ತಾ.ಪಂ ಹಾಗೂ ಜಿ.ಪಂ ಮೀಸಲಾತಿಯಲ್ಲಿ, ಪರಿಶಿಷ್ಟ ಜಾತಿಗೆ ಅನ್ಯಾಯ – ಸುರೇಶ ಚಲವಾದಿ ಆರೋಪ.

ಗದಗ ಅ.11

ಪ್ರಸಕ್ತ ಸಾಲಿನ ಜಿಲ್ಲಾ ಪಂಚಾಯತ್ ಹಾಗೂ ತಾಲೂಕಾ ಪಂಚಾಯತ್ ಮೀಸಲಾತಿಯಲ್ಲಿ ಪರಿಶಿಷ್ಟ ಜಾತಿ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಬಿಜೆಪಿ ಎಸ್‌ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ ವಾಯ್.ಚಲವಾದಿ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಪ್ರಸಕ್ತ ಸಾಲಿನ ಜಿಲ್ಲಾ ಪಂಚಾಯತ್ ಹಾಗೂ ತಾಲೂಕ ಪಂಚಾಯತ್ ಚುನಾವಣೆಯ ಮೀಸಲಾತಿ ಪ್ರಕಟಿಸಿದ ಸರ್ಕಾರ ದಿನಾಂಕ :- 09-10-2026 ರ ಶುಕ್ರವಾರ ಕರಡು ಅಧಿಸೂಚನೆ ಹೊರಡಿಸಿದೆ.

ಆದರೆ ಪ್ರಸಕ್ತ ಸಾಲಿನ ಕರಡು ಅಧಿಸೂಚನೆಯಲ್ಲಿ ರೋಸ್ಟರ್ ಮೆಂಟೇನ್ ಮಾಡದೇ ತಮಗೆ ಅನುಕೂಲಕ್ಕೆ ತಕ್ಕಂತೆ ಮೀಸಲಾತಿ ಪ್ರಕಟಿಸಿ ಸರ್ವಾಧಿಕಾರಿ ಧೋರಣೆ ತಾಳಿರುವದಲ್ಲದೇ ಸಾಕಷ್ಟು ಆಕಾಂಕ್ಷಿಗಳ ಕನಸ್ಸಿಗೆ ತಣ್ಣೀರೆರಚಿದೆ.

ಸರ್ಕಾರದ ಗೆಜೆಟ್ ನೋಟಿಫಿಕೇಷನ್ ಪ್ರಕಾರವೇ ಹೇಳುವದಾದರೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಸೆಕ್ಷನ್ 162 ರ ಪ್ರಕಾರ ಪ್ರಸಕ್ತ ಸಾಲಿನ ಜಿಲ್ಲಾ ಪಂಚಾಯತ್ ಹೊಂಬಳ ಮತ ಕ್ಷೇತ್ರಕ್ಕೆ ಪರಿಶಿಷ್ಟ ಜಾತಿಗೆ ಅವಕಾಶ ಕಲ್ಪಿಸ ಬೇಕಾಗಿತ್ತು.

ಏಕೆಂದರೆ ರೋಸ್ಟರ್ ಪ್ರಕಾರ ಎಲ್ಲಾ ಜಾತಿ ಸಮುದಾಯಕ್ಕೂ ಈ ಕ್ಷೇತ್ರದಲ್ಲಿ ಅವಕಾಶ ದೊರೆತಿದೆ ಈ ಬಾರಿ ರೊಟೇಷನ್ ಪ್ರಕಾರ ಕ್ಷೇತ್ರದಲ್ಲಿ ಪ್ರಭಲ ಸಮುದಾಯ ಹೆಚ್ಚು ಜನಸಂಖ್ಯೆ ಹೊಂದಿರುವ ಪರಿಶಿಷ್ಟ ಜಾತಿಗೆ ಅವಕಾಶ ಕಲ್ಪಿಸಬೇಕಾಗಿತ್ತು ಆದರೆ ಸರ್ಕಾರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಸೆಕ್ಷನ್ 16 2 ನ್ನು ಸ್ಪಷ್ಟವಾಗಿ ಉಲ್ಲಂಘಿಸಿ ಸಂವಿಧಾನದ ಆಶಯವನ್ನು ಗಾಳಿಗೆ ತೂರಿದೆ.

ಹೊಂಬಳ ಕ್ಷೇತ್ರಕ್ಕೆ ಪರಿಶಿಷ್ಟ ಪಂಗಡ ಸಮುದಾಯಕ್ಕೆ ಅವಕಾಶ ಕೊಟ್ಟಿರುವದನ್ನ ನಾನು ವೈಯಕ್ತಿಕವಾಗಿ ವಿರೋಧಿಸುತ್ತಿಲ್ಲ ಆದರೆ ಮಾತೆತ್ತಿದರೆ ಸಂವಿಧಾನದ ಪುಸ್ತಕವನ್ನ ತಮ್ಮ ಕಿಸೆಯಲ್ಲಿಟ್ಟು ಕೊಂಡು ತಿರುಗಾಡುವ ಕಾಂಗ್ರೆಸ್ ನಾಯಕರು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯದೇ ತಮಗೆ ಅನುಕೂಲವಾಗುವ ಹಾಗೆ ಮೀಸಲಾತಿ ಪ್ರಕಟಿಸಿರುವದು ತಮ್ಮ ಸರ್ವಾಧಿಕಾರಿ ಧೋರಣೆಯನ್ನು ಎತ್ತಿ ತೋರಿಸುವದರ ಮುಖಾಂತರ ಸಂವಿಧಾನ ವಿರೋಧಿ ನೀತಿಯನ್ನು ಕಾಂಗ್ರೆಸ್ ಬಹಿರಂಗ ಪಡಿಸಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ತಾಲೂಕಾ ಪಂಚಾಯ್ತಿ ಬಳಗಾನೂರ ಮತ ಕ್ಷೇತ್ರಕ್ಕೂ ಕೂಡಾ ಕಳೆದ ಅವಧಿಯಲ್ಲಿ ಹಿಂದುಳಿದ ಬ ವರ್ಗ ಮಹಿಳಾ ಮೀಸಲಾತಿ ಕಲ್ಪಿಸಿ ಪ್ರಸಕ್ತ ಸಾಲಿನಲ್ಲಿಯೂ ಕೂಡಾ ಅದೇ ಮೀಸಲಾತಿಯನ್ನ ಮುಂದುವರೆಸಿದೆ.

