ಬೇವೂರ ತ್ರಿಶೂಲ ಮಲ್ಲಯ್ಯನ ಗುಡಿ ಮುಂಭಾಗದ ವೀರಗಲ್ಲಿನ – ಐತಿಹಾಸಿಕ ಅನಾವರಣ.

ಬೇವೂರು ಮಾ.29

ಬಾಗಲಕೋಟೆ ಜಿಲ್ಲೆಯ ಬಾಗಲಕೋಟ ತಾಲೂಕಿನ ಬೇವೂರ ಗ್ರಾಮದ ಐತಿಹಾಸಿಕ ಹಿನ್ನಲೆಯಲ್ಲಿ ಮಹತ್ವವನ್ನು ಪಡೆದ ಗ್ರಾಮವಾಗಿದೆ. ಅಧ್ಯಯನಾಸಕ್ತರ ಸಂಶೋಧಕರ ಆಸಕ್ತಿ ಕೂತೂಹಲಗಳನ್ನು ಹೆಚ್ಚಿಸುವಲ್ಲಿ ಇಲ್ಲಿನ ಪ್ರಾಚೀನ ದೇವಾಲಯಗಳು ಅಪರೂಪದ ಶಿಲ್ಪಗಳು ವಿಶಿಷ್ಟವಾಗಿ ಕಂಡು ಬರುತ್ತವೆ. ಬೇವೂರಿನ ವೀರಗಲ್ಲುಗಳ ಬಗ್ಗೆ ಈಗಾಗಲೇ ಅನೇಕ ಬರವಣಿಗೆ, ಲೇಖನಗಳಲ್ಲಿ ಸಾಕಷ್ಟು ಅಧ್ಯಯನಕ್ಕೆ ನೆರವಾಗಬಲ್ಲ ಅಂಶಗಳು ಪ್ರಕಟ ವಾಗುತ್ತಾ ಬಂದಿರುವುದನ್ನು ಗಮನಿಸುತ್ತೇವೆ. ಇಂತಹ ಅಪರೂಪದ ವೀರಗಲ್ಲುಗಳ ಸಾಲಿಗೆ ಈಗ ಮತ್ತೊಂದು ಹೊಸ ಸೇರ್ಪಡೆಯಾಗಿ ಗ್ರಾಮದ ತ್ರಿಶೂಲ ಮಲ್ಲಯ್ಯ ದೇವಾಲಯದ ಮುಂಭಾಗದಲ್ಲಿ ದೊರೆತ ತುಂಡಾದ ವೀರಗಲ್ಲಿನ ಭಾಗ ಕಂಡು ಬರುತ್ತದೆ. ಸಂಪೂರ್ಣ ಭಾಗ ಅಲಭ್ಯ ಎನಿಸಿದ್ದು ಅಧ್ಯಯನದ ನೆಲೆಯಲ್ಲಿ ನಿಖರ ಮಾಹಿತಿ ವಿಶ್ಲೇಷಣೆ ಒದಗಿಸಲು ಅಡಚಣೆ ಎನಿಸಿದರು ಸಹ ಈ ತ್ರುಟಿತ ವೀರಗಲ್ಲಿನ ಮೇಲೆ ಬೆಳಕು ಚೆಲ್ಲುವ ಭಾಗವಾಗಿ ಈ ಲೇಖನ ಬರೆಯಲಾಗಿದ್ದು ಭವಿತವ್ಯದ ದಿನಮಾನಗಳಲ್ಲಿ ಮತ್ತಷ್ಟು ಆಕರಗಳ, ಕ್ಷೇತ್ರಕಾರ್ಯಗಳ ನೆಲೆಯಲ್ಲಿ ಸಂಶೋಧನಾ ಸಂಗತಿಗಳನ್ನು ದಾಖಲಿಸುವ ಕಾರ್ಯ ಈ ಭಾಗದಲ್ಲಿ ನಡೆಯ ಬೇಕಾದ ಅವಶ್ಯಕತೆ ಇದೆ.

