ಉಕ್ರೇನ್ ಟು ಶಿವಮೊಗ್ಗ ವಯ್ಯಾ ಮಣಿಪುರ…..

ಮುಂದುವರಿಯುತ್ತಲೇ ಇದೆ ರಷ್ಯಾ – ಉಕ್ರೇನ್ ಯುದ್ಧ,

ನಡೆಯುತ್ತಲೇ ಇದೆ ಮಣಿಪುರದ ನಾಗರಿಕ ಹತ್ಯಾಕಾಂಡ,

ಶಿವಮೊಗ್ಗದಲ್ಲೂ ನಿಂತಿಲ್ಲ ಕೋಮು ಗಲಭೆ………

ಅಂತಹ ಭಯಂಕರ ಕೊರೋನಾ ಬಹುತೇಕ ನಿಂತಿದೆ,

ಏಡ್ಸ್ ತುಂಬಾ ಕಡಿಮೆಯಾಗಿದೆ,

ಕುಷ್ಠರೋಗ ವಿರಳವಾಗಿದೆ,

ಪೋಲಿಯೊ ಅಪರೂಪವಾಗಿದೆ,ಆದರೆ,

ಜಾತಿ ಧರ್ಮ ಸಮುದಾಯಗಳ ಸಾಂಕ್ರಾಮಿಕ ರೋಗ ಹರಡುತ್ತಿದೆ…..

ರಷ್ಯಾದಲ್ಲಿ ಇರುವವರು,

ಮಣಿಪುರದಲ್ಲಿ ವಾಸಿಸುತ್ತಿರುವವರು,

ಶಿವಮೊಗ್ಗದ ನಿವಾಸಿಗಳು ಮನುಷ್ಯರಲ್ಲವೇ,

ರೋಗಗಳ ವಿರುದ್ಧ ಪಡೆಯುವ ಗೆಲುವನ್ನು ದುಷ್ಟ ಶಕ್ತಿಗಳ

ವಿರುದ್ಧ ಪಡೆಯಲು ಸಾಧ್ಯವಾಗುತ್ತಿಲ್ಲವೇ……

ರಷ್ಯಾ ; ” ಉಕ್ರೇನ್ ನಾನು ಹೇಳಿದಂತೆ ಕೇಳು

“ಉಕ್ರೇನ್ : ” ನನಗೆ ಹೇಳಲು ನೀನ್ಯಾರೋ

“ಕುಕಿ ಸಮುದಾಯ ; ” ಮೈತೇಯಿಗಳೇ ನೀವು

ನಮ್ಮ ಮೇಲೆ ದೌರ್ಜನ್ಯ ಮಾಡಿತ್ತಿದ್ದೀರಿ

“ಮೈತೆಯಿ ಸಮುದಾಯ : ” ನಮ್ಮನ್ನು ನೀವು

ಶೋಷಣೆ ಮಾಡುತ್ತಿದ್ದೀರಿ

“ಮುಸ್ಲಿಮರು : ” ನಾವು ಈದ್ ಮಿಲಾದ್ ಮೆರವಣಿಗೆ ಹೋಗುತ್ತೇವೆ

“ಹಿಂದೂಗಳು : ” ನಾವು ಗಣೇಶನ ಮೆರವಣಿಗೆ ಮಾಡುತ್ತೇವೆ “

ಇಷ್ಟೇ ವಿಷಯ. ಇದಕ್ಕಾಗಿ ತಲೆಗಳು ಉರುಳುತ್ತವೆ,

ಜೈಲುಗಳು ಭರ್ತಿಯಾಗುತ್ತವೆ,

ಆಸ್ಪತ್ರೆಗಳು ತುಂಬುತ್ತವೆ,ನೆಮ್ಮದಿ ಹಾಳಾಗುತ್ತದೆ…..

ರಾಜಕಾರಣಿಗಳು, ಧಾರ್ಮಿಕ ಮುಖಂಡರು

ಅವರ ಕುಟುಂಬದವರು ಆರಾಮವಾಗಿ

ತಮ್ಮ ಜೀವನವನ್ನು ಸುಖವಾಗಿ ಮುಂದುವರಿಸುತ್ತಾರೆ.