ಈ ಕ್ಷೇತ್ರದಲ್ಲಿಯೂ ಕೂಡಾ ಈ ಹಿಂದೆ ಎಲ್ಲಾ ಸಮುದಾಯಕ್ಕೂ ಅವಕಾಶವನ್ನು ಕಲ್ಪಿಸಲಾಗಿದೆ ಆದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಕ್ಕೆ ಅವಕಾಶ ಕೊಡದೇ ವಂಚಿಸಲಾಗಿದೆ. ಈ ಕ್ಷೇತ್ರದಲ್ಲಿಯೂ ಕೂಡಾ ರೊಟೇಷನ್ ಪ್ರಕಾರ ಮೀಸಲಾತಿ ಕಲ್ಪಿಸದೇ ಅಧಿನಿಯಮದ ಪ್ರಕರಣ 123 (4) ರ ಆವರ್ತನಾ ನಿಯಮದ ಸ್ಪಷ್ಟ ಉಲ್ಲಂಘನೆ ಮಾಡಿರುವದು ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೊಲೆ ಯಾಗಿದೆ ಎಂದರು.

ಎರೆಡೂ ಕ್ಷೇತ್ರಗಳ ಇತಿಹಾಸವನ್ನು ಮೆಲುಕು ಹಾಕಿದರೆ ಕಳೆದ ಹಲವು ದಶಕಗಳಿಂದ ಶೋಷಿತ ಸಮುದಾಯಗಳಿಗೆ ಅವಕಾಶಗಳನ್ನ ಕಲ್ಪಿಸದಿರುವದು ಈ ನೆಲದ ಶೋಷಿತರಿಗೆ ಮಾಡಿರುವ ಬಹುದೊಡ್ಡ ಅನ್ಯಾಯವಾಗಿದೆ.

ಈ ಎರೆಡೂ ಕ್ಷೇತ್ರಗಳಿಗೆ ಕರ್ನಾಟಕ ಗ್ರಾಮ ಸ್ವರಾಜ್ ಅಧಿನಿಯಮ 1993 ರ ರೋಸ್ಟರ್ ಪ್ರಕಾರ ಕೂಡಲೇ ಮೀಸಲಾತಿ ಕಲ್ಪಿಸಬೇಕೆಂದು ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸುತ್ತೇನೆ ಒಂದು ವೇಳೆ ಬದಲಾವಣೆ ಮಾಡದೇ ಪರಿಶಿಷ್ಟ ಜಾತಿ ಸಮುದಾಯಕ್ಕೆ ಅವಕಾಶ ಕೊಡದೇ ಹೋದಲ್ಲಿ ನ್ಯಾಯಾಲಯದಲ್ಲಿ ಸರ್ಕಾರದ ವಿರುದ್ದ ಪ್ರಕರಣ ದಾಖಲಿಸಿ ತಡೆಯಾಜ್ಞೆ ತರಲಾಗುವದೆಂದು ಹೇಳಿದರು.

ಒಟ್ಟಾರೆಯಾಗಿ ಜಿಲ್ಲೆಯ ಶಿರಹಟ್ಟಿ ಮೀಸಲು ಮತ ಕ್ಷೇತ್ರವನ್ನು ಹೊರತು ಪಡಿಸಿ ಉಳಿದ ಮೂರು ಮತ ಕ್ಷೇತ್ರದಲ್ಲಿ ರೋಸ್ಟರ್ ಪಾಲಿಸದೇ ಕಾಂಗ್ರೆಸ್ ಸರ್ವಾಧಿಕಾರಿ ಧೋರಣೆ ಅನುಸರಿಸಿರುವದನ್ನ ನೋಡಿದರೆ ನಾವು ಸಂವಿಧಾನದ ಅಡಿಯಲ್ಲಿ ಬದುಕುತ್ತಿದ್ದೇವೆಯೋ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಸಂವಿಧಾನದ ಆಶಯದಂತೆ ಸರ್ಕಾರ ಮೀಸಲಾತಿ ಕಲ್ಪಿಸದೇ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನೇ ಬುಡಮೇಲು ಮಾಡಿ ದಲಿತರು ಕೇವಲ ಮತ ಬ್ಯಾಂಕ್ ಗಳಾಗಿಯೇ ಉಳಿಯಬೇಕು ಅವರು ಆಳುವ ವರ್ಗದವರಾಗ ಬಾರದೆಂಬ ತಮ್ಮ ಅಂತರಾಳದ ನಿಲುವನ್ನ ಕಾಂಗ್ರೆಸ್ ಸ್ಪಷ್ಟ ಪಡಿಸಿದೆ ಎಂದು ಕುಟುಕಿದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button