ಬೇವೂರ ಗ್ರಾಮದ ವೀರಗಲ್ಲುಗಳ ಸಮೀಕ್ಷೆ:-

ಬಾದಾಮಿ ಚಾಲುಕ್ಯರ, ರಾಷ್ಟ್ರಕೂಟರ, ಕಲ್ಯಾಣ ಚಾಲುಕ್ಯರ, ವಿಜಯನಗರ ಅರಸರ ಕಾಲಕ್ಕೆ ಸಂಬಂಧಿಸಿದ ಪ್ರಾಚೀನ ದೇವಾಲಯಗಳನ್ನು ಒಳಗೊಂಡ ಬೇವೂರಿನಲ್ಲಿ ಈ ಭಾಗದ ಜನರ ಸಾಹಸ, ಕಲಿತನ ಶೌರ್ಯ ಪರಾಕ್ರಮಗಳ ಸಂಕೇತವೆಂಬಂತೆ ದೊರಕುವ ವೀರಗಲ್ಲುಗಳು ಈ ಭಾಗದ ಸಾಹಸಮಯ ಐತಿಹಾಸಿಕ ಘಟನೆಗಳಿಗೆ ಸಾಕ್ಷಿ ಪ್ರಜ್ಞೆ ಎನಿಸಿವೆ. ಅಧ್ಯಯನ ಸಮೀಕ್ಷೆ ನೆಲೆಯಲ್ಲಿ ಹೇಳುವದಾದರೆ ಗ್ರಾಮದಲ್ಲಿ ಒಟ್ಟು ಮೂರು ವೀರಗಲ್ಲುಗಳು ಲಭ್ಯವಾಗಿದ್ದರ ಬಗ್ಗೆ ಮಾಹಿತಿ ದೊರಕಿದ್ದು ಪರ್ವತಪ್ಪನ ದೇವಾಲಯದಲ್ಲಿನ ವೀರಗಲ್ಲು, ದೇಗುಲದ ಹಿಂದೆ ದುಗ್ಗಮ್ಮ ದೇವಾಲಯದ ಸಮೀಪಕ್ಕೆ ಇರಲಾದ ತುರುಗೋಳ್ ವೀರಗಲ್ಲು, ಅದೇ ರೀತಿ ಪಂಚಾಯತಿ ಸಮೀಪದಲ್ಲಿ ಕಪ್ಪು ಶಿಲೆಯಲ್ಲಿ ದೊರೆತ ವೀರಗಲ್ಲು ಬಗ್ಗೆ ಲೇಖನ, ಕೃತಿಗಳಲ್ಲಿ ಉಲ್ಲೇಖ ಕಾಣುತ್ತೇವೆ. ಅದೇ ರೀತಿ ಸ್ಥಳೀಯ ರೈತರಾದ ಹೀರೆಕುರುಬರ ಹೊಲದಲ್ಲಿ ದೊರೆತ ವೀರಗಲ್ಲಿನ ಬಗ್ಗೆ ೨೦೨೨ ನೇ ಇಸ್ವಿಯಲ್ಲಿ ಸರಣಿ ಪತ್ರಿಕಾ ಲೇಖನಗಳನ್ನು ಬರೆದು ಬೇವೂರಿನ ಅಧಿಕೃತ ಲಭ್ಯ ಇರುವ ವೀರಗಲ್ಲುಗಳಸಂಖ್ಯೆ ೪ ಎಂದು ತಿಳಿಯಲಾಗಿತ್ತು. ಇದೀಗ ಐದನೇಯ ವೀರಗಲ್ಲಾಗಿ ತ್ರಿಶೂಲ್ ಮಲ್ಲಯ್ಯ ಗುಡಿಯ ಬಳಿಯ ತುಂಡರಿಸಿದ ವೀರಗಲ್ಲು ಕಂಡುಬರುತ್ತಿದ್ದು ಇನ್ನಷ್ಟು ಆಳವಾದ ಅಧ್ಯಯನ ನಡೆದಲ್ಲಿ ವೀರಗಲ್ಲುಗಳ ಸಂಖ್ಯೆ ಅಧಿಕವಾಗುವ ವಿಫುಲ ಅವಕಾಶಗಳಿವೆ.