ಮಾಧ್ಯಮಗಳು ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತವೆ,

ಸಾಮಾನ್ಯ ಜನರದು ಬೀದಿ ನಾಯಿಯ ಪಾಡು……

ಪುಟಿನ್ ಅಥವಾ ಝಲೆನ್ಸ್ಕಿ ಉಪವಾಸ ಮಾಡಲಿಲ್ಲ,

ನರೇಂದ್ರ ಮೋದಿ ರಾಜಕೀಯ ಸಮಾರಂಭಗಳನ್ನು ನಿಲ್ಲಿಸಲಿಲ್ಲ,

ಸಿದ್ದರಾಮಯ್ಯ ಜಾತಿ ಸನ್ಮಾನಗಳನ್ನು ತೊರೆಯಲಿಲ್ಲ,

ಸಾಮಾನ್ಯ ಜನರ ನರಳಾಟ ಕಡಿಮೆಯಾಗಲಿಲ್ಲ……

ರಷ್ಯಾ ಉಕ್ರೇನ್ ಜನರ ಘರ್ಷಣೆ ತಡೆಯಲು ಜೀಸಸ್ ಬರಲಿಲ್ಲ,

ಕುಕಿ ಮೈತೇಯಿ ಸಮುದಾಯ ರಕ್ಷಿಸಲು ರಾಮ ಬರಲಿಲ್ಲ,

ಶಿವಮೊಗ್ಗ ಗಲಭೆ ತಡೆಯಲು ಅಲ್ಲಾ ಬರಲಿಲ್ಲ,

ಸಾಮಾನ್ಯ ಜನ ಮಾತ್ರ ದೇವರು ಧರ್ಮ ಉಳಿಸಲು

ಪ್ರಾಣ ಕೊಡಲು – ಪ್ರಾಣ ತೆಗೆಯಲು ಹೇಸುವುದಿಲ್ಲ…..

ರಷ್ಯಾ ಉಕ್ರೇನ್ ನಲ್ಲಿ ಹೊಡೆದಾಡುತ್ತಿರುವುದು ಸೈನಿಕರು,

ಮಣಿಪುರದಲ್ಲಿ ಶಾಂತಿ ನೆಲೆಸಲು ಶ್ರಮಿಸುತ್ತಿರುವುದು‌ ಅರೆ ಸೈನಿಕರು,

ಶಿವಮೊಗ್ಗದಲ್ಲಿ ಗಲಭೆ ತಡೆಯಲು ಪ್ರಯತ್ನಿಸುತ್ತಿರುವುದು ಪೋಲೀಸರು,

ಇಲ್ಲಿ ಯಾವ ಅತಿ ಅಮಾನುಷ ಶಕ್ತಿಗಳು ಏನೂ ಮಾಡುತ್ತಿಲ್ಲ,

ಕಷ್ಟ ಪಡುತ್ತಿರುವವರು ಮಾತ್ರ ಸಾಮಾನ್ಯರು……

ಯಾವ ಶಾಸಕನ ಮಗನೂ ಕಲ್ಲು ತೂರುವುದಿಲ್ಲ,

ಯಾವ ಐಎಎಸ್ ಅಧಿಕಾರಿಯ ಮಗನೂ ಮಚ್ಚು ಬೀಸುವುದಿಲ್ಲ,

ಯಾವ ನಟರ ಮಗನೂ ಬಂದೂಕು ಹಿಡಿಯುವುದಿಲ್ಲ,

ಯಾವ ಧರ್ಮಾಧಿಕಾರಿಯ ಮಗನೂ ಬಾಂಬು ಸಿಡಿಸುವುದಿಲ್ಲ,

ಯಾವ ಉದ್ಯಮಿಯ ಮಗನೂ ಜೈಲಿಗೆ ಹೋಗುವುದಿಲ್ಲ,

ಯಾವ ಪತ್ರಕರ್ತರ ಮಗನೂ ಆತ್ಮಹತ್ಯಾ ದಾಳಿ ಮಾಡುವುದಿಲ್ಲ,

ಅವರೆಲ್ಲರ ಮಕ್ಕಳು ಸಾಮಾನ್ಯವಾಗಿ ವಿದೇಶಗಳಲ್ಲಿ ಓದುತ್ತಾರೆ,

ಸಾಮಾನ್ಯ ಜನ ಮಾತ್ರ ದೇವರು ಧರ್ಮಕ್ಕಾಗಿ ಪ್ರಾಣ ಬಿಡುತ್ತಾರೆ……..

