“ಪಾಲಕ್ ಮುಚ್ಚಲ್” ಮಹಿಳಾ ಸಾಧಕಿಗೆ ಸಾವಿರ ಸಾವಿರ ಸಲಾಮ್ ಗಳು”…..

ಸಹೃದಯರೇ,



ದೇಶವ್ಯಾಪಿ ದುರ್ಗಾ ಪೂಜೆ, ರಾಜ್ಯದಲ್ಲಿ ಅದ್ದೂರಿ ದಸರಾ/ ನವರಾತ್ರಿ ಉತ್ಸವ, ಪೌರಾಣಿಕ ನವ ದೇವಿಯರ ಪೂಜೆ, ಆರಾಧನೆ, ಭಕ್ತಿ, ಕೈಂಕರ್ಯಗಳು ನಡೆಯುತ್ತಿವೆ. ಸರ್ಕಾರಗಳ, ಸಾರ್ವಜನಿಕರ ಹಣ ವ್ಯಯವಾಗುತ್ತಿದೆ. ಗತಕಾಲದಿಂದ ಭಾರತೀಯರ ಈ ಪೌರಾಣಿಕ ನವ ದೇವಿಯರ ಆರಾಧನೆ, ಉತ್ಸವಗಳ ಮೂಲಕ ಮೌಡ್ಯ, ಕಂದಾಚಾರಗಳನ್ನು ಮುಂದಿನ ಪೀಳಿಗೆಗೆ ಸಾಗಿಸುತ್ತಿದ್ದೇವೆ. ಆ ಬದಲು, ಸಮಾಜದ ಉನ್ನತಿಗಾಗಿ ಶ್ರಮ, ತ್ಯಾಗ, ಬಲಿದಾನ, ಸಾಧನೆಗಳನ್ನು ಮಾಡಿದ ಮಹಿಳೆಯರ ಬಗ್ಗೆ ಸಮಾಜಕ್ಕೆ, ಭವಿಷ್ಯತ್ ನ ಪೀಳಿಗೆಗೆ ತಿಳಿಸುವ ಉತ್ಸವಗಳಾಗ ಬೇಕಿದೆ.
ತ್ಯಾಗ, ಬಲಿದಾನ, ಹತ್ತು ಹಲವು ರಂಗಗಳಲ್ಲಿ ಸಾಧನೆಗೈದ ಮಹಿಳೆಯರ ಚರಿತ್ರೆಗಳು ವಿಶ್ವದಲ್ಲಿ ಮತ್ತು ಈ ಭರತ ಮಣ್ಣಿನಲ್ಲಿವೆ. ಈ ನವರಾತ್ರಿ ಉತ್ಸವದಲ್ಲಿ ಪೌರಾಣಿಕ ನವ ದೇವಿಯರ ಪೂಜೆ, ಗುಣಗಾನದ ಬದಲು, ಪ್ರತಿದಿನ ಒಬ್ಬ ಸಾಧಕಿಯರ ಚರಿತ್ರೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ಚಿಂತಿಸಿ, ಸಂಪ್ರದಾಯಗಳನ್ನು ಬದಲಾಯಿಸಿ ಕೊಳ್ಳಲು ಪ್ರಯತ್ನಿಸಿ.
– ಒಮ್ಮೆ ಓದಿ, ಮತ್ತೊಮ್ಮೆ ಓದಿ, ಮಗದೊಮ್ಮೆ ಓದಿ, ಓದಿದ್ದು ಯಾವತ್ತೂ ನಷ್ಟವಾಗುವುದಿಲ್ಲ ಮುಂದೊಂದು ದಿನ ಹೆಮ್ಮರವಾದರೆ ಅದರ ಕೀರ್ತಿ ಮೂರ್ತಿಯವರಿಗೆ ದಕ್ಕುವಂತಾಗಲಿ…..
