80ಕ್ಕೂ ಹೆಚ್ಚು ಅನಧೀಕೃತ ಮನೆಗಳು ನಿರ್ಮಾಣ — ಕೃಷಿ ಉತ್ಪನ್ನ ಮಾರುಕಟ್ಟೆಯ ಉದ್ದೇಶ ಮಣ್ಣುಪಾಲು.
ಹುನಗುಂದ ಆಗಷ್ಟ.18
ಇಳಕಲ್ಲ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯ ಜಾಗೆಯಲ್ಲಿ ಅನಧೀಕೃತವಾಗಿ ನಿರ್ಮಾಣವಾಗಿರುವ ಮನೆಗಳನ್ನು ತೆರುವುಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣೆ ವೇದಿಕೆಯ ಹುನಗುಂದ ಮತ್ತು ಇಳಕಲ್ಲ ಘಟಕದ ವತಿಯಿಂದ ಇಳಕಲ್ಲ ನಗರದ ಕಂಠಿ ವೃತ್ತದಿಂದ ಬಾಗಲಕೋಟ ಜಿಲ್ಲಾಧಿಕಾರಿಗಳ ಕಚೇರಿಯವರಗೆ ಪಾದಯಾತ್ರೆಯು ಗುರವಾರ ಪಟ್ಟಣದ ವಿ.ಮ.ವೃತ್ತದಲ್ಲಿ ಆಗಮಿಸಿ ಪ್ರತಿಭಟನೆ ನಡೆಸಿತು.ಈ ವೇಳೆ ಕರವೇ ಜಿಲ್ಲಾಧ್ಯಕ್ಷ ಬಸವರಾಜ ಧರ್ಮಂತಿ ಮಾತನಾಡಿ ಕೃಷಿ ಉತ್ಪನ್ನ ಮಾರುಕಟ್ಟೆಯ ಜಾಗೆಯನ್ನು ರೈತರ ಬೆಳೆದ ಬೆಳೆಗಳನ್ನು ವಹಿವಾಟು ಮಾಡಲು ಮತ್ತು ಧಾನ್ಯಗಳನ್ನು ಸಂಗ್ರಹಿಸಿಡಲು ವರ್ತಕರಿಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನೀಡಿದೆ.ಆ ಜಾಗೆಯಲ್ಲಿ ವರ್ತಕರು ಅಡತಿ ಅಂಗಡಿಗಳನ್ನು ಮತ್ತು ಗೋಡಾವಣ ಕಟ್ಟಿಕೊಳ್ಳಲು ಅವಕಾಶವಿದೆ ಆದರೆ ಸಧ್ಯ ವರ್ತಕರು ಆ ಜಾಗೆಯಲ್ಲಿ ಅಂಗಡಿ ಮತ್ತು ಗೋಡಾವಣ ಕಟ್ಟುವ ಬದಲು ತಮ್ಮ ವೈಯಕ್ತಿಕ ಮೆನೆಗಳನ್ನು ನಿರ್ಮಿಸುವ ಮೂಲಕ ಎಪಿಎಂಸಿ ಜಾಗೆಯಲ್ಲಿ ಅಕ್ರಮವಾಗಿ ಸ್ವಂತ ಮನೆಗಳನ್ನು ಕಟ್ಟಿ ಕಾನೂನು ಉಲ್ಲಂಘನೆ ಮಾಡಿದ್ದಾರೆ.ಇಂತಹ ಅನಧೀಕೃತ ಮನೆಗಳನ್ನು ತೆರುವುಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳು ಮೀನಾಮೇಷ ಎನ್ನಿಸುತ್ತಿರೋದು ಯಾಕೆ ಮತ್ತು ಮನೆ ಕಟ್ಟಿಕೊಂಡಿರುವ ವರ್ತಕರು ಶ್ರೀಮಂತರು ಎನ್ನುವ ಕಾರಣಕ್ಕೆ ತೆರುವುಗೊಳಿಸುತ್ತಿಲ್ಲ ಎನ್ನುವ ಅನುಮಾನ ಕಾಡುತ್ತಿದೆ.ಈ ಹೋರಾಟ ತೀವ್ರಗೊಳ್ಳುವ ಮುನ್ನವೇ ಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರ ಮತ್ತು ಎಪಿಎಂಸಿ ಅಧಿಕಾರಿಗಳು ಅಲ್ಲಿರುವ ಅನಧೀಕೃತ ಮನೆಗಳನ್ನು ತೆರುವು ಮಾಡಿ ಎಪಿಎಂಸಿ ೧೭ ಎಕರೆ ಜಮೀನು ರೈತರ ಅನುಕೂಲಕ್ಕಾಗಿ ಬಳಕೆಯಾಬೇಕು ಎಂದರು.