ವಿದ್ಯಾರ್ಥಿನಿಯರಿಂದ ಬೆಳಕಿಗೆ ಬಂದ ವೀರಗಲ್ಲುಗಳು:-

ಬೇವೂರಿನ ಶ್ರೀ ಪರಪ್ಪ ಸಂಗಪ್ಪ ಸಜ್ಜನ ಕಲಾ ಮಹಾ ವಿದ್ಯಾಲಯದ ವಿದ್ಯಾರ್ಥಿವೃಂದ ಇತಿಹಾಸ ಸಂಶೋಧನೆ ಬಗ್ಗೆ ಹೆಚ್ಚೆಚ್ಚು ಆಸಕ್ತಿ ಹೊಂದಿದ ಫಲವಾಗಿ ಗ್ರಾಮದ ಅಪರೂಪದ ಶಿಲ್ಪಗಳು, ಸ್ಥಳಗಳು ಅಧ್ಯಯನಕ್ಕೆ ಒಳಪಡುತ್ತಿವೆ. ೨೦೨೨ ರಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಪ್ರತಿಭಾ ಶೇಖಪ್ಪ ಪೂಜಾರಿ ಅವರ ಸಂಬಂಧಿಕರಾದ ಹೀರೆಕುರುಬರ ಅವರ ಹೊಲದಲ್ಲಿ ವೀರಣ್ಣ ದೇವರು ಎಂದು ಪೂಜಿಸುತ್ತಿದ್ದ ಶಿಲ್ಪದ ಬಗ್ಗೆ ತಿಳಿಸಲಾಗಿ ಅಧ್ಯಯನದ ನಂತರ ಅದು ವೀರಗಲ್ಲು ಎಂಬ ವಿಷಯ ತಿಳಿದು ಬರಲಾಗಿ ವಿಸ್ತೃತ ವಿವರಣೆಯ ಪತ್ರಿಕಾ ಲೇಖನಗಳು ಪ್ರಕಟ ಗೊಂಡಿವೆ. ಅದೇ ರೀತಿ ಬಿಎ ೬ ನೇ ಸೆಮಿಸ್ಟರ್ ಅಧ್ಯಯನದ ಯೋಜನಾ ಕಾರ್ಯದ ಬರಹದಲ್ಲಿ ಲಕ್ಷೀ ಮ. ಮಾಗನೂರ ಸಾಂದರ್ಭಿಕವಾಗಿ ವಿವರಿಸಿದ ತ್ರಿಶೂಲ್ ಮಲ್ಲಯ್ಯ ಗುಡಿಯ ಮುಂಭಾಗದ ವೀರಗಲ್ಲಿನ ವಿವರಣೆ ಆಧರಿಸಿ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಕ್ಷೇತ್ರ ಕಾರ್ಯ ಕೈಗೊಂಡ ವಿದ್ಯಾರ್ಥಿನಿಯರಾದ ವಿಜಯಲಕ್ಷ್ಮೀ. ಯ ಬಂಡಿವಡ್ಡರ, ಪವಿತ್ರಾ ಮ. ಮಾಗನೂರ ಇವರು ಒದಗಿಸಿದ ಮಾಹಿತಿ ಆಧಾರದ ಮೇಲೆ ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕರು ಯೋಜನಾ ಕಾರ್ಯಗಳ ಸಂಯೋಜಕರು ಆದ ಶ್ರೀ ಜಿ.ಎಸ್. ಗೌಡರ ಹಾಗೂ ಇಂಗ್ಲೀಷ ವಿಭಾಗದ ಉಪನ್ಯಾಸಕರಾದ ಶ್ರೀ ಡಿ.ವಾಯ್ ಬುಡ್ಡಿಯವರ ಜೊತೆ ನಾನು ಡಾ. ಎ.ಎಮ್. ಗೊರಚಿಕ್ಕನವರ ಸೇರಿ ದೇವಾಲಯದ ಮುಂಭಾಗದಲ್ಲಿನ ವೀರಗಲ್ಲನ್ನು ಪರಿಶೀಲಿಸಿದಾಗ ಈ ವೀರಗಲ್ಲು ಇಲ್ಲಿಯವರೆಗೂ ಎಲ್ಲಿಯೂ ಅಧ್ಯಯನದ ಭಾಗವಾಗಿ ವಿವರಣೆ ಉಲೇಖಗೊಂಡಿಲ್ಲ ಎಂದು ತಿಳಿದು ಲೇಖನ ಬರೆಯುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ವಿದ್ಯಾರ್ಥಿನಿ ವಿಜಯಲಕ್ಷ್ಮೀ ಬಂಡಿವಡ್ಡರ ಕ್ಷೇತ್ರಕಾರ್ಯ:-

ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಯೋಜನಾ ಕಾರ್ಯಕ್ಕಾಗಿ “ಬೇವೂರಿನ ವೀರಗಲ್ಲುಗಳು ಒಂದು ಅಧ್ಯಯನ” ವಿಷಯದ ಕುರಿತಾಗಿ ಅಧ್ಯಯನ ಕೈಗೊಂಡ ೬ ನೇ ಸೆಮಿಸ್ಟರ್ ವಿದ್ಯಾರ್ಥಿನಿ ವಿಜಯಲಕ್ಷ್ಮೀ. ಯ ಬಂಡಿವಡ್ಡರ ಬೇವೂರಿನ ವೀರಗಲ್ಲುಗಳ ಪೈಕಿ ಕ್ಷೇತ್ರಕಾರ್ಯದಲ್ಲಿ ಬೇವೂರಿನ ಅರಳಿಕಟ್ಟೆ ಆಂಜನೇಯ ದೇವಸ್ಥಾನ ಸಮೀಪ ಈಶ್ವರ ದೇವಾಲಯದ ಪಕ್ಕದಲ್ಲಿ ಮತ್ತೊಂದು ಅಪರೂಪದ ವೀರನ ಶಿಲ್ಪ ಇರುವ ಇಬ್ಬರು ಸತಿಯರನ್ನು ಒಳಗೊಂಡ ವಿಶೇಷ ಮಾಸ್ತಿಕಲ್ಲನ್ನು ಪತ್ತೆ ಹಚ್ಚಿದ್ದಾರೆ. ಮಸ್ತುಂಗ ಶಿರಶ್ಚುಂಬಿ ಚಂದ್ರ ಚಾಮರ ಚಾರ… ಎಂಬ ಅಕ್ಷರಗಳನ್ನು ಹೊಂದಿದ ಒಂದು ಸಾಲಿನ ಶಾಸನ ಸಹ ಇಲ್ಲಿ ಇರಲಾಗಿದ್ದು ಶಾಸನದ ಕೆಲ ಅಕ್ಷರಗಳು ತೃಟಿತವಾಗಿವೆ. ವೀರಯೋಧನ ಆಭರಣಗಳು ವಸ್ತ್ರವಿನ್ಯಾಸ, ಸತಿಯರ ವೇಷಭೂಷಣಗಳು ಮಹತ್ವದ್ದಾಗಿ ಕಂಡುಬರುತ್ತಿದ್ದು ಈ ಮಹಾಸತಿಗಲ್ಲಿನ ಕುರಿತಾಗಿಯೇ ಪ್ರತ್ಯೇಕ ಅಧ್ಯಯನ ಸಂಶೋಧನೆ ನಡೆದರೆ ಬೇವೂರಿನ ಚರಿತ್ರೆಯ ಅಧ್ಯಯನಕ್ಕೆ ಹೊಸ ಹೊಳಹುಗಳು ದೊರಕುವ ಅವಕಾಶಗಳನ್ನು ಗುರುತಿಸುತ್ತೇವೆ. ಕಲ್ಯಾಣ ಚಾಲುಕ್ಯರ ಕಾಲದ ಮಾಸ್ತಿಕಲ್ಲು ಇದಾಗಿದೆ.ಎಂದು ಊಹಿಸಿದ್ದಾರೆ.ಮೇಲ್ಭಾಗದ ಪಟ್ಟಿಕೆಯಲ್ಲಿನ ಶಿವಲಿಂಗ ಪೂಜೆಗೊಳ್ಳುತ್ತಿರುವ ಚಿತ್ರ ಯೋದ ಕೈಲಾಸವಾಸಿಯಾದ ಬಗ್ಗೆ ತಿಳಿಸಿಕೊಡುತ್ತದೆ. ರುಮಾಲು ಸುತ್ತಿದ ಇಬ್ಬರು ಪುರುಷರು ಶಿವಪೂಜೆಯಲ್ಲಿ ನಿರತರಾಗಿದ್ದಾರೆ.ಕರುವಿಗೆ ಹಾಲುಣಿಸುವ ಹಸುವಿನ ಚಿತ್ರ ಕೂಡಾ ಈ ಶಿಲ್ಪದಲ್ಲಿದೆ.ಯೋದನ ಪತ್ನಿಯ ಕೈಯಲ್ಲಿ ಲಿಂಬೆಹಣ್ಣು ಹಿಡಿದಿರುವುದನ್ನು ಗಮನಿಸುವಾಗ ಆ ಕಾಲದಲ್ಲಿ ಸತಿ ಹೋಗುತ್ತಿದ್ದ ಮಹಿಳೆಯರು ಮಂಗಳ ದ್ರವ್ಯವಾಗಿ ಈ ಲಿಂಬೆಹಣ್ಣು ಹಿಡಿದು ಸತಿ ಆಚರಣೆ ಮಾಡುತ್ತಿದ್ದರೆಂಬ ಅಂಶ ತಿಳಿದು ಬರುತ್ತದೆ.ಗ್ರಾಮದ ಕೆಲವೆಡೆ ಕ್ಷೇತ್ರಕಾರ್ಯದಲ್ಲಿ ಗುರುತಿಸಿದ ಈ ಮಾಸ್ತಿಕಲ್ಲು ಶಿಲ್ಪ ಸೇರಿದಂತೆ ಅದೇರೀತಿ ಪರ್ವತಪ್ಪ ದೇವಾಲಯದ ಮುಂಭಾಗದಲ್ಲಿನ ಕೆಂಪುಕಲ್ಲಿನಲ್ಲಿನ ಶಿಲ್ಪವು ಸಹ ಮಾಸ್ತಿಕಲ್ಲಾಗಿರುವ ಸಾಧ್ಯತೆಗಳು ಇರಲಾಗಿದ್ದು ಮಾಸ್ತಿಕಲ್ಲುಗಳ ಕುರಿತಾದ ಅಧ್ಯಯನ ಈ ಗ್ರಾಮದಲ್ಲಿ ನಡೆಯುವ ಅವಶ್ಯಕತೆಯನ್ನು ಕಾಣುತ್ತೇವೆ.