———————————————
(ಮಹಿಳಾ ಸಾಧಕಿ-1)
ಮಧ್ಯಪ್ರದೇಶದ ಇಂದೋರ್ ನ ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ “ಪಾಲಕ್ ಮುಚ್ಚಲ್” ಬಾಲಕಿ, ತನ್ನ ಬಾಲ್ಯ, ಯೌವ್ವನ, ಆಟ ಪಾಠ ಬದಿಗಿಟ್ಟು, ಬಾಲ್ಯದಿಂದಲೇ ಸಮಾಜ ಮುಖಿಯಾಗಿ, 2000 ನೇ. ಸಾಲಿನಲ್ಲಿ ಭಾರತ ಸರ್ಕಾರದಿಂದ “ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ” ಬೆಳ್ಳಿ ಪದಕ ಪಡೆದು, ಇಂದು ದೇಶ ವ್ಯಾಪಿ ಅತಿ ಕಡು ಬಡತನದ 3,947 ಕ್ಕೂ ಹೆಚ್ಚು ಮಕ್ಕಳ ‘ಹೃದಯ ಶಸ್ತ್ರಚಿಕಿತ್ಸೆ’ ಮಾಡಿಸಿ, ಆ ವೆಚ್ಚವನ್ನು ಭರಿಸಿ, “ಬಡ ಕುಟುಂಬಗಳ ಕಣ್ಮಣಿಯಾಗಿ”, ಮಕ್ಕಳಿಗೆ ಪುನರ್ಜೀವ ನೀಡಿ, ಜೊತೆಗೆ ಹಾಲಿ “ವಿಶ್ವದ ಉದಯೋನ್ಮುಖ ಹಾಡುಗಾರ್ತಿ” ಯಾಗಿ ಸಾಗಿರುವ ಸಾಧಕೀಯ ಕಥೆ.
30 ಮಾರ್ಚ್ 1992 ರಲ್ಲಿ ಭಾರತದ ಮಧ್ಯಪ್ರದೇಶ ರಾಜ್ಯದ ಇಂದೋರ್ ನಗರದಲ್ಲಿ “ಪಾಲಕ್ ಮುಚ್ಚಲ್” ಮಧ್ಯಮ ವರ್ಗದ ಬ್ರಾಹ್ಮಣ ಸಮಾಜದ, ರಾಜಕುಮಾರ್ ಮುಚ್ಚಲ್, ಅಮಿತಾ ಮುಚ್ಚಲ್ ದಂಪತಿಗಳಿಗೆ ಜನಿಸಿದಳು.
ಸಾರ್ವತ್ರಿಕ ಶಿಕ್ಷಣಕ್ಕಾಗಿ ಶಾಲೆಗೆ ಸೇರಿಸುವ ಮುನ್ನ, ಪಾಲಕ್ ಮುಚ್ಚಲ್ 4 ವರ್ಷದವಳಿದ್ದಾಗ, ಅವಳನ್ನು ಹಿಂದಿ ಸಿನಿಮಾ ರಂಗದ ಗತಕಾಲದ ಖ್ಯಾತ ಸಂಗೀತಗಾರ ಕಲ್ಯಾಣ್ ಜಿ – ಆನಂದ್ ಜಿ ಸ್ಥಾಪನೆ ಮಾಡಿದ್ದ “ಲಿಟಲ್ ಸ್ಟಾರ್” ಯುವ ಗಾಯಕರ ಗುಂಪಿಗೆ, ಸಂಗೀತ ಜ್ಞಾನ, ಅಭ್ಯಾಸ, ಸ್ಪರ್ಧೆಗಾಗಿ ನೊಂದಣಿ ಮಾಡಿದರು.
ಮುಂದೆ, ಪಾಲಕ್ ಮುಚ್ಚಲ್ ತನ್ನ ಪ್ರಾಥಮಿಕ ಶಿಕ್ಷಣ ಪ್ರಾರಂಭಿಸಿದ ವರ್ಷಗಳಲ್ಲಿ, 1999 ರಲ್ಲಿ ಪಾಕಿಸ್ತಾನ ಮತ್ತು ಭಾರತದ ಮಧ್ಯೆ “ಕಾರ್ಗಿಲ್ ಯುದ್ಧ” ಪ್ರಾರಂಭ ಗೊಂಡಿತು. ಪಾಕಿಸ್ತಾನಿಯರು, ಭಾರತೀಯ ಸೈನಿಕರ ಮೇಲೆ, ಭಾರತಿಯರು ಪಾಕಿಸ್ತಾನ ಸೈನಿಕರ ಮೇಲೆ; ಹಾರಿಸುತ್ತಿದ್ದ, ಹಾಕುತ್ತಿದ್ದ ಮದ್ದು ಗುಂಡುಗಳ ಸದ್ದು, ಕಾರ್ಗಿಲ್ ಪರ್ವತಗಳ ಶಿಖರಗಳನ್ನೇ ಸೀಳಿ ಕೊಂಡು, ಉತ್ತರದಿಂದ ದಕ್ಷಿಣದ ಕನ್ಯಾಕುಮಾರಿ ವರೆಗೂ ಕೇಳಿಸುವಂತೆ ಮಾಧ್ಯಮಗಳು, ಜೊತೆಗೆ ಭಾರತೀಯರು, ಬಾಯಿಂದ ಬಾಯಿಗೆ ಪ್ರಚಾರ ಮಾಡುತ್ತಿದ್ದರು. ಕೆಲವು ಭಾರತೀಯರು ಯುದ್ಧದಲ್ಲಿ ಗಾಯಗೊಂಡ, ಮೃತಪಟ್ಟ ಭಾರತೀಯ ಸೈನಿಕರಿಗೆ, ಸೈನಿಕರ ನಿರಾಶ್ರಿತ ಕುಟುಂಬಗಳಿಗೆ, ದೇಶ ವ್ಯಾಪಿ ಹಣ, ಔಷಧಿ, ಹೊದಿಕೆ, ರೇಷನ್, ಸಾಮಾನು-ಸರಕು ಸರಂಜಾಮಗಳ ಸಂಗ್ರಹ, ಸಾಕಾಣಿಕೆ, ವಿತರಣೆಯನ್ನು ಮಾಡಲು ಪ್ರಾರಂಭಿಸಿದರು. ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರ ವಾಗುತ್ತಿರುವುದನ್ನು; ಸೈನಿಕರ ಹೋರಾಟ, ಸಾವುಗಳನ್ನು ಪಾಲಕ್ ಮುಚ್ಚಲ್ ವೀಕ್ಷಿಸಿದಳು.
