💥ಕೋಟತಟ್ಟು ಗ್ರಾಮ ಪಂಚಾಯತ್ ಹಾಗೂ ನಕಲಿ ಪತ್ರಕರ್ತರ ಹಾವಳಿ – ಒಂದು ವಾಸ್ತವ ವರದಿ💥

ಉಡುಪಿ ಅ.12

ಜಿಲ್ಲೆಯ ಬ್ರಹ್ಮವರ ತಾಲ್ಲೂಕಿನ ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳು ಹಾಗೂ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಗಂಭೀರ ಆರೋಪಗಳು ತೀವ್ರ ಚರ್ಚೆಗೆ ಗ್ರಾಸವಾಗಿವೆ. ಪಂಚಾಯತ್ ಆಡಳಿತದ ವಿರುದ್ಧ ಕೇಳಿ ಬಂದಿರುವ ಹಗರಣಗಳ ಆರೋಪಗಳು ಮತ್ತು ಇದಕ್ಕೆ ಸಂಬಂಧಿಸಿದ ದಾಖಲೆಗಳ ಬಗ್ಗೆ ನಿಷ್ಪಕ್ಷಪಾತ ಹಾಗೂ ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂಬ ಒತ್ತಾಯ ಸಾರ್ವಜನಿಕರಿಂದ ವ್ಯಕ್ತವಾಗಿದೆ.ಪಂಚಾಯತ್ ಆಡಳಿತದ ವಿರುದ್ಧ ಕೇಳಿ ಬಂದಿರುವ ಪ್ರಮುಖ ಆರೋಪಗಳು ಮತ್ತು ಹಗರಣಗಳ ವಿವರ.

ಕೊರಗ ಕಾಲನಿ ಮನೆಗಳ ನಿರ್ಮಾಣದಲ್ಲಿ ಲೋಪ ದೋಷ:-

ಚಿಟ್ಟಿಬೆಟ್ಟು ಕೊರಗ ಕಾಲನಿಯಲ್ಲಿ 12 ಲಕ್ಷ ರೂಪಾಯಿ ವೆಚ್ಚದ ಮನೆ ಎಂದು ಕಾಗದಪತ್ರಗಳಲ್ಲಿ ತೋರಿಸಿ, ಕೇವಲ 8 ಲಕ್ಷ ರೂಪಾಯಿಗೆ ಕಳಪೆ ಮಟ್ಟದ ಮನೆಗಳನ್ನು ನಿರ್ಮಿಸಲಾಗಿದೆ ಎಂಬ ಗಂಭೀರ ಆರೋಪವಿದೆ.

ಈಗಾಗಲೇ 7 ಮನೆಗಳನ್ನು ಉದ್ಘಾಟನೆ ಮಾಡಲಾಗಿದ್ದು, 8ನೇ ಮನೆ ಇನ್ನೂ ನಿರ್ಮಾಣ ಹಂತದಲ್ಲಿದ್ದರೂ ಒಟ್ಟಾಗಿ 8 ಮನೆಗಳ ಉದ್ಘಾಟನೆ ಯಾಗಿದೆ ಎಂದು ಬಿಂಬಿಸಿರುವುದು ಸಾರ್ವಜನಿಕ ವಲಯದಲ್ಲಿ ಸಂಶಯಕ್ಕೆ ಎಡೆಮಾಡಿ ಕೊಟ್ಟಿದೆ.

ನರೇಗಾ ಹಾಗೂ ಜಲ್ ಜೀವನ ಮಿಷನ್ ವಂಚನೆ:-

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಲಕ್ಷಾಂತರ ರೂ. ಲೂಟಿ ಮಾಡಲಾಗಿದೆ ಹಾಗೂ ಜಲ್ ಜೀವನ ಮಿಷನ್ ಕುಡಿಯುವ ನೀರಿನ ಯೋಜನೆಯ ಲಾಭ ಬಡವರಿಗೆ ಸಿಗುವ ಬದಲು ಪಂಚಾಯತ್ ಅಧ್ಯಕ್ಷರ ಸ್ವಂತ ಮನೆಗೆ ಬಳಕೆಯಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ಫ್ಯಾಕ್ಟರಿ ಪರವಾನಿಗೆ ಹಾಗೂ ಭೂ ಹಗರಣ:-

ಫ್ಯಾಕ್ಟರಿ ಮಾಲೀಕರಿಗೆ ಪರವಾನಿಗೆ ಕೊಡಿಸುವ ನೆಪದಲ್ಲಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಲಾಗಿದೆ ಹಾಗೂ ಕೋಟತಟ್ಟು ಹಿಂದೂ ರುದ್ರ ಭೂಮಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣ ಈಗಾಗಲೇ ಲೋಕಾಯುಕ್ತದಲ್ಲಿ ತನಿಖೆ ಹಂತದಲ್ಲಿದೆ. ಅನಧಿಕೃತ ಕಟ್ಟಡಗಳಿಗೆ ಎನ್‌ಒಸಿ (NOC) ನೀಡುವಲ್ಲಿ ದ್ವೈತ ನೀತಿ ಅನುಸರಿಸಲಾಗಿದೆ ಎಂಬ ಆರೋಪವೂ ಇದೆ.

