ಬಿತ್ತನೆಗೆ ಹುರಿದುಂಬಿಸುವ ಮಣ್ಣೆತ್ತಿನ ಅಮವಾಸ್ಯೆ.

ನಮ್ಮ ದೇಶದಲ್ಲಿ ಪ್ರಕೃತಿ ಆರಾಧನೆಗೆ ಹೆಚ್ಚು ಮಹತ್ವ. ನಮ್ಮ ಪೂರ್ವಜರು ಕಲ್ಲು-ಮಣ್ಣಿನಲ್ಲಿಯೇ ದೈವತ್ವವನ್ನು ಕಂಡವರು. ಅದೇ ರೀತಿ ಈಗಲೂ ಅಂತಹದ್ದೇ ವಿಶೇಷ ಆಚರಣೆ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ನಡೆದುಕೊಂಡು ಬಂದಿದೆ. ಈ ಹಬ್ಬದ ಹೆಸರು ‘ಮಣ್ಣೆತ್ತಿನ ಅಮಾವಾಸ್ಯೆ’. ಇದರ ವಿಶೇಷತೆ ಅಂದ್ರೆ ಮಣ್ಣಿನಿಂದ ಎತ್ತುಗಳನ್ನು ತಯಾರಿಸಿ ಪೂಜಿಸುವುದಾಗಿದೆ.ಮುಂಗಾರು ಹಂಗಾಮಿನಿಂದ ಹಿಡಿದು ಹಿಂಗಾರು ಹಂಗಾಮಿನವರೆಗೆ ಬೆಳೆಗಳು ಚನ್ನಾಗಿ ಬರಲಿ ಎಂದು ಉತ್ತರ ಕರ್ನಾಟಕದ ರೈತರು ಐದು ಬಗೆಯ ಮಣ್ಣಿನ ಹಬ್ಬಗಳನ್ನು ಆಚರಿಸುತ್ತಾರೆ. ಮಣ್ಣೆತ್ತಿನ ಅಮವಾಸ್ಯೆಯಿಂದ ಆರಂಭವಾಗುವ ಮಣ್ಣಿನ ಹಬ್ಬಗಳು ನಂತರ ಗುಳ್ಳವ್ವ, ನಾಗರ ಪಂಚಮಿ, ಗಣೇಶ ಚತುರ್ಥಿ, ಜೋಕುಮಾರನ ಹಬ್ಬವನ್ನು ಆಚರಿಸುವ ಮೂಲಕ ಕೊನೆಯಾಗುತ್ತದೆ. ಜೇಷ್ಠ ಬಹುಳ ಅಮವಾಸ್ಯೆಯೇ ಮಣ್ಣೆತ್ತಿನ ಅಮವಾಸ್ಯೆ ಯಾಗಿದ್ದು ಇದರ ಆಚರಣೆಗೆ ರೈತ ಸಜ್ಜಾಗುತ್ತಿದ್ದಾನೆ.ಕೆರೆಯಿಂದ ತಂದ ಮಣ್ಣಿನಿಂದ ಎತ್ತುಗಳನ್ನು ತಯಾರಿಸಿ ಪೂಜಿಸುವುದು ಈ ಹಬ್ಬದ ವಿಶೇಷ. ಮಣ್ಣಿಗೂ-ಎತ್ತಿಗೂ ಅವಿನಾಭಾವ ಸಂಬಂಧವಿದೆ. ಅಲ್ಲದೆ ಮಣ್ಣಿನ ಎತ್ತಿನ ಮೂರ್ತಿಗಳನ್ನು ಪೂಜಿಸಿದರೆ ಸಕಾಲದಲ್ಲಿ ಮಳೆ-ಬೆಳೆ ಆಗುತ್ತದೆ ಎನ್ನುವ ನಂಬಿಕೆ ರೈತರದ್ದು. ತಮ್ಮ ಬದುಕಿಗೆ ಆಸರೆಯಾಗಿರುವ ಎತ್ತುಗಳನ್ನು ರೈತಾಪಿ ಜನರು ಪೂಜಿಸಿ ಸಂಭ್ರಮಪಡುವ ಈ ಹಬ್ಬ ಕಾರಹುಣ್ಣಿಮೆಯ ನಂತರ ಬರುತ್ತದೆ.