ಪ್ರಾಥಮಿಕ ಶಿಕ್ಷಣದ ಶಾಲೆಗೆ ಪಾಲಕ್ ಮುಚ್ಚಲ್ ಚಕ್ಕರ್ ಹೊಡೆದು, ಕಾರ್ಗಿಲ್ ಯುದ್ಧದ ಕಾಣಿಕೆ ಡಬ್ಬ ಹಿಡಿದು, ಇಂದೋರ್ ನಗರದ ವ್ಯಾಪಾರ ಬೀದಿಗಳಲ್ಲಿ, ಅಂಗಡಿಗಳ ಮುಂದೆ, ಸರ್ಕಲ್ ಗಳಲ್ಲಿ ಸಾರ್ವಜನಿಕರ ಮುಂದೆ, ದೇಶಭಕ್ತಿ ಗೀತೆಗಳನ್ನು ಹಾಡುತ್ತಾ, ಕಾರ್ಗಿಲ್ ಸಂತ್ರಸ್ತರಿಗೆ ಧನ ಸಹಾಯ ಮಾಡುವಂತೆ ವಿನಂತಿಸಿದಳು. ದೇಶಭಕ್ತಿ ಗೀತೆಗಳನ್ನು ಕೇಳಿದ ವ್ಯಾಪಾರಿಗಳು, ಸಾರ್ವಜನಿಕರು, ಕಾಣಿಕೆಯನ್ನು ನೀಡಿದರು. ಒಂದು ವಾರಗಳ ಅವಧಿ ಶಾಲೆಗೆ ಚಕ್ಕರ್ ಹೊಡೆದು ದೇಶದ ಹಿತಕ್ಕಾಗಿ ದೇಶಭಕ್ತಿ ಹಾಡುಗಳನ್ನು ಹೇಳುತ್ತಾ, ಈ ಚಿಕ್ಕ ಬಾಲಕಿ ಅಂದಾಜು Rs.25,000/- ಗಳನ್ನು ಆ ವಾರ ಸಂಗ್ರಹಿಸಿದಳು. ಸಂಗ್ರಹಿಸಿದ ಹಣವನ್ನು ಪ್ರಧಾನಿ ಘೋಷಣೆ ಮಾಡಿದ್ದ “ಕಾರ್ಗಿಲ್ ಸಂತ್ರಸ್ತರ ನಿಧಿ” ಗೆ ಕಳುಹಿಸಿದಳು.