ಕರವೇ ಕಾನೂನು ಘಟಕದ ಜಿಲ್ಲಾಧ್ಯಕ್ಷ ರಮಜಾನ ನದಾಫ್ ಮಾತನಾಡಿ ಇಳಕಲ್ಲ ಎಪಿಎಂಸಿ ಜಾಗೆಯಲ್ಲಿ ಸುಮಾರು ೮೦ಕ್ಕೂ ಅಧಿಕ ಅನಧೀಕೃತ ಮನೆಗಳನ್ನು ಕಟ್ಟಿ ವಾಸವಾಗಿದ್ದು.ಅದು ಅಲ್ಲದೇ ಮನೆಗಳನ್ನು ಕಟ್ಟಿದ ಪ್ರಭಾವಿ ವ್ಯಕ್ತಿಗಳು ಆ ಮನೆಗಳನ್ನು ಬಾಡಿಗೆ ಕೊಡುವ ಮೂಲಕ ಎಪಿಎಂಸಿ ಯಾವ ಉದ್ದೇಶಕ್ಕೆ ನಿರ್ಮಾಣ ಮಾಡಿದ್ದರೋ ಅದನ್ನು ಇವತ್ತು ಮಣ್ಣುಪಾಲ ಮಾಡುತ್ತಿದ್ದಾರೆ.ಇದಕ್ಕೆ ಪೂರಕವಾಗಿ ಕೆಇಇ ಮತ್ತು ನಗರ ಸಭೆ ಅಧಿಕಾರಿಗಳು ಕಟ್ಟಡ ನಿರ್ಮಿಸಲು ಅನುಮತಿಯನ್ನು ನೀಡಿದ್ದಾರೆ ಎಂದು ಆರೋಪಿಸಿದರು.ಕರವೇ ಹುನಗುಂದ ಘಟಕದ ಅಧ್ಯಕ್ಷ ರೋಹಿತ ಬಾರಕೇರ ಮಾತನಾಡಿ ಕೃಷಿ ಉತ್ಪನ್ನ ಮಾರುಕಟ್ಟೆ ರೈತರ ಬೆಳೆದ ಬೆಳೆಯನ್ನು ದಾಸ್ತಾನು ಮಾಡಲು ನೀಡಿದ ಜಾಗೆ ಇಂದು ದಲ್ಲಾಳಿಗಳ ಕೈವಶವಾಗಿದೆ.ಅನಧೀಕೃತ ಕಟ್ಟಡಗಳನ್ನು ತೆರುವುಗೊಳಿಸುವಂತೆ ಕರವೇ ಕಳೆದ ಐದಾರು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದರೂ ಕೂಡಾ ಯಾವದೇ ಪ್ರಯೋಜನವಾಗಿಲ್ಲ.ಮನೆ ಕಟ್ಟಿಕೊಂಡು ಶ್ರೀಮಂತ ವರ್ತಕರ ಕೈಗೊಂಬೆಯಾಗಿ ಎಪಿಎಂಸಿ ಅಧಿಕಾರಿಗಳು ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಇಳಕಲ್ಲ ಘಟಕದ ಅಧ್ಯಕ್ಷ ಮಹಾಂತೇಶ ವಂಕಲಕುಂಟಿ,ನಗರ ಘಟಕ ಅಧ್ಯಕ್ಷ ಅಶೋಕ ಪೂಜಾರಿ,ಹುಸೇನ ಸಂದಿಮನಿ,ಮೌಲಪ್ಪ ಮಾದರ,ಶರಣು ಬೀಳಗಿ,ದುರಗಪ್ಪ ಮಾದರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ. ಬಂಡರಗಲ್ಲ