ನಕಲಿ ಪತ್ರಿಕೋಧ್ಯಮ ಹಾಗೂ ಬ್ಲಾಕ್‌ ಮೇಲ್ ದಂಧೆಯ ಅಸಲಿ ಮುಖ:-

ಸಮಾಜದಲ್ಲಿ ಕೆಲ ವ್ಯಕ್ತಿಗಳು ಯಾವುದೇ ಅಧಿಕೃತ ನೋಂದಣಿ (RNI) ಹೊಂದಿಲ್ಲದಿದ್ದರೂ, ತಮ್ಮನ್ನು ಪತ್ರಕರ್ತರೆಂದು ಬಿಂಬಿಸಿಕೊಂಡು ಬ್ಲಾಕ್‌ಮೇಲ್ ಹಾಗೂ ವಸೂಲಿ ಧಂಧೆಯಲ್ಲಿ ತೊಡಗಿರುವುದು ಖಂಡನೀಯ. ಯಾವುದೇ ಅಧಿಕೃತ ದಾಖಲೆಗಳು ಮತ್ತು ನೈಜ ಜ್ಞಾನವಿಲ್ಲದೆ, ಕೇವಲ ವೈಯಕ್ತಿಕ ಡೀಲಿಂಗ್‌ಗಳು ಹಾಗೂ ಕಿರುಕುಳ ನೀಡುವುದೇ ಇವರ ಕಸುಬಾಗಿದೆ.

ಈ ಹಿಂದೆ ವೈದ್ಯಾಧಿಕಾರಿಗಳಿಗೂ ಕೂಡ ಇದೇ ರೀತಿ ಬ್ಲಾಕ್‌ ಮೇಲ್ ಮಾಡಿ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ವೈದ್ಯಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅಧಿಕೃತ ದೂರುಗಳನ್ನು ನೀಡಿರುತ್ತಾರೆ.

RNI ನೋಂದಣಿ ಇಲ್ಲದೆ, ಸತ್ಯಾಸತ್ಯತೆ ತಿಳಿಯದೆ ಪಂಚಾಯತ್ ಹಗರಣಗಳನ್ನು ಮುಚ್ಚಿ ಹಾಕಲು ಅಥವಾ ಸುಳ್ಳು ವರದಿಗಳನ್ನು ಸೃಷ್ಟಿಸಲು ಯತ್ನಿಸುತ್ತಿರುವ ಇಂತಹ ನಕಲಿ ಪತ್ರಕರ್ತರ ಕೃತ್ಯಗಳ ಹಿಂದೆ ದೊಡ್ಡ ಮಟ್ಟದ ವಸೂಲಿ ರಾಜಕೀಯವಿರುವುದು ಸ್ಪಷ್ಟವಾಗುತ್ತದೆ.

ಸಮಗ್ರ ತನಿಖೆಗೆ ಸಾರ್ವಜನಿಕರ ಆಗ್ರಹ:-

ಕೋಟತಟ್ಟು ಗ್ರಾಮ ಪಂಚಾಯತ್‌ನಲ್ಲಿ ನಡೆದಿರುವ ಅಕ್ರಮಗಳ ಕುರಿತು ಲಭ್ಯವಿರುವ ದಾಖಲೆಗಳನ್ನು ಆಧರಿಸಿ ಸಮಗ್ರ ತನಿಖೆ ನಡೆಸಬೇಕು. ಪಂಚಾಯತ್ ಆಡಳಿತದಲ್ಲಿ ಆಗಿರುವ ಲೋಪಗಳ ಬಗ್ಗೆಯೂ ಹಾಗೂ ಸತ್ಯವನ್ನು ತಿರುಚಿ ಬ್ಲಾಕ್‌ಮೇಲ್ ಮಾಡುತ್ತಿರುವ ನಕಲಿ ಪತ್ರಕರ್ತರ ಅನಧಿಕೃತ ಚಟುವಟಿಕೆಗಳ ಬಗ್ಗೆಯೂ ಉನ್ನತ ಮಟ್ಟದ ತನಿಖೆ ಜರುಗಿದರೆ ಮಾತ್ರ ಸತ್ಯ ಹೊರಬರಲಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಬಲವಾಗಿ ಒತ್ತಾಯಿಸಿದ್ದಾರೆ.

ವರದಿ:ಆರತಿ.ಗಿಳಿಯಾರು.ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button