ಪಾಲಕ್ ಮುಚ್ಚಲ್ 7 ನೇ. ತರಗತಿ ವ್ಯಾಸಂಗ ಮಾಡುತ್ತಿದ್ದಾಗ, ಆಕೆಯ ಸಹಪಾಠಿ ಲೋಕೇಶ್ ಎಂಬ ಹುಡುಗನಿಗೆ ಹೃದಯ ರೋಗ ಕಾಣಿಸಿತು. ಕ್ರಮೇಣ ಕಾಯಿಲೆ ಉಲ್ಬಣ ಗೊಂಡು ಹೃದಯ ಶಸ್ತ್ರ ಚಿಕಿತ್ಸೆ ಅನಿವಾರ್ಯವಾಯಿತು. ಹುಡುಗನ ತಂದೆ ಚಪ್ಪಲಿ, ಶೂ ವ್ಯಾಪಾರಿ. ವ್ಯಾಪಾರದಲ್ಲಿ ನಷ್ಟದಲ್ಲಿದ್ದ. ಮಗನ ಶಸ್ತ್ರಚಿಕಿತ್ಸೆ ವೆಚ್ಚಗಳನ್ನು ಬರಿಸಲು ಅಸಹಾಯಕನಾದ. ಸಹಪಾಠಿ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ತಿಳಿದ ಪಾಲಕ್ ಮುಚ್ಚಲ್, ಸದರಿ ಶೂ ವ್ಯಾಪಾರಿಯ ನಾಲ್ಕು ಚಕ್ರದ ತಳ್ಳುವ ಗಾಡಿ ಪಡೆದು, ತಳ್ಳುವ ಗಾಡಿಯ ಮೇಲೆ ನಿಂತು, ಇಂದೂರ್ ನಗರದ ಬಡಾವಣೆಯ ಬೀದಿಗಳಲ್ಲಿ ರೋಡ್ ಶೋ ಹೊರಟಳು. ಲತಾ ಮಂಗೇಶ್ಕರ್ ಇತರೆ ಪ್ರಸಿದ್ಧ ನಾಯಕಿಯರ ಹಾಡುಗಳನ್ನು ಹಾಡಿದಳು. ಹಾಡುಗಳನ್ನು ಮೆಚ್ಚಿದ ರಸ್ತೆ ಬದಿಯ ಸಾರ್ವಜನಿಕರು, ದೇಣಿಗೆ ನೀಡಿದರು. ಅಂದು ಸಂಜೆಯ ವೇಳೆಗೆ Rs. 51,000 ಸಂಗ್ರಹವಾಯಿತು. ಪಾಲಕ್ ಮುಚ್ಚಲ್ ರೋಡ್ ಶೋ, ಹಾಡುಗಾರಿಕೆ, ಉದ್ದೇಶ, ಬೆಳಿಗ್ಗೆ ಸುದ್ದಿ ಮಾಧ್ಯಮಗಳಲ್ಲಿ ಬಾರಿ ಸುದ್ದಿ ಆಯಿತು. ಸಂಗ್ರಹವಾದ ಹಣವನ್ನು ಪಾಲಕ್ ಮುಚ್ಚಲ್ ಸಹಪಾಠಿ ಲೋಕೇಶನ ತಂದೆಗೆ ನೀಡಿದಳು. ಈ ಹಣ ಪಡೆದು ಹೃದಯ ಶಸ್ತ್ರಚಿಕಿತ್ಸೆಗಾಗಿ ತಂದೆ ಮಗನೊಡನೆ ಆಸ್ಪತ್ರೆಗಳಿಗೆ ಓಡಾಡುತ್ತಿದ್ದರು. ಮಾಧ್ಯಮಗಳಲ್ಲಿ ಸುದ್ದಿ ಓದಿದ್ದ ಬೆಂಗಳೂರು ಮೂಲದ ಖ್ಯಾತ ಹೃದಯ ತಜ್ಞ ಡಾ. ದೇವಿ ಶೆಟ್ಟಿ ಬಾಲಕಿ ಪಾಲಕ್ ಮುಚ್ಚಲ್ ಮೂಲಕ ಲೋಕೇಶ್ ನನ್ನು, ಸಂಪರ್ಕಿಸಿ, ಬೆಂಗಳೂರಿಗೆ ಆಹ್ವಾನಿಸಿ, ಪುಕ್ಕಟೆ ಯಾಗಿ ಹೃದಯ ಶಸ್ತ್ರಚಿಕಿತ್ಸೆ ಮಾಡಿ ಕಳುಹಿಸಿ ಕೊಟ್ಟರು.
ಮುಂದೆ ದೇಶದಲ್ಲಿ ಭೂಕಂಪ ಚಂಡಮಾರುತ, ಅತಿವೃಷ್ಟಿ, ಅನಾವೃಷ್ಟಿ ಇತರೆ ಪ್ರಾಕೃತಿಕ ವಿಕೋಪಗಳು ಸಂಭವಿಸಿ ದಾಗಲೆಲ್ಲ ಪಾಲಕ್ ಮುಚ್ಚಲ್ ತನ್ನ ಹಾಡುಗಾರಿಕೆ ಮೂಲಕ ಹಣ ಸಂಗ್ರಹಿಸಿ ಸಂತ್ರಸ್ತರಿಗೆ ನೀಡುವ ಕಾಯಕವನ್ನು ಮುಂದುವರಿಸಿದಳು. ಜೊತೆಯಲ್ಲಿಯೇ ಶಿಕ್ಷಣದಲ್ಲಿ ವಾಣಿಜ್ಯ ಶಾಸ್ತ್ರದಲ್ಲಿ ಸ್ನಾತಕೋತರ ಪದವಿಯನ್ನು ಪಡೆದಳು.