ತ್ರಿಶೂಲ್ ಮಲ್ಲಯ್ಯ ಗುಡಿಯಲ್ಲಿನ ವೀರಗಲ್ಲು:-

ಬೇವೂರ ಗ್ರಾಮದಲ್ಲಿ ಪರ್ವತಪ್ಪನ ಗುಡಿಯ ಪಕ್ಕದಲ್ಲಿ ತ್ರಿಶೂಲ್ ಮಲ್ಲಯ್ಯನ ಗುಡಿ ಇರಲಾಗಿದ್ದು ಗರ್ಭಗುಡಿಯಲ್ಲಿ ಚೌಕಾಕಾರದ ಶಿಲೆಯಲ್ಲಿ ತ್ರಿಶೂಲ ಚಿತ್ರ ಇದ್ದಿರುವುದನ್ನು ಗಮನಿಸುತ್ತೇವೆ. ಪ್ರಸ್ತುತ ದೇವಾಲಯವು ನವೀಕರಣ ಗೊಂಡಿದ್ದು ಟೈಲ್ಸ ಅಳವಡಿಕೆ ಸ್ಟೀಲ್ ಕಟಾಂಜನ ಅಳವಡಿಕೆ ಇರಲಾಗಿದ್ದು ದೇವಾಲಯದ ಮುಂಭಾಗದಲ್ಲಿ ಇರಲಾದ ಬನ್ನಿಮರಕ್ಕೆ ಹೊಂದಿ ಕೊಂಡಂತೆ ನಾಗ ಶಿಲ್ಪಗಳನ್ನು ಇಡಲಾಗಿದ್ದು ಅದರ ಸಮೀಪದಲ್ಲಿಯೇ ಈ ತುಂಡರಿಸಿದ ವೀರಗಲ್ಲನ್ನು ಕಾಣುತ್ತೇವೆ. ವೀರಗಲ್ಲು ಶಿಲ್ಪ ಎಂದು ಅಧ್ಯಯನದ ನೆಲೆಯಲ್ಲಿ ಗುರುತಿಸುವ ಸ್ಪಷ್ಟ ಚಿತ್ರಗಳು ಈ ಕಲ್ಲಿನಲ್ಲಿ ಇದ್ದಿರುವುದನ್ನು ಕಾಣುತ್ತೇವೆ. ಸ್ಥಳೀಯ ಗುರುನಾಥ ಕಾಳಪ್ಪ ಬಡಿಗೇರ ಅವರಿಂದ ಒಂದಷ್ಟು ಮಾಹಿತಿ ತಿಳಿಯಲಾಗಿ ಆರಂಭದಲ್ಲಿ ಈ ಶಿಲ್ಪವು ದೇವಾಲಯದ ಒಳಭಾಗದಲ್ಲಿ ಇತ್ತು ಭಿನ್ನ(ಮುಕ್ಕಾಗಿ)ವಾಗಿರುವ ಕಾರಣ ಹೊರಭಾಗದಲ್ಲಿ ಇಡಲಾಗಿದೆ ಬಿಲ್ಲು ಬಾಣ ಹಿಡಿದ ವ್ಯಕ್ತಿಗಳ ಚಿತ್ರ ಆಧರಿಸಿ ರಾಮ ಲಕ್ಷ್ಮಣರ ಕಲ್ಲು ಇದೆಂದು ಸ್ಥಳಿಯರು ತಿಳಿದಿರುವರೆಂದು ಮಾಹಿತಿ ನೀಡಿದರು. ಮಹಾನವಮಿ ಹಾಗೂ ಸಂಕ್ರಮಣ ಕಾಲಕ್ಕೆ ಅನ್ನಪ್ರಸಾದ ಭಜನಾ ಕಾರ್ಯಕ್ರಮ ಈ ದೇವಾಲಯದಲ್ಲಿ ನಡೆಯುತ್ತವೆ. ದೇವಾಲಯದ ಪೂಜೆ ಪುನಸ್ಕಾರಗಳಿಗೆ ಸಂಬಂಧಿಸಿದಂತೆ ಜಿ.ಜಿ. ಮಾಗನೂರ ವಕೀಲರ ಮನೆತನದಿಂದ ಕೆಲ ಪಾರಂಪರಿಕ ಆಚರಣೆಗಳು ಇದ್ದಿರುವುದನ್ನು ದೇವಾಲಯದ ಕಳಸ ಜಾತ್ರೆಯ ದಿನದಂದು ಇವರ ಮನೆಯಿಂದ ಮೆರವಣಿಗೆಯಲ್ಲಿ ಬರುವುದನ್ನು ಕಾಣುತ್ತೇವೆ.

ವೀರಗಲ್ಲಿನ ಸ್ವರೂಪ ಆಕಾರ:-

ವಿದ್ಯಾರ್ಥಿನಿ ಲಕ್ಷ್ಮೀ. ಮ. ಮಾಗನೂರ ತನ್ನ ಯೋಜನಾಕಾರ್ಯದಲ್ಲಿ ಮಲ್ಲಿಕಾರ್ಜುನ ದೇವಾಲಯದ ಮುಂಭಾಗದ ಬನ್ನಿಗಿಡದ ಮುಂಭಾಗದಲ್ಲಿ ಇಡಲಾದ ವೀರಗಲ್ಲು ತ್ರುಟಿತವಾಗಿದ್ದು ಮೇಲ್ಬಾಗದಲ್ಲಿ ವೀರನ ಎರಡು ಪಾದಗಳು ಮಾತ್ರ ಕಾಣುತ್ತವೆ. ಕೆಳಪಟ್ಟಿಕೆಯಲ್ಲಿ ಕುದುರೆ ಮತ್ತು ಇಬ್ಬರು ವೀರರನ್ನು ಕಾಣುತ್ತೇವೆ. ವೀರನು ಎಡಗೈಯಲ್ಲಿ ಬಿಲ್ಲನ್ನು ಹಿಡಿದಿದ್ದರೆ ಟೊಂಕದಲ್ಲಿ ಖಡ್ಗಧರಿಸಿದ್ದರ ಬಗ್ಗೆ ಮಾಹಿತಿ ನೀಡುತ್ತಾ ಸ್ಥಳಿಯರು ಈ ವೀರಗಲ್ಲನ್ನು ಪೂಜಿಸುತ್ತಾ ಬಂದಿದ್ದಾರೆ ಎಂಬ ಸಂಕ್ಷೇಪ ಮಾಹಿತಿಯನ್ನು ಒದಗಿಸುತ್ತಾರೆ. ಈ ವೀರಗಲ್ಲು ತ್ರುಟಿತವಾಗಿದ್ದರಿಂದ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಕುದುರೆ ಚಿತ್ರ ಒಳಗೊಂಡ ವೀರಗಲ್ಲು:-

