರ್ಥ ಸೇವೆ ಮುಂತಾದ ಗುಣಗಳನ್ನು ಒಳ ಗೊಂಡಿದ್ದು, ವ್ಯಕ್ತಿಯನ್ನು ಲೌಕಿಕ ಸುಖದಾಚೆಗೆ ಕೊಂಡೊಯ್ದು ಶಾಶ್ವತ ಸಂತೋಷ ಮತ್ತು ಮಾನವೀಯತೆಯನ್ನು ವೃದ್ಧಿಸುತ್ತವೆ. ಇವು ಜೀವನದ ಸಂಘರ್ಷಗಳನ್ನು ಎದುರಿಸಲು ಬಲ ನೀಡುತ್ತವೆ. ಎಲ್ಲರಲ್ಲೂ ಪ್ರೀತಿ ಮತ್ತು ಸಹಾನುಭೂತಿಯನ್ನು ಮೂಡಿಸುವುದು.ಸತ್ಯ ಮತ್ತು ಸದಾಚಾರಗಳಿಂದ ಧರ್ಮದ ದಾರಿಯಲ್ಲಿ ನಡೆಯುವಂತೆ ಮಾಡುತ್ತದೆ. ಪ್ರಾಮಾಣಿಕತೆಯಿಂದ ಜೀವನ ನಡೆಸಲು ಸಹಾಯಕವಾಗುತ್ತದೆ. ಮನಸ್ಸಿನಿಂದ ಹಿಂಸೆ, ದ್ವೇಷಗಳಿಂದ ಯಾರಿಗೂ ನೋವುಂಟು ಮಾಡದಂತೆ ತಡೆಯಬಲ್ಲದು. ಭೌತಿಕ ವಸ್ತುಗಳ ಮೇಲಿನ ಅತಿಯಾದ ಆಸೆಯನ್ನು ಬಿಡಿಸಿ ಆಂತರಿಕ ಶಾಂತಿ ಮತ್ತು ಸಮಚಿತ್ತತೆ: ಸುಖ-ದುಃಖಗಳಲ್ಲಿ ಸಮಾನ ಭಾವನೆ ಹೊಂದುವಂತೆ ಮಾಡುವುದು. ಜೀವನದಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಜೀವನದ ಕಷ್ಟಗಳನ್ನು ಎದುರಿಸುವ ಶಕ್ತಿ ನೀಡುವುದು. ಶಿಸ್ತು ಹಾಗೂ ಸ್ವಯಂ ನಿಯಂತ್ರಣ ಮತ್ತು ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವಂತೆ ಉತ್ತಮ ಮಾರ್ಗದರ್ಶನ ನೀಡುವುದು. ಈ ಬಗೆಯ ಮೌಲ್ಯಗಳನ್ನು ನಾವು ನಮ್ಮ ದೈನಂದಿನ ಜೀವನದಲ್ಲಿ ಧ್ಯಾನ, ಪ್ರಾರ್ಥನೆ, ಪವಿತ್ರ ಗ್ರಂಥಗಳ ಅಧ್ಯಯನ ಮತ್ತು ಸೇವಾ ಮನೋಭಾವದಿಂದ ಬೆಳೆಸಿಕೊಳ್ಳಬಹುದು. ಅದಕ್ಕಾಗಿ ನಾವು ಮೊಟ್ಟ ಮೊದಲು ಆಧ್ಯಾತ್ಮದ ಮೊರೆ ಹೋಗಬೇಕು.
ನಾವು ದಿನ ನಿತ್ಯ ಕಲುಷಿತವಾದ ಮನೆಯನ್ನು ಪೊರಕೆಯಿಂದ ಗುಡಿಸಿ ಒರೆಸಿ ಶುಚಿ ಮಾಡುವ ಹಾಗೆ ನೀರು ಹಾಕಿ ಉಜ್ಜಿ ಸ್ನಾನ ಮಾಡುವ ಮೂಲಕ ನಮ್ಮ ಮೈ, ಕೈ, ತಲೆ, ತೊಳೆದು ಕಲ್ಮಶಗಳನ್ನು ತೊಳೆದುಕೊಂಡು ಶುಭ್ರವಾದ ಬಟ್ಟೆ ತೊಡುತ್ತೇವೆ ಅಲ್ಲವೇ..?