ಪಾಲಕ್ ಮುಚ್ಚಲ್ ಪ್ರತಿಷ್ಠೆ, ಪ್ರಸಿದ್ಧಿ ದಿನೇ ದಿನೇ ಹೆಚ್ಚಳ ಗೊಂಡಿತು. ದೇಶದ ಎಲ್ಲೆಡೆ ವಿಸ್ತರಿಸಿತು. ಬಡವರಿಗಾಗಿ, ಹೃದಯ ರೋಗಿಗಳಿಗಾಗಿ ಈಕೆ ಶ್ರಮಿಸುತ್ತಿರುವ ಮಾಹಿತಿಗಳನ್ನು ಆಧರಿಸಿ ಇತರೆ ರಾಜ್ಯಗಳಿಂದ ಕೂಡ ಬಡವರು ಹೃದಯ ರೋಗಿಗಳು ಸಹಾಯಕ್ಕಾಗಿ ಪಾಲಕ್ ಮುಚ್ಚಲ್ ಅನ್ನು ಸಂಪರ್ಕಿಸಲು ಪ್ರಾರಂಭಿಸಿದರು. ದಿನೇ ದಿನೇ ಧನ ಸಹಾಯಕ್ಕೆ ಬೇಡಿಕೆಗಳು ಹೆಚ್ಚಳ ಗೊಂಡವು. ಬಂದ ಬೇಡಿಕೆಗಳಷ್ಟನ್ನೂ ಈಡೇರಿಸಲು ಹಠಕ್ಕೆ ಬಿದ್ದವಳಂತೆ ಪಾಲಕ್ ಮುಚ್ಚಲ್ ಸಿದ್ದ ಗೊಂಡಳು. ಹಿಂದಿ ಜೊತೆಗೆ ಕನ್ನಡ ಒಳಗೊಂಡಂತೆ ಭಾರತದ ವಿವಿಧ ರಾಜ್ಯಗಳ 17 ಭಾಷೆಗಳನ್ನು ಕಲಿಯಲು ಪ್ರಾರಂಭಿಸಿ, ಹಾಡಲು ಪ್ರಾರಂಭಿಸಿದಳು. 17 ಭಾಷೆಗಳಲ್ಲಿಯೂ, ಸ್ಥಳೀಯ ಭಾಷಿಕರಂತೆ ಹಾಡಲು ಯಶಸ್ವಿ ಆದಳು.
ಈ ಕಲಿಕೆ ತರುವಾಯ, Heart to Heart ಸ್ಲೋಗನ್ ನಮೂದಿಸಿ “ಪಾಲಕ್ ಹಾರ್ಟ್ ಫೌಂಡೇಶನ್” ಎಂಬ ಬಡವರಿಗೆ ಸಹಾಯ ಹಸ್ತದ ಖಾಸಗಿ ಸಂಸ್ಥೆಯನ್ನು ಸ್ಥಾಪಿಸಿದಳು. *”ಹೃದಯ ರೋಗವಿರುವ ಮಕ್ಕಳ ಕಡು ಬಡತನದ ತಂದೆ ತಾಯಿಯರು ಸಂಪರ್ಕಿಸಿ”* ಎಂದು ತನ್ನ ಫೌಂಡೇಶನ್ ವತಿಯಿಂದ ಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ನೀಡಿದಳು. ದೇಶದ ಉದ್ದಗಲಕ್ಕೂ ಪ್ರಸಿದ್ಧ ನಗರಗಳಲ್ಲಿ Palak Musical Night ಆಯೋಜಿಸಿದಳು. ಈ ಸಂಗೀತ ಸಂಜೆ ಕಾರ್ಯಕ್ರಮಗಳು ದೇಶದಲ್ಲಿ ಪ್ರಸಿದ್ಧಿ ಗೊಂಡು ವಿದೇಶಗಳಿಗೂ ಪ್ರಸಿದ್ಧಿ ಹಬ್ಬಿತು. ಆಯೋಜಕರು ಕೂಡ ಹೆಚ್ಚಳ ಗೊಂಡು, ವಿಶ್ವದ ಅನೇಕ ನಗರಗಳಲ್ಲಿ Save little Heart, ದಿಲ್ ಸೆ ತಕ್, From Heart to Heart ಹೆಸರುಗಳಲ್ಲಿ ಪಾಲಕ್ ಮ್ಯೂಸಿಕ್ ನೈಟ್ಸ್ ಗಳನ್ನು ಆಯೋಜಿಸಿದರು. ಈ ಸಂಗೀತ ಕಾರ್ಯಕ್ರಮಗಳಿಂದ ಪಾಲಕ್ ಹಾರ್ಟ್ ಫೌಂಡೇಶನ್ ಡಾಲರ್ ಗಳಲ್ಲಿ ಹೆಚ್ಚು ಹೆಚ್ಚು ಹಣವನ್ನು ಸಂಪಾದಿಸಿತು.