ತ್ರಿಶೂಲ್ ಮಲ್ಲಿಕಾರ್ಜುನ ದೇವಾಲಯದ ಮುಂಭಾಗದಲ್ಲಿ ಇರಿಸಲಾದ ವೀರಗಲ್ಲು ವಿಶೇಷವಾಗಿ ಗಮನ ಸೆಳೆಯುವದು ಕುದುರೆಯ ಚಿತ್ರದಿಂದ ಕೆಳಪಟ್ಟಿಕೆಯ ಎಡ ಬದಿಯಲ್ಲಿ ಅಲಂಕೃತ ಕುದುರೆ ಇರಲಾಗಿದೆ.ಅದರ ಮೇಲಿನ ಭಾಗ ತೃಟಿತಗೊಂಡಿದ್ದು ಬಹುತೇಕ ಅಲ್ಲಿ ವ್ಯಕ್ತಿ ಅಥವಾ ಛತ್ರಿಕೆ ಚಿಹ್ನೆ ಇದ್ದಿತ್ತು ಎಂದು ಊಹಿಸಬಹುದು. ಕೆಳಪಟ್ಟಿಕೆಯಲ್ಲಿ ಗೋಚರವಾಗುವ ಯೋಧರ ಪೈಕಿ ಬಲಬದಿಯ ಯೋದನ ಕೈಯಲ್ಲಿ ಬಿಲ್ಲು ಇರಲಾಗಿದ್ದು ಸೊಂಟದಲ್ಲಿ ಖಡ್ಗ ಗುರುತಿಸುತ್ತೇವೆ. ಇಲ್ಲಿ ಯೋದನ ತಲೆಯ ಮುಡಿ ಕಟ್ಟಿದ ಸ್ಥಿತಿಯಲ್ಲಿದೆ. ಇದೇ ಪಟ್ಟಿಕೆಯಲ್ಲಿ ಬಿಲ್ಲು ಪ್ರಯೋಗ ಮಾಡಿದ ಯೋದನ ತಲೆಯ ಮುಡಿ ಕೆದರಿದ ಸ್ಥಿತಿಯಲ್ಲಿದ್ದು ಯೋದನ ಆವೇಶ ಭಂಗಿ ಗೋಚರವಾಗುತ್ತದೆ. ಮೇಲ್ಭಾಗದಲ್ಲಿ ಪಾದ ಮಾತ್ರ ಗೋಚರವಾಗಿದ್ದು ಆ ಬೇರ್ಪಟ್ಟ ಭಾಗ ದೊರೆತರೆ ಮತ್ತಷ್ಟು ಅಧ್ಯಯನ ಪೂರಕ ಸಂಗತಿಗಳನ್ನು ಅವಲೋಕಿಸಿ ವಿಶ್ಲೇಷಿಸಲು ನೆರವಾಗುತ್ತದೆ. ಶಿಲ್ಪದ ರಚನೆ ಕಲ್ಲಿನ ಬಳಕೆ ಗಮನಿಸಿ ಇದು ರಾಷ್ಟ್ರಕೂಟರ ಕಾಲದ ವೀರಗಲ್ಲು ಇರಬಹುದೆಂದು ಅಂದಾಜಿಸಬಹುದಾಗಿದೆ. ಪ್ರಸ್ತುತ ಈಗ ಲಭ್ಯ ಇರುವ ವೀರಗಲ್ಲು ಎತ್ತರ ೧೦ ಸೆ.ಮೀ ಉದ್ದ ೧೫ ಸೆ.ಮೀ ಇರಲಾಗಿದೆ. ಕುದುರೆ ೫ ರಿಂದ ೬ ಇಂಚು ಅಳತೆಯಲ್ಲಿ ಇರಲಾಗಿದೆ. ಯೋದರ ಎತ್ತರ ೮ ಇಂಚು ಇರಲಾಗಿದ್ದನ್ನು ಕಾಣುತ್ತೇವೆ.

