ವಿಶ್ವ ದೂರಸಂಪರ್ಕ ದಿನಾಚರಣೆ ತಂತ್ರಜ್ಞಾನದ ಅರಿವಿರಲಿ – ಜ್ಞಾನಾಧಾರಿತ ಸಮಾಜ ನಿರ್ಮಾಣವಾಗಲಿ.

ಸಮಾಜದಲ್ಲಿ ಸಂಹವನದ ಮಹತ್ವ ಹಾಗೂ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ಮೇ 17ರಂದು ವಿಶ್ವ ದೂರಸಂಪರ್ಕ ದಿನಾಚರಣೆಯನ್ನು ಆಚರಿಸಲಾಗುತ್ತದೆ. 1865 ಮೇ 17ರಲ್ಲಿ ಅಂತಾರಾಷ್ಟ್ರೀಯ ಟೆಲಿಗ್ರಾಫ್‌ ಒಕ್ಕೂಟ ಆರಂಭವಾದ ನೆನಪಿನಲ್ಲಿ ಈ ದಿನವನ್ನು ವಿಶ್ವ ದೂರ ಸಂಪರ್ಕ ದಿನವನ್ನಾಗಿ ಆಚರಿಸಲಾಗುತ್ತಿದೆ. 1876ರ ದೂರವಾಣಿ ಆವಿಷ್ಕಾರ, 1957ರ ಚೊಚ್ಚಲ ಉಪಗ್ರಹ ಉಡಾವಣೆ, ನಂತರ 60ರ ದಶಕದ ಅಂತರ್ಜಾಲದ ಆವಿಷ್ಕಾರದ ಕಾಲಘಟ್ಟದಲ್ಲಿ ಅಂತಾರಾಷ್ಟ್ರೀಯ ಟೆಲಿಗ್ರಾಫ್‌ ಒಕ್ಕೂಟವು ನಿರ್ಣಾಯಕ ಪಾತ್ರ ವಹಿಸಿತ್ತು.
ದೂರಸಂಪರ್ಕದ ಪ್ರಾಮುಖ್ಯತೆಯನ್ನು ತಿಳಿಸುವ ಮತ್ತು ಸಾಮಾಜಿಕ ಜೀವನದಲ್ಲಿ ಅದು ವಹಿಸುವ ಪ್ರಮುಖ ಪಾತ್ರದ ಅರಿವನ್ನು ಹೆಚ್ಚಿಸುವ ಗುರಿಯನ್ನು ಈ ದಿನ ಹೊಂದಿದೆ. ಜೊತೆಗೆ ಅಂತರ್ಜಾಲ, ಸಂಪರ್ಕ ಸೇರಿದಂತೆ ಹೊಸ ತಂತ್ರಜ್ಞಾನಗಳಿಂದ ಆಗುತ್ತಿರುವ ಸಾಮಾಜಿಕ ಮತ್ತು ಸಮುದಾಯದ ಬದಲಾವಣೆಗಳ ಬಗ್ಗೆ ಜಾಗತಿಕ ಮಟ್ಟದಲ್ಲಿ ಜನಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ. ವಿಶ್ವ ದೂರಸಂಪರ್ಕ ದಿನವು ಈ ಕ್ಷೇತ್ರದಲ್ಲಿ ತಂತ್ರಜ್ಞಾನದ ಅಭಿವೃದ್ಧಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.


ಪ್ರಸ್ತುತ ಜೀವನದಲ್ಲಿ ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನವನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ, ಅವುಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ ಮತ್ತು ನಮ್ಮ ಜೀವನವನ್ನು ಸುಲಭಗೊಳಿಸಿವೆ.