ಈ ಹಣದಿಂದ ಪಾಲಕ್ ಮುಚ್ಚಲ್ ಭಾರತದಲ್ಲಿನ ಕಡು ಬಡತನದ ಸಾವಿರಾರು ಹೃದಯ ರೋಗ ಪೀಡಿತ ಮಕ್ಕಳ ಹೃದಯ ಶಸ್ತ್ರ ಚಿಕಿತ್ಸೆ ಮಾಡಿಸಿದಳು. ವೆಚ್ಚವನ್ನು ಬರಿಸಿದಳು. ಚಿಕ್ಕ ಚಿಕ್ಕ ಸಾವಿರಾರು ಮಕ್ಕಳಿಗೆ ಮರುಜೀವ ನೀಡಿದಳು. ಈ ಕಾರ್ಯದಲ್ಲಿ ಆಕೆಗೆ ಎಷ್ಟು ನಿಷ್ಠೆ ಇತ್ತು ಅಂದರೆ, ಶಸ್ತ್ರಚಿಕಿತ್ಸೆ ವೇಳೆಯಲ್ಲಿ ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ತಂಡದೊಡನೆ ತಾನು ಕೂಡ ಕೆಲವೊಮ್ಮೆ ಪಾಲ್ಗೊಳ್ಳುತ್ತಿದ್ದಳು. ಮರು ಜೀವ ಪಡೆದ ಮಕ್ಕಳ ಕುಟುಂಬದಿಂದ, ನೆನಪಿಗಾಗಿ ಒಂದು ಚಂದನ ಬೊಂಬೆಯನ್ನು ಮಾತ್ರ ಪಡೆದಳು. ಇಂದು ಪಾಲಕ್ ಮುಚ್ಚಲ್ ಮನೆಯ ಶೋಕೇಸ್ ನಲ್ಲಿ 3,947 ಬೊಂಬೆಗಳಿವೆ. ಕಡು ಬಡವರ ರೂಪವಾಗಿ, ಸಾಕ್ಷಿಯಾಗಿ ಆ ಬೊಂಬೆಗಳು ಪಾಲಕ್ ಮುಚ್ಚಲ್ ರನ್ನು ಸದಾ ನೆನಪಿಸುತ್ತವೆ.
ಸಹೋದರಿಯ ಬಾಲ್ಯ , ಯೌವನಾವಸ್ಥೆಯ ಯಶಸ್ಸನ್ನು ಕಂಡು, ಪಾಲಕ್ ಮುಚ್ಚಲ್ ಸಹೋದರ ಪಲಾಸ್ ಮುಚ್ಚಲ್ ಕೂಡ ಸಹೋದರಿಯ ಸಂಗೀತ ಕಾರ್ಯಕ್ರಮಗಳಲ್ಲಿ, ಸ್ಟೇಜ್ ಶೋಗಳಲ್ಲಿ ಪಾಲ್ಗೊಂಡ. ಸಿನಿಮಾ ತಾರೆಯರ, ಪ್ರಸಿದ್ಧ ರಾಜಕಾರಣಿಗಳ ಮಿಮಿಕ್ರಿ ಗಳನ್ನು ಸ್ಟೇಜ್ ನಲ್ಲಿ ಮಾಡುತ್ತಿದ್ದ. ಈತನ ಪಾಲ್ಗೊಳ್ಳುವಿಕೆಗೆ ಸಹೋದರಿ ಪಾಲಕ್ ಮುಚ್ಚಲ್ ಹಣ ನೀಡುತ್ತಿದ್ದಳು. ಹೀಗೆ ಪಡೆದ ಹಣವನ್ನು ಸಹೋದರ ಫಲಾಸ್ ಮುಚ್ಚಲ್ ಬಡತನದಿಂದ ನರಳುತ್ತಿದ್ದ ಮೂತ್ರಪಿಂಡ ರೋಗಿಗಳಿಗೆ ಚಿಕಿತ್ಸಾ ವೆಚ್ಚವನ್ನು ಬರಿಸಲು ಪ್ರಾರಂಭಿಸಿದ. ಸಹೋದರ ಸಹೋದರಿಯರಿಬ್ಬರೂ ಬಾಲ್ಯದಿಂದ ಯವ್ವನಾವಸ್ಥೆಗೆ ತಲುಪಿದ್ದರೂ ಈ ಸಮಾಜ ಮುಖಿ ಕಾರ್ಯಗಳನ್ನು ಜೊತೆಯಾಗಿ ಮುಂದುವರಿಸಿದ್ದಾರೆ.