ಸಂಶೋಧಕ ರೇವಣಸಿದ್ದಪ್ಪ ಅವರ ಅಭಿಪ್ರಾಯ:-

ಚಿತ್ರದುರ್ಗದ ಸಕಾರಿ ಕಾಲೇಜಿನ (ಸ್ವಾಯತ್ತ) ಪ್ರೊ. ರೇವಣಶಿದ್ದಪ್ಪ ಅವರು ಈ ವೀರಗಲ್ಲಿನ ಚಿತ್ರಗಳನ್ನು ಅವಲೋಕಿಸಿ ತಮ್ಮದೆ ಆದ ವಿಚಾರಧಾರೆಗಳನ್ನು ವ್ಯಕ್ತಪಡಿಸುತ್ತಾ ಅಶ್ವಮೇದದ ಆಯಾಮದಲ್ಲಿ ಈ ವೀರಗಲ್ಲನ್ನು ಅಧ್ಯಯನ ಮಾಡಬಹುದಾಗಿದೆ. ಅಶ್ವಮೇದದ ಯಾಗದ ಕುದುರೆಯನ್ನು ವೀರನೊಬ್ಬ ತಡೆದು ನಿಲ್ಲಿಸಿ ಯುದ್ದಕ್ಕೆ ಸಿದ್ದಗೊಂಡಿರುವ ಅಂಶ ಮೇಲ್ನೋಟಕ್ಕೆ ಗೋಚರವಾಗುತ್ತದೆ. ಸಂಪೂರ್ಣ ವೀರಗಲ್ಲು ಲಭ್ಯವಾದರೆ ಒಂದಷ್ಟು ಐತಿಹಾಸಿಕ ವಿವರಣೆ ನೀಡಲು ಸಾಧ್ಯವಾಗುತ್ತದೆ. ಆ ಬೇರ್ಪಟ್ಟ ಭಾಗ ಬಹಳ ಮಹತ್ವದ ವಿಚಾರಗಳನ್ನು ತಿಳಿಸಿಕೊಡುವ ಎಲ್ಲ ಸಾಧ್ಯತೆಗಳು ಇರಲಾಗಿದ್ದು ರಾಷ್ಟ್ರಕೂಟರ ಕಾಲ ಅದಕ್ಕಿಂತಲೂ ಹಿಂದಿನ ಗಂಗರ ಕಾಲದ ಚಿತ್ರಣ ಅರಿಯಲು ಪೂರ್ಣ ವೀರಗಲ್ಲಿನ ಭಾಗದ ಅನ್ವೇಶಣೆ ಅತಿ ತುರ್ತಾಗಿ ನಡೆಯಬೇಕಿದೆ ಎಂದು ತಿಳಿಸುತ್ತಾರೆ.

ಪ್ರಾಚಾರ್ಯ ಡಾ. ಜಗದೀಶ ಭೈರಮಟ್ಟಿಯವರ ಪ್ರಶಂಸೆ:-

ಬೇವೂರಿನ ಶ್ರೀ ಪರಪ್ಪ ಸಂಗಪ್ಪ ಸಜ್ಜನ ಕಲಾ ಮಹಾ ವಿದ್ಯಾಲಯದ ಪ್ರಾಚಾರ್ಯರು ಬಾಗಲಕೋಟೆ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯರು ಆಗಿರುವ ಡಾ, ಜಗದೀಶ ಭೈರಮಟ್ಟಿಯವರು ವಿದ್ಯಾರ್ಥಿಗಳು ಪ್ರತಿ ವರ್ಷ ಕೈಗೊಳ್ಳುವ ಯೋಜನಾ ಕಾರ್ಯದ ಭಾಗವಾಗಿ ಸ್ಥಳೀಯ ಚರಿತ್ರೆಯ ಮೇಲೆ ಬೆಳಕು ಚೆಲ್ಲುವ ವಿಷಯಗಳನ್ನು ಆಯ್ಕೆ ಮಾಡಿ ಕೊಂಡು ಅಧ್ಯಯನ ಸಂಶೋಧನೆ ನೆಲೆಯಲ್ಲಿ ಅನೇಕ ಹೊಸ ಅಂಶ ವಿಚಾರಗಳನ್ನು ಬೆಳಕಿಗೆ ತರಲು ಉತ್ಸಾಹದಿಂದ ಮುಂದಾಗಿದ್ದು ಸ್ವಾಗತಾರ್ಹ ನಮ್ಮ ಕಾಲೇಜಿನ ವಿದ್ಯಾರ್ಥಿನೀಯರ ಕ್ಷೇತ್ರ ಕಾರ್ಯ ಸಾರ್ಥಕ ಪರಿಶ್ರಮದ ಫಲವಾಗಿ ನೇಪಥ್ಯದಲ್ಲಿದ್ದ ಬೇವೂರ ಗ್ರಾಮದ ವೀರಗಲ್ಲುಗಳು ಮಹಾ ಸತಿಗಲ್ಲುಗಳು ಯೋಜನಾ ಕಾರ್ಯದ ಭಾಗವಾಗಿ ಅಧ್ಯಯನಾಸಕ್ತರಿಗೆ ಪರಿಚಿತ ಗೊಳ್ಳುವಂತೆ ಮಾಡಿದ್ದು ಅಭಿಮಾನದ ಸಂಗತಿಯಾಗಿದೆ. ವಿದ್ಯಾರ್ಥಿಬಳಗ ಈ ಬಗೆಯ ಸಂಶೋಧನಾ ಮನೋಭಾವವನ್ನು ಮುಂದುವರೆಸಿ ಕೊಂಡು ನಾಡಿಗೆ ಉತ್ತಮ ಕೊಡುಗೆಗಳನ್ನು ನೀಡಲಿ ಎಂದು ಅವರು ಹಾರೈಸುತ್ತಾರೆ. ಬೇವೂರ ಗ್ರಾಮದ ಬಗ್ಗೆ ಬಹು ಆಯಾಮದ ಅಧ್ಯಯನಗಳು ನಡೆದು ಗ್ರಾಮದ ಕುರಿತಾದ ಸಾಕಷ್ಟು ಅಂಶಗಳನ್ನು ದಾಖಲಿಸುವ ಕಾರ್ಯಕ್ಕೆ ಈ ಭಾಗದ ಅಧ್ಯಯನಕಾರರು ಸಂಶೋಧಕರು ಮುಂದಾದರೆ ಬೇವೂರಿನ ಪಾರಂಪರಿಕ ತಾಣಗಳಿಗೆ ಮತ್ತಷ್ಟು ಮೆರಗು ಬರುತ್ತದೆ ಎಂದು ಅವರು ಹೇಳುತ್ತಾರೆ.