ಮಾಹಿತಿ ತಂತ್ರಜ್ಞಾನಗಳ ಬಳಕೆ ಮತ್ತು ದೈಹಿಕ, ಭಾವನಾತ್ಮಕ ಮತ್ತು ಆರ್ಥಿಕ ಮಟ್ಟದಲ್ಲಿ ಆರೋಗ್ಯಕರ, ಸಂಪರ್ಕ ಮತ್ತು ಸ್ವತಂತ್ರವಾಗಿರಲು ಅವುಗಳ ಪ್ರಾಮುಖ್ಯತೆಯನ್ನು ಒತ್ತಿಹೇಳುವುದಾಗಿದೆ.ಜನರಿಗೆ ಆಗುತ್ತಿರುವ ಡಿಜಿಟಲ್‌ ತಾರತಮ್ಯಗಳನ್ನು ನಿಯಂತ್ರಿಸುವುದು ಕೂಡಾ ಗುರಿಯಾಗಿದೆ.
ದೈನಂದಿನ ಬದುಕಿನಲ್ಲಿ ಸಂಪರ್ಕದ ಮಹತ್ವ ಮತ್ತು ಅದರಿಂದ ಸಿಗುತ್ತಿರುವ ನಾನಾ ರೀತಿಯ ಪ್ರಯೋಜನಗಳು ಹಾಗೂ ವಿಶ್ವದಾದ್ಯಂತ ಹೇಗೆ ಅದು ಹರಿದಾಡುತ್ತಿದೆ ಎಂಬುದರ ಕುರಿತು ಜನರಲ್ಲಿ ಅರಿವು ಮೂಡಿಸುವ ಗುರಿಯೊಂದಿಗೆ ಆರಂಭವಾದ ಈ ಕಾರ್ಯಕ್ರಮದಲ್ಲಿ ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನದ ಅಭಿವೃದ್ಧಿಯನ್ನು ಉತ್ತೇಜಿಸುವುದು ಪ್ರಮುಖ ಧ್ಯೇಯವಾಗಿದೆ.
ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ ಕ್ಷೇತ್ರದ ಉದ್ಯಮಶೀಲರು, ಸ್ಟಾರ್ಟಪ್‌ಗಳು, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು ನಿರ್ದಿಷ್ಟವಾದ ಮತ್ತು ನಿರ್ಣಾಯಕವಾದ ಪಾತ್ರಗಳನ್ನು ಹೊಂದಿದ್ದು, ಅವು ಇಂತಹ ಪಾತ್ರಗಳ ಮೂಲಕ ದೇಶದ ಅರ್ಥ ವ್ಯವಸ್ಥೆಯ ಸುಸ್ಥಿರ ಮತ್ತು ಎಲ್ಲರನ್ನೂ ಒಳಗೊಂಡ ಪ್ರಗತಿಗೆ ಗಣನೀಯ ಕೊಡುಗೆ ನೀಡುವುದನ್ನು ದೃಢಪಡಿಸಬೇಕಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಜ್ಞಾನಾಧಾರಿತ ಪ್ರಸ್ತುತ ಸಮಾಜದಲ್ಲಿ ಯುವ ಸಮುದಾಯಕ್ಕೆ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಪ್ರಮುಖ ಮೂಲಗಳಾಗಿವೆ.
ಯುವ ಸಮುದಾಯದ ಅನ್ವೇಷಣೆ ಮತ್ತು ಉದ್ಯಮಶೀಲರ ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ ಸಾಮರ್ಥ್ಯ ಹೊರಹಾಕುವ ಕೆಲಸಕ್ಕೆ ಪೂರಕವಾಗಿ ನಿಯಮಗಳನ್ನು ರೂಪಿಸಲಾಗಿದೆ. ಅಭಿವೃದ್ಧಿಶೀಲ ರಾಷ್ಟ್ರಗಳ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಗಾತ್ರದ ಐಸಿಟಿ ಉದ್ದಿಮೆಗಳಿಗೆ ಆದ್ಯತೆಯ ಗಮನ ನೀಡುವ ಮೂಲಕ ಅಂತಾರಾಷ್ಟ್ರೀಯ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಉತ್ತೇಜನ ನೀಡುವುದು ವಿಶ್ವ ದೂರಸಂಪರ್ಕ ದಿನದ ಆಚರಣೆಯ ಕಾರ್ಯಸೂಚಿಗಳಲ್ಲಿ ಒಂದು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button