ಈ ಸಮಾಜ ಮುಖಿ ಕಾರ್ಯದ ನಡುವೆ ಪಾಲಕ್ ಮುಚ್ಚಲ್ ಇವಳ ಹಾಡುಗಾರಿಕೆ ಯಿಂದ, ಧ್ವನಿಯಿಂದ, ಆಕರ್ಷಿತರಾದ ಹಿಂದಿ ಮತ್ತು ಇತರೆ ಭಾಷೆಗಳ ಚಲನ ಚಿತ್ರಗಳ ನಿರ್ಮಾಪಕರು, ನಿರ್ದೇಶಕರು, ತಮ್ಮ ಚಲನ ಚಿತ್ರಗಳಿಗೆ ಇವಳಿಂದ ಹಾಡುಗಳನ್ನು ಹಾಡಿಸಿದರು. ಪಾಲಕ್ ಮುಚ್ಚಲ್ ಹಾಡಿದ ಪ್ರಮುಖ ಚಲನ ಚಿತ್ರಗಳೆಂದರೆ, ಏಕ್ ಥಾ ಟೈಗರ್ (2012), ಆಶಿಕಿ-2 (2013), ಕಿಕ್(2014), ಆಕ್ಷನ್ ಜಾಕ್ಸನ್(2014), ಪ್ರೇಮ್ ರತನ್ ದನ್ ಪಾಯೋ (2015), MS ಧೋನಿ, The untold story (2016), ಕಾಬಿಲ್ (2017), ಬಾಗಿ-2 (2018), ಪಲ್ ಪಲ್ ದಿಲ್ ಕೆ ಪಾಸ್ (2019) ಇನ್ನು ಕೆಲವು ಯಶಸ್ವಿ ಚಲನ ಚಿತ್ರಗಳಲ್ಲಿ ಹಿನ್ನೆಲೆ ಗಾಯಕಿಯಾಗಿ ಪಾಲಕ್ ಮುಚ್ಚಲ್ ಹಾಡಿದ್ದಾಳೆ. ಈಕೆ ತನ್ನ “ಸಂಗೀತ ಕೇಳುವ ಅಭಿಮಾನಿಗಳನ್ನು ದೇಶದಲ್ಲಿ ಮತ್ತು ವಿಶ್ವದಲ್ಲಿ ಅತಿ ಹೆಚ್ಚು ಹೊಂದಿದ್ದಾಳೆ”. ಆಶಿಕಿ-2 ಚಲನ ಚಿತ್ರದ ಸಂಗೀತ ಸಂಯೋಜಕ ಮಿಥುನ್ ಅವರನ್ನು 6-11-2022 ರಂದು ಪಾಲಕ್ ಮುಚ್ಚಲ್ ವಿವಾಹವಾದಳು.
ಪಾಲಕ್ ಮುಚ್ಚಲ್ ಗೆ, ಭಾರತ ಸರ್ಕಾರದಿಂದ ರಾಷ್ಟ್ರೀಯ ಬಾಲ ಪುರಸ್ಕಾರ ಬೆಳ್ಳಿ ಪದಕ ಪ್ರಶಸ್ತಿ (2000); Sony Entertainment Television ವತಿಯಿಂದ TV Show Cadbury Bournvita Confident Champion ವಿಜೇತೆ (2006); Zee Cine Awards (2014); TV ಚಾನಲ್ ನಲ್ಲಿ “ಸ ರಿ ಗ ಮ ಪ” ಕಾರ್ಯಕ್ರಮದಲ್ಲಿ ವಿಜೇತ; ಅತ್ಯುತ್ತಮ ಹಿನ್ನೆಲೆ ಗಾಯಕಿ ಎಂದು Star Dust ಪ್ರಶಸ್ತಿ (2015); Filmfare Awards(2016/2017); Limca Book of World Record ನಲ್ಲಿ ಸ್ಥಾನ; Zee Cine Awards; ವಿಶ್ವದ ಜಾಗತಿಕ ಶಾಂತಿಗಾಗಿ ಅಮೆರಿಕನ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ (2021); ಈ ಗೌರವಗಳ ಜೊತೆಗೆ, ಭಾರತ ಸರ್ಕಾರ ತನ್ನ CBSC ಶಿಕ್ಷಣದ ಪಠ್ಯಪುಸ್ತಕದಲ್ಲಿ ಮತ್ತು ಮಹಾರಾಷ್ಟ್ರ ಸರ್ಕಾರ ತನ್ನ 7 ನೇ. ತರಗತಿಯ ನೈತಿಕ ಶಿಕ್ಷಣ ಪಠ್ಯಪುಸ್ತಕದಲ್ಲಿ ಪಾಲಕ್ ಮುಚ್ಚಲ್ ಇವರ ಬಾಲ್ಯ, ಬದುಕು, ಸಾಧನೆ ಬಗ್ಗೆ ಅಧ್ಯಾಯ ಸೇರ್ಪಡೆ ಮಾಡಿ, ಮಕ್ಕಳಿಗೆ ನೈತಿಕ ಮೌಲ್ಯಗಳ ಶಿಕ್ಷಣ ನೀಡುತ್ತಿದೆ.