ವೀರಗಲ್ಲುಗಳ ಮಾಹಿತಿ ಇರುವ ಫಲಕ ನಿರ್ಮಾಣ:-

ಬಾಗಲಕೋಟೆ ಜಿಲ್ಲೆಯ ವ್ಯಾಪ್ತಿಯಲ್ಲಿ ಸಾಕಷ್ಟು ವೀರಗಲ್ಲುಗಳು ಈಗಾಗಲೇ ಲಭ್ಯವಾಗಿವೆ. ಅಧ್ಯಯನ ಸಂಶೋಧನೆಯ ಭಾಗವಾಗಿ ಪ್ರತಿ ವರ್ಷ ವಿಭಿನ್ನ ಸ್ವರೂಪದ ವೀರಗಲ್ಲುಗಳು ಜಿಲ್ಲೆಯ ವಿವಿಧ ಕಡೆಗಳಲ್ಲಿ ದೊರೆಯುತ್ತಿರುವುದು ಹೆಮ್ಮೆಯ ಸಂಗತಿ ಮುಂದಿನ ತಲೆ ಮಾರಿನವರು ಅವುಗಳ ಬಗ್ಗೆ ನಿಖರ ಮಾಹಿತಿ ಪಡೆದು ಪರಂಪರೆ ಸಂಸ್ಕೃತಿಯ ಮೇರು ಸಂಗತಿಗಳನ್ನು ಅರಿಯ ಬೇಕಾದರೆ ವೀರಗಲ್ಲುಗಳ ದೊರೆತ ಮೂಲ ಸ್ಥಳದಲ್ಲಿಯೇ ಅವುಗಳ ಚಾರಿತ್ರಿಕ ಮಹತ್ವ ಸಾರುವ ನಾಮ ಫಲಕಗಳನ್ನು ಅಳವಡಿಸುವ ಕಾರ್ಯವನ್ನು ಸಂಬಂಧಪಟ್ಟ ಅಧಿಕಾರಿಗಳು ಇಲಾಖೆಯವರು ಮಾಡಬೇಕಾದ ಅವಶ್ಯಕತೆ ಇದೆ ಎಂದು ಹುನಗುಂದದ ನಿವೃತ್ತ ಉಪನ್ಯಾಸಕರಾದ ಡಾ, ನಾಗರಾಜ ಪ. ನಾಡಗೌಡರ ಹಾಗೂ ಬನಹಟ್ಟಿಯ ನಿವೃತ್ತ ಶಿಕ್ಷಕರಾದ ಶ್ರೀ ಎಸ್ಕೆ ಕೊನೆಸಾಗರ ಗುರುಗಳು ಅಭಿಪ್ರಾಯ ಪಡುತ್ತಾರೆ. ಇಂತಹ ವೀರಗಲ್ಲುಗಳ ಕುರಿತಾಗಿ ಅಧಿಕೃತ ಮಾಹಿತಿ ಒದಗಿಸುವ ಪ್ರತ್ಯೇಕ ವೀರಗಲ್ಲುಗಳ ಸಂಗ್ರಹಾಲಯದ ಅವಶ್ಯಕತೆಯೂ ಕೂಡಾ ಇರಲಾಗಿದ್ದು ಬಾಗಲಕೋಟೆಯ ವೀರಗಲ್ಲುಗಳ ಬಗ್ಗೆ ಮತ್ತಷ್ಟು ಅಧ್ಯಯನ ಸಂಶೋಧನೆಗಳು ನಡೆದು ಈ ಭಾಗದ ಶ್ರೀಮಂತ ಸಂಸ್ಕೃತಿಯ ಸಾಹಸ ಕಥನಗಳು ಪ್ರಚಾರ ಗೊಳ್ಳುವ ಕಾರ್ಯ ನಡೆದು ನಾಡಿನ ಹಿರಿಮೆಯ ಗರಿಮೆಗೆ ಮತ್ತಷ್ಟು ಬಲ ತುಂಬುವ ಕಾರ್ಯ ನಿರಂತರವಾಗಿ ನಡೆಯಲಿ ಎಂಬುದು ನನ್ನ ಸದಾಶಯ.

ಲೇಖಕನ:ಡಾ, ಆದಪ್ಪ.ಮ.ಗೊರಚಿಕ್ಕನವರ

ಕೂಡಲ ಸಂಗಮ ಇತಿಹಾಸ ಉಪನ್ಯಾಸಕರು

ಶ್ರೀ ಪಿ.ಎಸ್ ಸಜ್ಜನ ಕಲಾ ಮಹಾ ವಿದ್ಯಾಲಯ

ಬೇವೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button