ಆದರೆ ಮನೆ, ಮಕ್ಕಳು, ಉದ್ಯೋಗ, ಹಣ, ಆಸ್ತಿ ವ್ಯವಹಾರಗಳ ತೊಳಲಾಟಕ್ಕೆ ಸಿಕ್ಕು ಬಳಲಿ ಬೆಂಡಾದ ಮನಸ್ಸನ್ನು ಸ್ವಚ್ಛ ಮಾಡುವುದು ಹೇಗೆ…? ಮೈಯನ್ನು ಉಜ್ಜಿ ಉಜ್ಜಿ ತೊಳೆದ ಹಾಗೆ ಮನಸನ್ನು ಉಜ್ಜಿ ತೊಳೆಯಲು ಸಾಧ್ಯವೇ…? ಎಂಬ ಪ್ರಶ್ನೆಗೆ ಖಂಡಿತವಾಗಿಯೂ ಸಾಧ್ಯ ಎಂಬುದೇ ಉತ್ತರ. ಹೇಗೆ ಎಂದರೆ ಯಾವ ರೀತಿ ಮನೆ ಮತ್ತು ಮೈ ಶುಚಿಗೊಳಿಸಲು ಪೊರಕೆ, ನೀರು, ಸೋಪು, ಡಿಟರ್ಜೆಂಟ್ ಎಂಬ ಸಾಧನಗಳ ಅವಶ್ಯಕತೆ ಇದೆಯೋ ಅಂತೆಯೇ ಮನದ ಕಲ್ಮಶಗಳನ್ನು ತೊಳೆದು ಹಾಕಲು ಧ್ಯಾನ, ಜಪ, ತಪ, ಮಂತ್ರ, ಯೋಗ, ಏಕಾಂತ, ಭಗವಂತನ ನಾಮ ಸ್ಮರಣೆ ಎಂಬ ಸಾಧನಗಳ ಅವಶ್ಯಕತೆ ತುಂಬಾ ಇದೆ. ಇದೆಲ್ಲವೂ ನಮಗೆ ದೊರೆಯುವುದು ಕೇವಲ ಆಧ್ಯಾತ್ಮದಲ್ಲಿ ಮಾತ್ರ.
ಬನ್ನಿ ಇಂದೇ ಒಂದು ದೃಢ ಸಂಕಲ್ಪ ಮಾಡೋಣ ಸದಾ ಹಣ ಆಸ್ತಿ ಸಂಪಾದನೆ ಮೋಹ ಮದ ಮತ್ಸರದಿಂದ ಕಲುಷಿತ ಗೊಂಡಿರುವ ನಮ್ಮ ಮನಸ್ಸನ್ನು ಭಕ್ತಿ ಧ್ಯಾನ ಜಪ ತಪಗಳೆಂಬ ಡಿಟರ್ಜೆಂಟ್ ಗಳಿಂದ ತಿಕ್ಕಿ ತೊಳೆಯೋಣ. ಇನ್ನಾದರೂ ಕೃತಕ ಸಂತೋಷಗಳ ಚಟಕ್ಕೆ ಬಲಿಯಾಗದೆ ಸಾಂಸಾರಿಕ ಜೀವನ, ವ್ಯವಹಾರದ ಜಂಜಾಟದಿಂದ ಕೊಂಚ ಬಿಡುವು ಮಾಡಿ ಕೊಂಡು ಸಾಧು ಸಂತರ ಭೇಟಿ ಮಾಡೋಣ. ಅವರಿಂದ ಉತ್ತಮವಾದ ಮಾರ್ಗದರ್ಶನ ಪಡೆದು ಭಗವಂತನ ನಾಮ ಸ್ಮರಣೆ ಮಾಡುತ್ತಾ ಜಪ, ತಪ,ಧ್ಯಾನಗಳನ್ನು ಮಾಡುತ್ತಾ ನಿಜವಾದ ಆನಂದ ನೀಡುವ ಆಧ್ಯಾತ್ಮದ ಕಡೆಗೆ ಹೆಜ್ಜೆ ಹಾಕೋಣ. ನಿಜವಾದ ಆತ್ಮಾನಂದ ಪಡೆಯುತ್ತಾ ಆ ಆಧ್ಯಾತ್ಮದ ಅಮೃತವನ್ನು ಆಸ್ವಾದಿಸೋಣ.
ಜೈ ರಾಮಕೃಷ್ಣ… 🙏
ಲೇಖಕರು:✍️
ಶಿಲ್ಪಾ ಜಗದೀಶ್ ಹಿರಿಯೂರು
ಚಿತ್ರದುರ್ಗ ಜಿಲ್ಲೆ