*ನಾನು ಬಾಲ್ಯದಲ್ಲಿ ಆಟ ಆಡಲಿಲ್ಲ, ನನ್ನ ಸಾಮಾನ್ಯ ಬಾಲ್ಯವನ್ನು ಕಳೆದು ಕೊಂಡೆ. ಯವ್ವನಾವಸ್ಥೆಯಲ್ಲಿ ಸ್ನೇಹಿತರೊಡನೆ ಆಟ ಆಡಲಿಲ್ಲ. ಸಂತಸಗಳನ್ನು ಹಂಚಿ ಕೊಳ್ಳಲಿಲ್ಲ. ಮೋಜು ಮಸ್ತಿ ಮಾಡಲಿಲ್ಲ.* *ಯಾವುದೇ ಪ್ರವಾಸ ತಾಣಗಳಿಗೆ ಹೋಗಲಿಲ್ಲ. ಈ ಬಗ್ಗೆ ನನಗೆ ವಿಷಾದವಿಲ್ಲ. ನನ್ನ ಆಟ, ಪಾಠ, ಮೋಜು-ಮಸ್ತಿಗಿಂತ, ಬಡ ಮಕ್ಕಳ ಜೀವ ಉಳಿಸಿದ್ದೇನೆ. ಆ ತೃಪ್ತಿ ನನಗಿದೆ. ಆ ಸಮಾಜ ಮುಖಿ ಕಾರ್ಯಗಳೇ ನನಗೆ ಬದುಕಿನಲ್ಲಿ ಸಂತೋಷ, ಸುಖ ನೀಡಿದೆ. ಯಾವುದೇ ಗಿಲ್ಟ್ ನನಗಿಲ್ಲ. ನಾನು ಮತ್ತು ನನ್ನ ಕುಟುಂಬ ಈ ಸಮಾಜ ಮುಖಿ ಕಾರ್ಯವನ್ನು ಮುಂದುವರಿಸುತ್ತೇವೆ. …* ಹೀಗೆ ಪಾಲಕ್ ಮುಚ್ಚಲ್ ಸಂದರ್ಶನ ಒಂದರಲ್ಲಿ ಹಲವು ಪ್ರಶ್ನೆಗಳಿಗೆ ಪ್ರತಿಕ್ರೀಯಿಸಿದ್ದಾರೆ.
ನಾಡಿನ ದಸರಾ/ನವರಾತ್ರಿ ಉತ್ಸವದ ಈ ವೇಳೆಯಲ್ಲಿ, ಪೌರಾಣಿಕ ನವ ದೇವಿಯರ ಚರಿತ್ರೆಗಳನ್ನು ತಿಳಿಸುವ ಬದಲು, ಚಿಕ್ಕ ವಯಸ್ಸಿನ ಈ ಪಾಲಕ್ ಮುಚ್ಚಲ್ ಜೀವನ ಸಾಧನೆಯನ್ನು ನಿಮಗೆ ತಿಳಿಸಿದ್ದೇನೆ ಸ್ವೀಕರಿಸಿ. ಭವಿಷ್ಯತ್ ಪೀಳಿಗೆಗಳ ಹಿತ ದೃಷ್ಟಿಯಿಂದ ಮೌಡ್ಯ, ಕಂದಾಚಾರಗಳನ್ನು ಮುಂದುವರಿಸುತ್ತಿರುವ ಬಗ್ಗೆ ಚಿಂತಿಸಿ ಪರಿವರ್ತನೆ ಜಗದ ನಿಯಮ ಯುವ ಪೀಳಿಗೆಗೆ ಪ್ರೇರಣೆಯಾಗಲಿ…..
👏 ಓದುಗರಿಗೆ ದಸರಾ ಶುಭಾಶಯಗಳು🌷.
ಎಸ್. ಮೂರ್ತಿ ಮಾಜಿ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ. Mobil- 9740197676