ಕಲಿಗಾಲಯ್ಯ ಇದು ಕಲಿಗಾಲ……

ಖುರಾನ್ ಭಗವದ್ಗೀತೆ ಬೈಬಲ್ ಹೇಳಿದ್ದೇನು,

ನೀವು ಅರ್ಥಮಾಡಿಕೊಂಡಿದ್ದೇನು,

ಈಗ ನಡೆದುಕೊಳ್ಳುತ್ತಿರುವುದೇನು……

ಶಿವಮೊಗ್ಗ ಕಲ್ಲು ತೂರಾಟದ ವಿಷಯದಲ್ಲಿ

ಆಡಳಿತ ಮತ್ತು ವಿರೋಧ ಪಕ್ಷಗಳ ಹೇಳಿಕೆ ಗಮನಿಸಿ.

ಅಲ್ಲಿ ನಡೆದ ವಾಸ್ತವವನ್ನು ಹತ್ತು ಪಟ್ಟು

ಹೆಚ್ಚು ಕಡಿಮೆ ಮಾಡಿ ಹೇಳಿಕೆ ಕೊಟ್ಟು ಪ್ರಚೋದಿಸುತ್ತಿದ್ದಾರೆ.

ಅದರ ಅರ್ಥ ಮತ್ತು ಉದ್ದೇಶ ಮುಂದಿನ

ಚುನಾವಣೆಯೇ ಹೊರತು ಜನತೆಯ ಯೋಗಕ್ಷೇಮವಲ್ಲ.

ಇದನ್ನು ಈ ಮೂಢ ಭಕ್ತಿ ಪಂಥದ

ಸಾಮಾನ್ಯ ಜನರಿಗೆ ಅರ್ಥಮಾಡಿಸುವುದು ಹೇಗೆ…….

ಎರಡೂ ಧರ್ಮಗಳ ಜನರು ಟಿವಿ ಸುದ್ದಿ ವಾಹಿನಿಗಳಲ್ಲಿ ಮಾತನಾಡುವುದನ್ನು ಗಮನಿಸಿ.

ಮುಸ್ಲಿಮರು ಹೇಳುವುದು, ಹಿಂದುಗಳು ನಮ್ಮ ಮನೆಗೆ ನುಗ್ಗಿ ಹೊಡೆದರು ಎಂದು,

ಹಿಂದುಗಳು ಹೇಳುವುದು, ಮುಸ್ಲಿಮರು ಹಿಂದುಗಳು ನಮ್ಮ ಮನೆಗೆ ನುಗ್ಗಿ ಹೊಡೆದರು

ಎಂದು. ರಾಜಕಾರಣಿಗಳ ಹೇಳಿಕೆ ಹೇಗಿರುತ್ತೇ

ಎಂದರೆ ಇಬ್ಬರೂ ಮತ್ತಷ್ಟು ಹೊಡೆದಾಡಿ ಸಾಯಿರಿ.

ನಮಗೆ ಹೆಚ್ಚು ಓಟು ಬರುತ್ತದೆ ಎಂಬ ಒಳ ಅರ್ಥ ಹೊಂದಿರುತ್ತದೆ…..

ಒಟ್ಟಿನಲ್ಲಿ ಉಕ್ರೇನ್ ಮಣಿಪುರ ಶಿವಮೊಗ್ಗ

ಹೀಗೆ ಎಲ್ಲೆಲ್ಲೂ ಗಲಭೆಗಳು.

ಕಾರಣಗಳು – ರೂಪಗಳು – ಪರಿಣಾಮಗಳು ಮಾತ್ರ ಬೇರೆ.

ನಾಗರಿಕತೆಯಿಂದ ಅನಾಗರಿಕತೆಯತ್ತ ಮನುಷ್ಯ ಜನಾಂಗ……….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,

ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,

ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,

ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ ಎಚ್ ಕೆ,9844013068……..

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button