ಎತ್ತುಗಳುಜೋಡೆತ್ತುಗಳನ್ನು ನೋಡುವುದೇ ಸೊಗಸು: ಮಾರುಕಟ್ಟೆಯಿಂದ ತಂದ ಮಣ್ಣೆತ್ತುಗಳನ್ನು ಸಿಂಗರಿಸಿದ ಜೋಡೆತ್ತುಗಳನ್ನು ನೋಡುವುದೇ ಒಂದು ಸೊಗಸು. ನಂತರ ದೇವರ ಜಗುಲಿಯ ಮೇಲಿಟ್ಟು ಪೂಜೆಗೆ ಅಣಿಯಾಗುವ ಹೊತ್ತಿಗೆ ಮನೆಯ ಹೆಣ್ಣುಮಕ್ಕಳು ಹೋಳಿಗೆ, ಕಡಬು ಮುಂತಾದ ಸವಿಸವಿ ಅಡುಗೆಯನ್ನು ಸಿದ್ಧಪಡಿಸಿರುತ್ತಾರೆ. ಮನೆಯ ದನ-ಕರುಗಳ ಮೈತೊಳೆದು ಪೂಜೆಗೆ ಸಿಂಗರಿಸುತ್ತಾರೆ. ಮಣ್ಣೆತ್ತುಗಳಿಗೆ ಕಾಯಿ, ಕರ್ಪೂರ, ಊದಬತ್ತಿ ಬೆಳಗಿ ಎಡೆ ಹಿಡಿದು ಪೂಜಿಸುತ್ತಾರೆ.ಕೆಲವು ಕಡೆ ಹಬ್ಬದ ದಿನ ಹೊಸ ಬಟ್ಟೆಗಳನ್ನು ತೊಟ್ಟು ಊರಲ್ಲಿ ದೇವರುಗಳಿಗೆ ಕಾಯಿ, ಕರ್ಪೂರದೊಂದಿಗೆ ಹೋಗಿ ಎಡೆಹಿಡಿದು ಬಂದು ಒಟ್ಟಾಗಿ ಕುಳಿತು ಊಟ ಮಾಡುತ್ತಾರೆ. ಸಂಜೆ ಆರತಿ ಹಿಡಿದ ಹೆಣ್ಣುಮಕ್ಕಳು ಮನೆ ಮನೆಗೆ ತೆರಳಿ ಪೂಜಿತ ಎತ್ತುಗಳಿಗೆ ಆರತಿ ಬೆಳಗಿ ಸಂಭ್ರಮಿಸುತ್ತಾರೆ. ಉತ್ತರ ಕರ್ನಾಟಕದ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಆಚರಣೆಯನ್ನು ನಾವು ಕಾಣಬಹುದು. ಕೆಲವು ಕಡೆ ಹಬ್ಬದ ದಿನದಂದೇ ಮಣ್ಣೆತ್ತುಗಳ ವಿಸರ್ಜನೆ ಮಾಡುತ್ತಾರೆ.ಭೂಮಿತಾಯಿಯ ಮಕ್ಕಳಾದ ರೈತನ ಮತ್ತು ಉಳುವ ಎತ್ತುಗಳ ನಡವನ ವಿಶೇಷ ಬಾಂಧವ್ಯವನ್ನು ಈ ಹಬ್ಬ ಎತ್ತಿ ಹಿಡಿಯುತ್ತದೆ. ಈ ಹಬ್ಬದ ಸಂದರ್ಭದಲ್ಲಿ ನಿಜ ಎತ್ತುಗಳಿಗೂ ವಿಶೇಷ ಪೂಜೆ ನಡೆಯುತ್ತದೆ. ನಿಜ ಎತ್ತುಗಳು ಭೂಮಿಯನ್ನು ಹಸನು ಮಾಡಿ ಬೆಳೆ ಬೆಳೆಯಲು ಕಾರಣವಾದರೆ, ಮಣ್ಣೆತ್ತುಗಳು ಆ ಬೆಳೆಗಳಿಗೆ ಮಳೆ ತರಿಸಿ, ನೀರು ಒದಗಿಸುತ್ತವೆಂಬ ನಂಬಿಕೆ ರೈತಾಪಿ ಜನರದ್ದು.ಭೂಮಿಕಾ ರಂಗಪ್ಪ ದಾಸರಡ್ಡಿ,ಬಿದರಿ